ಜಿಯೋ ಬಳಕೆದಾರರಿಗೆ ಎಚ್ಚರಿಕೆ: ಈ ನಂಬರ್‌ಗಳಿಂದ ಮಿಸ್ ಕಾಲ್ ಬಂದ್ರೆ ಹುಷಾರ್!
ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಸ್ಕ್ಯಾಮ್ ಕರೆಗಳ ಬಗ್ಗೆ ಎಚ್ಚರಿಕೆ ನೀಡಿದೆ. ಅಪರಿಚಿತ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಂದ ಮಿಸ್ಡ್ ಕಾಲ್‌ಗಳಿಗೆ ಮರಳಿ ಕರೆ ಮಾಡಬೇಡಿ ಎಂದು ಸೂಚಿಸಿದೆ.
ಮುಂಬೈ: ಡಿಜಿಟಲ್ ಲೋಕ ಬೆಳೆಯೋದರ ಜೊತೆ ಸೈಬರ್ ಅಪರಾಧ ಪ್ರಕರಣಗಳ ಸಂಖ್ಯೆಯೂ ಏರಿಕೆಯಾಗುತ್ತಿವೆ. ಅನಾಮಧೇಯ ಕರೆಗಳ ಮೋಸದ ಸುಳಿಯಲ್ಲಿ ಸಿಲುಕುವ ಜನರು, ಜೀವಮಾನದಡಿ ದುಡಿದ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಡಿಜಿಟಲ್ ಅಪರಾಧ ಪ್ರಕರಣಗಳು ವರದಿಯಾಗುತ್ತಲೇ ಇವೆ. ಈ ಹಿನ್ನೆಲೆ ರಿಲಯನ್ಸ್ ಜಿಯೋ ತನ್ನ ಗ್ರಾಹಕರಿಗೆ ಎಚ್ಚರಿಕೆಯ ಸಂದೇಶವನ್ನು ನೀಡಿದೆ. ಕೆಲವೊಮ್ಮೆ ಸ್ಕ್ಯಾಮ್ ಯೂಸರ್ಸ್ ಮತ್ತು ಅಂತರಾಷ್ಟ್ರೀಯ ಕರೆಗಳು ನಿಮ್ಮ ಸಂಖ್ಯೆಗೆ ಬರಬಹುದು. ಹಾಗಾಗಿ ಗ್ರಾಹಕರು ತುಂಬಾ ಜಾಗರೂಕರಾಗಿರಬೇಕು ಎಂದು ರಿಲಯನ್ಸ್ ಜಿಯೋ ಸಲಹೆ ನೀಡಿದೆ.
ಸ್ಕ್ಯಾಮ್ ಕರೆಗಳಿಂದ ಹೇಗೆ ಜಾಗರೂಕರಾಗಿರಬೇಕೆಂಬ ವಿಷಯದ ಕುರಿತ ಮಾಹಿತಿಯುಳ್ಳ ಮೇಲ್‌ನ್ನು ತನ್ನ ಗ್ರಾಹಕರಿಗೆ ರಿಲಯನ್ಸ್ ಜಿಯೋ ಕಳುಹಿಸಿದೆ. ಅಪರಿಚಿತ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಂದಿರುವ ಮಿಸ್ಡ್ ಕಾಲ್‌ಗೆ ಪುನಃ ಕರೆ ಮಾಡಬೇಡಿ ಎಂದು ಇ-ಮೇಲ್‌ನಲ್ಲಿ ತಿಳಿಸಲಾಗಿದೆ. ಈ ಪ್ರೀಮಿಯಂ ದರದ ಸ್ಕ್ಯಾಮ್ ಸೇವೆಯಾಗಿದ್ದು (Premium Rate Service Scam), ನಿಮಿಷಕ್ಕೆ ಬಹಳಷ್ಟು ಹಣ ಚಾರ್ಜ್ ಮಾಡುತ್ತದೆ. ಕಡಿಮೆ ಸಮಯದಲ್ಲಿ ಹೆಚ್ಚು ಶುಲ್ಕ ಪಾವತಿಸಬೇಕಾಗುತ್ತದೆ.
