Asianet Suvarna News

6ನೇ ನಾವಿಕ ಸಮ್ಮೇಳನ, ಅನಿವಾಸಿಯರಿಗೆ ವಿವಿಧ ಸ್ಪರ್ಧೆಗಳು

* ವಿಭಿನ್ನ ಸ್ಪರ್ಧೆಗಳಿಗೆ ವೇದಿಕೆ ಕಲ್ಪಿಸಿದೆ 6ನೇ ವಿಶ್ವ ನಾವಿಕ ಕನ್ನಡ ಸಮಾವೇಶ
* ಅಂತ್ಯಾಕ್ಷರಿ, ನಾವಿಕ ಕೋಗಿಲೆ, ನಾವಿಕ ಶೆಫ್(ನಾನೆಂಥ ಕುಕ್ಕು), ಛಾಯಾ ನಾವಿಕ ಸ್ಪರ್ಧೆ
*  ಜಗತ್ತಿನ್ನೆಡೆ ನೆಲೆಸಿರುವ ಅನಿವಾಸಿ ಕನ್ನಡಿಗರು ಈ ಸ್ಪರ್ಧೆಗಳಲ್ಲಿ ಭಾಗವಹಿಸುತ್ತಿದ್ದಾರೆ
* ಖ್ಯಾತನಾಮರಿಂದ ಅಂತಿಮ ಆಯ್ಕೆ

6th international navika kannada convention 2021 virtual events for-nris mah
Author
Bengaluru, First Published Jul 16, 2021, 4:14 PM IST
  • Facebook
  • Twitter
  • Whatsapp

ಯುಎಸ್‌ಎ(ಜು.  16)  ವಿಭಿನ್ನ ಸ್ಪರ್ಧೆಗಳಿಗೆ 6ನೇ ವಿಶ್ವ ನಾವಿಕ ಕನ್ನಡ ಸಮಾವೇಶ ವೇದಿಕೆ ಮಾಡಿಕೊಟ್ಟಿದೆ ಅನಿವಾಸಿ ಕನ್ನಡಿಗರಿಗಾಗಿ ನಾವಿಕ ಅಂತ್ಯಾಕ್ಷರಿ, ನಾವಿಕ ಕೋಗಿಲೆ, ನಾವಿಕ ಶೆಫ್(ನಾನೆಂಥ ಕುಕ್ಕು), ಛಾಯಾ ನಾವಿಕ (ಫೋಟೋಗ್ರಫಿ) ಸ್ಫರ್ಧೆಗಳು ಆಯೋಜನೆಗೊಂಡಿವೆ.

ಈಗಾಗಲೆ ಜಗತ್ತಿನ್ನೆಡೆ ನೆಲೆಸಿರುವ ಅನಿವಾಸಿ ಕನ್ನಡಿಗರು ಈ ಸ್ಪರ್ಧೆಗಳಲ್ಲಿ ಉತ್ಸಾಹ ತೋರಿ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ. ಪ್ರತಿ ಸ್ಪರ್ಧೆಗೂ ಪ್ರತ್ಯೇಕ ಸಮಿತಿಗಳನ್ನು ರಚಿಸಲಾಗಿದ್ದು ಖ್ಯಾತನಾಮರಿಂದ ಅಂತಿಮ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯೂ ವರ್ಚುಯಲ್ಲಾಗಿ ನಾವಿಕ ಸಮಾವೇಶ ನಡೆಯುವ ಬಗ್ಗೆ ಎಲ್ಲರಿಗೂ ತಿಳಿದಿದೆ.ಆದರೆ ಅನಿವಾಸಿ ಕನ್ನಡಿಗರ ಪ್ರತಿಭೆಗೆ ವೇದಿಕೆಯನ್ನು ಒದಗಿಸುವ ನಿಟ್ಟಿನಲ್ಲಿ 6ನೇ ನಾವಿಕ ವಿಶ್ವ ಕನ್ನಡ ಸಮಾವೇಶದಲ್ಲಿ ಹಲವು ಮಾದರಿಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದೆ. ಆಗಸ್ಟ್ 27,28 ಮತ್ತು 29 ರಂದು ನಡೆಯಲಿರುವ ವರ್ಚುಯಲ್ ಸಮಾವೇಶಕ್ಕೆ ಪೂರ್ವಭಾವಿಯಾಗಿ ಈ ಸ್ಪರ್ಧೆಗಳು ನಡೆಯಲಿವೆ.

