- ಬಂದರು ನಗರಿ ಮರಿಯುಪೋಲ್, ಒಡೆಸ್ಸಾ ವಶಕ್ಕೆ ನೌಕಾಪಡೆ ದೊಡ್ಡ ದಂಡು- ಕರಾವಳಿ ನಗರಿ ಖೇರ್ಸನ್ ರಷ್ಯಾ ವಶಕ್ಕೆ, ಕೀವ್, ಖಾರ್ಕಿವ್‌ನಲ್ಲಿ ಭಾರೀ ದಾಳಿ- ಉಕ್ರೇನ್‌ನ ದೊಡ್ಡ ನಗರಗಳ ವಶಕ್ಕೆ ಮುಂದುವರೆದ ರಷ್ಯಾ ಸೇನೆ ಹರಸಾಹಸ
ಕೀವ್/ಮಾಸ್ಕೋ (ಮಾ.4): ಉಕ್ರೇನ್‌ನ ಮಹಾನಗರಗಳನ್ನು ವಶಪಡಿಸಿಕೊಳ್ಳುವ ರಷ್ಯಾದ ಹರಸಾಹಸ ಯುದ್ಧದ 8ನೇ ದಿನವಾದ ಗುರುವಾರ ಕೂಡಾ ಮುಂದುವರೆದಿದ್ದು, ಇದೀಗ ಪ್ರಮುಖ ಕರಾವಳಿ ನಗರುಗಳಿಗೆ ರಷ್ಯಾ ಸೇನೆ ಲಗ್ಗೆ ಇಟ್ಟಿದೆ. ಈ ದಿಸೆಯಲ್ಲಿ ಗುರುವಾರ ಮೊದಲ ಗೆಲುವು ಸಾಧಿಸಿರುವ ರಷ್ಯಾ ಪಡೆಗಳು ಕಡಲ ನಗರಿ ಖಾರ್ಸನ್ ವಶಪಡಿಸಿಕೊಂಡಿವೆ. ಜೊತೆಗೆ ಇನ್ನೊಂದು ಕರಾವಳಿ ನಗರಿ ಮರಿಯುಪೋಲ್ ಅನ್ನು ಸುತ್ತುವರೆದಿದ್ದು, ಒಡೆಸ್ಸಾ ನಗರದ ವಶಕ್ಕೆ ಯುದ್ಧ ನೌಕೆ ಮತ್ತು ರಾಕೆಟ್ ಬೋಟ್‌ಗಳೊಂದಿಗೆ ದಾಂಗುಡಿ ಇಟ್ಟಿದೆ ಎಂದು ವರದಿಗಳು ತಿಳಿಸಿವೆ.
ಉಳಿದಂತೆ ರಾಜಧಾನಿ ಕೀವ್, ಖಾರ್ಕಿವ್ ಸೇರಿದಂತೆ ಇತರೆ ನಗರಗಳ ಮೇಲೂ ದಾಳಿ ಮುಂದುವರೆದಿದೆಯಾದರೂ ಉಕ್ರೇನ್‌ನ ಸೇನಾ ಪಡೆಗಳು ತೀವ್ರ ಪ್ರತಿರೋಧ ಒಡ್ಡುತ್ತಿರುವ ಕಾರಣ ಭಾರೀ ಬೀದಿ ಕಾಳಗ ಮುಂದುವರೆದಿದೆ. ಈ ನಡುವೆ ರಷ್ಯಾ ತನ್ನ ದಾಳಿಗೆ ಸೂಕ್ತ ಬೆಲೆ ತೆರಬೇಕಾಗಿ ಬರಲಿದೆ ಎಂದು ಉಕ್ರೇನ್ ಅಧ್ಯಕ್ಷ ಜೆಲೆನ್‌ಸ್ಕಿ ಎಚ್ಚರಿಸಿದ್ದಾರೆ. ಮತ್ತೊಂದೆಡೆ ನಮ್ಮ ತಲೆಯಲ್ಲಿ ಪರಮಾಣು ದಾಳಿಯ ಯೋಚನೆ ಇಲ್ಲ, ಅದು ಪಾಶ್ಚಾತ್ಯ ದೇಶಗಳದ್ದು ಎಂದು ರಷ್ಯಾ ವಿದೇಶಾಂಗ ಸಚಿವ ಸೆರ್ಗೇಯ್ ಲಾವ್ರೋವ್ ಹೇಳಿದ್ದಾರೆ. ಮತ್ತೊಂದೆಡೆ ಉಕ್ರೇನ್‌ನಿಂದ 10 ಲಕ್ಷ ಜನರು ನೆರೆಯ ದೇಶಗಳಿಗೆ ವಲಸೆ ಹೋಗಿದ್ದಾರೆ ಎಂದು ಹಲವು ವರದಿ ತಿಳಿಸಿದೆ. ಜೊತೆಗೆ ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯವು ದಾಳಿಯ ಕುರಿತ ತನ್ನ ತನಿಖೆ ಆರಂಭಿಸಿರುವುದಾಗಿ ಘೋಷಿಸಿದೆ.
