ಮಸ್ಕ್,ಆಲ್ಟ್‌ಮ್ಯಾನ್ ಜೊತಗೆ ಸ್ಪರ್ಧೆಗಲ್ಲ, ದಿನನಿತ್ಯ ಜೀವನಕ್ಕೆ AI ಬಳಕೆ, ರಾಜೀವ್ ಚಂದ್ರಶೇಖರ್!
ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಎಲ್ಲಾ ಕ್ಷೇತ್ರಕ್ಕೂ ಹಾಸು ಹೊಕ್ಕಿದೆ. ಇದರ ಬೆನ್ನಲ್ಲೇ ಡೀಪ್ ಫೇಕ್ ಸೇರಿದಂತೆ ಹಲವು ಅಪಾಯದ ಮುನ್ಸೂಚನೆಗಳು ಎದುರಾಗಿದೆ. ಇದರ ನಡುವೆ ಭಾರತದ ಏಐ ಬಳಕೆ ಕುರಿತು ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಮಹತ್ವದ ಮಾಹಿತಿ ಹಂಚಿಕೊಂಡಿದ್ದಾರೆ.
ನವದೆಹಲಿ(ಡಿ.06) ಆರೋಗ್ಯ, ಶಿಕ್ಷಣ ಸೇರಿದಂತೆ ಹಲವು ಕ್ಷೇತ್ರದಲ್ಲಿ ಭಾರತದ ಕೃತಕ ಬುದ್ಧಿಮತ್ತೆ(AI) ಬಳಕೆ ಮಾಡಲಿದೆ. ಭಾರತ ಎಲಾನ್ ಮಸ್ಕ್, ಸ್ಯಾಮ್ ಆಲ್ಟ್‌ಮ್ಯಾನ್ ಜೊತೆ ಸ್ಪರ್ಧಿಸುವ ಬದಲು, ನಿಜ ಜೀವನದ ಬಳಕೆಗೆ ಉಪಯುಕ್ತವಾಗುವ ರೀತಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಳಕೆ ಮಾಡಲಿದೆ ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನದ ಕೇಂದ್ರದ ರಾಜ್ಯ ಖಾತೆ ಸಚಿವ ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ. ಹಲವು ಕ್ಷೇತ್ರದಲ್ಲಿ ಜನರ ಬದುಕಿಗೆ ಉಪಯುಕ್ತವಾಗುವ ರೀತಿಯಲ್ಲಿ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಬಳಕೆ ಅತೀ ಅಗತ್ಯ. ಲಾಸ್ಟ್ ಮೈಲ್ ಡೆಲಿವರಿಗೆ AI ಸಾಮರ್ಥ್ಯವನ್ನು ಬಳಸಿಕೊಳ್ಳುವುದು ಮುಖ್ಯ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಗ್ಲೋಬಲ್ ಟೆಕ್ನಾಲಜಿ ಶೃಂಗಸಭೆ 2023ರಲ್ಲಿ ಮಾತನಾಡಿದ ರಾಜೀವ್ ಚಂದ್ರಶೇಖರ್, ಭವಿಷ್ಯದಲ್ಲಿ ಭಾರತದ ಆರೋಗ್ಯ ಕ್ಷೇತ್ರ,ಶಿಕ್ಷಣ ಕ್ಷೇತ್ರದಲ್ಲಿ ಆರ್ಟಿಫಿಶಿಯಲ್ ಇಂಟಲಿಜನ್ಸ್ ಪ್ರಮುಖ ಪಾತ್ರ ನಿರ್ವಹಿಸಲಿದೆ ಎಂದಿದ್ದಾರೆ. ಡಿಜಿಟಲ್ ಎಕಾನಮಿ ವಿಸ್ತರಣೆಯಲ್ಲಿ ಭಾರತ ಪ್ರಮುಖ ಪಾತ್ರ ನಿರ್ವಹಿಸಿದೆ. ಆರ್ಟಿಫೀಶಿಯಲ್ ಇಂಟಲಿಜೆನ್ಸ್ ತಂತ್ರಜ್ಞಾನವನ್ನು ಭಾರತ ಸಮಯದ ಅತೀದೊಡ್ಡ ಹಾಗೂ ಮಹತ್ವದ ಆವಿಷ್ಕಾರ ಎಂದು ಪರಿಗಣಿಸಿದೆ. ಇದರ ಜೊತೆಗೆ ಇದೇ ತಂತ್ರಜ್ಞಾನವನ್ನು ಡಿಜಿಟಲ್ ಮೂಲಸೌಕರ್ಯ ಹಾಗೂ ಆರ್ಥಿಕತೆಯ ಚಲನಶೀಲತೆ ಸಕ್ರಿಯಗೊಳಿಸುವಿಕೆಯಲ್ಲಿ ತೊಡಗಿಸಿಕೊಂಡಿದೆ ಎಂದು ರಾಜೀವ್ ಚಂದ್ರಶೇಖರ್ ಹೇಳಿದ್ದಾರೆ.
