Asianet Suvarna News Asianet Suvarna News

WhatsApp Cryptocurrency Payment: ಶೀಘ್ರದಲ್ಲೇ ವಾಟ್ಸಪ್ ಚಾಟ್‌ನಲ್ಲೇ‌ ಕ್ರಿಪ್ಟೋಕರೆನ್ಸಿ ಬಳಸಿ ಹಣ ಕಳುಹಿಸಿ!

*ಕ್ರಿಪ್ಟೋಕರೆನ್ಸಿ ಬಳಸಿ ಹಣ ಕಳಿಸಲು ಹೊಸ ಫೀಚರ್‌
*ಪರೀಕ್ಷಾರ್ಥವಾಗಿ ಯುಎಸ್‌ನಲ್ಲಿ ಲಾಂಚ್‌
*WhatsApp - ಡಿಜಿಟಲ್ ವ್ಯಾಲೆಟ್‌ Novi ಒಪ್ಪಂದ!
*ಪಾವತಿ ವೈಶಿಷ್ಟ್ಯ ಪಡೆದ ಮೂರನೇ ದೇಶ ಯುಎಸ್‌
 

WhatsApp to soon allow users to send and receive money within chats using cryptocurrency mnj
Author
Bengaluru, First Published Dec 10, 2021, 3:03 PM IST

ಯುಎಸ್‌ (ಡಿ. 10): ಮೆಟಾ-ಪೇಸ್‌ಬುಕ್ (Meta- Facebook) ಒಡೆತನದ ವಾಟ್ಸಪ್‌ ಈಗ ಕ್ರಿಪ್ಟೋಕರೆನ್ಸಿ (Cryptocurrency) ಬಳಸಿ ಚಾಟ್‌ನಲ್ಲಿಯೇ ಹಣ ಕಳುಹಿಸಲು ಮತ್ತು ಸ್ವೀಕರಿಸಲು ಹೊಸ ಫೀಚರ್‌ವೊಂದನ್ನು ಪರೀಕ್ಷಿಸುತ್ತಿದೆ. ಬಳಕೆದಾರರು ಶೀಘ್ರದಲ್ಲೇ ಕ್ರಿಪ್ಟೋಕರೆನ್ಸಿಯನ್ನು ಬಳಸಿಕೊಂಡು ಚಾಟ್‌ಗಳಲ್ಲಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗಲಿದೆ. ಮೆಸೇಜಿಂಗ್ ಅಪ್ಲಿಕೇಶನ್ ಯುನೈಟೆಡ್ ಸ್ಟೇಟ್ಸ್‌ನಲ್ಲಿ (US) ಆಯ್ದ ಬಳಕೆದಾರರೊಂದಿಗೆ ಹೊಸ ಪಾವತಿಯ ಫೀಚರ್ ಪರಿಕ್ಷೀಸುತ್ತಿದೆ. ಆರು ವಾರಗಳ ಹಿಂದೆ ಸೀಮಿತ ಬಳಕೆದಾರರಿಗೆ ಈ ವೈಶಿಷ್ಟ್ಯವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. 

ಯುಎಸ್‌ನ ಬಳಕೆದಾರರಿಗೆ ಹೊಸ ಪೇಮೆಂಟ್‌ ಫೀಚರ್‌ ನೀಡಲು WhatsApp, ಡಿಜಿಟಲ್ ವ್ಯಾಲೆಟ್‌ (Digital Wallet) ಅಪ್ಲಿಕೇಶನ್‌ ಆಗಿರುವ Novi ನೊಂದಿಗೆ ಒಪ್ಪಂದ ಮಾಡಿಕೊಂಡಿದೆ. Paxos Trust Money ಅಭಿವೃದ್ಧಿಪಡಿಸಿದ ಯುಎಸ್-ಡಾಲರ್ ಕ್ರಿಪ್ಟೋಕರೆನ್ಸಿಯಾದ Pax Dollars (USDP) ಅನ್ನು ಬಳಸಿಕೊಂಡು ಬಳಕೆದಾರರು ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ.‌

ಭಾರತದಲ್ಲಿ ಕ್ರಿಪ್ಟೋ ಪಾವತಿ ಯಾವಾಗ?

