ದೇಶದಲ್ಲೇ ಮೊದಲು ಬೆಂಗಳೂರು ಮೆಟ್ರೋದಲ್ಲಿ 5ಜಿ ಪ್ರಯೋಗ ಯಶಸ್ವಿ
ದೇಶದಲ್ಲೇ ಮೊದಲ ಬಾರಿಗೆ ನಗರದ ಮೆಟ್ರೋದಲ್ಲಿ 5ಜಿ ಯಶಸ್ವಿ ಪ್ರಯೋಗ. ಎಂ.ಜಿ.ರಸ್ತೆ ನಿಲ್ದಾಣದಲ್ಲಿ ಜಿಯೋ ಪ್ರಯೋಗ. 4ಜಿಗಿಂತ 50 ಪಟ್ಟು ವೇಗ. ಸೆಕೆಂಡ್‌ಗೆ 1.45 ಜಿಬಿ ಡೌನ್ಲೋಡ್. ಸೆಕೆಂಡಿಗೆ 65 ಎಂಜಿ ಅಪ್‌ಲೋಡ್.
ಬೆಂಗಳೂರು (ಜು.23): ದೇಶದಲ್ಲೇ ಮೊದಲ ಬಾರಿಗೆ ಮೆಟ್ರೋ ರೈಲು ನಿಲ್ದಾಣದಲ್ಲಿ 5ಜಿ ಸೇವೆಯ ಪ್ರಯೋಗ ನಮ್ಮ ಮೆಟ್ರೋದ ಎಂ. ಜಿ. ರಸ್ತೆ ನಿಲ್ದಾಣದಲ್ಲಿ ನಡೆದಿದೆ. 5ಜಿ ಪ್ರಯೋಗ ಯಶಸ್ವಿಯಾಗಿದೆ ಎಂದು ಬೆಂಗಳೂರು ಮೆಟ್ರೋ ನಿಗಮ ಹೇಳಿದೆ. ಭಾರತದ ಟೆಲಿಕಾಂ ನಿಯಂತ್ರಣ ಪ್ರಾಧಿಕಾರ (ಟಿಆರ್‌ಎಐ)ಯಿಂದ ಅನುಮತಿ ಪಡೆದು ರಿಲಯನ್ಸ್ ಜಿಯೋ ನಡೆಸಿದ ಈ ಪ್ರಯೋಗದಲ್ಲಿ ಸೆಕೆಂಡ್‌ಗೆ 1.45 ಜಿಬಿ ಡೌನ್‌ಲೋಡ್ ವೇಗ ಮತ್ತು ಸೆಕೆಂಡ್‌ಗೆ 65 ಎಂಬಿ ಅಪ್‌ಲೋಡ್ ವೇಗ ಪಡೆಯಲಾಗಿದೆ. ಇದು ಸದ್ಯ ಚಾಲ್ತಿಯಲ್ಲಿರುವ 4ಜಿಗಿಂತ 50 ಪಟ್ಟು ವೇಗವಾಗಿದೆ ಎಂದು ಮೆಟ್ರೋ ನಿಗಮ ಹೇಳಿದೆ. ರಿಲಯೆನ್ಸ್ ಜಿಯೋ ಜುಲೈ 5 ರಂದು 5ಜಿ ನೆಟ್‌ವರ್ಕ್ ಉಪಕರಣಗಳನ್ನು ಅಳವಡಿಸಿತ್ತು. ಜು. 21ರಂದ ಪ್ರಯೋಗ ನಡೆಸಲಾಯಿತು. 200 ಮೀಟರ್ ತ್ರಿಜ್ಯದಲ್ಲಿ 5ಜಿ ಸೇವೆ ಲಭಿಸಿದೆ. ಹೊರಾಂಗಣ ಸಣ್ಣ ಕೋಶಗಳು, ಡಿಸ್ಟ್ರಿಬ್ಯೂಟೆಡ್ ಅಂಟೆನಾ ಸಿಸ್ಟಮ್‌ಗಳನ್ನು 5ಜಿ ವ್ಯವಸ್ಥೆ ಹೊಂದಿತ್ತು. ಕಳೆದ ವರ್ಷದ ನವೆಂಬರ್‌ನಲ್ಲಿ ಬೆಂಗಳೂರಿನಲ್ಲಿ ಏರ್‌ಟೆಲ್ 5ಜಿ ಸೇವೆಯ ಪರೀಕ್ಷೆ ನಡೆಸಿತ್ತು.
