Asianet Suvarna News Asianet Suvarna News

ಭಾರತದ ಮೊದಲ ಟ್ರೂ ಕಾಲರ್‌ ಕಚೇರಿ ಬೆಂಗ್ಳೂರಲ್ಲಿ ಉದ್ಘಾಟನೆ

ವಿಶ್ವ ಮಟ್ಟದ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರನಾಗಿ ಭಾರತ ಬೆಳೆಯುತ್ತಿದೆ. ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಸಾಧನೆಯ ಹಾದಿಯಲ್ಲಿ ಡಿಜಿಟಲ್‌ ಎಕಾನಮಿ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ. ಇದಕ್ಕಾಗಿ ಕೋಟ್ಯಂತರ ಯುವಕರು ನವೋದ್ಯಮದ ಮೂಲಕ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ 

Indias First True Caller Office Inaugurated in Bengaluru grg
Author
First Published Mar 17, 2023, 10:50 AM IST

ಬೆಂಗಳೂರು(ಮಾ.17):  ಭಾರತದ ಟ್ರಿಲಿಯಲ್‌ ಡಾಲರ್‌ ಆರ್ಥಿಕತೆ ಸಾಧಿಸಲು ಪೂರಕವಾಗುವಂತೆ ಡಿಜಿಟಲ್‌ ಆರ್ಥಿಕತೆ ಉತ್ತೇಜಿಸಲು ಸರ್ಕಾರ ಸಮಗ್ರ ಕ್ರಮ ವಹಿಸುತ್ತಿದೆ ಎಂದು ಕೇಂದ್ರ ಕೌಶಲಾಭಿವೃದ್ಧಿ, ಉದ್ಯಮಶೀಲತೆ, ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ರಾಜ್ಯ ಖಾತೆ ಸಚಿವ ರಾಜೀವ್‌ ಚಂದ್ರಶೇಖರ್‌ ಹೇಳಿದರು. ದೇಶದ ಮೊದಲ ಟ್ರೂ ಕಾಲರ್‌ ಕಚೇರಿಯನ್ನು ನಗರದ ಚಲ್ಲಘಟ್ಟದ ಎಂಬೆಸ್ಸೆ ಗಾಲ್ಫ್‌ ಲಿಂಕ್ಸ್‌ನಲ್ಲಿ ವರ್ಚುವಲ್‌ ಮೂಲಕ ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವ ಮಟ್ಟದ ವಿಶ್ವಾಸಾರ್ಹ ತಂತ್ರಜ್ಞಾನ ಪಾಲುದಾರನಾಗಿ ಭಾರತ ಬೆಳೆಯುತ್ತಿದೆ. ಟ್ರಿಲಿಯನ್‌ ಡಾಲರ್‌ ಆರ್ಥಿಕತೆ ಸಾಧನೆಯ ಹಾದಿಯಲ್ಲಿ ಡಿಜಿಟಲ್‌ ಎಕಾನಮಿ ಹೆಚ್ಚಿನ ಪ್ರಾಧಾನ್ಯತೆ ಪಡೆದಿದೆ. ಇದಕ್ಕಾಗಿ ಕೋಟ್ಯಂತರ ಯುವಕರು ನವೋದ್ಯಮದ ಮೂಲಕ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದಾರೆ. 2026ರ ವೇಳೆಯಲ್ಲಿ ದೇಶದ ಒಟ್ಟಾರೆ ಆರ್ಥಿಕತೆಗೆ ಡಿಜಿಟಲ್‌ ಕ್ಷೇತ್ರದಿಂದ ಶೇ. 20ರಷ್ಟು ಕೊಡುಗೆ ಪಡೆಯುವ ನಿರೀಕ್ಷೆಯಿದೆ. ಈ ಹಂತದಲ್ಲಿ ಡಿಜಿಟಲ್‌ ಇಂಡಿಯಾ ಕಾಯಿದೆಯಲ್ಲಿ ದತ್ತಾಂಶ ಸುರಕ್ಷತೆಗೆ, ಕಂಪನಿಗಳ ಬೆಳವಣಿಗೆಗೆ ಪೂರಕವಾಗಿ ನೀತಿ ನಿರೂಪಣೆಗೆ ಒತ್ತು ನೀಡಲಾಗುತ್ತಿದೆ ಎಂದರು.

ಕಾರವಾರ, ಹಾವೇರಿ ಸೇರಿ ದೇಶದ 34 ನಗರಗಳಲ್ಲಿ ಜಿಯೋ ಟ್ರು ಜಿ ಸೇವೆ ಆರಂಭ!

