ಬೈಡೆನ್ ಅಮೆರಿಕ ಅಧ್ಯಕ್ಷರಾದ ತಿಂಗಳಲ್ಲಿ ಸಿರಿಯಾ ಮೇಲೆ ದಾಳಿ| ಅಧ್ಯಕ್ಷರಾದ ಬಳಿಕ ನಡೆದ ಮೊದಲ ವಾಯು ದಾಳಿ
ವಾಷಿಂಗ್ಟನ್(ಫೆ.28): ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಅಧಿಕಾರಕ್ಕೆ ಬಂದ 36 ದಿನದಲ್ಲೇ ಮೊದಲ ಬಾಂಬ್ ದಾಳಿಗೆ ಆದೇಶಿಸಿದ್ದು, ಅಮೆರಿಕದ ವಾಯು ಪಡೆ ವಿಮಾನಗಳು ಇರಾನ್ ಸೇನಾ ಬೆಂಬಲಿತ ಗುಂಪುಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಿವೆ.
ಪೂರ್ವ ಸಿರಿಯಾದ ಗಡಿಯಲ್ಲಿ ಇರಾನ್ ಬೆಂಬಲಿತ ಕತಾಯಿಬ್ ಹೆಜ್ಬುಲ್ಲಾ, ಕತಾಯಿಬ್ ಸಯ್ಯಿದ್ ಅಲ್ ಶುಹಾದಾ ಉಗ್ರ ಸಂಘಟನೆಗಳ ನೆಲೆಗಳನ್ನು ಗುರಿಯಾಗಿಸಿಕೊಂಡು ಅಮೆರಿಕ ಯುದ್ಧವಿಮಾನಗಳು ವಾಯ ದಾಳಿ ನಡೆಸಿದೆ. ಅಧ್ಯಕ್ಷ ಬೈಡೆನ್ ನಿರ್ದೇಶನದಂತೆ ಈ ದಾಳಿಯನ್ನು ಕೈಗೊಳ್ಳಲಾಗಿದೆ ಎಂದು ಅಮೆರಿಕ ರಕ್ಷಣಾ ಇಲಾಖೆಯ ಮುಖ್ಯ ಕಚೇರಿ ಪೆಂಟಗಾನ್ ಮಾಹಿತಿ ನೀಡಿದೆ. ದಾಳಿಯಲ್ಲಿ 22 ಮಂದಿ ಉಗ್ರರು ಸಾವಿಗೀಡಾಗಿರಬಹುದು ಎಂದು ಶಂಕಿಸಲಾಗಿದೆ.
ದಾಳಿ ಮಾಡಿದ್ದು ಏಕೆ?
ಅಮೆರಿಕ ಹಾಗೂ ಮಿತ್ರರಾಷ್ಟ್ರಗಳ ಮೇಲೆ ಇರಾನ್ ಬಂಡುಕೋರರ ಗುಂಪು ನಡೆಸಿದ ರಾಕೆಟ್ ದಾಳಿಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಗಂಭೀರವಾಗಿ ಪರಿಗಣಿಸಿದ್ದು, ಇರಾನ್ ಮೇಲಿನ ದಾಳಿಗೆ ಆದೇಸಿದ್ದಾರೆ. ಸಿರಿಯಾ ಪ್ರದೇಶದ ಮೇಲೆ ಈ ದಾಳಿ ನಡೆದಿದ್ದರೂ ಅಮೆರಿಕದ ಗುರಿ ಇರಾನ್ ಗಡಿಯಲ್ಲಿರುವ ಉಗ್ರಗಾಮಿ ಸಂಘಟನೆಗಳು. ಈ ಮುನ್ನ ಟ್ರಂಪ್ ಆಡಳಿತ ಸಂದರ್ಭದಲ್ಲೂ ಅಮೆರಿಕ ಇರಾನ್ ಮೇಲೆ ಮುಗಿಬಿದ್ದಿತ್ತು. ಡ್ರೋನ್ ದಾಳಿಯಲ್ಲಿ ಇರಾನ್ ಸೇನಾ ಮುಖ್ಯಸ್ಥ ಖಾಸೀಂ ಸೊಲೈಮಾನಿಯನ್ನು ಹತ್ಯೆ ಮಾಡಲಾಗಿತ್ತು. ಇದು ಇರಾನ್ ಮತ್ತು ಅಮೆರಿದ ಮಧ್ಯೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ.
Last Updated Feb 28, 2021, 8:00 AM IST