ಒಟಿಟಿ ಸ್ವೇಚ್ಛಾಚಾರ ನಿಯಂತ್ರಣಕ್ಕೆ ಶೀಘ್ರ ಕಾನೂನು!
ಒಟಿಟಿ ಸ್ವೇಚ್ಛಾಚಾರ ನಿಯಂತ್ರಣಕ್ಕೆ ಶೀಘ್ರ ಕಾನೂನು| ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ ಉನ್ನತ ಮಟ್ಟದ ಚರ್ಚೆ
ನವದೆಹಲಿ(ಜ.17): ಮಾಧ್ಯಮಗಳಿಗೆ ಸಮಾನ ವೇದಿಕೆ ಕಲ್ಪಿಸುವ ದಿಸೆಯಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ಕೇಂದ್ರ ಸರ್ಕಾರ, ಒಟಿಟಿ ವೇದಿಕೆ ಸೇರಿದಂತೆ ಡಿಜಿಟಲ್ ಮಾಧ್ಯಮಗಳ ಸ್ವಯಂ ನಿಯಂತ್ರಣಕ್ಕೆ ಹೊಸ ಕಾನೂನು ರೂಪಿಸಲು ನಿರ್ಧರಿಸಿದೆ.
ಮುದ್ರಣ, ದೃಶ್ಯ ಮತ್ತು ಕೇಬಲ್ ಟೀವಿ ವಲಯಕ್ಕೆ ಇರುವಂತೆ ಡಿಜಿಟಲ್ ಮಾದ್ಯಮಗಳು ಈವರೆಗೆ ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿಲ್ಲ.
ಹೀಗಾಗಿ ಅವುಗಳಿಗೆ ಸಿಕ್ಕಿರುವ ಈ ಸ್ವಾತಂತ್ರ್ಯ ಭಾರೀ ಪ್ರಮಾಣದಲ್ಲಿ ದುರುಪಯೋಗವಾಗುತ್ತಿದೆ. ಅವು ಸುಳ್ಳು ಸುದ್ದಿ ಹರಡುವಿಕೆಗೆ, ಮಾನಹಾನಿಗೆ, ಸ್ವೇಚ್ಛಾಚಾರಕ್ಕೆ ಕಾರಣವಾಗುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ ಕೇಂದ್ರ ಸರ್ಕಾರ ಇವುಗಳ ಮೇಲೆ ನಿಯಂತ್ರಣಕ್ಕೆ ಕಾನೂನು ರೂಪಿಸಲು ನಿರ್ಧರಿಸಿದೆ.
ಈ ಕುರಿತು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದಲ್ಲಿ ಉನ್ನತ ಮಟ್ಟದ ಚರ್ಚೆ ಆರಂಭವಾಗಿದೆ ಎಂದು ಮೂಲಗಳು ತಿಳಿಸಿವೆ.