ಸಂಘರ್ಷವಿದ್ದರೂ ಮಾಲ್ಡೀವ್ಸ್‌ಗೆ ಭಾರತದಿಂದ 420 ಕೋಟಿ ನೆರವು
ಮಾಲ್ಡೀವ್ಸ್‌ಗೆ ಬಜೆಟ್ ನೆರವನ್ನು ವಿಸ್ತರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಇದರ ಜತೆಗೆ 420 ಕೋಟಿ ರು. ಮೌಲ್ಯದ ಟ್ರೆಸರಿ ಬಿಲ್ ಅನ್ನು ಒಂದು ವರ್ಷ ವಿಸ್ತರಿಸಲೂ ತೀರ್ಮಾನಿಸಿದೆ. ತನ್ನ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಪ್ರಕಟಿಸಿದ ಮಾಲ್ಡೀವ್ಸ್ ಸರ್ಕಾರ
ಮಾಲೆ(ಮೇ.14): ಚೀನಾ ಪರ ಒಲವು ಹೊಂದಿರುವ ಮೊಹಮ್ಮದ್ ಮಯಿಜು ಅಧ್ಯಕ್ಷರಾದ ಬಳಿಕ ಮಾಲ್ಡೀವ್ಸ್ ಹಾಗೂ ಭಾರತ ನಡುವಣ ರಾಜತಾಂತ್ರಿಕ ಸಂಬಂಧ ಹಳಸಿದ್ದರೂ, ಆರ್ಥಿಕ ಸಂಕಷ್ಟದಲ್ಲಿರುವ ದ್ವೀಪ ರಾಷ್ಟ್ರಕ್ಕೆ ಭಾರತ ಹಣಕಾಸು ನೆರವನ್ನು ಒದಗಿಸಿದೆ.
ಸದ್ಭಾವನೆಯ ಕ್ರಮವಾಗಿ, ಮಾಲ್ಡೀವ್ಸ್‌ಗೆ ಬಜೆಟ್ ನೆರವನ್ನು ವಿಸ್ತರಣೆ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ. ಇದರ ಜತೆಗೆ 420 ಕೋಟಿ ರು. ಮೌಲ್ಯದ ಟ್ರೆಸರಿ ಬಿಲ್ ಅನ್ನು ಒಂದು ವರ್ಷ ವಿಸ್ತರಿಸಲೂ ತೀರ್ಮಾನಿಸಿದೆ. ತನ್ನ ಕೋರಿಕೆಯ ಮೇರೆಗೆ ಭಾರತ ಸರ್ಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಮಾಲ್ಡೀವ್ಸ್ ಸರ್ಕಾರ ಸೋಮವಾರ ಪ್ರಕಟಿಸಿದೆ.
ನಮ್ಮ ದೇಶದಿಂದ ಭಾರತದ ಎಲ್ಲ 90 ಸೈನಿಕರು ವಾಪಸ್: ಮಾಲ್ಡೀವ್ಸ್ ಘೋಷಣೆ
ಮಾಲ್ಡೀವ್ಸ್‌ನ ಹಣಕಾಸು ಸಚಿವಾಲಯ ವಿತರಿಸುವ 420 ಕೋಟಿ ರು. ಮೌಲ್ಯದ (50 ಮಿಲಿಯನ್ ಡಾಲರ್) ಟ್ರೆಸರಿ ಬಿಲ್ ಅನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಖರೀದಿಸಲಿದೆ. ಈ ಹಿಂದೆ ಇದ್ದ ಟ್ರೆಸರಿ ಬಿಲ್ ಅವಧಿ ಮುಗಿದ ಬಳಿಕ ಮತ್ತೊಂದು ವರ್ಷದವರೆಗೆ ಈ ಬಿಲ್ ವಿಸ್ತರಣೆಯಾಗಲಿದೆ ಎಂದು ಹೇಳಿಕೆ ವಿವರಿಸಿದೆ. ಭಾರತದ ನಿರ್ಧಾರಕ್ಕೆ ಮಾಲ್ಡೀವ್ಸ್ ವಿದೇಶಾಂಗ ಸಚಿವ ಮೂಸಾ ಜಮೀರ್ ಅವರು ಧನ್ಯವಾದ ತಿಳಿಸಿದ್ದಾರೆ.