Mahindra Udo ಮಹೀಂದ್ರಾ ಸಂಸ್ಥೆಯು 'ಆಟೋ ಪ್ಲೇನ್' ಪರಿಕಲ್ಪನೆಯ ಹೊಸ ಎಲೆಕ್ಟ್ರಿಕ್ ಆಟೋ 'ಉಡೋ'ವನ್ನು ಬಿಡುಗಡೆ ಮಾಡಿದೆ. ಒಮ್ಮೆ ಚಾರ್ಜ್ ಮಾಡಿದರೆ 200 ಕಿ.ಮೀ. ಮೈಲೇಜ್ ನೀಡುವ ಈ ವಾಹನವು, ರಿವರ್ಸ್ ಥ್ರೋಟಲ್, ಮೂರು ಡ್ರೈವಿಂಗ್ ಮೋಡ್‌ಗಳಂತಹ ಸ್ಮಾರ್ಟ್ ವೈಶಿಷ್ಟ್ಯಗಳಿವೆ.

ಅಜಿತ್‌ ಕುಮಾರ್ ಮಠದಬೆಟ್ಟು

Add Asianetnews Kannada as a Preferred SourcegooglePreferred

ಹೈದರಾಬಾದ್‌ (ಫೆ.15): ತ್ರಿಚಕ್ರ ವಾಹನ ಮಾರುಕಟ್ಟೆಯ ಹೊಸ ‘ಆಟೋ ರಾಜ’ನಾಗುವ ಕನಸಿನ ಬೆನ್ನೇರಿ ಹೊಸ ತಲೆಮಾರಿನ ಎಲೆಕ್ಟ್ರಿಕ್‌ ಆಟೋ ‘ಮಹೀಂದ್ರಾ ಉಡೋ’ ಇದೀಗ ರೋಡಿಗಿಳಿಯಲು ಸಜ್ಜಾಗಿದೆ.

ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿ ಲಿಮಿಟೆಡ್‌ ಬಿಡುಗಡೆ ಮಾಡಿರುವ ‘ಉಡೋ’ ಕೇವಲ ಒಂದು ಎಲೆಕ್ಟ್ರಿಕ್‌ ಆಟೋ ಅಲ್ಲ, ಇದೊಂದು ‘ಆಟೋ ಪ್ಲೇನ್‌’. ಚಾಲಕ-ಪ್ರಯಾಣಿಕ ಇಬ್ಬರಿಗೂ ಆರಾಮದಾಯಕ ಅನುಭವ ನೀಡುವ ಅತ್ಯಾಧುನಿಕ ಸ್ಮಾರ್ಟ್‌ ಇ-ಆಟೋ. ಬದಲಾಗುತ್ತಿರುವ ಭಾರತದ ಬದಲಾಗುತ್ತಿರುವ ತಳಹಂತದ ನಗರ ಸಾರಿಗೆ ವ್ಯವಸ್ಥೆಯ ಅಪೇಕ್ಷೆಗಳ ಪ್ರತಿರೂಪ ಎಂದು ಸಂಸ್ಥೆ ಹೇಳಿಕೊಂಡಿದೆ. ಒಮ್ಮೆ ಚಾರ್ಚ್‌ ಮಾಡಿದರೆ ನೈಜ ರಸ್ತೆ ಪರಿಸ್ಥಿತಿಗಳಲ್ಲಿ 200 ಕಿ.ಮೀ. ಕ್ರಮಿಸಬಲ್ಲ ‘ಮಹೀಂದ್ರಾ ಉಡೋ’ ಎಕ್ಸ್‌ಶೋರೂಂ ಬೆಲೆ ₹3,84,299. ಆದರೆ, ಪರಿಚಯಾತ್ಮಕವಾಗಿ ಸೀಮಿತ ಅವಧಿವರೆಗೆ ₹3,58,999ಕ್ಕೆ ಗ್ರಾಹಕರಿಗೆ ಲಭ್ಯವಿರಲಿದೆ.

ದಕ್ಷಿಣ ಭಾರತದ ಸ್ಪರ್ಧಾತ್ಮಕ ತ್ರಿಚಕ್ರ ಮಾರುಕಟ್ಟೆ ಗಮನದಲ್ಲಿಟ್ಟುಕೊಂಡು ವಿಶೇಷ ಸ್ಟೈಲಿಷ್‌ ವಿನ್ಯಾಸ, ಅತ್ಯಾಧುನಿಕ ಸೌಲಭ್ಯಗಳಿರುವ ಈ ಇ-ಆಟೋ ಅನ್ನು ಮೆಟ್ರೋ ನಗರಗಳ ಜತೆಗೆ ಇ-ವಾಹನಗಳತ್ತ ವೇಗವಾಗಿ ಹೊರಳುತ್ತಿರುವ 2ನೇ ಹಂತದ ನಗರಗಳಿಗೂ ಸರಿಹೊಂದುವಂತೆ ಅಭಿವೃದ್ಧಿಪಡಿಸಲಾಗಿದೆ. ಸಾಂಪ್ರದಾಯಿಕ ಮತ್ತು ಸಿಎನ್‌ಜಿ ಆಟೋಗಳಿಗೆ ಹೋಲಿಸಿದರೆ 5 ವರ್ಷದಲ್ಲಿ ₹5 ಲಕ್ಷ ಮೊತ್ತದ ಇಂಧನವನ್ನು ‘ಉಡೋ’ ಉಳಿಸಲಿದೆಯಂತೆ.

