ಬ್ರೆಜಿಲ್(ಜೂ.15): ವಾಟ್ಸ್ಆ್ಯಪ್‌ ಆ್ಯಪ್ ಲಾಂಚ್ ಆದ ಬಳಿಕ ಹಲವು ಬಾರಿ ಅಪ್‌ಡೇಟ್ ಆಗಿದೆ. ಇಷ್ಟೇ ಅಲ್ಲ ಅಷ್ಟೇ ಫೀಚರ್ಸ್ ಸೇರಿಸಿಕೊಂಡಿದೆ. ಇದೀಗ ವ್ಯಾಟ್ಸಾಪ್ ಮನಿ ಟ್ರಾನ್ಸಫರ್ ಸೇವೆ ನೀಡುತ್ತಿದೆ. ಗೂಗಲ್ ಪೇ ಸೇರಿದಂತೆ ಇತರ ಹಣ ವರ್ಗಾವಣೆ ಆ್ಯಪ್ ಸೇವೆ ಇರುವಂತೆ ಇದೀಗ ವಾಟ್ಸ್ಆ್ಯಪ್‌ ಕೂಡ ನೀಡುತ್ತಿದೆ. ವಿಶೇಷ ಅಂದರೆ ವಾಟ್ಸ್ಆ್ಯಪ್‌ ಮೂಲಕ ಹಣ ವರ್ಗಾಣೆ ಮಾಡುವುದು ಫೋಟೋ ಸೆಂಡ್ ಮಾಡಿದಷ್ಟು ಸುಲಭ.

ಒಂದೇ ವಾಟ್ಸ್‌ಆ್ಯಪ್‌ ಅಕೌಂಟ್‌ ಏಕಕಾಲಕ್ಕೆ 4 ಡಿವೈಸ್‌ನಲ್ಲಿ ಬಳಸಿ!

ವಾಟ್ಸ್ಆ್ಯಪ್‌ ಇಂದು ಪೇಮೆಂಟ್ ಸೇವೆ ಆರಂಭಿಸುತ್ತಿದೆ. ಈ ಮೂಲಕ ವಾಟ್ಸ್ಆ್ಯಪ್‌ ವ್ಯವಹಾರ ಕ್ಷೇತ್ರಕ್ಕೆ ತೆರೆದುಕೊಳ್ಳುತ್ತಿದೆ. ಹಣ ವರ್ಗಾವಣೆ, ಹಣ ಸ್ವೀಕೃತಿ ಸೇವೆ ಇಂದಿನಿಂದ ಲಭ್ಯವಾಗಲಿದೆ ಎಂದು ಫೇಸ್‌ಬುಕ್ ಸಂಸ್ಥಾಪಕ ಮಾರ್ಕ್ ಜುಕರ್‌ಬರ್ಗ್ ಹೇಳಿದ್ದಾರೆ. ಆದರೆ ಮೊದಲ ಹಂತದಲ್ಲಿ ಬ್ರೆಜಿಲ್ ದೇಶದಲ್ಲಿ ಮನಿ ಪೇಮೆಂಟ್ ಸೇವೆ ಆರಂಭಗೊಂಡಿದೆ. 

ವಾಟ್ಸ್ಆ್ಯಪ್‌ ಪೇಮೆಂಟ್‌ಗಾಗಿ ಫೇಸ್‌ಬುಕ್ ಪೇ ಡೆವಲಪ್ ಮಾಡಲಾಗಿದೆ. ಇದು ಸುರಕ್ಷತೆ ಹಾಗೂ ಭದ್ರತೆಯನ್ನು ಒದಗಿಸುತ್ತದೆ. ಫೇಸ್‌ಬುಕ್ ಪೇ ಸಹಾಯದಿಂದ ಆ್ಯಪ್ ಮೂಲಕ ಸುಲಭವಾಗಿ ಪೇಮೆಂಟ್ ಮಾಡಬಹುದು. ಇದಕ್ಕೆ ಸಹಕರಿಸಿದ ಎಲ್ಲಾ ಜೊತೆಗಾರರಿಗೆ ಧನ್ಯವಾದ. ಬ್ರೆಜಿಲ್‌ನ ಸ್ಥಳೀಯ ಬಾಂಕೋ ಡು ಬ್ರಸಿಲ್, ನುಬಾಂಕ್, ಸೀಕ್ರೆಡಿ ಹಾಗೂ ಸೆಲೆ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಜುಕರ್‌ಬರ್ಗ್ ಹೇಳಿದ್ದಾರೆ.

ವಾಟ್ಸ್ಆ್ಯಪ್‌ ಪೇಮೆಂಟ್ ಆರಂಭಗೊಂಡ ಮೊದಲ ದೇಶ ಬ್ರೆಜಿಲ್. ಶೀಘ್ರದಲ್ಲೇ ಇತರ ದೇಶಗಳಲ್ಲಿ ವಾಟ್ಸ್ಆ್ಯಪ್‌ ಪೇಮೆಂಟ್ ಸೇವೆ ಆರಂಭಗೊಳ್ಳಲಿದೆ ಎಂದು ಜುಕರ್‌ಬರ್ಗ್ ಸಿಹಿ ಸುದ್ದಿ ನೀಡಿದ್ದಾರೆ.