ವಾಷಿಂಗ್ಟನ್(ಡಿ.19) ಕೊರೋನಾ ವಿರುದ್ಧ ಹೋರಾಡಿ, ಕೊನೆಯುಸಿರೆಳೆದ ಮೆಕ್ಸಿಕೋ ದೇಶದ ಶಿಕ್ಷಕಿಯೊಬ್ಬರ ಮನಮಿಡಿಯುವ ಕಥೆ ಇದು. ಕೊನೆಯುಸಿರೆಳೆಯುವ ಸಂದರ್ಭದಲ್ಲೂ ವೃತ್ತಿಧರ್ಮ ಮೆರೆದ ಫಿಲೋಮಿನಾ ಬೆಲೋನ್‌ ಎಂಬ ಶಿಕ್ಷಕಿ ಮತ್ತು ಮಕ್ಕಳ ಮೇಲಿನ ಆಕೆಯ ಕಾಳಜಿಯು ಎಲ್ಲರ ಹೃದಯ ಗೆದ್ದಿದೆ.

ಅಲ್ಬುಕರ್ಕ್‌ ನಗರದಲ್ಲಿ ದಿನದ ವೇಳೆ ವಿಶೇಷ ಮಕ್ಕಳಿಗೆ, ರಾತ್ರಿ ಹೊತ್ತಿನಲ್ಲಿ ಇಂಟರ್ನೆಟ್ ಸೌಲಭ್ಯವಿಲ್ಲದ ಮಕ್ಕಳಿಗೆ ಪಾಠ ಮಾಡುವ  ಫಿಲೋಮಿನಾ ಎಂಬ ಶಿಕ್ಷಕಿಗೆ ಕೊರೋನಾ ವಕ್ಕರಿಸಿತ್ತು. ಸೋಂಕಿನ ತೀವ್ರತೆ ಹೆಚ್ಚಾಗಿದ್ದರಿಂದ ಹಲವುದಿನಗಳ ಕಾಲ ಆಸ್ಪತ್ರೆಯಲ್ಲಿ ಜೀವನ್ಮರಣದ ಹೋರಾಟ ನಡೆಸಿದರು.

ಅದಾಗ್ಯೂ, ತನ್ನೊಳಗಿನ ಶಿಕ್ಷಕಿ ಮತ್ತು ಮಕ್ಕಳ ಮೇಲಿನ ಪ್ರೀತಿಯು, ಕಲಿಸುವ ಹಂಬಲವು ಇನ್ನೂ ಗಟ್ಟಿಯಾಗಿತ್ತು. ಆಕೆಗೆ ಉಸಿರಾಡಲು ಸಾಧ್ಯವಾಗುತ್ತಿರಲಿಲ್ಲ. ಅಂತಹ ಪರಿಸ್ಥಿತಿಯಲ್ಲೂ, ತನ್ನ ಕೊನೆಯ ದಿನಗಳಲ್ಲಿ ಆಕ್ಸಿಜನ್  ಮಾಸ್ಕ್ ಧರಿಸಿಯೇ ಮಕ್ಕಳಿಗೆ ಪಾಠ ಹೇಳಿಕೊಟ್ಟ ಫಿಲೋಮಿನಾ, ನಂತರ ಈ ಜಗತ್ತಿಗೆ ವಿದಾಯ ಹೇಳಿದ್ದಾರೆ. 

ಹೋಗಿಬನ್ನಿ ಫಿಲೋಮಿನಾ, ಈ ಜಗತ್ತಿಗೆ ನಿಮ್ಮಂತ ಶಿಕ್ಷಕಿಯರ ಅಗತ್ಯ  ತುಂಬಾ ತುಂಬಾ ಇದೆ.