ಕ್ವೀನ್ಸ್‌ಲ್ಯಾಂಡ್‌[ಜೂ.22]: ಬೆಳಗ್ಗೆಯಿಂದ ರಾತ್ರಿವರೆಗೂ ಎಡೆಬಿಡದೇ ಮೊಬೈಲ್‌ ಫೋನ್‌ ಬಳಸುತ್ತೀರಾ? ಹತ್ತಾರು ಆ್ಯಪ್‌ಗಳು, ನೂರಾರು ಸಂದೇಶಗಳು, ಜೋಕ್‌ಗಳು, ವಿಡಿಯೋಗಳನ್ನು ನೋಡುತ್ತಲೇ ಕಾಲ ದೂಡುತ್ತಿದ್ದೀರಾ? ಒಮ್ಮೆ ನಿಮ್ಮ ತಲೆಬುರುಡೆಯನ್ನೊಮ್ಮೆ ಸವರಿ ನೋಡಿ, ಕೋಡು ಮೂಡಿರಬಹುದು!

ಅಚ್ಚರಿಯಾಯಿತಾ?! ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿರುವ ಸನ್‌ಶೈನ್‌ ಕೋಸ್ಟ್‌ ವಿಶ್ವವಿದ್ಯಾಲಯದ ಸಂಶೋಧಕರು ನಡೆಸಿರುವ ಅಧ್ಯಯನದಲ್ಲಿ ಮಿತಿಮೀರಿ ಮೊಬೈಲ್‌ ಬಳಸುತ್ತಿರುವ ಜನರಲ್ಲಿ, ವಿಶೇಷವಾಗಿ ಯುವಜನರ ತಲೆಯಲ್ಲಿ ಕೋಡು ಮೂಡುತ್ತಿರುವ ಸಂಗತಿ ಬೆಳಕಿಗೆ ಬಂದಿದೆ.

ಅಗತ್ಯಕ್ಕಿಂತ ಹೆಚ್ಚಾಗಿ ಮೊಬೈಲ್‌ ಬಳಸುವುದು ಜನರಿಗೆ ಅಭ್ಯಾಸವಾಗಿ ಹೋಗಿರುವ ಹಿನ್ನೆಲೆಯಲ್ಲಿ ಅದಕ್ಕೆ ತಕ್ಕಂತೆ ನಮ್ಮ ಶರೀರ ಕೂಡ ಅಡ್ಜಸ್ಟ್‌ ಆಗುತ್ತಿದೆ. ಇದರ ಫಲವಾಗಿ ಯುವಜನರ ತಲೆಬುರಡೆಯಲ್ಲಿ ಕೋಡಿನಂತಹ ರಚನೆಯೊಂದು ಸೃಷ್ಟಿಯಾಗುತ್ತಿದೆ. ಆದರೆ ಈ ಕೊಂಬು ಸೃಷ್ಟಿಯಾಗುತ್ತಿರುವುದು ಹಣೆಯ ಮೇಲಲ್ಲ. ತಲೆಯ ಹಿಂಭಾಗದಲ್ಲಿ ಎಂದು ಸಂಶೋಧಕರು ತಿಳಿಸಿದ್ದಾರೆ.

ಕ್ವೀನ್ಸ್‌ಲ್ಯಾಂಡ್‌ನಲ್ಲಿ 1200 ಎಕ್ಸ್‌-ರೇಗಳನ್ನು ಪರಿಶೀಲಿಸಿ ಅಧ್ಯಯನ ನಡೆಸಿದಾಗ ಈ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. 1200ರ ಪೈಕಿ ಮೂರನೇ ಒಂದು ಅಂದರೆ 400 ಎಕ್ಸ್‌-ರೇಗಳಲ್ಲಿ ತಲೆಯಲ್ಲಿ ಮೂಳೆಯಂತಹ ಹೆಚ್ಚುವರಿ ರಚನೆ ಕಂಡುಬಂದಿದೆ. ವಯಸ್ಸಾದವರಲ್ಲಿ ಇದು ಕಡಿಮೆ ಇದೆ. ಯುವಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಕೋಡು ಏಕೆ ಬರುತ್ತೆ?

ಮೊಬೈಲ್‌ ಫೋನ್‌ ಅನ್ನೇ ದಿಟ್ಟಿಸುತ್ತಾ ಯುವಜನತೆ ಕೂರುವುದರಿಂದ ತಲೆಯ ಮೇಲಿನ ಭಾರ ಬೆನ್ನುಮೂಳೆಯ ಮೇಲೆ ಬೀಳುತ್ತಿಲ್ಲ. ಬದಲಾಗಿ ತಲೆಯ ಹಿಂಭಾಗದಲ್ಲಿನ ಮಾಂಸಖಂಡಗಳಿಗೆ ವರ್ಗಾವಣೆಯಾಗುತ್ತಿದೆ. ಹೀಗಾಗಿ ಅಲ್ಲಿ ಸ್ನಾಯುತಂತು (ಟೆಂಡನ್‌) ಹಾಗೂ ಮೂಳೆಕಟ್ಟು (ಲಿಗಮೆಂಟ್‌)ಗಳನ್ನು ಮೂಳೆ ಸೃಷ್ಟಿಮಾಡುತ್ತಿದೆ. ಹೀಗಾಗಿ ತಲೆಬುರುಡೆಯ ಕೆಳಭಾಗದಲ್ಲಿ ಕೋಡು ಬೆಳೆಯುತ್ತಿದೆ.

ತಪಾಸಣೆ ಹೇಗೆ?

ಹೆಚ್ಚು ಹೆಚ್ಚು ಮೊಬೈಲ್‌ ಬಳಸುತ್ತಿರುವವರು ನೀವಾಗಿದ್ದರೆ, ಈಗಾಗಲೇ ನಿಮಗೆ ಕೋಡು ಮೂಡಿದೆಯಾ ಎಂಬುದರ ಬಗ್ಗೆ ನೀವೇ ಪರಿಶೀಲನೆ ಮಾಡಿಕೊಳ್ಳಬಹುದು. ತಲೆಯ ಮೇಲಿನಿಂದ ಕೈಯನ್ನು ಸವರುತ್ತಾ ತಲೆಯ ಕೆಳಭಾಗದವರೆಗೂ ಒಯ್ಯಿರಿ. ಮೂಳೆಯಂತಹ ರಚನೆ ಸಿಕ್ಕರೆ ನೀವೂ ಮೊಬೈಲ್‌ ಗೀಳಿನಿಂದ ತೊಂದರೆಗೆ ಸಿಲುಕಿದ್ದೀರಿ ಎಂದರ್ಥ. ಇಲ್ಲವೆಂದಾದರೆ, ಎಚ್ಚೆತ್ತುಕೊಳ್ಳಲು ಸಕಾಲ!