ಬಾಹ್ಯಾಕಾಶ ಬಳಿಕ ಬಳಿಕ ಸಮುದ್ರ ಶೋಧಕ್ಕೆ ಭಾರತ ಸಜ್ಜು!
ಆಗಸದ ಬಳಿಕ ಸಮುದ್ರ ಶೋಧಕ್ಕೆ ಭಾರತ ಸಜ್ಜು| 4 ತಿಂಗಳಲ್ಲಿ ಆಳ ಸಮುದ್ರಶೋಧ ಕಾರಾರಯಚರಣೆ ಆರಂಭ| 4000 ಕೋಟಿ ರು. ವೆಚ್ಚದ ಯೋಜನೆಗೆ ಕೇಂದ್ರ ಸಿದ್ಧತೆ
ನವದೆಹಲಿ(ನ.23): ಇಸ್ರೋದ ಮೂಲಕ ಆಗಸದ ಕೌತುಕವನ್ನು ಅರಿಯುವ ಕೆಲಸವನ್ನು ಈಗಾಗಲೇ ಆರಂಭಿಸಿರುವ ಭಾರತ ಇದೀಗ ಬಹುತೇಕ ಕೌತುಕದ ಲೋಕವೇ ಆಗಿ ಉಳಿದಿರುವ ಆಳ ಸಮುದ್ರದಲ್ಲಿ ಖನಿಜಗಳು, ಇಂಧನ ಹಾಗೂ ಜೀವವೈವಿಧ್ಯತೆಯನ್ನು ಶೋಧಿಸುವ ಸಲುವಾಗಿ ಕೇಂದ್ರ ಸರ್ಕಾರ ಶೀಘ್ರದಲ್ಲೇ ಮಹತ್ವಾಕಾಂಕ್ಷೆಯ ‘ಆಳ ಸಮುದ್ರ ಯೋಜನೆ’ಯನ್ನು ಆರಂಭಿಸಲು ಮುಂದಾಗಿದೆ.
ಭವಿಷ್ಯದ ಹಾಗೂ ದಿಕ್ಕು ಬದಲಿಸುವ ಯೋಜನೆ ಇದಾಗಿದ್ದು, ಇದಕ್ಕೆ ಸಂಬಂಧಿಸಿದ ಒಪ್ಪಿಗೆಗಳನ್ನು ಪಡೆದುಕೊಳ್ಳಲಾಗುತ್ತಿದೆ. ಮುಂದಿನ ಮೂರ್ನಾಲ್ಕು ತಿಂಗಳಲ್ಲಿ ಯೋಜನೆ ಪ್ರಾರಂಭಿಸಲಾಗುತ್ತದೆ ಎಂದು ಭೂಗರ್ಭ ಸಚಿವಾಲಯದ ಕಾರ್ಯದರ್ಶಿ ಎಂ. ರಾಜೀವನ್ ಅವರು ತಿಳಿಸಿದ್ದಾರೆ.
4 ಸಾವಿರ ಕೋಟಿ ರು. ವೆಚ್ಚದ ಯೋಜನೆ ಇದಾಗಿದ್ದು, ಇದರಿಂದ ಹಿಂದೂ ಮಹಾಸಾಗರ ವಲಯದಲ್ಲಿ ಭಾರತದ ಅಸ್ತಿತ್ವ ಇನ್ನಷ್ಟುಬಲಗೊಳ್ಳಲಿದೆ. ಈಗಾಗಲೇ ಚೀನಾ, ಕೊರಿಯಾ ಹಾಗೂ ಜರ್ಮನಿಯಂತಹ ದೇಶಗಳು ಅಲ್ಲಿ ಸಕ್ರಿಯ ಶೋಧ ಕಾರ್ಯಾಚರಣೆಯಲ್ಲಿ ತೊಡಗಿವೆ ಎಂದು ಹೇಳಿದ್ದಾರೆ.
ಕೇಂದ್ರ ಪರಿಸರ ಸಚಿವಾಲಯ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ), ಜೈವಿಕ ತಂತ್ರಜ್ಞಾನ, ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (ಸಿಎಸ್‌ಐಆರ್) ಈ ಯೋಜನೆಯ ಭಾಗವಾಗಿರಲಿವೆ. ಇಸ್ರೋ ಹಾಗೂ ಡಿಆರ್‌ಡಿಒ ಅಭಿವೃದ್ಧಿಪಡಿಸುವ ತಂತ್ರಜ್ಞಾನವನ್ನೂ ಬಳಸಿಕೊಳ್ಳಲಾಗುತ್ತದೆ ಎಂದು ವಿವರಿಸಿದ್ದಾರೆ.
ಏನೇನು ಶೋಧಕ್ಕೆ ಪ್ರಯತ್ನ?
ಖನಿಜ, ಇಂಧನ, ಜೀವವೈವಿಧ್ಯತೆ ಪತ್ತೆ ಹಚ್ಚುವ ಸಾಹಸ
ಶೋಧ ಕಾರ್ಯ ಎಲ್ಲೆಲ್ಲಿ?
ಹಿಂದೂ ಮಹಾಸಾಗರದ 1.5 ಲಕ್ಷ ಚ.ಕಿ.ಮೀ ವ್ಯಾಪ್ತಿಯಲ್ಲಿ ಶೋಧ