ಹಾಸ್ಯದ ವಿಡಿಯೋ ಇದ್ದರೆ ಹಂಚಿಕೊಳ್ಳಿ..ಮುಕ್ತ ಆಹ್ವಾನ

ಅಮೆರಿಕದ ಶಿಕಾಗೋದಲ್ಲಿ ನೆಲೆಸಿರುವ  ರಾಮರಾವ್ ಅವರ ನೇತೃತ್ವದಲ್ಲಿ ಸ್ಪರ್ಧೆಗಳಿಗಾಗಿ 4 ಉಪ ಸಮಿತಿಗಳನ್ನು ರಚಿಸಲಾಗಿದ್ದು ಈಗಾಗಲೇ ವಿಶ್ವದ ನಾನಾ ದೇಶಗಳಿಂದ ನೂರಾರು ಜನ ಕನ್ನಡಿಗರು ಸ್ಪರ್ಧೆಗಳಲ್ಲಿ ಭಾಗವಹಿಸಲು ತಮ್ಮ ಹೆಸರುಗಳನ್ನು ನೋಂದಾಯಿಸಿಕೊಂಡಿದ್ದಾರೆ.

1. ನಾವಿಕ ಅಂತ್ಯಾಕ್ಷರಿ : ಅಂತ್ಯಾಕ್ಷರಿ ವಿಭಾಗದಲ್ಲಿ ಸುಮಾರು 30 ಗುಂಪುಗಳು ಹೆಸರು ನೋಂದಾಯಿಸಿಕೊಂಡಿವೆ. ಪ್ರತಿ ಗುಂಪಿನಲ್ಲಿ ಇಬ್ಬರು ಸ್ಪರ್ಧಿಗಳು ಪಾಲ್ಗೊಳ್ಳಲಿದ್ದಾರೆ.ಆರಂಭಿಕ ಹಂತದ ಸ್ಪರ್ಧೆಯಲ್ಲಿ ಒಟ್ಟು 6 ಸುತ್ತುಗಳು ಇರುತ್ತವೆ. ಎಲ್ಲ ಗುಂಪುಗಳಿಗೆ ಸ್ಪರ್ಧೆಗಳನ್ನು ನಡೆಸಿ ಅವರು ಪಡೆಯುವ ಅಂಕಗಳನ್ನಾಧರಿಸಿ ಕ್ವಾಟರ್ ಫೈನಲ್ ಹಂತಕ್ಕೆ ತರಲಾಗುವುದು. ಮುಂದೆ ವಿಜೇತರಾದ ಗುಂಪುಗಳು ಸೆಮಿ ಫೈನಲ್ ತಲುಪಿ ಆ ನಂತರ ಅಂತಿಮ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಂತಿಮ ಹಂತದ ಸ್ಪರ್ಧೆಯನ್ನು ಬೆಂಗಳೂರಿನಿಂದ ಖ್ಯಾತ ಹಿನ್ನೆಲೆ ಗಾಯಕ ಚಿನ್ಮಯ್ ಅತ್ರೆಯಸ್ ನಡೆಸಿಕೊಡಲಿದ್ದಾರೆ.ಅಂತ್ಯಾಕ್ಷರಿ ಸ್ಪರ್ಧೆಯನ್ನು ನಡೆಸುವ ಸಮಿತಿಯಲ್ಲಿ ಶ್ರೀಧರ ರಾಜಣ್ಣ, ಚಿತ್ರ ರಾವ್‌, ಮಾಧವಿ, ಶ್ರೀನಿ, ಗೋಪಾಲ ಹಾಗೂ ಉಷಾ ಕುಮಾರ್ಕಾರ್ಯ ನಿರ್ವಹಿಸುತ್ತಿದ್ದಾರೆ. 

