ಭಾರತದಲ್ಲಿ 5G ನೆಟ್‌ವರ್ಕ್ ಸೇವೆಗೆ ಜಿಯೋ ರೆಡಿ, 88,078 ಕೋಟಿ ರೂ ತರಂಗಾತರ ಖರೀದಿ!
ಸೋಮಾರು ಮುಕ್ತಾಯಗೊಂಡ 5ಜಿ ಸ್ಪೆಕ್ಟ್ರಂ ಹರಾಜಿನಲ್ಲಿ 22 ವಲಯಗಳಲ್ಲೂ 5ಜಿ ತರಂಗಾಂತರವನ್ನು ಜಿಯೋಪಡೆದಿದೆ. ಇದಕ್ಕಾಗಿ ಜಿಯೋ 88,078 ಕೋಟಿ ರೂಪಾಯಿ ಹೂಡಿಕೆ ಮಾಡಿದೆ.
ಮುಂಬೈ(ಆ02): 5ಜಿ ತರಂಗಾಂತರ ಹರಾಜು ಪ್ರಕ್ರಿಯೆಯಲ್ಲಿ ರಿಲಾಯನ್ಸ್ ಜಿಯೋ ಅತಿ ಹೆಚ್ಚಿನ ತರಂಗಾಂತರಗಳನ್ನು ಖರೀದಿಸಿದೆ. ಒಟ್ಟು 88078 ಕೋಟಿ ರೂಪಾಯಿ ಮೌಲ್ಯದ 5ಜಿ ತರಂಗಾಂತರಗಳನ್ನು ರಿಲಾಯನ್ಸ್ ಜಿಯೋ ಖರೀದಿ ಮಾಡಿದೆ. 700 ಮೆಗಾಹರ್ಟ್ಸ್, 800 ಮೆಗಾಹರ್ಟ್ಸ್, 1800 ಮೆಗಾಹರ್ಟ್ಸ್, 3300 ಮೆಗಾಹರ್ಟ್ಸ್ ಮತ್ತು 26 ಗಿಗಾಹರ್ಟ್ಸ್ ಬ್ಯಾಂಡ್‌ಗಳನ್ನು ರಿಲಾಯನ್ಸ್ ಜಿಯೋ ಖರೀದಿ ಮಾಡಿದೆ. ಭಾರತವು ತಂತ್ರಜ್ಞಾನ ಶಕ್ತಿ ಅಳವಡಿಸಿಕೊಂಡು ವಿಶ್ವದ ಪ್ರಮುಖ ಶಕ್ತಿಯಾಗಿ ಹೊರಹೊಮ್ಮಲಿದೆ ಎಂಬುದರಲ್ಲಿ ನಮಗೆ ವಿಶ್ವಾಸವಿದೆ. ಈ ಧ್ಯೇಯವನ್ನು ಇಟ್ಟುಕೊಂಡೇ ನಾವು ಜಿಯೋ ಸ್ಥಾಪಿಸಿದ್ದೇವೆ. ಜಿಯೋ 4ಜಿ ಮೂಲಕ ಹೊರಹೊಮ್ಮಿಸಿದ ವೇಗ, ತೀವ್ರತೆ ಮತ್ತು ಸಾಮಾಜಿಕ ಬದಲಾವಣೆ ಅತ್ಯಂತ ಮಹತ್ವದ್ದು. ಈಗ ಇನ್ನೊಂದು ಮಹತ್ವಾಕಾಂಕ್ಷೆ ಮತ್ತು ಸಂಕಲ್ಪದಿಂದ 5ಜಿ ಯುಗವನ್ನು ಮುನ್ನಡೆಸಲು ಜಿಯೋ ಸಿದ್ಧವಾಗಿದೆ ಎಂದು ರಿಲಾಯನ್ಸ್ ಜಿಯೋ ಇನ್‌ಫೋಕಾಮ್ ಅಧ್ಯಕ್ಷ ಆಕಾಶ್ ಅಂಬಾನಿ ಹೇಳಿದ್ದಾರೆ.
ನಾವು ಇಡೀ ಭಾರತದಲ್ಲಿ 5ಜಿ ಪರಿಚಯಿಸುವುದರೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವ್ ಅನ್ನು ಆಚರಿಸುತ್ತೇವೆ. ವಿಶ್ವದರ್ಜೆಯ 5ಜಿ ನೆಟ್‌ವರ್ಕ್ ಅನ್ನು ಕೈಗೆಟಕುವ ದರದಲ್ಲಿ ಒದಗಿಸಲು ನಾವು ಸಿದ್ಧವಾಗಿದ್ದೇವೆ. ನಾವು ಭಾರತದ ಡಿಜಿಟಲ್ ಕ್ರಾಂತಿಯನ್ನು ವೇಗಗೊಳಿಸುವ ಸೇವೆಗಳು, ವೇದಿಕೆಗಳು ಮತ್ತು ಪರಿಹಾರಗಳನ್ನು ಒದಗಿಸುತ್ತೇವೆ, ವಿಶೇಷವಾಗಿ ಶಿಕ್ಷಣ, ಆರೋಗ್ಯ, ಕೃಷಿ, ಉತ್ಪಾದನೆ ಮತ್ತು ಇ-ಆಡಳಿತದಂತಹ ನಿರ್ಣಾಯಕ ಕ್ಷೇತ್ರಗಳಲ್ಲಿ ಮತ್ತು ಗೌರವಾನ್ವಿತ ಪ್ರಧಾನ ಮಂತ್ರಿಯವರ ಡಿಜಿಟಲ್ ಇಂಡಿಯಾ ಮಿಷನ್‌ಗೆ ಮತ್ತೊಂದು ಹೆಮ್ಮೆಯ ಕೊಡುಗೆಯನ್ನು ನೀಡುತ್ತೇವೆ ಎಂದಿದ್ದಾರೆ.
