ಟಿಕ್‌ಟಾಕ್ ಗೆ ಪರ್ಯಾಯವಾಗಿ ರೀಲ್ಸ್ ಬಿಟ್ಟ ಇನ್‌ಸ್ಟಾಗ್ರಾಂ!
ಅಲ್ಪ ಅವಧಿಯಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಹವಾ ಎಬ್ಬಿಸಿ ಅನಭಿಶಕ್ತವಾಗಿ ಮೆರೆಯುತ್ತಿದ್ದ ಟಿಕ್‌ಟಾಕ್ ಈಗ ಬ್ಯಾನ್ ಆಗಿದೆ. ಟಿಕ್‌ಟಾಕ್ ಸಹ ಜನರ ದೈನಂದಿನ ಚಟುವಟಿಕೆಯ ಭಾಗ ಎಂಬುದಾಗಿತ್ತು. ಅಲ್ಲದೆ, ಇದು ಅದೆಷ್ಟೋ ಮಂದಿಯಲ್ಲಿ ಅಡಗಿ ಕುಳಿತಿದ್ದ ಪ್ರತಿಭೆಗಳನ್ನು ಹೊರಗೆಡವಿವೆ. ಕೆವರು ಈ ಟಿಕ್‌ಟಾಕ್‌ನಿಂದಲೇ ರಾತ್ರೋ ರಾತ್ರಿ ಸ್ಟಾರ್‌ಗಳಾಗಿದ್ದಾರೆ. ಆದರೆ, ದೇಶದ ಭದ್ರತೆ ದೃಷ್ಟಿಯಿಂದ ಬ್ಯಾನ್ ಆಗಿದ್ದರಿಂದ ಈಗ ಇದಕ್ಕೊಂದು ಪರ್ಯಾಯ ಬೇಕಿದೆ. ಅಷ್ಟೇ ಫೀಚರ್ ಇರುವ, ಮನಸ್ಸಿಗೆ ಇನ್ನೂ ಹತ್ತಿರವಾಗುವಂತಹ ಆ್ಯಪ್‌ನ ಅವಶ್ಯಕತೆ ಇರುವುದರ ಲಾಭ ಪಡೆದ ಇನ್‌ಸ್ಟಾಗ್ರಾಂ, ಈಗ ತನ್ನ ಆ್ಯಪ್‌ನಲ್ಲೇ ಇನ್‌ಸ್ಟಾ ರೀಲ್ಸ್ ಎಂಬ ನೂತನ ಫೀಚರ್ ಅನ್ನು ಪ್ರಾಯೋಗಿಕವಾಗಿ ಬಳಕೆಗೆ ಬಿಟ್ಟಿದೆ. ಇದು ಈಗ ಯಾವ ರೀತಿ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಈಗೇನಿದ್ದರೂ ಸೋಷಿಯಲ್ ಮೀಡಿಯಾದ್ದೇ ಆಟ. ಜನರು ತಮಗನ್ನಿಸಿದ್ದನ್ನು ಹೇಳಿಕೊಳ್ಳಲು, ವಿಡಿಯೋ ಮಾಡಿ ಅಪ್ಲೋಡ್ ಮಾಡಲು, ಬರೆದುಕೊಳ್ಳಲು ಈ ವೇದಿಕೆಯನ್ನೇ ಹೆಚ್ಚಾಗಿ ಬಳಸಿಕೊಳ್ಳುತ್ತಾರೆ. ಈ ಮೂಲಕ ಸಖತ್ ಫೇಮಸ್ ಕೂಡಾ ಆಗುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಹುಟ್ಟಿಕೊಂಡಿದ್ದೇ ಟಿಕ್‌ಟಾಕ್. ಆದರೆ.., ಇದು ಬ್ಯಾನ್ ಆಗಿದೆ. ಹೀಗಾಗಿ ಮುಂದೆ ಏನು ಎಂಬ ಪ್ರಶ್ನೆ ಎದುರಾಗಿದೆ. ಅದಕ್ಕೆ ಇನ್‌ಸ್ಟಾಗ್ರಾಂ ಈಗ ಪರಿಹಾರವನ್ನು ಸೂಚಿಸಲು ಹೊರಟಿದೆ.