ಈ ಸ್ಕ್ಯಾಮರ್‌ಗಳು ಮೊದಲು ಇಂಟರ್‌ನ್ಯಾಷನಲ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುತ್ತಾರೆ. ಯಾರಾದ್ರೂ ಆ ಸಂಖ್ಯೆಗೆ ಮರಳಿ ಕಾಲ್ ಮಾಡಿದಾಗ ಪ್ರೀಮಿಯಂ ಸೇವೆಯ ಹೆಸರಿನಲ್ಲಿ ಹಣ ಕಡಿತ ಮಾಡಿಕೊಳ್ಳಲಾರಂಭಿಸುತ್ತಾರೆ. ಈ ಕಾರಣದಿಂದಾಗಿ, ಕರೆ ಮಾಡುವ ವ್ಯಕ್ತಿ ಕೆಲವೊಮ್ಮೆ ನಿಮಿಷಕ್ಕೆ 100 ರೂ.ಯವರೆಗೂ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಸ್ಕ್ಯಾಮ್‌ನಲ್ಲಿ ವಂಚಕರು ಒಂದೇ ನಂಬರ್ ನಿಂದ ಮತ್ತೆ ಮತ್ತೆ ಮಿಸ್ಡ್ ಕಾಲ್ ಮಾಡುತ್ತಾರೆ. ಇಂತಹ ಮಿಸ್ಡ್ ಕಾಲ್ ಗಳು ಹೆಚ್ಚಾಗಿ ರಾತ್ರಿ ಅಥವಾ ಬೆಳಗಿನ ಜಾವ ಬರುತ್ತವೆ. ಆದ್ದರಿಂದ ಜಾಗರೂಕರಾಗಿರಿ ಮತ್ತು ಅಜ್ಞಾತ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಂದಿರೋ ಮಿಸ್ಡ್ ಕಾಲ್‌ಗಳಿಗೆ ಮರಳ ಕರೆ ಮಾಡಬಾರದು ಎಂದು ರಿಲಯನ್ಸ್ ಜಿಯೋ ಹೇಳಿದೆ.
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್ ಸ್ಕ್ಯಾಮ್‌ನಿಂದ ಎಸ್ಕೇಪ್ ಆಗಲು ಇಲ್ಲಿದೆ ಅಷ್ಟಸೂತ್ರ
ಬಳಕೆದಾರರು ಏನು ಮಾಡಬೇಕು?
- 1.ಪದೇ ಪದೇ ಅನುಮಾನಾಸ್ಪದ ಒಂದೇ ನಂಬರ್ ನಿಂದ ಮಿಸ್ಡ್ ಕಾಲ್ ಬರುತ್ತಿದ್ದರೆ ಆ ಸಂಖ್ಯೆಯನ್ನು ಬ್ಲಾಕ್ ಮಾಡಬೇಕು.
- 2.ಯಾವುದೇ ಅಂತರರಾಷ್ಟ್ರೀಯ ಸಂಖ್ಯೆಗಳಿಂದ ಬಂದಿರುವ ಮಿಸ್ಡ್ ಕಾಲ್‌ಗೆ ಪುನಃ ಕರೆ ಮಾಡಬೇಡಿ. ಫೋನ್ ಸಂಖ್ಯೆಯ ಆರಂಭದಲ್ಲಿ +91 ಇಲ್ಲದಿದ್ದರೆ ಅದು ಅಂತರಾಷ್ಟ್ರೀಯ ಸಂಖ್ಯೆ ಎಂದು ಖಾತ್ರಿ ಮಾಡಿಕೊಳ್ಳಬೇಕು.
- 3.ಬೇರೆ ಬೇರೆ ಅನುಮಾನಾಸ್ಪದ ಸಂಖ್ಯೆಗಳಿಂದ ಪದೇ ಪದೇ ಮಿಸ್ಡ್ ಕಾಲ್ ಬರುತ್ತಿದ್ದರೆ ಕೂಡಲೇ ಸ್ಥಳೀಯ ಸೈಬರ್ ಪೊಲೀಸ್ ಠಾಣೆಗೆ ತೆರಳಿ ದೂರು ಸಲ್ಲಿಸಿ.
- 4.ಇಂತಹ ವಂಚನೆಗಳ ಬಗ್ಗೆ ಮನೆಯಲ್ಲಿರೋ ಹಿರಿಯ ಮತ್ತು ಕಿರಿಯ ಸದಸ್ಯರಿಗೂ ಮಾಹಿತಿ ನೀಡಬೇಕು. ನಿಮ್ಮ ಸುತ್ತಮುತ್ತ ವಾಸವಾಗಿರುವ ಜನತೆಗೂ ಆನ್‌ಲೈನ್ ಸ್ಕ್ಯಾಮ್‌ನಿಂದ ಹೇಗೆ ಜಾಗೃತರಾಗಿರಬೇಕು ಎಂದು ಹೇಳಿಕೊಡಿ.
ಇದನ್ನೂ ಓದಿ: ಡಿಜಿಟಲ್ ಅರೆಸ್ಟ್‌ನಿಂದ ಬಚಾವಾಗೋದು ಹೇಗೆ? ಇಲ್ಲಿದೆ ಮಾಹಿತಿ