ಸದ್ಯ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಜಮಾನ. ಬಹುತೇಕರು ಒಂದಲ್ಲಾ ಒಂದು ಕಾರಣದಿಂದ ಎಐ ಟೂಲ್ ಬಳಕೆ ಮಾಡುತ್ತಿದ್ದಾರೆ. ಆದರೆ ಕೇಂದ್ರ ಗೃಹ ಸಚಿವಾಲಯ ಇದೀಗ ಎಐ ಟೂಲ್ ಬಳಸದಂತೆ ತನ್ನ ಸಿಬ್ಬಂದಿಗಳಿಗೆ ಸೂಚಿಸಿದೆ. ಇದಕ್ಕೆ ಕಾರಣವೇನು?
ನವದೆಹಲಿ(ಫೆ.06) ಭಾರತ ಸೇರಿದಂತೆ ವಿಶ್ವದಲ್ಲೇ ಆರ್ಟಿಫೀಶಿಯಲ್ ಇಂಟಲಿಜೆನ್ಸ್ ಬಳಕೆ ಹೆಚ್ಚಾಗಿದೆ. ಪ್ರತಿ ಕ್ಷೇತ್ರದಲ್ಲಿ ಎಐ ಟೂಲ್ ಬಳಕೆ ಮಾಡಲಾಗುತ್ತದೆ. ಜನಸಾಮಾನ್ಯರು ಕೂಡ ಎಐ ಟೂಲ್ ಉಪಯೋಗ ಪಡೆದುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅಪಾಯವೂ ಹೆಚ್ಚಾಗುತ್ತಿದೆ ಅನ್ನೋ ಕೂಗು ಹಲವು ದಿನಗಳಿಂದ ಕೇಳಿಬರುತ್ತಿದೆ. ಇದರ ನಡುವೆ ಕೇಂದ್ರ ಗೃಹ ಸಚಿವಾಲಯ ಮಹತ್ವದ ಸೂಚನೆ ನೀಡಿದೆ.ಸರ್ಕಾರದ ಅಧಿಕೃತ ಕೆಲಸ ಕಾರ್ಯಗಳಿಗೆ ಚಾಟ್‌ಜಿಪಿಟಿ ಅಥವಾ ಚೀನಾದ ಡೀಪ್‌ಸೀಕ್ ಬಳಸದಂತೆ ಕೇಂದ್ರ ಗೃಹ ಸಚಿವಾಲಯವು ತನ್ನ ಸಿಬ್ಬಂದಿಗಳಿಗೆ ಸೂಚನೆ ನೀಡಿದೆ.
ಈ ವಿದೇಶಿ ಆ್ಯಪ್‌ಗಳ ಬಳಕೆಯು ಸರ್ಕಾರದ ರಹಸ್ಯ ದಾಖಲೆಗಳ ಸುರಕ್ಷತೆ ಮತ್ತು ಗೌಪ್ಯತೆಗೆ ಧಕ್ಕೆ ತರಬಹುದು ಎಂದು ಕೇಂದ್ರ ಗೃಹ ಸಚಿವಾಲಯವು ಆಂತರಿಕವಾಗಿ ಹೊರಡಿಸಿರುವ ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ. ಸರ್ಕಾರಿ ದಾಖಲೆಗಳು ಮತ್ತು ಡೇಟಾದ ರಕ್ಷಣೆ ಹಿನ್ನೆಲೆಯಲ್ಲಿ ಯಾವುದೇ ಸರ್ಕಾರಿ ಉಪಕರಣಗಳಲ್ಲಿ ಇವುಗಳ ಬಳಕೆ ಬೇಡ ಎಂದು ಸಚಿವಾಲಯ ಹೇಳಿದೆ. ‘ಕಚೇರಿ ಕಂಪ್ಯೂಟರ್‌ಗಳು ಮತ್ತು ಇತರ ಸಾಧನಗಳಲ್ಲಿನ ಎಐ ಅಪ್ಲಿಕೇಶನ್‌ಗಳು (ಚಾಟ್‌ಜಿಪಿಟಿ, ಡೀಪ್‌ಸೀಕ್ ಇತ್ಯಾದಿ) ಸರ್ಕಾರಿ ಡೇಟಾ ಮತ್ತು ದಾಖಲೆಗಳ ಗೌಪ್ಯತೆಗೆ ಅಪಾಯವನ್ನುಂಟುಮಾಡುತ್ತವೆ ಎಂದು ನಿರ್ಧರಿಸಿ ಈ ಕ್ರಮ ಕೈಗೊಳ್ಳಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ.
