ಕೊರೋನಾ ಬಂದ ಮೇಲೆ ಕಾಲ ಬದಲಾಗಿದೆ, ಬದಲಾಗುತ್ತಿದೆ. ಡಿಜಿಟಲ್ ಬಳಕೆ ಹೆಚ್ಚಾಗಬೇಕು ಎಂದು ಪದೇ ಪದೇ ಹೇಳುತ್ತಲೇ ಬಂದಿದ್ದರೂ ಅಷ್ಟಾಗಿ ಕಂಡುಬಂದಿರಲಿಲ್ಲ. ಆದರೆ, ಯಾವಾಗ ಕೋವಿಡ್-19 ಕಾಲಿಟ್ಟಿತೋ..? ಲಾಕ್ ಡೌನ್ ಮಾಡಬೇಕಾಯಿತೋ..? ಆಗ ಒಂದೊಂದಾಗಿ ಪರ್ಯಾಯ ಮಾರ್ಗಗಳು ಹುಟ್ಟಿಕೊಂಡವು. ಅದರಲ್ಲಿ ಡಿಜಿಟಲ್ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ಸಿಕ್ಕಿತು. ವರ್ಕ್ ಫ್ರಂ ಹೋಂನಿಂದ ಹಿಡಿದು ಡಿಜಿಟಲ್ ಪೇಮೆಂಟ್ ವರೆಗೂ ಜನರ ಅವಲಂಬನೆ ಜಾಸ್ತಿಯಾಯಿತು. ಇದಕ್ಕಾಗಿ ಹಲವಾರು ಆ್ಯಪ್‌ಗಳು ಹುಟ್ಟಿಕೊಂಡರೆ, ಮತ್ತೆ ಕೆಲವು ಚಾಲ್ತಿಯಲ್ಲಿರುವ ಆ್ಯಪ್‌ಗಳು ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸಿಕೊಳ್ಳತೊಡಗಿದವು. ಈ ಸಾಲಿನಲ್ಲಿ ಮೊದಲಿನಿಂದಲೂ ಮುಂಚೂಣಿಯಲ್ಲಿರುವ ವಾಟ್ಸಪ್ ಈಗ ಹೊಸ ವರ್ಷ 2021ರಲ್ಲಿ ಮತ್ತಷ್ಟು ಟಾರ್ಗೆಟ್ ಹಾಕಿಕೊಂಡಿದೆ. ಅವುಗಳ ಬಗ್ಗೆ ನೋಡೋಣ ಬನ್ನಿ…
ಹೊಸ ಹೊಸ ಫೀಚರ್‌ಗಳನ್ನು ಪರಿಚಯಿಸುತ್ತಾ ಬಂದಿರುವ ಫೇಸ್ಬುಕ್ ಮಾಲೀಕತ್ವದ ವಾಟ್ಸಪ್ ಕಂಪನಿಯು, 2021ರ ಈ ಹೊಸ ವರ್ಷದಲ್ಲಿ 6 ನೂತನ ಫೀಚರ್‌ಗಳನ್ನು ಪರಿಚಯಿಸಲು ಹೊರಟಿದೆ. ಈ ಮೂಲಕ ಬಳಕೆದಾರರಿಗೆ ಮತ್ತಷ್ಟು ಬಳಕೆಸ್ನೇಹಿಯಾಗುತ್ತಿದ್ದು, ತನ್ನ ವ್ಯಾಪ್ತಿಯನ್ನು ಮತ್ತಷ್ಟು ವಿಸ್ತರಿಸಿಕೊಳ್ಳಲು ಹೆಜ್ಜೆ ಇಡುತ್ತಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿರುವ ವಾಟ್ಸಪ್, ತನ್ನ ವೆಬ್ ಮತ್ತು ಡೆಸ್ಕ್‌ಟಾಪ್ ವರ್ಷನ್‌ನಲ್ಲಿಯೂ ವಾಯ್ಸ್ ಹಾಗೂ ವಿಡಿಯೋ ಕಾಲಿಂಗ್ ಫೀಚರ್ ನೀಡಲು ಮುಂದಾಗಿದೆ. ಇದು ಬಳಕೆದಾರರ ಮೆಸ್ಸೇಜ್ ಅನುಭವವನ್ನು ಹೆಚ್ಚಿಸುವುದಲ್ಲದೆ, ಹೊಸತನ್ನು ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಅವುಗಳ ಬಗ್ಗೆ ನೋಡೋಣ…
ಇದನ್ನು ಓದಿ: ಜ.5ಕ್ಕೆ 108 ಮೆಗಾಪಿಕ್ಸೆಲ್ ಕ್ಯಾಮರಾವಿರುವ Mi 10i ಸ್ಮಾರ್ಟ್‌ಫೋನ್ ಬಿಡುಗಡೆ...