2. ನಾವಿಕ ಕೋಗಿಲೆ : ಹೆಸರೇ ಸೂಚಿಸುವಂತೆ ಸುಮಧುರ ಕಂಠ ಸಿರಿಯನ್ನು ವಿಶ್ವಕ್ಕೆ ಪರಿಚಯಿಸುವ ವೇದಿಕೆಯೇ ನಾವಿಕ ಕೋಗಿಲೆ. ಈ ವಿಭಾಗಕ್ಕೆ ಈಗಾಗಲೇ ಸುಮಾರು ನೂರಕ್ಕೂ ಹೆಚ್ಚು ಜನ ಉತ್ಸಾಹಿ ಗಾಯಕರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಸ್ಪರ್ಧೆಯನ್ನು ಮೂರು ವಿಭಾಗಗಳಲ್ಲಿ ವಿಂಗಡಿಸಲಾಗಿದೆ. 7ರಿಂದ 12 ವರ್ಷಗಳ ವಯೋಮಾನದವರಿಗೆ ಜೂನಿಯರ್ಸ್, 13 ರಿಂದ 19 ರವರೆಗಿನ ವಯಸ್ಸಿನವರಿಗಾಗಿ ಟೀನ್ಸ್ ಎಂದು ಮತ್ತು 20ರ ನಂತರದ ವಯಸ್ಸಿನವರಿಗೆ ಅಡಲ್ಟ್ ಎಂದು ಪ್ರತ್ಯೇಕಿಸಲಾಗಿದೆ. ತಾವು ಆಯ್ಕೆ ಮಾಡಿಕೊಂಡ ಕನ್ನಡ ಚಲನಚಿತ್ರ ಗೀತೆಯ ವಿಡಿಯೋವನ್ನು ಯೂಟ್ಯೂಬಿಗೆ ಅಪ್ಲೋಡ್ ಮಾಡಿ ಅದನ್ನು ನಾವಿಕದ ಈ ವಿಭಾಗಕ್ಕೆ ಶೇರ್ ಮಾಡಿದಲ್ಲಿ ತೀರ್ಪುಗಾರರು ಆಯ್ಕೆ ಮಾಡುತ್ತಾರೆ.

ಮೊದಲ 2 ಸುತ್ತುಗಳ ನಂತರ ಅಂತಿಮ ಹಂತದಲ್ಲಿ ಖ್ಯಾತ ಸಂಗೀತ ನಿರ್ದೇಶಕ ಪ್ರವೀಣ್ ಡಿ ರಾವ್, ಚಿನ್ಮಯ್ ಆತ್ರೇಯಸ್,ಮಂಗಳ ರವಿ ಮತ್ತು ಖ್ಯಾತ ಗಾಯಕ ಅಜಯ್ ವಾರಿಯರ್ ವಿಜೇತರನ್ನು ಆಯ್ಕೆ ಮಾಡಲಿದ್ದಾರೆ. ವಿಜೇತರಾದ ಟಾಪ್ 5 ಗಾಯಕರು ಮತ್ತೊಮ್ಮೆ ಝೂಮ್ ಯ್ಯಾಪ್ ಮೂಲಕ ಹಾಡಲಿದ್ದಾರೆ. ಈ ವಿಡಿಯೋ ತುಣುಕುಗಳನ್ನು ನಾವಿಕ ಸಮಾವೇಶದಲ್ಲಿ ಪ್ರದರ್ಶಿಸಲಾಗುವುದು. ಇವರಿಗೆ ಪ್ರಶಸ್ತಿಯನ್ನೂ ನೀಡಿ ಗೌರವಿಸಲಾಗುವುದು. ಪ್ರಸನ್ನ ಕುಮಾರ್‌, ಗುರುಪ್ರಸಾದ್‌ ರವೀಂದ್ರ, ಶ್ರೇಯಸ್ ಶ್ರೀಕರ್, ಲಕ್ಷ್ಮೀ ಶೈಲೇಶ್‌ ಮತ್ತು ಮಂಗಳ ರವಿ ಸ್ಪರ್ಧೆಯ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. 

