Asianet Suvarna News Asianet Suvarna News

ಬೆಂಗಳೂರು ನಗರದ ಮರುನಿರ್ಮಾಣಕ್ಕೆ ಕೈಜೋಡಿಸಿ: ಕೇಂದ್ರ ಸಚಿವ ರಾಜೀವ್‌ ಚಂದ್ರಶೇಖರ್‌

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಜಿಲ್ಲೆಯಲ್ಲೂ 75 ಕೆರೆ ಅಭಿವೃದ್ಧಿಪಡಿಸಲು ಕರೆ ನೀಡಿದ್ದಾರೆ. ಇದು ಸಾರ್ವಜನಿಕರ ಪಾಲಿಗೆ ಅತ್ಯಂತ ಮಹತ್ವದ ಕರೆ. ಒಂದಾನೊಂದು ಕಾಲದಲ್ಲಿ ನಗರದ ಕುಡಿಯುವ ನೀರಿನ ಅಗತ್ಯತೆ ಪೂರೈಸುತ್ತಿದ್ದ ಬೆಂಗಳೂರಿನಂತಹ ಕೆರೆಗಳ ಪ್ರಸ್ತುತ ಸ್ಥಿತಿಯನ್ನು ಇದು ಮನವರಿಕೆ ಮಾಡಿಕೊಡುತ್ತದೆ: ಸಚಿವ ರಾಜೀವ್‌ ಚಂದ್ರಶೇಖರ್‌

Join hands to Rebuild the City of Bengaluru Says Union Minister Rajeev Chandrasekhar grg
Author
First Published Nov 26, 2023, 5:02 AM IST

ಬೆಂಗಳೂರು(ನ.26): ‘ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ರಾಜಕಾರಣಿಗಳು ಹಾಗೂ ಸಾರ್ವಜನಿಕ ಗಣ್ಯರಿಂದ ಬೆಂಗಳೂರು ನಗರ ನಿರಾಶೆಗೊಂಡಿದೆ. ಹೀಗಾಗಿ ನಗರದ ಮರು ನಿರ್ಮಾಣ ಹಾಗೂ ಯೋಜನಾಬದ್ಧ ಅಭಿವೃದ್ಧಿಗೆ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸಾರ್ವಜನಿಕರ ಸಂಘಟಿತ ಕಾರ್ಯ ಮುಖ್ಯ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಉದ್ಯಮಶೀಲತೆ ಇಲಾಖೆಗಳ ರಾಜ್ಯ ಸಚಿವ ರಾಜೀವ್‌ ಚಂದ್ರಶೇಖರ್‌ ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಶನಿವಾರ ನಡೆದ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ಒಕ್ಕೂಟದ (ಸಿಒಆರ್ ಡಬ್ಲ್ಯೂಎ) 10ನೇ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಬೆಂಗಳೂರಿನಂತಹ ನಗರಗಳ ಅಭಿವೃದ್ಧಿಯಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳ ನಿರ್ಣಾಯಕ ಪಾತ್ರವನ್ನು ಒತ್ತಿ ಹೇಳಿದ ಅವರು, ಹಲವು ದಶಕಗಳಿಂದ ಅಧಿಕಾರದಲ್ಲಿದ್ದ ರಾಜಕಾರಣಿಗಳು ಹಾಗೂ ಸಾರ್ವಜನಿಕ ಗಣ್ಯರಿಂದ ಖಂಡಿತವಾಗಿಯೂ ಬೆಂಗಳೂರು ನಿರಾಶೆಗೊಂಡಿದೆ ಎಂದು ನಂಬಿದ್ದೇನೆ. ನಗರದ ಭವಿಷ್ಯವನ್ನು ರೂಪಿಸುವಲ್ಲಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ. ನಮ್ಮ ನಗರಗಳನ್ನು ಪುನರ್ ಸ್ಥಾಪನೆ, ಮರು ನಿರ್ಮಾಣ, ಯೋಜನಾಬದ್ಧವಾಗಿ ಅಭಿವೃದ್ಧಿ ಮಾಡಲು ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಕೆಲಸ ಮಾಡುವುದು ಮುಖ್ಯ ಎಂದು ಹೇಳಿದರು.