5ಜಿ ಸ್ಪೆಕ್ಟ್ರಮ್ ಹರಾಜು ಅಂತ್ಯ, 1.50 ಲಕ್ಷ ಕೋಟಿ ಮೊತ್ತಕ್ಕೆ ಗರಿಷ್ಠ ಬಿಡ್!
700 ಮೆಗಾಹರ್ಟ್ಸ್ ತರಂಗಾಂತರಗಳನ್ನು ಈ ಹರಾಜಿನಲ್ಲಿ ಜಿಯೋ ಪಡೆದಿದ್ದು, ದೇಶದಲ್ಲಿ ನಿಜವಾದ 5ಜಿ ಸೇವೆಗಳನ್ನು ಜಿಯೋ ಮಾತ್ರ ಒದಗಿಸುವ ಸಾಮರ್ಥ್ಯವನ್ನು ಹೊಂದಿರಲಿದೆ. ಅಲ್ಲದೆ, ಈ ಹರಾಜಿನಲ್ಲಿ ಪಡೆದ ತರಂಗಾಂತರಗಳೂ ಸೇರಿದಂತೆ ಜಿಯೋ ಒಟ್ಟು 26,772 ಮೆಗಾಹರ್ಟ್ಸ್ (ಡೌನ್‌ಲಿಂಕ್ ಹಾಗೂ ಅಪ್‌ಲಿಂಕ್) ತರಂಗಾಂತರಗಳನ್ನು ಜಿಯೋ ಪಡೆದುಕೊಂಡಿರಲಿದೆ. ಇದು ದೇಶದಲ್ಲೇ ಅತಿ ಹೆಚ್ಚು ತರಂಗಾಂತರಗಳನ್ನು ಹೊಂದಿರುವ ಸಂಸ್ಥೆಯಾಗಿರಲಿದೆ.
5ಜಿ ಏನು ಲಾಭ?
4ಜಿ ಸೇವೆಗಿಂತ 10 ಪಟ್ಟು ಹೆಚ್ಚು ವೇಗದ ಇಂಟರ್ನೆಟ್ ಸೌಲಭ್ಯ. ಅತ್ಯುತ್ತಮ ಗುಣಮಟ್ಟದ ಒಂದಿಡೀ ಚಲನಚಿತ್ರವನ್ನು ಕೆಲವೇ ಸೆಕೆಂಡ್‌ನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಬಹುದು. ಇ- ಆರೋಗ್ಯ ಸೇವೆಗಳು, ವಾಹನಗಳ ನಡುವೆ ಸಂಪರ್ಕ, ಆಗ್ಯುಮೆಂಟೆಡ್ ರಿಯಾಲಿಟಿ, ಮೆಟಾವರ್ಸ್ ಅನುಭವ, ಹೊಸ ಮೊಬೈಲ್ ಗೇಮಿಂಗ್ ಸೇರಿದಂತೆ ನೂರಾರು ಹೊಸತನಗಳಿಗೆ 5ಜಿ ಸೇವೆ ಅವಕಾಶ ಕಲ್ಪಿಸಿಕೊಡುತ್ತದೆ.
ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ
ರಿಲಯನ್ಸ ಜಿಯೋ, ಭಾರ್ತಿ ಏರ್‌ಟೆಲ್, ವೊಡಾಫೋನ್-ಐಡಿಯಾ ಜೊತೆಗೆ ವಿಶ್ವದ 4ನೇ ಅತಿದೊಡ್ಡ ಶ್ರೀಮಂತ ಗೌತಮ್ ಅದಾನಿ ಒಡೆತನದ ಕಂಪನಿ ಕೂಡಾ 5ಜಿ ಸೇವೆ ಬಿಡ್ಡಿಂಗ್‌ನಲ್ಲಿ ಪಾಲ್ಗೊಂಡಿತ್ತು. ಒಟ್ಟಾರೆ 4.3 ಲಕ್ಷ ಕೋಟಿ ರು.ಮೌಲ್ಯದ ಸ್ಪೆಕ್ಟ್ರಂ ಅನ್ನು ಕೇಂದ್ರ ಸರ್ಕಾರ ಹರಾಜಿಗೆ ಇಟ್ಟಿತ್ತು. ಮೊದಲ ದಿನವೇ ಬಿಡ್ಡಿಂಗ್‌ಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಉದ್ಯಮಿ ಮುಖೇಶ್ ಅಂಬಾನಿ, ಸುನೀಲ್ ಭಾರತಿ ಮಿತ್ತಲ್, ಗೌತಮ ಅದಾನಿ ಮೊದಲಾದವರು ಒಟ್ಟಾರೆ 1.45 ಲಕ್ಷ ಕೋಟಿ ರು. ಮೊತ್ತದ ಸ್ಪೆಕ್ಟ್ರಂಗೆ ಬಿಡ್ ಮಾಡಿದ್ದರು.