1. ಮಲ್ಟಿ-ಡಿವೈಸ್ ಸಪೋರ್ಟ್
ಈ ಮಲ್ಟಿ-ಡಿವೈಸ್ ಸಪೋರ್ಟ್ ಫೀಚರ್‌ನಲ್ಲಿ ವಾಟ್ಸಪ್ ಬಳಕೆದಾರರು, ಒಂದೇ ಬಾರಿಗೆ ಬೇರೆ ಬೇರೆ ಡಿವೈಸ್‌ಗಳಲ್ಲಿ ಲಾಗಿನ್ ಆಗಬಹುದಾಗಿದೆ. ಇದಿನ್ನೂ ಅಭಿವೃದ್ಧಿ ಹಂತದಲ್ಲಿದ್ದು, ಐ-ಫೋನ್‌ನಲ್ಲಿ ನವೆಂಬರ್ ತಿಂಗಳಲ್ಲಿಯೇ ವಾಟ್ಸಪ್‌ನ ಬೆಟಾ ವರ್ಷನ್ ಮೂಲಕ ಕಾಣಬಹುದಾಗಿದೆ. ಪ್ರಸ್ತುತ ವಾಟ್ಸಪ್ ಅಕೌಂಟ್ ಅನ್ನು ಏಕಕಾಲದಲ್ಲಿ ಮೊಬೈಲ್ ಮತ್ತು ಡೆಸ್ಕ್‌ಟಾಪ್‌ಗಳಲ್ಲಿ ಉಪಯೋಗಿಸಬಹುದಾಗಿದೆ. ಈಗ ಹೊಸ ಮಲ್ಟಿ-ಡಿವೈಸ್ ಸಪೋರ್ಟ್ ಬಳಕೆಗೆ ಸಿಕ್ಕರೆ, ಒಂದೇ ಖಾತೆಯನ್ನು 4 ಬೇರೆ ಬೇರೆ ಡಿವೈಸ್‌ಗಳಲ್ಲಿ ಉಪಯೋಗಿಸಬಹುದಾಗಿದ್ದು, ಹೆಚ್ಚಿನ ಅನುಕೂಲವನ್ನುಂಟು ಮಾಡಲಿದೆ.
2. ವಾಟ್ಸಪ್ ವೆಬ್ ಮತ್ತು ಡೆಸ್ಕ್ ಟಾಪ್ ಆ್ಯಪ್ ಮೂಲಕ ಕಾಲ್ ಮಾಡಿ
ವಾಟ್ಸಪ್ ವಾಯ್ಸ್ ಹಾಗೂ ವಿಡಿಯೋ ಕಾಲ್ ಮಾಡಬೇಕಿದ್ದಲ್ಲಿ ಇಷ್ಟು ದಿನ ಮೊಬೈಲ್‌ನಲ್ಲಿ ಮಾತ್ರ ಸಾಧ್ಯವಾಗುತ್ತಿತ್ತು. ಆದರೆ, ಈಗ ಅಭಿವೃದ್ಧಿಪಡಿಸುತ್ತಿರುವ ನೂತನ ಫೀಚರ್‌ನಲ್ಲಿ ನೀವು ವೆಬ್ ಹಾಗೂ ಡೆಸ್ಕ್‌ಟಾಪ್ ಮೂಲಕವೂ ವಾಯ್ಸ್ ಹಾಗೂ ವಿಡಿಯೋ ಕಾಲ್ ಅನ್ನು ಮಾಡುವ ಅವಕಾಶವನ್ನು ಒದಗಿಸಿಕೊಡಲಾಗುತ್ತದೆ.
ಇದನ್ನು ಓದಿ: ಹೊಸವರ್ಷಕ್ಕೆ ಜಿಯೋ ಬಂಪರ್ ಕೊಡುಗೆ.. ಇಮ್ಮುಂದೆ ಎಲ್ಲಾ ಫ್ರೀ..ಫ್ರೀ..