ಪ್ರಯಾಣಿಕರು ಹೆಚ್ಚಿದರೂ ಏರದ ಮೆಟ್ರೋಗೆ ಆದಾಯ: ಮೆಟ್ರೋದಲ್ಲಿ ಜನರ ಓಡಾಟ ಹೆಚ್ಚುತ್ತಿದ್ದರೂ ಕೋವಿಡ್ ಪೂರ್ವದ ಆದಾಯ ಸ್ಥಿತಿಯನ್ನು ತಲುಪಲು ಇನ್ನೂ ಸಾಧ್ಯವಾಗಿಲ್ಲ. ಆದರೆ ಪ್ರಯಾಣೇತರ ಆದಾಯದಲ್ಲಿನ ಅಲ್ಪ ಏರಿಕೆ ನಮ್ಮ ಮೆಟ್ರೋಕ್ಕೆ ತುಸು ಚೇತರಿಕೆ ನೀಡಿದೆ.
ಕೋವಿಡ್ ಪೂರ್ವದಲ್ಲಿ ಅಂದರೆ 2020ರ ಜನವರಿ ತಿಂಗಳಿನಲ್ಲಿ 1.61 ಕೋಟಿ ಮಂದಿ ಮೆಟ್ರೋ ಸೇವೆ ಬಳಸಿದ್ದರು. ಇದರಿಂದ .35.22 ಕೋಟಿ ಆದಾಯ ಗಳಿಕೆ ಆಗಿತ್ತು. ಪ್ರಯಾಣೇತರ ಮೂಲಗಳಿಂದ .3.13 ಕೋಟಿಯನ್ನು ಬೆಂಗಳೂರು ಮೆಟ್ರೋ ನಿಗಮ ಸಂಗ್ರಹಿಸಿತ್ತು.
ಕಳೆದ ಜೂನ್‌ನಲ್ಲಿ 1.38 ಕೋಟಿ ಮಂದಿ ಮೆಟ್ರೋ ಸೇವೆ ಬಳಸಿದ್ದು .33.04 ಕೋಟಿ ಆದಾಯ ಸಂಗ್ರಹವಾಗಿದೆ. ಪ್ರಯಾಣೇತರ ಮೂಲಗಳಿಂದ .3.15 ಕೋಟಿ ಲಭಿಸಿದೆ. ಕಳೆದ ಎಂಟು ಹತ್ತು ತಿಂಗಳಿನಿಂದ ಪ್ರತಿ ತಿಂಗಳಲ್ಲೂ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯ ಎರಡಲ್ಲಿ ನಿರಂತರ ಏರಿಕೆ ದಾಖಲಾಗುತ್ತಿದ್ದರೂ ಕೋವಿಡ್ ಪೂರ್ವದ ದಿನಗಳ ಪ್ರಯಾಣಿಕರ ಸಂಖ್ಯೆ ಮತ್ತು ಆದಾಯ ಗಳಿಸಲು ನಮ್ಮ ಮೆಟ್ರೋ ವಿಫಲವಾಗಿದೆ. ಹೆಚ್ಚು ಕಡಿಮೆ ಶೇ.20ರಷ್ಟುಪ್ರಯಾಣಿಕರು ಮೆಟ್ರೋ ಸೇವೆಯಿಂದ ದೂರವೇ ಉಳಿದಿದ್ದಾರೆ.
ಕೋವಿಡ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ 2020ರ ಮಾಚ್‌ರ್ ಕೊನೆಯ ವಾರದಿಂದ ಮೆಟ್ರೋ ಸೇವೆ ಸ್ಥಗಿತಗೊಳಿಸಿದ್ದು, ಆ ಬಳಿಕ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ಹಲವು ತಿಂಗಳು ಮೆಟ್ರೋ ಸೇವೆ ಸ್ಥಗಿತ, ನಿರ್ಬಂಧಿತ ಸೇವೆ ಮುಂತಾದ ಕಾರಣಗಳಿಂದ ಮೆಟ್ರೋದ ಆದಾಯ ನೆಲಕಚ್ಚಿತ್ತು. ಎರಡನೇ ಅಲೆ ಕ್ಷೀಣಿಸುತ್ತಿದ್ದಂತೆ 2021ರ ಜುಲೈಯಲ್ಲಿ ಮೆಟ್ರೋ ಸೇವೆ ಮತ್ತೆ ಆರಂಭಗೊಂಡಿತ್ತು. ಮೆಟ್ರೋ ಸೇವೆ ಪೂರ್ಣ ಪ್ರಮಾಣದಲ್ಲಿ ಆರಂಭಗೊಂಡು ವರ್ಷ ತುಂಬಿದರೂ, ಮೆಟ್ರೋ ಮಾರ್ಗ ವಿಸ್ತರಣೆ ಗೊಂಡಿದ್ದರೂ ಕೂಡ ತನ್ನ ಕೋವಿಡ್ ಪೂರ್ವ ಆದಾಯ ಗಳಿಸಲು ನಮ್ಮ ಮೆಟ್ರೋ ವಿಫಲವಾಗಿದೆ.