ಖೇರ್ಸನ್ ವಶಕ್ಕೆ: ಉಕ್ರೇನ್‌ನ ದಕ್ಷಿಣ ಭಾಗದಲ್ಲಿನ ಪ್ರಮುಖ ಕರಾವಳಿ ಪಟ್ಟಣ ಖೇರ್ಸನ್ ರಷ್ಯಾ ಸೇನೆ ವಶಕ್ಕೆ ಹೋಗಿದೆ ಎಂದು ಉಕ್ರೇನ್ ಸರ್ಕಾರ ಒಪ್ಪಿಕೊಂಡಿದೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ಇದು 8 ದಿನಗಳ ಸತತ ದಾಳಿಯ ಬಳಿಕ ರಷ್ಯಾಕ್ಕೆ ಸಿಕ್ಕ ಮೊದಲ ಗೆಲುವಾಗಿದೆ. 3 ಲಕ್ಷ ಜನ ಸಂಖ್ಯೆ ಹೊಂದಿರುವ ಖೇರ್ಸನ್, ನೀಪರ್ ನದಿಯು ಕಪ್ಪು ಸಮುದ್ರ ಸೇರುವ ಪ್ರದೇಶದಲ್ಲಿದೆ. ಈ ಪ್ರದೇಶ ಇದೀಗ ರಷ್ಯಾ ಕೈವಶವಾಗಿರುವ ಕಾರಣ, 2014ರಲ್ಲಿ ತಾನು ಉಕ್ರೇನ್‌ನಿಂದ ವಶಪಡಿಸಿಕೊಂಡಿದ್ದ ಕ್ರೆಮಿಯಾ ಪ್ರಾಂತ್ಯಕ್ಕೆ ನೀರು ಒದಗಿಸುವುದು ರಷ್ಯಾಕ್ಕೆ ಸಾಧ್ಯವಾಗಲಿದೆ. ಹೀಗಾಗಿ ಇದು ರಷ್ಯಾ ಪಾಲಿನ ದೊಡ್ಡ ಜಯವೆಂದು ಬಣ್ಣಿಸಲಾಗಿದೆ. ಜೊತೆಗೆ ಉಕ್ರೇನ್‌ನ ಇನ್ನಷ್ಟುಕರಾವಳಿ ನಗರಗಳನ್ನು ವಶಪಡಿಸಿಕೊಳ್ಳುವುದಕ್ಕೆ ಇದು ನೆರವಾಗಲಿದೆ ಎನ್ನಲಾಗಿದೆ.
ದೊಡ್ಡ ನೌಕಾ ದಂಡು: ಈ ನಡುವೆ ಮತ್ತೊಂದು ಬಂದರು ನಗರಿ ಮರಿಯುಪೋಲ್ ಅನ್ನು ರಷ್ಯಾ ನೌಕಾಪಡೆ ಮತ್ತು ಭೂಸೇನೆ ಸುತ್ತುವರೆದಿದೆ ಎಂದು ವರದಿಗಳು ತಿಳಿಸಿವೆ. ಜೊತೆಗೆ ದೇಶದ ಮೂರನೇ ಅತಿದೊಡ್ಡ ನಗರ ಒಡೆಸ್ಸಾ ವಶಕ್ಕೆ ರಷ್ಯಾ ನೌಕಾಪಡೆ ಯುದ್ಧನೌಕೆ ಮತ್ತು ರಾಕೆಟ್‌ಬೋಟ್‌ಗಳೊಂದಿಗೆ ಆಗಮಿಸುತ್ತಿದೆ ಎಂದು ಉಕ್ರೇನ್ ಸೇನೆ ಹೇಳಿಕೊಂಡಿದೆ.