ಬೆಂಗಳೂರು ನಗರದ ಮರುನಿರ್ಮಾಣಕ್ಕೆ ಕೈಜೋಡಿಸಿ: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್
ಆರ್ಟಿಫಿಶೀಯಲ್ ಇಂಟಲಿಜೆನ್ಸ್ ಬಳಕೆ ವೇಳೆ ಎದುರಾಗುವ ಸುರಕ್ಷತೆ, ಭದ್ರತೆ ಕುರಿತು ಸಚಿವರು ಮಾತನಾಡಿದ್ದಾರೆ. AI ಸಾಮರ್ಥ್ಯದ ಬಳಕೆ ವೇಳೆ ಎದುರಾಗುವ ಸುರಕ್ಷತೆ ಹಾಗೂ ಹೊಣೆಗಾರಿಕೆಯನ್ನು ಸುಲಭವಾಗಿ ನಿಯಂತ್ರಿಸಬಹುದಾದ ಮಾರ್ಗೋಪಾಯಗಳನ್ನು ಅವಿಷ್ಕರಿಸುವ ಅಗತ್ಯವಿದೆ ಎಂದಿದ್ದಾರೆ.
ಸೆಮಿಕಂಡಕ್ಟರ್‌ಗೆ ಭಾರತ ಮೊದಲ ಆದ್ಯತೆ ನೀಡಿ ಮಹತ್ವದ ಹೆಜ್ಜೆ ಇಟ್ಟಿದ್ದೇವೆ. ಇದೇ ರೀತಿ ಇದೀಗ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಸಕ್ರಿಯ ಬಳಕೆಗೆ ಬದ್ಧರಾಗಿದ್ದೇವೆ. ನಮ್ಮ AI ಪ್ರಾರಂಭ, ಎಲಾನ್ ಮಸ್ಕ್ ಅಥಲಾ ಸ್ಯಾಮ್ ಆಲ್ಟ್‌ಮ್ಯಾನ್ ಜೊತೆ ಸ್ಫರ್ಧಿಸಲು ಅಥವಾ ನೊಬೆಲ್ ಪ್ರಶಸ್ತಿ ಪಡೆದು ವಿಜ್ರಂಭಿಸಲು ಅಲ್ಲ. ತಂತ್ರಜ್ಞಾನ ಜೀವನವನ್ನು ಪರಿವರ್ತಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ದೃಢವಾದ ನಂಬಿಕೆ ಹೊಂದಿದ್ದಾರೆ. ಜನರು ಹಾಗೂ ಸರ್ಕಾರದ ನಡುವಿನ ಕೊಂಡಿಯಾಗಿ, ಸರ್ಕಾರದ ಯೋಜನೆಗಳು ತ್ವರಿತಗತಿಯಲ್ಲಿ ಫಲಾನುಭವಿಗಳಿಗೆ ತಲುಪವಂತಾಗಲು, ಸರ್ಕಾರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಎಐ ಬಳಕೆಯ ಅಗತ್ಯವಿದೆ ಎಂದಿದ್ದಾರೆ.
ಮೋದಿ ಭಾರತೀಯರ ಸುರಕ್ಷತೆ ಬಗ್ಗೆ ಬದ್ಧತೆ ಹೊಂದಿರುವ ನಾಯಕ: ರಾಜೀವ್ ಚಂದ್ರಶೇಖರ್
ಇದೇ ವೇಳೆ AI ಬಳಕೆ ವೇಳೆ ಎದುರಾಗುವ ಸವಾಲುಗಳ ಕುರಿತು ರಾಜೀವ್ ಚಂದ್ರಶೇಖರ್ ಮಾತನಾಡಿದ್ದಾರೆ.ಅತ್ಯಾಧುನಿಕ ತಂತ್ರಜ್ಞಾನ ಆವಿಷ್ಕರಣೆ ಜೊತೆಗೆ ತಪ್ಪು ಮಾಹಿತಿ, ಡೀಪ್ ಫೇಕ್, ನಕಲಿ ಸುದ್ದಿಗಳ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಇಂಟರ್ನೆಟ್ ಪ್ಲಾಟ್‌ಫಾರ್ಮ್‌ಗೆ ಕಾನೂನು ಹೊಣೆಗಾರಿಕೆ ನೀಡುವ ಅಗತ್ಯವಿದೆ. ತಂತ್ರಜ್ಞಾನದ ಆವಿಷ್ಕಾರಕ್ಕೆ ತಕ್ಕಂತೆ ಕಾನೂನಿನ ವ್ಯಾಪ್ತಿಯಡಿಯಲ್ಲಿ ವ್ಯವಹರಿಸುವ ಹಾಗೂ ಕಾರ್ಯನಿರ್ವಹಿಸುವ ಅಗತ್ಯತೆಯನ್ನು ಸಚಿವರು ಒತ್ತಿ ಹೇಳಿದ್ದಾರೆ.