3. ಮ್ಯೂಟ್ ವಿಡಿಯೋ
ಹಾಲಿ ವಾಟ್ಸ್ ಆ್ಯಪ್ ನಲ್ಲಿ ನೀವು ವಿಡಿಯೋ ಕಾಲ್ ಮಾಡಿದಾಗ, ಉಳಿದ ವಿಡಿಯೋ ಕಾಲಿಂಗ್ ಆ್ಯಪ್‌ನಲ್ಲಿರುವ ಮ್ಯೂಟ್ ಸೌಲಭ್ಯ ಲಭ್ಯವಿಲ್ಲ. ಅಲ್ಲದೆ, ವಿಡಿಯೋ ಕಾಲ್‌ನಲ್ಲಿದ್ದಾಗ ಕಾಂಟ್ಯಾಕ್ಟ್ ಕಳುಹಿಸಲು ಇಲ್ಲವೇ ಸ್ಟೇಟಸ್ ಅಪ್ಡೇಟ್ ಮಾಡಲು ಸಹ ಬರುತ್ತಿರಲಿಲ್ಲ. ಈಗ ಈ ಸಮಸ್ಯೆಯನ್ನು ಸಹ ವಾಟ್ಸಪ್ ಪರಿಹರಿಸುತ್ತಿದ್ದು, ವಿಡಿಯೋ ಕಾಲ್ ವೇಳೆ ಮ್ಯೂಟ್ ಮಾಡುವ ಆಯ್ಕೆಯನ್ನು ನೀಡುತ್ತಿದೆ. ಸದ್ಯ ಮ್ಯೂಟ್ ವಿಡಿಯೋ ಫೀಚರ್ ಅಭಿವೃದ್ಧಿ ಹಂತದಲ್ಲಿದೆ ಎಂದು WABetainfo ಸ್ಕ್ರೀನ್‌ಶಾಟ್ ಮೂಲಕ ಮಾಹಿತಿಯನ್ನು ಹಂಚಿಕೊಂಡಿದೆ.
4. ರೀಡ್ ಲೇಟರ್
ಹಾಲಿ ಇರುವ ಆರ್ಕೈವ್ಡ್ ಚಾಟ್ ಫೀಚರ್‌ನ ಮುಂದುವರಿದ ಭಾಗವಾಗಿ ರೀಡ್ ಲೇಟರ್ ಕೆಲಸ ಮಾಡುತ್ತದೆ. ಅಂದರೆ, ನಿಮಗೆ ಬಂದ ಮೆಸೇಜ್ ಅನ್ನು ಅಲ್ಪ ಸಮುಯದ ಬಳಿಕ ಓದುತ್ತೇವೆಂಬ ಸೌಲಭ್ಯ ಇದಾಗಿದ್ದು, ಇದನ್ನು ಬಳಸಿದರೆ ವಾಟ್ಸಪ್ ಅದರ ನೋಟಿಫಿಕೇಶನ್ ಕಳುಹಿಸುವುದಿಲ್ಲ. ಬದಲಾಗಿ ಅದನ್ನು ವೆಕೇಶನ್ ಮೋಡ್‌ಗೆ ಕಳುಹಿಸುತ್ತದೆ. ಇದು ಅರ್ಕೈವ್ಡ್ ಕಾರ್ಯನಿರ್ವಹಿಸುವಂತೆಯೇ ಕೆಲಸ ಮಾಡುತ್ತದೆ. ಇದಲ್ಲದೆ, ಏಕಕಾಲದಲ್ಲಿ ಎಲ್ಲ ಆರ್ಕೈವ್ಡ್ ಚಾಟ್ ಅನ್ನು ಅನ್ ಆರ್ಕೈವ್ಡ್ ಮಾಡಬಹುದಾಗಿದೆ.