Russia Ukraine Crisis ಅಮೆರಿಕನ್ನರು ಪೊರಕೆ ಮೇಲೆ ಬಾಹ್ಯಾಕಾಶಕ್ಕೆ ಹಾರಲಿ ಎಂದ Roscosmos
ದಾಳಿ ತೀವ್ರ: ರಷ್ಯಾ ಪಡೆಗಳು ಗುರುವಾರವೂ ರಾಜಧಾನಿ ಕೀವ್, 2ನೇ ಅತಿದೊಡ್ಡ ನಗರಿ ಖಾರ್ಕಿವ್, ಚೆರ್ನಿಹಿವ್, ಮರಿಯು ಪೋಲ್, ಸೆವೆರೋಡೋನೆಸ್ಟೆಕ್, ಲಿಸಿಚಾನ್ಸ್$್ಕ ಸೇರಿದಂತೆ ಹಲವು ನಗರಗಳ ಮೇಲೆ ಭಾರೀ ಪ್ರಮಾಣದ ಕ್ಷಿಪಣಿ, ಶೆಲ್ ದಾಳಿ ಮುಂದುವರೆಸುವ ಮೂಲಕ ಅವುಗಳನ್ನು ತೆಕ್ಕೆಗೆ ತೆಗೆದುಕೊಳ್ಳುವ ಯತ್ನ ನಡೆಸಿವೆ. ಅದರಲ್ಲೂ ಹಲವು ಜನವಸತಿ ಪ್ರದೇಶಗಳನ್ನು ಗುರಿಯಾಗಿಸಿ ದಾಳಿ ನಡೆಸಿದೆ. ಖಾರ್ಕಿವ್‌ನಲ್ಲಿ ರಷ್ಯಾ ದಾಳಿಗೆ ಗುರುವಾರ 34 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸರ್ಕಾರ ಗಂಭೀರ ಆರೋಪ ಮಾಡಿದೆ. ಜೊತೆಗೆ ಮರಿಯುಪೋಲ್‌ನಲ್ಲಿ ವಿದ್ಯುತ್ ಮತ್ತು ನೀರಿನ ಸಂಪರ್ಕ ಬಂದ್ ಆಗಿದೆ ಎಂದು ಸ್ಥಳೀಯ ಅಧಿಕಾರಿಗಳು ಹೇಳಿದ್ದಾರೆ. ಈ ನಡುವೆ ಕೀವ್‌ನಲ್ಲಿ ತಾನು ನಡೆಸಿದ ಪ್ರತಿದಾಳಿ ವೇಳೆ ರಷ್ಯಾ ಸೇನೆಯ ಮೇಜರ್ ಜನರಲ್ ಒಬ್ಬರು ಸಾವನ್ನಪ್ಪಿದ್ದಾರೆ ಎಂದು ಉಕ್ರೇನ್ ಸೇನೆ ಘೋಷಿಸಿದೆ.
Jyotiraditya Scindia ಹಾಗೂ ರೊಮೇನಿಯಾ ಮೇಯರ್ ನಡುವೆ ವಾಕ್ಸಮರಕ್ಕೆ ಇದು ಕಾರಣ!
ರಷ್ಯಾ ಸೇನೆಗೆ ಆಹಾರ, ಇಂಧನ ಕೊರತೆ: ರಾಜಧಾನಿ ಕೀವ್ ಮತ್ತು ಖಾರ್ಕಿವ್ ವಶಪಡಿಸಿಕೊಳ್ಳುವ ರಷ್ಯಾ ಯತ್ನ ಇನ್ನೂ ಫಲಿಸಿಲ್ಲ. ರಾಜಧಾನಿ ವಶಕ್ಕೆಂದು 65 ಕಿ.ಮೀ ಉದ್ದದ ಸೇನಾ ದಂಡು ಕರೆದುಕೊಂಡು ಬಂದಿದ್ದ ರಷ್ಯಾ ಸೇನೆಗೆ ಇದೀಗ ಆಹಾರ ಮತ್ತು ಇಂಧನ ಸಮಸ್ಯೆ ಎದುರಾಗಿದೆ. ಹೀಗಾಗಿ ಕೀವ್‌ನ ಕೇಂದ್ರ ಭಾಗದಿಂದ 30 ಕಿ.ಮೀದಲ್ಲೇ ಬೀಡುಬಿಟ್ಟಿರುವ ಈ ಬೃಹತ್ ದಂಡು ಕಳೆದ 2-3 ದಿನಗಳಿಂದ ನಿಂತಲ್ಲೇ ನಿಂತಿದೆ ಎಂದು ವರದಿಗಳು ತಿಳಿಸಿವೆ. ಸದ್ಯ ಕೀವ್‌ನಲ್ಲಿ ಪರಿಸ್ಥಿತಿ ಗಂಭೀರವಾಗಿದೆ, ಆದರೂ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಉಕ್ರೇನ್ ಸರ್ಕಾರ ಹೇಳಿಕೊಂಡಿದೆ.
ಅಂಕಿ-ಅಂಶ
2000 ನಾಗರಿಕರು..ರಷ್ಯಾ ದಾಳಿಯಲ್ಲಿ ಉಕ್ರೇನಿನ 2000ಕ್ಕೂ ಹೆಚ್ಚು ನಾಗರಿಕರು ಬಲಿ
498 ಯೋಧರು.... ಉಕ್ರೇನ್ ಪ್ರತಿದಾಳಿಯಲ್ಲಿ 498 ರಷ್ಯಾ ಯೋಧರು ಸಾವು
10 ಲಕ್ಷ....ಯುದ್ಧಕ್ಕೆ ಬೆಚ್ಚಿ ಉಕ್ರೇನ್ ತೊರೆದಿರುವ ನಾಗರಿಕರ ಸಂಖ್ಯೆ
