'ವಾಟ್ಸಾಪ್ ಹೊಸ ನೀತಿ ಐಚ್ಛಿಕ; ಒಪ್ಪದಿದ್ದರೆ ಸೇರಬೇಡಿ'
\ವಾಟ್ಸಾಪ್ ಒಂದು ಖಾಸಗಿ ಆ್ಯಪ್| ವಾಟ್ಸಾಪ್ ಹೊಸ ನೀತಿ ಐಚ್ಛಿಕ; ಒಪ್ಪದಿದ್ದರೆ ಸೇರಬೇಡಿ: ಹೈಕೋರ್ಟ್

ನವದೆಹಲಿ(ಜ.19): ವಾಟ್ಸಾಪ್ ಒಂದು ಖಾಸಗಿ ಆ್ಯಪ್. ಅದರ ನೂತನ ನೀತಿಗಳನ್ನು ಜನರು ಒಪ್ಪಿಕೊಳ್ಳಲೇ ಬೇಕೆಂದೇನೂ ಇಲ್ಲ. ಅದನ್ನು ಒಪ್ಪಿಕೊಳ್ಳುವುದು ಅಥವಾ ತಿರಸ್ಕರಿಸುವುದು ಜನರಿಗೇ ಬಿಟ್ಟಿದ್ದು ಎಂದು ದೆಹಲಿ ಹೈಕೋರ್ಟ್ ಸೋಮವಾರ ಅಭಿಪ್ರಾಯ ವ್ಯಕ್ತಪಡಿಸಿದೆ.
ವಾಟ್ಸಾಪ್ ಜಾರಿಗೊಳಿಸಲು ಹೊರಟಿರುವ ನೂತನ ಖಾಸಗಿತನ ನೀತಿಯನ್ನು ಪ್ರಶ್ನಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಸಂಜೀವ್ ಸಚ್ದೇವ, ಇದೊಂದು ಖಾಸಗಿ ಆ್ಯಪ್. ಅದರ ನೀತಿಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದಾದರೆ ಅದಕ್ಕೆ ಸೇರಿಕೊಳ್ಳಬೇಡಿ. ಅದರ ಬದಲು ಬೇರೆ ಇತರ ಆ್ಯಪ್‌ಗಳನ್ನು ಉಪಯೋಗಿಸಿ. ವಾಟ್ಸಾಪ್‌ನ ನೂತನ ನೀತಿ ಕಡ್ಡಾಯವಲ್ಲ. ಅದು ಸ್ವಯಂ ಪ್ರೇರಿತ ಆಯ್ಕೆ ಆಗಿದೆ ಎಂದು ಹೇಳಿದ್ದಾರೆ.
ಇದೇ ವೇಳೆ ಬಹುತೇಕ ಮೊಬೈಲ್ ಆ್ಯಪ್‌ಗಳ ಷರುತ್ತುಗಳನ್ನು ಓದಿದರೆ ನೀವು ಅಚ್ಚರಿಗೆ ಒಳಗಾಗುತ್ತೀರಿ. ಗೂಗಲ್ ಮ್ಯಾಪ್ ಕೂಡ ನಿಮ್ಮ ಎಲ್ಲಾ ಮಾಹಿತಿಗಳನ್ನು ಶೇಖರಿಸಿ ಇಟ್ಟುಕೊಳ್ಳುತ್ತದೆ. ನಿಮ್ಮ ಪ್ರಕಾರ ನೂತನ ನೀತಿಯಿಂದ ಯಾವ ಮಾಹಿತಿ ಸೋರಿಕೆ ಆಗಲಿದೆ ಎಂಬುದು ಅರ್ಥವಾಗುತ್ತಿಲ್ಲ. ಆದರೆ, ಈ ವಿಷಯವನ್ನು ಕೋರ್ಟ್ ಪರಿಗಣಿಸಲಿದ್ದು, ಜ.25ರಂದು ಮುಂದಿನ ವಿಚಾರಣೆ ನಡೆಸಲಾಗುವುದು ಎಂದು ಕೋರ್ಟ್ ತಿಳಿಸಿದೆ.