ಕ್ಯಾನ್‌ಬೆರಾ[ಜ.26]: ಆಸ್ಟ್ರೇಲಿಯಾದ ಕಾಡ್ಗಿಚ್ಚು ಕೋಟ್ಯಾಂತರ ಪ್ರಾಣಿಗಳನ್ನು ಬಲಿ ಪಡೆದುಕೊಂಡಿದ್ದರೆ, ಲಕ್ಷಾಂತರ ಪ್ರಾಣಿಗಳು ಆಸರೆ ಕಳೆದುಕೊಂಡಿವೆ. ಒಂದೆಡೆ ಹೆಣ್ಣು ಪ್ರಾಣಿಗಳು ತಮ್ಮ ಮರಿಗಳನ್ನು ಕಳೆದುಕೊಂಡಿದ್ದರೆ, ಮತ್ತೊಂದೆಡೆ ಮರಿಗಳು ತಮ್ಮ ತಾಯಿಯನ್ನು ಕಳೆದುಕೊಂಡು ಅನಾಥರಾಗಿವೆ. ಆಸ್ಟ್ರೇಲಿಯಾದ ಅಧಿಕಾರಿಗಳು ಕಾಡ್ಗಿಚ್ಚಿನ ಜ್ವಾಲೆಯಿಂದ ಬದುಕುಳಿದ ಅನಾಥ ಮೂಕ ಪ್ರಾಣಿಗಗಳು ಹಸಿವಿನಿಂದ ಸಾಯದಿರಲೆಂದು ಹೆಲಿಕಾಪ್ಟರ್ ಮೂಲಕ ಆಹಾರವೆಸೆಯುತ್ತಿದ್ದಾರೆ. ಹೀಗಿದ್ದರೂ ಸಿಬ್ಬಂದಿ ಎಲ್ಲಾ ಪ್ರಾಣಿಗಳಿಗೂ ಆಹಾರ ಪೂರೈಕೆ ಮಾಡಲು ಸಾಧ್ಯವಿಲ್ಲ. ಹೀಗಿರುವಾಗ ತಾಯಿಯನ್ನು ಕಳೆದುಕೊಂಡ ಕೋಲಾ ಮರಿಗೆ ನರಿಯೊಂದು ಹಾಲುಣಿಸುತ್ತಿದೆ ಎಂಬ ವಿಡಿಯೋ ಭಾರೀ ವೈರಲ್ ಆಗಿದೆ.

ಆಸ್ಟ್ರೇಲಿಯಾದ ಭೀಕರ ಕಾಡ್ಗಿಚ್ಚಿನಲ್ಲಿ ತನ್ನ ಮರಿಗಳನ್ನು ಕಳೆದುಕೊಂಡ ಹೆಣ್ಣು ನರಿಯೊಂದು, ಕೋಲಾ ಮರಿಗಳಿಗೆ ಹಾಲುಣಿಸುತ್ತಿರುವ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ವಿಡಿಯೋದಲ್ಲಿ ಹೆಣ್ಣು ನರಿಯೊಂದು ಕೋಲಾ ಮರಿಗಳು ಭಯ ಬೀಳದಂತೆ ತಾಳ್ಮೆಯಿಂದ ನಿಂತು ಅವುಗಳ ಹಸಿವು ನೀಗಿಸುತ್ತಿರುವ ದೃಶ್ಯ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. 

ಆದರೆ ಇದು ನಿಜಾನಾ? ನಿಜಕ್ಕೂ ಇದು ಕಾಡ್ಗಿಚ್ಚಿಗೆ ನಲುಗಿದ ಪ್ರಾಣಿಗಳ ವಿಡಿಯೋನಾ ಎಂದು ಮರು ಪರಿಶೀಲಿಸಿದಾಗ, ವಾಸ್ತವತೆ ಬೇರೆಯೇ ಇದೆ ಎಂಬುವುದು ಸಾಬೀತಾಗಿದೆ. ಈ ವಿಡಿಯೋನ ಇನ್ನೂ ಹಲವಾರು ತುಣುಕುಗಳು ಸೋಶಿಯಲ್ ಮೀಡಿಯಾದಲ್ಲಿ ಪತ್ತೆಯಾಗಿದ್ದು, ನರಿ ಹಾಲುಣಿಸುತ್ತಿರುವುದು ಕೋಲಾ ಮರಿಗಳಲ್ಲ, ಬದಲಾಗಿ ತನ್ನದೇ ಮರಿಗಳಿಗೆ ಎಂಬುವುದು ಸ್ಪಷ್ಟವಾಗುತ್ತದೆ. ಅಲ್ಲದೇ ಈ ವಿಡಿಯೋವನ್ನು 2014ರಲ್ಲಿ ಯೂ ಟ್ಯೂಬರ್ Luc Durocher ಮೊದಲ ಬಾರಿ ಶೇರ್ ಮಾಡಿಕೊಂಡಿದ್ದರು.