ಮಾರುಕಟ್ಟೆಯಲ್ಲಿರುವ ಇತರೆ ಆಟೋಗಳಿಗೆ ಹೋಲಿಸಿದರೆ ‘ಮಹೀಂದ್ರಾ ಉಡೋ’ ವಿನ್ಯಾಸ ವಿಶಿಷ್ಟವಾಗಿದೆ. ವಿಮಾನದಿಂದ ಪ್ರೇರಣೆ ಪಡೆದು ವಿನ್ಯಾಸಗೊಳಿಸಿದ ‘ಉಡೋ’ ಒಂದು ‘ಆಟೋ ಪ್ಲೇನ್‌’ ಎಂದೇ ಕಂಪನಿ ಹೇಳಿಕೊಂಡಿದೆ. ಇದು ನಗರ ಕೇಂದ್ರಿತ ಕೊನೇ ಹಂತದ ಸಾರಿಗೆ ವ್ಯವಸ್ಥೆಗೆ ಬದಲಾವಣೆಗೆ ಸ್ಪರ್ಶ ನೀಡುವ ವಿಶ್ವಾಸವಿದೆ ಎಂದು ಹೈದರಾಬಾದ್‌ನಲ್ಲಿ ನಡೆದ ‘ಮಹೀಂದ್ರಾ ಉಡೋ’ ಬಿಡುಗಡೆ ಸಮಾರಂಭದಲ್ಲಿ ಸಂಸ್ಥೆಯ ಮಾರಾಟ ಮುಖ್ಯಸ್ಥ ಸೌರಭ್‌ ಮಿಶ್ರಾ ಅಭಿಪ್ರಾಯಪಟ್ಟಿದ್ದಾರೆ.

ವಿಶೇಷತೆಗಳು?:

ಇದು ಸಂಪೂರ್ಣ ಏಕಕವಚ/ಮೋನೋಕಾಕ್‌ ಬಾಡಿ ಹೊಂದಿರುವ ಮೊದಲ ಇ-ಆಟೋ. ಈ ಆಟೋ 11.7 ಕೆಡಬ್ಲ್ಯುಎಚ್‌ ಲಿಥಿಯಮ್‌-ಇಯಾನ್‌ ಬ್ಯಾಟರಿ ಹೊಂದಿದ್ದು, 10 ಕಿ.ವ್ಯಾ. ಶಕ್ತಿ ಮತ್ತು 52 ಎನ್‌ಎಂ ಟಾರ್ಕ್‌ ಉತ್ಪಾದಿಸುತ್ತದೆ. ಈ ‘ಆಟೋ ಪ್ಲೇನ್‌’ನ ಪೈಲಟ್‌ ಸೀಟ್‌ ಅಂದ್ರೆ ಚಾಲಕನ ಹಾಗೂ ಪ್ರಯಾಣಿಕರ ಸೀಟು ಆಟೋಗಳಿಂತ ಶೇ.20ರಷ್ಟು ದಪ್ಪವಾಗಿದೆ. ಲೆಗ್‌ಸ್ಪೇಸ್‌, ಹೆಡ್‌ಸ್ಪೇಸ್‌, ರಿಯರ್‌ ಗ್ಲಾಸ್‌ ಕೂಡ ದೊಡ್ಡದಾಗಿದೆ. ಶಕ್ತಿಯುತ ಡ್ರಮ್ ಬ್ರೇಕ್‌ಗಳು, 30.48 ಸೆಂ.ಮೀ.ನ ಟ್ಯೂಬ್‌ಲೆಸ್ ಟೈರ್‌ಗಳು ಇದರ ಇತರೆ ವಿಶೇಷಗಳು.