5. ವಾಟ್ಸಪ್ ಇನ್ಶೂರೆನ್ಸ್
ಇನ್ನು ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ವಾಟ್ಸಪ್. ತನ್ನ ಬಳಕೆದಾರರಿಗೆ ಇನ್ಶೂರೆನ್ಸ್ ನೀಡುವ ಬಗ್ಗೆಯೂ ಫೀಚರ್ ನೀಡುತ್ತಿದೆ. ಫೇಸ್ಬುಕ್ ಮಾಲೀಕತ್ವದ ವಾಟ್ಸಪ್ ಕಂಪನಿಯು ಈಗ ಹೆಲ್ತ್ ಇನ್ಶೂರೆನ್ಸ್ ಹಾಗೂ ಮೈಕ್ರೋ ಪೆನ್ಶನ್ ಪ್ರಾಡಕ್ಟ್‌ಗಳ ಜೊತೆಗೆ ಒಪ್ಪಂದ ಮಾಡಿಕೊಂಡಿದ್ದು, ವಾಟ್ಸಪ್ ಬಳಕೆದಾರರು ಇವುಗಳನ್ನು ಈ ಮೆಸೇಜಿಂಗ್ ಆ್ಯಪ್ ಮೂಲಕ ಕೊಂಡುಕೊಳ್ಳುವ ಫೀಚರ್ ಅನ್ನು ಸಹ ಸದ್ಯದಲ್ಲಿಯೇ ಅನಾವರಣಗೊಳಿಸಲಿದೆ. ಪ್ರಾಥಮಿಕವಾಗಿ ವಾಟ್ಸಪ್ ಕಂಪನಿಯು, SBI ಜನರಲ್ ಸ್ಯಾಚೆಟ್-ಹೆಲ್ತ್ ಇನ್ಶೂರೆನ್ಸ್ ಕವರ್ ಮತ್ತು HDFC ಪೆನ್ಶನ್ ಸ್ಕೀಂ ಅನ್ನು ಖರೀದಿಸಲು ಬಳಕೆದಾರರಿಗೆ ಅವಕಾಶ ಮಾಡಿಕೊಡಲಿದೆ.
ಇದನ್ನು ಓದಿ: ಸೈಬರ್ ಸೆಕ್ಯೂರಿಟಿ : ಹ್ಯಾಕರ್‌ಗಳಿಂದ ಪಾಸ್‌ವರ್ಡ್ ರಕ್ಷಿಸುವುದು ಹೇಗೆ?
6. ಜಾಯಿನ್ ಮಿಸ್ಡ್ ಗ್ರೂಪ್ ಕಾಲ್
ಇದುವರೆಗೆ ಒಮ್ಮೆ ಗ್ರೂಪ್ ಕಾಲ್ ಆ್ಯಕ್ಟೀವ್ ಆಗಿದ್ದರೆ, ಅಂದರೆ ಕಾಲ್ ಪ್ರಾರಂಭವಾದ ತಕ್ಷಣ ಆಯ್ದ ಬಳಕೆದಾರರಿಗೆ ನೋಟಿಫಿಕೇಶನ್ ಹೋಗಿ ತಕ್ಷಣ ಅವರು ಜಾಯಿನ್ ಆಗಬೇಕಿತ್ತು. ಆದರೆ, ಒಮ್ಮೆ ಕರೆ ಪ್ರಾರಂಭವಾಗಿಬಿಟ್ಟಿದ್ದರೆ, ಬೇರೆ ಯಾರೂ ಸಹ ಮಧ್ಯ ಪ್ರವೇಶ ಮಾಡುವಂತಿರಲಿಲ್ಲ. ಹೀಗಾಗಿ ಬಿಟ್ಟು ಹೋದವರಿಗೆ ಅವಕಾಶ ಕೈತಪ್ಪುತ್ತಿತ್ತು. ಇನ್ನು ಅವರನ್ನು ಕರೆಗೆ ಸೇರಿಸಿಕೊಳ್ಳಲೇ ಬೇಕೆಂದಿದ್ದರೆ, ಪುನಃ ಗ್ರೂಪ್ ಕಾಲ್ ಅನ್ನು ಕಟ್ ಮಾಡಿ ಹೊಸತಾಗಿ ಎಲ್ಲರೂ ಸೇರ್ಪಡೆಯಾಗಬೇಕಿತ್ತು. ಆದರೆ, ಇದಕ್ಕೂ ಈಗ ವಾಟ್ಸಪ್ ಪರಿಹಾರ ಸೂಚಿಸಿದ್ದು, ಕರೆ ಮಧ್ಯೆಯೇ ಬೇಕಿದ್ದವರನ್ನು ಸೇರಿಸಿಕೊಳ್ಳುವ ಅವಕಾಶವನ್ನು ನೀಡಲಾಗುತ್ತಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 5, 2021, 2:18 PM IST