ಮೋದಿ ಭಾರತೀಯರ ಸುರಕ್ಷತೆ ಬಗ್ಗೆ ಬದ್ಧತೆ ಹೊಂದಿರುವ ನಾಯಕ: ರಾಜೀವ್ ಚಂದ್ರಶೇಖರ್

ಹಲವು ದಶಕಗಳಿಂದ ಬೆಂಗಳೂರು ನಗರದಲ್ಲಿ ಶಕ್ತಿಶಾಲಿ ಗುತ್ತಿಗೆದಾರರು ಹಾಗೂ ಪಟ್ಟಭದ್ರ ಹಿತಾಸಕ್ತಿಗಳ ಮುಂದೆ ಸಾರ್ವಜನಿಕರ ಧ್ವನಿ ಅಡಗಿಸಲ್ಪಟ್ಟಿದೆ. ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ರಚನಾತ್ಮಕ ಸಲಹೆಗಳನ್ನು ನೀಡುವ ಮೂಲಕ ಅಭಿವೃದ್ಧಿ ಕೆಲಸಗಳನ್ನು ನಿರ್ವಹಣೆ ಮಾಡುವ ಸಂಸ್ಥೆಗಳಿಗೆ ಬೆಂಬಲವಾಗಿ ಕೆಲಸ ಮಾಡಬೇಕು. ಸಂಘಗಳು, ಸ್ಥಳೀಯ ಸಂಸ್ಥೆ ಹಾಗೂ ರಾಜಕಾರಣಿಗಳನ್ನು ಒಳಗೂಡಿಸಿಕೊಂಡು ಸಮಸ್ಯೆಗಳನ್ನು ಬಗೆಹರಿಸಿ ನಗರಕ್ಕೆ ಸೂಕ್ತ ರೂಪ ನೀಡಬೇಕು ಎಂದು ಕರೆ ನೀಡಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರತಿ ಜಿಲ್ಲೆಯಲ್ಲೂ 75 ಕೆರೆ ಅಭಿವೃದ್ಧಿಪಡಿಸಲು ಕರೆ ನೀಡಿದ್ದಾರೆ. ಇದು ಸಾರ್ವಜನಿಕರ ಪಾಲಿಗೆ ಅತ್ಯಂತ ಮಹತ್ವದ ಕರೆ. ಒಂದಾನೊಂದು ಕಾಲದಲ್ಲಿ ನಗರದ ಕುಡಿಯುವ ನೀರಿನ ಅಗತ್ಯತೆ ಪೂರೈಸುತ್ತಿದ್ದ ಬೆಂಗಳೂರಿನಂತಹ ಕೆರೆಗಳ ಪ್ರಸ್ತುತ ಸ್ಥಿತಿಯನ್ನು ಇದು ಮನವರಿಕೆ ಮಾಡಿಕೊಡುತ್ತದೆ. ಹಲವು ವರ್ಷಗಳಿಂದ ಸಾಕಷ್ಟು ಕೆರೆಗಳು ಒತ್ತುವರಿಯಾಗಿವೆ, ನಾಶವಾಗಿವೆ. ಪಟ್ಟಭದ್ರ ಹಿತಾಸಕ್ತಿಗಳಿಂದ ಮಲಿನಗೊಂಡಿವೆ. ಕೆರೆಗಳನ್ನು ಪುನಶ್ಚೇತನಗೊಳಿಸಬೇಕಾದ ಜವಾಬ್ದಾರಿ ಎಲ್ಲರ ಮೇಲೂ ಇದೆ ಎಂದರು.

ಸಿದ್ದು ಸರ್ಕಾರದ ರಿಮೋಟ್‌ ಯತೀಂದ್ರ ಕೈಲಿ: ರಾಜೀವ್‌ ಚಂದ್ರಶೇಖರ್ ವ್ಯಂಗ್ಯ

ಕೆರೆಗಳ ಸಂರಕ್ಷಣೆಯಲ್ಲಿನ ತಮ್ಮ ಪಾತ್ರವನ್ನು ಮೆಲುಕು ಹಾಕಿದ ಸಚಿವರು, ಈ ರೀತಿ ಹಾಳಾಗುತ್ತಿದ್ದ ಹಲವು ಕೆರೆಗಳನ್ನು ಉಳಿಸಿದ ಹೆಮ್ಮೆ ನನಗಿದೆ. ಮೇಸ್ತ್ರಿಪಾಳ್ಯದಲ್ಲಿ ರಿಯಲ್‌ ಎಸ್ಟೇಟ್ ಮಾಲೀಕನೊಬ್ಬನಿಂದ ನಿವೇಶನಗಳಾಗಿ ಮಾರ್ಪಡುತ್ತಿದ್ದ ಕೆರೆಯನ್ನು ಉಳಿಸಿದಿದ್ದೇನೆ. ಇಂತಹ ಹಲವಾರು ಕೆರೆಗಳನ್ನು ಪುನಶ್ಚೇತನಗೊಳಿಸಲು ಶ್ರಮಿಸಿದ್ದೇನೆ ಎಂದು ಹೇಳಿದರು.

ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ನಿರಂತರವಾಗಿ ತಮ್ಮ ಪಾತ್ರವನ್ನು ಅರಿತು ಕೆಲಸ ಮಾಡಬೇಕು. ತನ್ಮೂಲಕ ಸಾರ್ವಜನಿಕರನ್ನು ನಗರದ ಅಭಿವೃದ್ಧಿ ದೃಷ್ಟಿಯಿಂದ ಕೆಲಸ ಮಾಡಲು ಉತ್ತೇಜಿಸಬೇಕು. ಪ್ರಸ್ತುತ ಹಾಗೂ ಭವಿಷ್ಯದ ಪೀಳಿಗೆಗಳ ಬೇಡಿಕೆಗಳಿಗೆ ತಕ್ಕಂತೆ ನಗರವನ್ನು ಅಭಿವೃದ್ಧಿಪಡಿಸಬೇಕು. ಯೋಜನೆಗಳ ಪ್ರಗತಿ, ಸಾರ್ವಜನಿಕರ ಹಣ ಬಳಕೆಯ ರೀತಿ ಬಗ್ಗೆ ಕಣ್ಣಿಡಬೇಕು ಎಂದು ಸಲಹೆ ನೀಡಿದರು.

Follow Us:
Download App:
  • android
  • ios