3. ಶೆಫ್ ನಾವಿಕ – ನಾ ಎಂತ ಕುಕ್: ಇದೊಂದು ವಿನೂತನ ಮಾದರಿಯ ಅಡುಗೆ ಸ್ಪರ್ಧೆ. ಮೊದಲ ಬಾರಿಗೆ ವರ್ಚುಯಲ್ಲಾಗಿ ನಡೆಯಲಿರುವ ಕುಕಿಂಗ್ ಸ್ಪರ್ಧೆ.ಹಿರಿಯ ನಟ ಸಿಹಿಕಹಿ ಚಂದ್ರು ಈ ಸ್ಪರ್ಧಾ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಸ್ಪರ್ಧಾಳುಗಳಿಗೆ ಆಯೋಜಕರೇ ಮೊದಲಿಗೆ ಅಡುಗೆ ತಯಾರಿಸಲು ಅಡುಗೆ ಪಾದಾರ್ಥಗಳ ಪಟ್ಟಿಯನ್ನು ಕೊಡುತ್ತಾರೆ. ಈ ಪಟ್ಟಿಯಲ್ಲಿನ ಪದಾರ್ಥಗಳನ್ನು ಬಳಸಿಯೇ 2 ಮಾದರಿಯ ತಿನಿಸುಗಳನ್ನು ಸಿದ್ಧಪಡಿಸಬೇಕು. ಪಟ್ಟಿಯಲ್ಲಿರುವ ಎಲ್ಲ ಪಾದಾರ್ಥಗಳನ್ನು ತಪ್ಪದೇ ಬಳಸಬೇಕು. ಬೇಕಾದಲ್ಲಿ ಇನ್ನೂ ಇತರೆ ಅಡುಗೆ ಪದಾರ್ಥಗಳನ್ನೂ ಬಳಸಿಕೊಳ್ಳಬಹುದು. ಈ ಎಲ್ಲವನ್ನೂ ಬಳಸಿ ಅಡುಗೆ ತಯಾರಿಸುವ ವಿಧಾನವನ್ನು ಅಚ್ಚುಕಟ್ಟಾಗಿ ವಿಡಿಯೋ ಮಾಡಿ ಆಯೋಜಕರಿಗೆ ಕಳಿಸಬೇಕು. 10-12 ನಿಮಿಷಗಳ ಈ ವಿಡಿಯೋದಲ್ಲಿ ಸ್ಪರ್ಧಾಳುಗಳು ಅಡುಗೆ ಪದಾರ್ಥಗಳನ್ನು ಬಳಸಿಕೊಂಡ ರೀತಿ, ಪ್ರಸ್ತುತ ಪಡಿಸುವ ಕಲೆ, ಸೃಜನಶೀಲತೆ, ಅಡುಗೆ ಮಾಡುವ ಕೌಶಲತೆಯನ್ನು ಗಮನಿಸಿ ವಿಜೇತರನ್ನು ಆಯ್ಕೆ ಮಾಡಲಾಗುತ್ತದೆ. 3 ವಿಜೇತರನ್ನು ಆಯ್ಕೆ ಮಾಡಲಿದ್ದು 2 ಸುತ್ತುಗಳಿರುತ್ತವೆ. ಈ ವಿಭಾಗದಲ್ಲಿ 40 ಜನ ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಸ್ಪರ್ಧೆಯ ಕಾರ್ಯ ನಿರ್ವಹಿಸುತ್ತಿರುವ ರಾಮರಾವ್ ತಿಳಿಸಿದ್ದಾರೆ. 