WhatsApp ಸಾಮಾನ್ಯ ಪಾವತಿಗಳು ಪ್ರಸ್ತುತ ಭಾರತ ಮತ್ತು ಬ್ರೆಜಿಲ್ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಪಾವತಿ ವೈಶಿಷ್ಟ್ಯವನ್ನು ಪಡೆದ ಮೂರನೇ ದೇಶ ಯುಎಸ್‌ ಆಗಿದೆ. US ಬಳಕೆದಾರರು ಸಾಮಾನ್ಯ ಪಾವತಿಗಳ ಜತೆಗೆ ಕ್ರಿಪ್ಟೋನಲ್ಲಿಯೂ ಹಣವನ್ನು ಕಳುಹಿಸಬಹುದು. ಈ ವೈಶಿಷ್ಟ್ಯವು ಬ್ರೆಜಿಲ್ ಮತ್ತು ಭಾರತದಲ್ಲಿ ಇನ್ನೂ ಲಭ್ಯವಿಲ್ಲ. ಭಾರತದಲ್ಲಿ ಡಿಜಿಟಲ್‌ ಕರೆನ್ಸಿ ನಿಯಮಗಳ ಬಗ್ಗೆ ಇನ್ನೂ ಅಸ್ಪಷ್ಟತೆ ಇರುವುದರಿಂದ ಕ್ರಿಪ್ಟೋಕರೆನ್ಸಿ ಪಾವತಿಗಳ ಫೀಚರ್‌ ಭಾರತದ ಬಳಕೆದಾರರಿಗೆ ಲಭ್ಯವಾಗುವುದು ಕಷ್ಟ ಸಾಧ್ಯ ಎಂದು ಹೇಳಲಾಗುತ್ತಿದೆ. 

ಈ ಬಗ್ಗೆ ವಾಟ್ಸಪ್‌ ಅಥವಾ ಫೇಸ್‌ಬುಕ್ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಅಮೆರಿಕಾದಲ್ಲಿ ಈ ಹೊಸ ಅನುಭವದ ಬಗ್ಗೆ ಜನರು ಏನು ಯೋಚಿಸುತ್ತಾರೆಂದು ನಾವು ಕೇಳಿದ ನಂತರ ಅದನ್ನು ವಿಸ್ತರಿಸುವ ಬಗ್ಗೆ ನಾವು ಯೋಚಿಸುತ್ತೇವೆ ಎಂದು ನೋವಿ ಸಿಇಓ ಹೇಳಿದ್ದಾರೆ. Novi ಮೂಲಕ ಮಾಡುವ ವಹಿವಾಟುಗಳಿಗೆ WhatsApp ಯಾವುದೇ ಹೆಚ್ಚಿನ ಶುಲ್ಕವನ್ನು ವಿಧಿಸುವುದಿಲ್ಲ. ನೀವು ಎಷ್ಟು ಬಾರಿ ಹಣವನ್ನು ಕಳುಹಿಸಬಹುದು ಎಂಬುದಕ್ಕೂ ಯಾವುದೇ ಮಿತಿಯಿಲ್ಲ ಎಂದು ನೋವಿ ತಿಳಿಸಿದೆ 

ಸುರಕ್ಷಿತವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯ!

ವಾಟ್ಸಾಪ್‌ನಲ್ಲಿ ಹೊಸ  Novi ಪಾವತಿ ವೈಶಿಷ್ಟ್ಯವನ್ನು ಬಳಸುವುದರಿಂದ, ಯುನೈಟೆಡ್ ಸ್ಟೇಟ್ಸ್‌ನಲ್ಲಿರುವ ಬಳಕೆದಾರರು ಚಾಟ್‌ಗಳಲ್ಲಿ ತ್ವರಿತವಾಗಿ ಮತ್ತು ಸುರಕ್ಷಿತವಾಗಿ ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ ಎಂದು ನೋವಿ ಸಿಇಒ ಸ್ಟೀಫನ್ ಕ್ರೈಸೆಲ್ (Novi CEO Stephane Kraisel) ಟ್ವೀಟ್ ಮಾಡಿದ್ದಾರೆ. "ಡಿಜಿಟಲ್ ವ್ಯಾಲೆಟ್  ಬಳಕೆಯನ್ನು ಪ್ರಯತ್ನಿಸಲು ಹೊಸ ಮಾರ್ಗ ಇದಾಗಿದೆ. ಇಂದಿನಿಂದ, US ನಲ್ಲಿ ಸೀಮಿತ ಸಂಖ್ಯೆಯ ಜನರು WhatsApp ನಲ್ಲಿ Novi ಬಳಸಿಕೊಂಡು ಹಣವನ್ನು ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗುತ್ತದೆ, ಜತೆಗೆ ಸಂದೇಶವನ್ನು ಕಳುಹಿಸುವಷ್ಟು ಸುಲಭವಾಗಿ ಕುಟುಂಬ ಮತ್ತು ಸ್ನೇಹಿತರಿಗೆ ಹಣವನ್ನು ಕಳುಹಿಸಲು ಸಾಧ್ಯವಾಗುತ್ತದೆ, ” ಎಂದು ಕ್ರೈಸೆಲ್ ಟ್ವೀಟ್ ಮಾಡಿದ್ದಾರೆ.