ಟಿಕ್‌ಟಾಕ್ ಎಷ್ಟರಮಟ್ಟಿಗೆ ಜನರನ್ನು ಆಕರ್ಷಿಸಿತ್ತೆಂದರೆ ಲಿಂಗ, ವಯಸ್ಸುಗಳ ಭೇದವಿಲ್ಲದೆ ಎಲ್ಲರೂ ಬಳಸತೊಡಗಿದರು. ಕೆಲವರು ರಾತ್ರೋ ರಾತ್ರಿ ಸ್ಟಾರ್‌ಗಳಾದರು. ಆದರೆ, ದೇಶದ ಭದ್ರತೆಯ ಹಿತದೃಷ್ಟಿಯಿಂದ ಭಾರತ ಸರ್ಕಾರ ತೆಗೆದುಕೊಂಡ ನಿರ್ಧಾರದಿಂದ ಚೀನಾದ 59 ಆ್ಯಪ್‌ಗಳ ಮೇಲೆ ನಿಷೇಧ ಹೇರಲಾಯಿತು. ಇದರಿಂದ ಟಿಕ್‌ಟಾಕ್ ಸಹ ಬ್ಯಾನ್ ಆಗಿದೆ. ಇದು ಅನೇಕ ಬಳಕೆದಾರರಿಗೆ ಆಘಾತವನ್ನುಂಟು ಮಾಡಿತ್ತು. ಈಗ ಈ ಪರಿಸ್ಥಿತಿಯ ಲಾಭ ಪಡೆಯಲು ಹೊರಟಿರುವ ಇನ್‌ಸ್ಟಾಗ್ರಾಂ, ಹೊಸ ಫೀಚರ್ ಒಂದನ್ನು ಹೊರತಂದಿದೆ. ಅದೇ "ಇನ್‌ಸ್ಟಾ ರೀಲ್ಸ್"..!
ಇದನ್ನು ಓದಿ: ನಿಮ್ಮ ಫೇಸ್ಬುಕ್ ಲಾಗಿನ್ ವಿವರ ಕದಿಯುವ ಈ ಆ್ಯಪ್ ಡಿಲೀಟ್ ಮಾಡಿ..!
ಭಾರತ ನಾಲ್ಕನೇ ದೇಶ
ಹೌದು, ಇನ್‌ಸ್ಟಾಗ್ರಾಂ ಈಗಾಗಲೇ ಬ್ರೆಜಿಲ್, ಫ್ರಾನ್ಸ್ ಹಾಗೂ ಜರ್ಮನಿಯಲ್ಲಿ ಈ ನೂತನ ಫೀಚರ್ ಅನ್ನು ಪ್ರಯೋಗಾತ್ಮಕವಾಗಿ ಪರಿಚಯಿಸಿತ್ತು. ಅಲ್ಲಿ ಉತ್ತಮ ಪ್ರತಿಕ್ರಿಯೆ ಲಭ್ಯವಾಗುತ್ತಿದ್ದ ಸಂದರ್ಭದಲ್ಲಿಯೇ, ಭಾರತದಲ್ಲಿ ಟಿಕ್‌ಟಾಕ್ ಬ್ಯಾನ್ ಮಾಡಿರುವುದು ಇನ್‌ಸ್ಟಾಗೆ ಲಡ್ಡು ಬಂದು ಬಾಯಿಗೆ ಬಿದ್ದಂತೆ ಆಯಿತು. ತಕ್ಷಣ ಇನ್‌ಸ್ಟಾ ರೀಲ್ಸ್ ಅನ್ನು ಭಾರತಕ್ಕೂ ಪರಿಚಯಿಸಿದೆ. ಈ ಮೂಲಕ ಪ್ರಯೋಗಾತ್ಮಕವಾಗಿ ಅಳವಡಿಕೆಗೊಂಡ 4ನೇ ದೇಶ ಭಾರತವಾಗಿದೆ.
ಭಾರತದಲ್ಲಿ ಉತ್ತಮ ಸ್ಪಂದನೆ
ಈಗಾಗಲೇ ಪ್ರಾಯೋಗಿಕವಾಗಿ ಭಾರತದಲ್ಲಿ ಪ್ರಾರಂಭಿಸಿ (ಜು. 8) 4 ದಿನಗಳು ಕಳೆದಿವೆ. ಆದರೆ, ಅಷ್ಟರಲ್ಲಾಗಲೇ ಅನೇಕ ಬಳಕೆದಾರರು ರೀಲ್ಸ್ ಅನ್ನು ಬಳಸಲು ಪ್ರಾರಂಭಿಸಿದ್ದು, ಟಿಕ್‌ಟಾಕ್ ಫೋಬಿಯಾದಿಂದ ನಿಧಾನಕ್ಕೆ ಹೊರಬರಲು ಯತ್ನಿಸುತ್ತಿದ್ದಾರೆ. ರೀಲ್ಸ್‌ನಲ್ಲಿ ಹೇಗೆ ವಿಡಿಯೋ ಪೋಸ್ಟ್ ಮಾಡಬಹುದು ಎಂಬ ಮಾಹಿತಿಯನ್ನೂ ನೀಡಲಾಗಿದೆ.
ಇದನ್ನು ಓದಿ: ಮೋದಿಯ 'ಟೆಕ್' ಟಾಕ್ ಹಿಂದಿನ ರಹಸ್ಯವೇನು?
ಹೇಗಿರುತ್ತೆ ರೀಲ್ಸ್..?