ಹೈಟೆಕ್ ಬೆಂಗಳೂರಿಗೆ ಸರಿಸಾಟಿ ಉಂಟೇ? ಚಪಾತಿ ರೇಟಿಂಗ್‌ಗೆ AI ಟೂಲ್ ಅಭಿವೃದ್ಧಿಪಡಿಸಿದ ಟೆಕ್ಕಿ
ಸರ್ಕಾರಿ ಮಾಹಿತಿ ಸೋರಿಕೆಯಾಗಬಹುದೆಂದು ಆಸ್ಟ್ರೇಲಿಯಾ, ಇಟಲಿ ಮುಂತಾದ ದೇಶಗಳು ಈ ಹಿಂದೆಯೇ ಡೀಪ್‌ಸೀಕ್ ಬಳಕೆಯ ಮೇಲೆ ನಿರ್ಬಂಧ ಹೇರಿದ್ದವು. ಎಐ ಆ್ಯಪ್‌ಗಳು ಮತ್ತು ಟೂಲ್‌ಗಳನ್ನು ಆಫೀಸ್ ಕಂಪ್ಯೂಟರ್‌ಗಳಲ್ಲಿ ಬಳಸುವುದರಿಂದ ಮಾಹಿತಿ ಸೋರಿಕೆಯಾಗಿ ಸರ್ಕಾರದ ಗೌಪ್ಯತೆಗೆ ಧಕ್ಕೆಯಾಗುತ್ತದೆ. ಓಪನ್ ಎಐ ಮುಖ್ಯಸ್ಥ ಸ್ಯಾಮ್ ಆಲ್ಟ್‌ಮನ್ ಬುಧವಾರ ಭಾರತಕ್ಕೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಕೇಂದ್ರವು ಮಂಗಳವಾರ ಈ ಸೂಚನೆಯನ್ನು ಹೊರಡಿಸಿದೆ.
ಚಾಟ್ ಜಿಪಿಟಿ, ಡೀಪ್‌ಸೀಕ್‌ನ ಮಾತೃ ಸಂಸ್ಥೆಯಾದ ಓಪನ್ ಎಐ ಇದಕ್ಕೆ ಇನ್ನೂ ಸ್ಪಷ್ಟ ಉತ್ತರ ನೀಡಿಲ್ಲ. ಇದು ನ್ಯಾಯಯುತ ಬೇಡಿಕೆಯಾಗಿದ್ದು, ಈ ವಾರದಲ್ಲೇ ಇದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂದು ಹಣಕಾಸು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಭಾರತದ ಇತರ ಇಲಾಖೆಗಳಲ್ಲಿ ಇದಕ್ಕೆ ಸಂಬಂಧಿಸಿದಂತೆ ಸೂಚನೆಗಳನ್ನು ನೀಡಲಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಮಾಧ್ಯಮ ಸಂಸ್ಥೆಗಳೊಂದಿಗಿನ ಹಕ್ಕುಸ್ವಾಮ್ಯ ಉಲ್ಲಂಘನೆಯ ಕಾನೂನು ಹೋರಾಟದಲ್ಲಿ ಓಪನ್ ಎಐ ಭಾರತದಲ್ಲಿ ಈಗಾಗಲೇ ಸಮಸ್ಯೆಗಳನ್ನು ಎದುರಿಸುತ್ತಿದೆ. ದೇಶದಲ್ಲಿ ತಮಗೆ ಸರ್ವರ್‌ಗಳಿಲ್ಲ, ಭಾರತೀಯ ನ್ಯಾಯಾಲಯಗಳು ಇದನ್ನು ವಿಚಾರಣೆ ನಡೆಸಬಾರದು ಎಂದು ಓಪನ್ ಎಐ ಹೇಳಿದೆ.