ಸ್ಮಾರ್ಟ್‌ ವೈಶಿಷ್ಟ್ಯಗಳು:

ತ್ರಿಚಕ್ರ ಆಟೋಗಳಲ್ಲೇ ಮೊದಲ ಬಾರಿ ‘ಉಡೋ’ದಲ್ಲಿ ‘ರಿವರ್ಸ್‌ ಥ್ರೋಟಲ್‌’ ಸೌಲಭ್ಯ ಪರಿಚಯಿಸಲಾಗಿದೆ. ಇದು ಬ್ರೇಕ್‌ ಒತ್ತದೆಯೇ ವಾಹನದ ವೇಗ ನಿಯಂತ್ರಿಸಲು ನೆರವು ನೀಡುತ್ತದೆ. ಜತೆಗೆ ಸಂಚಾರ ದಟ್ಟಣೆ ಪರಿಸ್ಥಿತಿಗೆ ‘ಕ್ರೀಪ್‌ ಫೀಚರ್‌’, ಇಳಿಜಾರಲ್ಲಿ ವಾಹನ ನಿಯಂತ್ರಿಸಲು ಹಿಲ್‌ ಮೋಡ್‌ ಅಸಿಸ್ಟ್‌ ಸೌಲಭ್ಯವನ್ನೂ ಕಲ್ಪಿಸಲಾಗಿದೆ.

ಮೂರು ಡ್ರೈವಿಂಗ್‌ ಮೋಡ್‌ಗಳು:

ರೇಂಜ್‌, ರೈಡ್‌ ಮತ್ತು ರೇಸ್‌ ಎಂಬ ಮೂರು ಡೈವಿಂಗ್‌ ಮೋಡ್‌ಗಳನ್ನು ಉಡೋ ಹೊಂದಿದೆ. ಹೈವೇ, ನಗರ ಹೀಗೆ ಸಂಚಾರದ ಪರಿಸ್ಥಿತಿಗನುಗುಣವಾಗಿ ಈ ಮೋಡ್‌ಗಳಿಗೆ ಬದಲಾಗಬಹುದಾಗಿದೆ. ರೇಸ್‌ ಮೋಡಲ್ಲಿ ಗಂಟೆಗೆ ಗರಿಷ್ಠ 55 ಕಿ.ಮೀ. ವೇಗದಲ್ಲಿ ‘ಉಡೋ’ ಓಡಲಿದೆ.

ಕೊನೇ ಹಂತದ ಸಾರಿಗೆ ಕೇವಲ ಹೊಟ್ಟೆಪಾಡಿನ ದುಡಿಮೆ ಎಂಬಂತಾಗದೆ ಗೌರವದ ದುಡಿಮೆ ಹಂತಕ್ಕೆ ಬದಲಾಗಬೇಕು ಎಂಬುದು ಕಂಪನಿ ನಂಬಿಕೆ. ಆ ನಂಬಿಕೆಯನ್ನು ಮಹೀಂದ್ರಾ ಉಡೋ ಬಲಪಡಿಸುತ್ತದೆ ಎಂದು ಮಹೀಂದ್ರಾ ಲಾಸ್ಟ್ ಮೈಲ್ ಮೊಬಿಲಿಟಿಯ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಓ ಸುಮನ್ ಮಿಶ್ರಾ ಹೇಳಿದ್ದಾರೆ.

ಮಹೀಂದ್ರಾ ಉಡೋ ಖರೀದಿಸುವ ಮಾಲೀಕರಿಗೆ ಮಹೀಂದ್ರಾ ನೆಕ್ಸ್ಟ್ ಯೋಜನೆಯಡಿ ಉಚಿತವಾಗಿ 20 ಲಕ್ಷದ ಅಪಘಾತ ವಿಮೆ, ಹಣಕಾಸು ಸಲಹೆಗಳೂ ಲಭ್ಯವಾಗಲಿವೆ.ಬಾಕ್ಸ್‌:

ಜಹೀರಾಬಾದಲ್ಲಿ ಉತ್ಪಾದನೆ:

ತೆಲಂಗಾಣದ ಜಹೀರಾಬಾದ್‌ನ ಘಟಕದಲ್ಲಿ ಮಹೀಂದ್ರಾ ಉಡೋ ಉತ್ಪಾದಿಸಲಾಗಿದ್ದು, ವರ್ಷಕ್ಕೆ 2 ಲಕ್ಷ ಆಟೋ ಉತ್ಪಾದಿಸುವ ಸಾಮರ್ಥ್ಯ ಈ ಘಟಕ ಹೊಂದಿದೆ. ಸದ್ಯ ಭಾರತದ ಮಾರುಕಟ್ಟೆಗೆ ಉಡೋ ಪರಿಚಯಿಸಲಾಗುತ್ತಿದ್ದು, ನಂತರ ವಿದೇಶಗಳಿಗೆ ರಫ್ತು ಮಾಡುವ ಚಿಂತನೆ ಇದೆ ಎಂದು ಸಂಸ್ಥೆಯ ಸಿಇಒ ಸುಮನ್‌ ಮಿಶ್ರಾ ತಿಳಿಸಿದ್ದಾರೆ.

YouTube video player