4. ಛಾಯಾನಾವಿಕ(ಫೋಟೋಗ್ರಫಿ) :ಫೋಟೋಗ್ರಫಿ ಪ್ರಿಯರಿಗಾಗಿ ಈ ಸ್ಪರ್ಧೆ. ಇಲ್ಲಿ 3 ಮಾದರಿಯಲ್ಲಿ ಸ್ಪರ್ಧಾಳುಗಳು ತಾವು ತೆಗೆದ ಚಿತ್ರಗಳನ್ನು ಕಳಿಸಬಹುದು. ಭಾಷೆ, ಬಾಂಧವ್ಯ ಮತ್ತು ಭರವಸೆ ಎಂಬ ಈ ಮೂರು ಶೀರ್ಷಿಕೆಗಳಿಗೆ ಅನುಗುಣವಾಗಿ ಚಿತ್ರಗಳನ್ನು ಕಳಿಸಬೇಕಿದೆ. ವಿಜೇತರ ಫೋಟೋಗಳನ್ನು 3ಡಿ ಸ್ಟುಡಿಯೋ ತಂತ್ರಜ್ಞಾನ ಬಳಸಿ ಆನ್ಲೈನಿನಲ್ಲಿ ಪ್ರದರ್ಶಿಸಲಾಗುವುದು. ಖ್ಯಾತ ವನ್ಯಜೀವಿ ಛಾಯಾಗ್ರಾಹಕ ಕಲ್ಯಾಣ್ ವರ್ಮ ಮತ್ತು ಮನೋಹರ ಜೋಶಿ ಈ ವಿಭಾಗಕ್ಕೆ ತೀರ್ಪುಗಾರರಾಗಿದ್ದಾರೆ. ಇದುವರೆಗೂ 50 ಜನ ಈ ವಿಭಾಗಕ್ಕೆ ಹೆಸರು ನೀಡಿದ್ದಾರೆ. ದಿನೇಶ್‌ ಹರಿಯಾದಿ, ವಿಜಯ ಕೊಟ್ರಪ್ಪ, ಹೇಮಂತ್‌ ಕುಮಾರ್‌ ಮತ್ತು ವೆಂಕಿ ಈ ವಿಭಾಗದ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಈ ಎಲ್ಲ ಸ್ಪರ್ಧೆಗಳ ಜೊತೆಗೆ ಕಿರುಚಿತ್ರಗಳನ್ನೂ ಮಾಡಿ ಕಳಿಸುವಂತೆ ನಾವಿಕ ಪ್ರೋತ್ಸಾಹಿಸಿದೆ. ಉತ್ತಮ ಎನಿಸುವ ಆಯ್ಕೆಯಾದ ಕಿರುಚಿತ್ರಗಳನ್ನುಸಮಾವೇಶದಲ್ಲಿ ಪ್ರೀಮಿಯರ್ ಮಾಡುವುದಾಗಿ ಆಯೋಜಕರು ತಿಳಿಸಿದ್ದಾರೆ.ಹೆಚ್ಚಿನ ಮಾಹಿತಿಗಾಗಿ ನಾವಿಕ ವೆಬ್ಸೈಟ್ https://navika.org/ ನೋಡಬಹುದು. ಈ ಎಲ್ಲ ಸ್ಪರ್ಧೆಗಳಲ್ಲಿ ಅನಿವಾಸಿ ಕನ್ನಡಿಗರು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ  ಎಂದು ನಾವಿಕ ಕಾರ್ಯಕಾರಿ ಸಮಿತಿ  ಪ್ರಾದೇಶಿಕ ನಿರ್ದೇಶಕ(ಫೀನಿಕ್ಸ್. ಯುಎಸ್ಎ. )  ಅನಿಲ್ ಭಾರದ್ವಾಜ್ ತಿಳಿಸಿದ್ದಾರೆ.  ಪ್ರಾದೇಶಿಕ ನಿರ್ದೇಶಕ.

 


 

 

Follow Us:
Download App:
  • android
  • ios