ಬ್ಯಾನ್ ಟಿಕ್‌ಟಾಕ್ ಅಭಿಯಾನದಿಂದ ಬೇಡಿಕೆ ಇಳಿಮುಖ; Youtube ಮೊರೆ ಹೋದ ಜನ!
ಸ್ವಾಲಂಬಿ ಭಾರತ, ಸ್ವದೇಶಿ ವಸ್ತು, ಸ್ಥಳೀಯ ವಸ್ತುಗಳ ಬಳಕೆಗೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ ಬೆನ್ನಲ್ಲೇ ವಿದೇಶಿ ವಸ್ತುಗಳ ಬೇಡಿಕೆ ಕಡಿಮೆಯಾಗಿದೆ. ಅದರಲ್ಲೂ ಚೀನಾ ಮೂಲದ ವಸ್ತುಗಳನ್ನು ಜನರು ಬಹಿಷ್ಕರಿಸುತ್ತಿದ್ದಾರೆ. ಇದರಲ್ಲಿ ಟಿಕ್‌ಟಾಕ್ ಕೂಡ ಸೇರಿದೆ. ಯುಟ್ಯೂಬ್ ಹಾಗೂ ಟಿಕ್‌ಟಾಕ್ ನಡುವಿನ ಹೋರಾಟದಲ್ಲಿ ಇದೀಗ ಯುಟ್ಯೂಬ್ ಹೊಸ ಹಂತ ತಲುಪಿದೆ.
ನವದೆಹಲಿ(ಮೇ.19): ಕಳೆದ ಕೆಲ ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಹಲವು ಹೋರಾಟ, ಅಭಿಯಾನ ನಡೆಯುತ್ತಿದೆ. ಹೋರಾಟ ಹಾಗೂ ಅಭಿಯಾನದಿಂದ ಯುಟ್ಯೂಬ್ ಇದೀಗ ಹೊಸ ಹಂತಕ್ಕೇರಿದೆ. ಪ್ರಧಾನಿ ಮೋದಿ ಸ್ವಾಲಂಬಿ ಭಾರತ ನಿರ್ಮಾಣ ಕನಸು ಬಿತ್ತಿದ ಬೆನ್ನಲ್ಲೇ ವಿದೇಶಿ ವಸ್ತುಗಳ ಬಳಕೆ ಕಡಿಮೆಯಾಗುತ್ತಿದೆ. ಅದರಲ್ಲೂ ಚೀನಾ ವಸ್ತುಗಳನ್ನು ಬ್ಯಾನ್ ಮಾಡುವಂತೆ ಅಭಿಯಾನ ಆರಂಭವಾಗಿದೆ. ಇದರಲ್ಲಿ ಟಿಕ್‌ಟಾಕ್ ಬ್ಯಾನ್ ಅಭಿಯಾನ ಹೆಚ್ಚು ಜನಪ್ರಿಯವಾಗಿದೆ.
#BanTikTok ಅಭಿಯಾನದಿಂದ ಇದೀಗ ಟಿಕ್‌ಟಾಕ್ ಬೇಡಿಕೆ ಗಣನೀಯವಾಗಿ ಇಳಿದೆ. ಪ್ಲೇ ಸ್ಟೋರ್‌ನಲ್ಲಿ ಟಿಕ್‌ಟಾಕ್ ರೇಟಿಂಗ್ 2.0 ಇಳಿಕೆ ಕಂಡಿದೆ. ಕಳೆದ ವಾರ ಟಿಕ್‌ಟಾಕ್ 4.6 ರೇಟಿಂಗ್‌ನಿಂದ ದಿಢೀರ್ 3.8 ರೇಟಿಂಗ್‌ಗೆ ಇಳಿದಿತ್ತು. ಇದೀಗ ಅತ್ಯಂತ ಕನಿಷ್ಠ 2.0ಗೆ ರೇಟಿಂಗ್ ಕುಸಿದಿದೆ. ಟಿಕ್‌ಟಾಕ್ ಆರಂಭವಾದ ದಿನದಿಂದ ಈ ಮಟ್ಟಕ್ಕೆ ರೇಟಿಂಗ್ ಕುಸಿದಿರಲಿಲ್ಲ.
ಸಾಮಾಜಿಕ ಜಾಲತಾಣದಲ್ಲಿನ TikTok ಹಾಗೂ Youtube ನಡುವಿನ ಯುದ್ದ ಶೀಘ್ರದಲ್ಲಿ ಅಂತ್ಯವಾಗುವ ಲಕ್ಷಣ ಕಾಣಿಸುತ್ತಿಲ್ಲ. ಇತ್ತ #BringBackCarryMinatiYoutubeVideo ಅಭಿಯಾನವೂ ಆರಂಭಗೊಂಡಿದೆ. ಹೀಗಾಗಿ ಯುಟ್ಯೂಬ್ ಬೇಡಿಕೆ ಹೆಚ್ಚಾಗಿದೆ.