 

 

ಆರು ವಾರಗಳ ಹಿಂದೆ ನೋವಿಯ ಈ ಫೀಚರ್‌ ಪರೀಕ್ಷಾರ್ಥವಾಗಿ ಆರಂಭಿಸಲಾಗಿದೆ  ಎಂದು ಕ್ರೈಸೆಲ್ ಬಹಿರಂಗಪಡಿಸಿದ್ದಾರೆ. ಜತೆಗೆ ವಾಟ್ಸಾಪ್‌ನಲ್ಲಿ ನೋವಿಯನ್ನು ಬಳಸುವುದರಿಂದ ಚಾಟ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಟ್ ಆಗಿರುವುದರಿಂದ ಅವರ ಪ್ರೈವಸಿ ಸೆಟ್ಟಿಂಗ್‌ಗಳ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಕ್ರೈಸೆಲ್ ಖಚಿತಪಡಿಸಿದ್ದಾರೆ. "ನಾವು ನೋವಿ ಫೀಚರ್‌ನ ಆರಂಭದಲ್ಲಿದ್ದೇವೆ. ಆದ್ದರಿಂದ ನಾವು ಈ ಹೊಸ ಹೆಜ್ಜೆಯನ್ನು ಪ್ರಾರಂಭಿಸಲು ಕೇವಲ ಒಂದು ದೇಶದಲ್ಲಿ ಪರೀಕ್ಷಿಸಲು ನಿರ್ಧರಿಸಿದ್ದೇವೆ ಮತ್ತು ಈ ಹೊಸ ಅನುಭವದ ಬಗ್ಗೆ ಜನರು ಏನು ಯೋಚಿಸುತ್ತಾರೆಂದು ನಾವು ಕೇಳಿದ ನಂತರ ಅದನ್ನು ವಿಸ್ತರಿಸುವ ಬಗ್ಗೆ ನಾವು ಯೋಚಿಸುತ್ತೇವೆ, ” ಕ್ರೈಸೆಲ್  ಎಂದು ಹೇಳಿದ್ದಾರೆ.  

WhatsApp ನಲ್ಲಿ Novi ಬಳಸಿ  ಹಣ ಕಳುಹಿಸುವುದ ಹೇಗೆ?

*WhatsApp ನಲ್ಲಿ, ನೀವು ಹಣವನ್ನು ಕಳುಹಿಸಲು ಬಯಸುವ ಸಂಪರ್ಕದ (Contact) ಚಾಟ್ ಅನ್ನು ತೆರೆಯಿರಿ

*ನೀವು Android ಬಳಕೆದಾರರಾಗಿದ್ದರೆ ಡೈಲಾಗ್ ಬಾಕ್ಸ್‌ನಲ್ಲಿರುವ ಅಟ್ಯಾಚ್ ಐಕಾನ್ ಮೇಲೆ ಟ್ಯಾಪ್ ಮಾಡಿ.

*ನೀವು ಐಫೋನ್ ಬಳಕೆದಾರರಾಗಿದ್ದರೆ, ಚಾಟ್ ಬಾಕ್ಸ್‌ನಲ್ಲಿರುವ ಪ್ಲಸ್ ಐಕಾನ್ ಮೇಲೆ ಟ್ಯಾಪ್ ಮಾಡಿ.

*ಪಾವತಿಗಳ ಆಯ್ಕೆಯನ್ನು ಟ್ಯಾಪ್ ಮಾಡಿ

*ಒಮ್ಮೆ ಪಾವತಿ ಆಯ್ಕೆಯ ನಂತರ, ನೀವು ಕಳುಹಿಸಲು ಬಯಸುವ ಮೊತ್ತವನ್ನು ಸೇರಿಸಿ ಸೆಂಡ್‌ ಮಾಡಿ

Follow Us:
Download App:
  • android
  • ios