* ರಿಫಾರ್ಮ್, ಪರ್ಫಾಮ್‌, ಟ್ರಾನ್ಸ್‌ಫಾರ್ಮ್ ಮೂಲಕ ದೇಶದ ಅಭಿವೃದ್ಧಿ* 2024: ಮೋದಿ ಒನ್ಸ್‌ ಮೋರ್‌* ಮತ್ತೆ ಪ್ರಧಾನಿಯಾಗಿ ಮೋದಿ ಬಯಸಿದ ಜರ್ಮನಿಯ ಭಾರತೀಯರು

ಬರ್ಲಿನ್‌(ಮೇ.03): ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಸೋಮವಾರ ಜರ್ಮನ್‌ ರಾಜಧಾನಿ ಬರ್ಲಿನ್‌ಗೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಇದೇ ವೇಳೆ ಜರ್ಮನಿಯಲ್ಲಿ ನೆಲೆಸಿರುವ ಭಾರತೀಯ ಸಮುದಾಯದ ಜನರನ್ನು ಉದ್ದೇಶಿಸಿ ಮಾತನಾಡಿದರು.

ಬರ್ಲಿನ್‌ನ ಒಳಾಂಗಣ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ವೇದಿಕೆಗೆ ಪ್ರಧಾನಿ ಮೋದಿ ಅವರು ಆಗಮಿಸುತ್ತಿದ್ದಂತೆ ‘2024: ಒನ್ಸ್‌ ಮೋರ್‌ ಮೋದಿ’ (2024ರಲ್ಲಿ ಮತ್ತೊಮ್ಮೆ ಮೋದಿ ಎಂದು ಉದ್ಘೋಷ ಮಾಡಿದರು.) ಎಂದು ಜಯಘೋಷ ಮಾಡಿದರು.

ಬಳಿಕ ಮಾತನಾಡಿದ ಮೋದಿ ‘ನಿಮ್ಮನ್ನೆಲ್ಲ ಭೇಟಿಯಾಗಿ ಬಹಳ ಸಂತೋಷವಾಗಿದೆ. ಅದರಲ್ಲೂ ಬಹುತೇಕ ಯುವಕರು ಭಾಗವಹಿಸಿದ್ದನ್ನು ನೋಡಿ ಇನ್ನಷ್ಟು ಸಂತೋಷವಾಗಿದೆ. ಇದು ನನ್ನ ಸೌಭಾಗ್ಯ’ ಎಂದಿದ್ದಾರೆ.

‘ಹಿಂದೆ ವಿದೇಶಿಯರ ಆಳ್ವಿಕೆಯಿಂದಾಗಿ ದೇಶದ ತನ್ನ ಸ್ವಾಭಿಮಾನವನ್ನೇ ಕಳೆದುಕೊಂಡಿತ್ತು. ಆದರೆ ಭಾರತ ಇಂದು ಅಭಿವೃದ್ಧಿ ಹಾದಿಯಲ್ಲಿ ಮುನ್ನಡೆಯುತ್ತಿದೆ. ದೇಶದಲ್ಲಿ ಎಂದಿಗೂ ಸಂಪನ್ಮೂಲಗಳ ಕೊರತೆಯೇ ಇರಲಿಲ್ಲ. ಇದರೊಂದಿಗೆ ರಾಜಕೀಯ ಇಚ್ಛಾಶಕ್ತಿಯು ಸೇರಿ ದೇಶದಲ್ಲಿ ಹೊಸ ಸುಧಾರಣೆಗಳಿದೆ ನಾಂದಿ ಹಾಡಲಾಗುತ್ತಿದೆ. ಪ್ರತಿಯೊಂದು ಕ್ಷೇತ್ರದಲ್ಲೂ ಭಾರತ ಸಾಧನೆ ಮಾಡುತ್ತಿದೆ. ದೇಶದಲ್ಲಿ ಸ್ಥಿರವಾದ ಸರ್ಕಾರವಿದೆ. ಜನರು ಸರ್ಕಾರದಲ್ಲಿ ವಿಶ್ವಾಸವನ್ನಿರಿಸಿದ್ದಾರೆ. ರಿಫಾಮ್‌ರ್‍, ಪರ್ಫಾಮ್‌, ಟ್ರಾನ್ಸ್‌ಫಾಮ್‌ರ್‍ (ಸುಧಾರಣೆ, ಕಾರ್ಯ ಸಾಧನೆ ಹಾಗೂ ಬದಲಾವಣೆ) ಈ ಮೂರು ಮಂತ್ರದೊಂದಿಗೆ ಭಾರತವು ಅಭಿವೃದ್ಧಿಯ ಹೊಸ ಉತ್ತುಂಗಕ್ಕೇರಲಿದೆ’ ಎಂದಿದ್ದಾರೆ.

ಬರ್ಲಿನ್‌ನಲ್ಲಿ ಮೋದಿ ಮನಗೆದ್ದ ಪುಟ್ಟ ಮಕ್ಕಳು

ಜರ್ಮನಿಯ ಬರ್ಲಿನ್‌ನಲ್ಲಿ ಭಾರತೀಯ ಮೂಲದ ಇಬ್ಬರು ಪುಟ್ಟಮಕ್ಕಳು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಪ್ರಧಾನಿ ನರೇಂದ್ರ ಮೋದಿಯವರ ಮನ ಗೆದ್ದಿದ್ದಾರೆ. ವಿದೇಶಿ ಪ್ರವಾಸದಲ್ಲಿದ್ದ ಮೋದಿ ಅವರಿಗೆ ಜರ್ಮನಿಯಲ್ಲಿ ನೆಲೆಸಿದ ಭಾರತೀಯ ಸಮುದಾಯದವರು ಅದ್ದೂರಿಯಾಗಿ ಬರ ಮಾಡಿಕೊಂಡಿದ್ದು, ಈ ವೇಳೆ ಆಶುತೋಷ್‌ ಎಂಬ ಬಾಲಕ ಪ್ರಧಾನಿಯ ಎದುರು ದೇಶಭಕ್ತಿ ಗೀತೆಯನ್ನು ಹಾಡಿ ಶಹಭಾಸ್‌ಗಿರಿ ಗಿಟ್ಟಿಸಿಕೊಂಡಿದ್ದಾನೆ.

ಮಾನ್ಯಾ ಮಿಶ್ರಾ ಎಂಬ ಪುಟ್ಟಬಾಲಕಿ ಮೋದಿಯವರ ಭಾವಚಿತ್ರ ಬಿಡಿಸಿ ಅವರ ಎದುರು ಪ್ರಸ್ತುತ ಪಡಿಸಿದ್ದಳು. ಚಿತ್ರವನ್ನು ಮೆಚ್ಚಿದ ಮೋದಿ ಮಾನ್ಯಾಳೊಂದಿಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ ಹಾಗೂ ಭಾವಚಿತ್ರದ ಮೇಲೆ ಸಹಿ ಹಾಕಿ ಅಭಿನಂದಿಸಿದ್ದಾರೆ. ‘ಪ್ರಧಾನಿ ಮೋದಿಯವರು ನನಗೆ ಪ್ರೇರಣೆಯಾಗಿದ್ದು, ಅವರನ್ನು ಭೇಟಿಯಾಗುವುದು ನನ್ನ ಕನಸಾಗಿತ್ತು. ಇಂದು ಅದು ನನಸಾಗಿದೆ’ ಎಂದು ಮಾನ್ಯಾ ಹರ್ಷ ವ್ಯಕ್ತಪಡಿಸಿದ್ದಾಳೆ.