ಇನ್‌ಸ್ಟಾಗ್ರಾಂ ಆ್ಯಪ್‌ನೊಳಗೆ ರೀಲ್ಸ್ ಫೀಚರ್ ಇರಲಿದ್ದು, ಇದನ್ನು ಬಳಸಬೇಕೆಂದರೆ ಆ್ಯಪ್‌ನಲ್ಲಿರುವ ಕ್ಯಾಮೆರಾ ಆಪ್ಷನ್ ಅನ್ನು ಓಪನ್ ಮಾಡಬೇಕು. ಇದಕ್ಕಿಂತ ಮುಂಚಿತವಾಗಿ ಸ್ಕ್ರೀನ್‌ನ ಕೆಳಗಡೆ ಇರುವ ರೀಲ್ಸ್ ಮೇಲೆ ಕ್ಲಿಕ್ ಮಾಡಬೇಕು. ಆ್ಯಪ್ ನಲ್ಲಿ 15 ಸೆಕೆಂಡ್ ವಿಡಿಯೋವನ್ನು ರೆಕಾರ್ಡ್ ಹಾಗೂ ಎಡಿಟ್ ಮಾಡಿಕೊಳ್ಳಲು ಬೇಕಾದ ಟೂಲ್‌ಗಳನ್ನು ಸಹ ಪರಿಚಯಿಸಲಾಗಿದೆ. ಇಲ್ಲಿ ವಿಡಿಯೋ ಕ್ರಿಯೇಟರ್‍ಗಳು ಆ್ಯಪ್‌ನೊಳಗಿರುವ ಮ್ಯೂಸಿಕ್ ಟ್ರ್ಯಾಕ್‌ಗಳನ್ನೇ ಬಳಸಿಕೊಳ್ಳಬಹುದು. ಇಲ್ಲವೇ ಅವರ ವಿಡಿಯೋಗೆ ಬೇಕಿರುವ ಕಸ್ಟಮ್ ಆಡಿಯೋವನ್ನು ಬಳಸಿಕೊಳ್ಳುವ ಆಯ್ಕೆಯನ್ನೂ ಕೊಡಲಾಗಿದೆ.
ಇಲ್ಲಿ ಬಹುಮುಖ್ಯವಾಗಿ ಇನ್ನೊಂದು ಉತ್ತಮ ಫೀಚರ್ ಅನ್ನು ನೀಡಲಾಗಿದ್ದು, ವಿಡಿಯೋವನ್ನು ಸ್ಪೀಡಪ್ ಮತ್ತು ಸ್ಲೋಡೌನ್ (ವೇಗ ಹಾಗೂ ನಿಧಾನ) ಮಾಡುವ ಆಯ್ಕೆಯನ್ನೂ ಕೊಡಲಾಗಿದೆ. ಇದರಿಂದ ಸ್ಲೋ ಮೋಷನ್‌ನಲ್ಲೂ ವಿಡಿಯೋವನ್ನು ಹರಿಬಿಡಬಹುದಾಗಿದೆ. ಇದರ ಜೊತೆಗೆ ಅಲೈನ್ ಆಯ್ಕೆಯನ್ನು ಕೊಡಲಾಗಿದ್ದು, ಕ್ಯಾಮೆರಾ ಮುಂದೆ ಪೊಸಿಷನ್ ಅನ್ನು ಸರಿಪಡಿಸಿಕೊಳ್ಳಲು, ಒಂದು ವಿಡಿಯೋದಲ್ಲಿ ಹಲವು ಬಾರಿ ಟೇಕ್‌ಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವಂತೆ ಅವಕಾಶ ಕಲ್ಪಿಸಲಾಗಿದೆ. ಇದರ ಜೊತೆಗೆ ಆಗ್ಮೆಂಟೆಡ್ ರಿಯಾಲಿಟಿ ಎಫೆಕ್ಟ್ ಎಂಬ ಆಯ್ಕೆ ಕೊಟ್ಟಿದ್ದು, ಇದು ಹೆಚ್ಚಿನ ಫನ್ ನೀಡುತ್ತದೆ ಎಂದು ಕಂಪನಿ ಹೇಳಿಕೊಂಡಿದೆ.
ಇದನ್ನು ಓದಿ: ಸಣ್ಣ ಉದ್ದಿಮೆಗಳಿಗೆ ಡಿಜಿಟಲ್ ಟಚ್ ಕೊಡಲಿದೆ ಗೂಗಲ್!
ವಿಡಿಯೋಗಳನ್ನು ಎಕ್ಸ್‌ಪ್ಲೋರ್ ಮಾಡಲು ಹಾಗೂ ಪೋಸ್ಟ್ ಮಾಡಲು ಪ್ರತ್ಯೇಕ ವ್ಯವಸ್ಥೆ ಬೇಕು ಎಂಬ ಅಭಿಪ್ರಾಯಗಳು ಈಗಾಗಲೇ ಪ್ರಾಯೋಗಿಕವಾಗಿ ಬಳಕೆಯಲ್ಲಿರುವ ಬೇರೆ ದೇಶಗಳ ಬಳಕೆದಾರರು ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ಭಾರತದಲ್ಲಿ ಯಾವ ರೀತಿಯ ಪ್ರತಿಕ್ರಿಯೆ ಹಾಗೂ ಸಲಹೆಗಳು ಬರಲಿವೆ ಎಂಬುದನ್ನು ಆಧರಿಸಿ ಇನ್ನೊಂದಿಷ್ಟು ಬದಲಾವಣೆಗಳನ್ನು ತರಬಹುದು ಎಂಬುದು ತಜ್ಞರ ಅಭಿಮತವಾಗಿದೆ.