ಜಾಗತಿಕ ಮಟ್ಟದ ಇಂಟರ್‌ನೆಟ್‌ ಬಳಕೆಯಲ್ಲಿ ಭಾರತ ಮುಂಚೂಣಿಯಲ್ಲಿದೆ. ದೇಶದಲ್ಲಿ ಪ್ರಸ್ತುತ 80ಕೋಟಿಗೂ ಹೆಚ್ಚಿನವರು ಇಂಟರ್‌ನೆಟ್‌ ಬಳಸುತ್ತಿದ್ದು, 2026ರಲ್ಲಿ ಈ ಸಂಖ್ಯೆ 120 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ. ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದ ಜೊತೆಗೆ ಬೃಹತ್‌ ಇಂಟರ್‌ನೆಟ್‌ ಬಳಕೆದಾರನಾಗಿ ಹೊರಹೊಮ್ಮಲು ಎಲ್ಲರನ್ನು ತೊಡಗಿಸಿಕೊಳ್ಳಲಾಗುತ್ತಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿಯಿಂದಾಗಿ ಕಳೆದ ಆರೆಂಟು ವರ್ಷಗಳಲ್ಲಿ ಡಿಜಿಟಲ್‌ ಕ್ಷೇತ್ರದಲ್ಲಿ ಗಣನೀಯ ಬೆಳವಣಿಗೆ ಸಾಧಿಸಲು ಸಾಧ್ಯವಾಗಿದೆ. ದಶಕದ ಹಿಂದೆ ಐಟಿ-ಐಟಿಇಎಸ್‌ ವಲಯದಲ್ಲಿ ಒಂದಿಷ್ಟುಕಂಪನಿಗಳು ಕೆಲವು ಕ್ಷೇತ್ರಗಳಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಪ್ರಸ್ತುತ ಡಿಜಿಟಲ್‌ ಆರ್ಥಿಕತೆಯ ಎಲ್ಲ ಆಯಾಮ ಅಂದರೆ ಕೃತಕ ಬುದ್ಧಿಮತ್ತೆ, ಸೂಪರ್‌ ಕಂಪ್ಯೂಟಿಂಗ್‌, ಸೆಮಿಕಂಡಕ್ಟರ್‌ ಸೇರಿ ಇಂಟರ್‌ನೆಟ್‌ನ ಎಲ್ಲ ಮಗ್ಗುಲುಗಳಲ್ಲಿ ಪ್ರಗತಿ ಸಾಧಿಸಲಾಗುತ್ತಿದೆ ಎಂದರು.

‘ಟ್ರೂ ಕಾಲರ್‌’ ಸಿಇಒ, ಸಹಸಂಸ್ಥಾಪಕ ಆ್ಯಲಮ್‌ ಮಮೆದಿ ಮಾತನಾಡಿ, ಸುರಕ್ಷತೆ ಹಾಗೂ ಗೌಪ್ಯತೆಯನ್ನು ಟ್ರೂಕಾಲರ್‌ ಕಾಪಾಡಿಕೊಂಡು ಹೋಗಲಿದೆ. ಬ್ಯಾಂಕಿಂಗ್‌ ವಂಚನೆ, ಸ್ಪಾ್ಯಮ್‌ ಕರೆಗಳನ್ನು ತಡೆಯುವ ಮೂಲಕ ಗ್ರಾಹಕರಿಗೆ ಸುರಕ್ಷತೆ ಒದಗಿಸುತ್ತಿದೆ. ಈ ನೆಲದ ಕಾನೂನು ಗೌರವಿಸುತ್ತ ಮುಕ್ತ, ವಿಶ್ವಾಸಾರ್ಹ ಹೊಣೆಗಾರಿಕೆ ಜೊತೆಗೆ ಡಿಜಿಟಲ್‌ ಇಂಡಿಯಾ ಮೌಲ್ಯಗಳಿಗೆ ಕಂಪನಿ ಬದ್ಧವಾಗಿದೆ ಎಂದರು.

ಪ್ರೀ ಇನ್‌ಸ್ಟಾಲ್ಡ್‌ ಆ್ಯಪ್‌ಗಳಿಗೆ ಕೇಂದ್ರ ಸರ್ಕಾರ ಅಂಕುಶ..? ಮೊಬೈಲ್‌ ಕಂಪನಿಗಳಿಗೆ ಶೀಘ್ರ ಮೂಗುದಾರ..!

ಭಾರತದ ಟ್ರೂ ಕಾಲರ್‌ ವ್ಯವಸ್ಥಾಪಕ ನಿರ್ದೇಶಕ ರಿಶಿತ್‌ ಜುಂಜುನ್‌ವಾಲಾ, ಸ್ವಿಡನ್‌ ಸ್ಟಾಕ್‌ಹೋಮ್‌ ಕೇಂದ್ರ ಕಚೇರಿ ಹೊರತುಪಡಿಸಿದರೆ ಜಾಗತಿಕವಾಗಿ ಇದು ಕಂಪನಿಯ ಅತಿದೊಡ್ಡ ಕಚೇರಿಯಾಗಿದೆ. ಇಲ್ಲಿ 250 ಸಿಬ್ಬಂದಿಯಿದ್ದು, ಟ್ರೂ ಕಾಲರ್‌ನ ಸಾಫ್ಟ್‌ವೇರ್‌ ಎಂಜಿನಿಯರಿಂಗ್‌, ಸರ್ಕಾರದ ಜೊತೆಗಿನ ಒಪ್ಪಂದ, ಜಾಹೀರಾತು ಹಾಗೂ ಡಿಜಿಟಲ್‌ ಮಾರುಕಟ್ಟೆ ವಿಭಾಗದಲ್ಲಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.

ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಸ್ವಾವಲಂಬನೆ ಪ್ರಗತಿಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದು, ಅತ್ಯಾಧುನಿಕ ಬೃಹತ್‌ ಲ್ಯಾಬ್‌ನ್ನು ಸ್ಥಾಪಿಸಲಾಗುತ್ತಿದೆ. ಚಿಪ್‌ ಡಿಸೈನಿಂಗ್‌, ಆವಿಷ್ಕಾರ, ಎಲೆಕ್ಟ್ರಾನಿಕ್‌, ಮೈಕ್ರೋ ಎಲೆಕ್ಟ್ರಾನಿಕ್‌ ವಲಯದ ಅಭಿವೃದ್ಧಿಗೆ ಹೆಚ್ಚಿನ ಕ್ರಮ ವಹಿಸಲಾಗುತ್ತಿದೆ ಅಂತ ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌ ತಿಳಿಸಿದ್ದಾರೆ. 

Follow Us:
Download App:
  • android
  • ios