2020ರ ಜನವರಿಯಲ್ಲಿ ಪ್ರತಿದಿನ ಸರಾಸರಿ 5.18 ಲಕ್ಷ ಪ್ರಯಾಣಿಕರು ಮೆಟ್ರೋ ಸೇವೆ ಬಳಸುತ್ತಿದ್ದರೆ ಕಳೆದ ಜೂನ್‌ನ ದೈನಂದಿನ ಸರಾಸರಿ ಪ್ರಯಾಣಿಕರ ಸಂಖ್ಯೆ 4.60 ಲಕ್ಷ ಮಾತ್ರವಿದೆ. ಕೋವಿಡ್ ಪೂರ್ವದಲ್ಲಿ ಯಲಚೇನಹಳ್ಳಿವರೆಗೂ ಇದ್ದ ಹಸಿರು ಮಾರ್ಗ 6.29 ಕಿಮೀ ವಿಸ್ತಾರಗೊಂಡು ಸಿಲ್‌್ಕ ಸಂಸ್ಥೆಯವರೆಗೆ, ಮೈಸೂರು ರಸ್ತೆವರೆಗೆ ಇದ್ದ ನೇರಳೆ ಮಾರ್ಗ 7.5 ಕಿಮೀ ವಿಸ್ತಾರಗೊಂಡು ಕೆಂಗೇರಿವರೆಗೂ ತಲುಪಿದೆ. ಆದರೂ ನಿರೀಕ್ಷಿತ ಆದಾಯ ತಲುಪಲು ಮೆಟ್ರೋಕ್ಕೆ ಸಾಧ್ಯವಾಗಿಲ್ಲ
ಮಿಯಾವಾಕಿ ಅರಣ್ಯಕ್ಕಾಗಿ ಜಾಗ ಹುಡುಕುತ್ತಿರುವ ಮೆಟ್ರೋ ನಿಗಮ
ಈ ಮಧ್ಯೆ ಕೋವಿಡ್‌ನ ಎಲ್ಲ ನಿರ್ಬಂಧಗಳು ರದ್ದಾಗಿದ್ದು, ಜನಜೀವನ ಸಾಮಾನ್ಯ ಸ್ಥಿತಿಗೆ ಬಂದಿದೆ. ಕೆಲ ಸಂಸ್ಥೆಗಳು ಮಾತ್ರ ವರ್ಕ್ ಫ್ರಮ್ ಹೋಮ್‌ಗೆ ಅವಕಾಶ ಕಲ್ಪಿಸಿದ್ದು, ಉಳಿದಂತೆ ಕಚೇರಿಯಿಂದಲೇ ಕಾರ್ಯ ನಿರ್ವಹಿಸುತ್ತಿವೆ. ಈ ಮಧ್ಯೆ ಮೆಟ್ರೋ ಕೂಡ ಪಾಸ್ ವ್ಯವಸ್ಥೆಯ ಮೂಲಕ ನಗರಕ್ಕೆ ಬಂದು ಹೋಗುವ ಜನರ ಬೇಡಿಕೆಗೆ ಸ್ಪಂದಿಸುವ ಕೆಲಸ ಮಾಡಿದೆ. ಆದರೂ ಕೋವಿಡ್ ಪೂರ್ವದ ಪ್ರಯಾಣಿಕರ ಸಂಖ್ಯೆ ತಲುಪಲು ಸಾಧ್ಯವಾಗಿಲ್ಲ.
ಆದರೆ ಪ್ರಯಾಣೇತರ ಆದಾಯದಲ್ಲಿ ತುಸು ಏರಿಕೆ ಆಗಿರುವುದು ಮೆಟ್ರೋ ಅಧಿಕಾರಿಗಳಿಗೆ ತುಸು ಖುಷಿ ತಂದಿದೆ. ಮೆಟ್ರೋ ಪ್ರಯಾಣೇತರ ಮೂಲಗಳಿಂದ ಆದಾಯ ಹೆಚ್ಚಿಸಲು ಸತತ ಪ್ರಯತ್ನ ನಡೆಸುತ್ತಿದೆ. ತನ್ನ ಜಾಗದಲ್ಲಿ ಜಾಹೀರಾತು ಪ್ರದರ್ಶನ, ಮಳಿಗೆ, ಕಿಯೋಸ್‌್ಕ ತೆರೆಯಲು ಅವಕಾಶ ಮಾಡಿಕೊಡುವ ಕ್ರಮಗಳನ್ನು ಕೈಗೊಂಡಿದೆ. ಪಾರ್ಕಿಂಗ್ ಅವಕಾಶ ಮಾಡಿಕೊಡುತ್ತಿದೆ.
ಕೋತಿಗಳ ತಾಣವಾಯ್ತಾ ನಮ್ಮ ಮೆಟ್ರೋ..?
ಪ್ರಯಾಣಿಕರ ಸಂಖ್ಯೆಯನ್ನು ಗಮನಿಸಿದರೆ ಶೇ.20ರಷ್ಟುಕೊರತೆ ಮುಂದುವರಿದಿದೆ. ಇದು ನಮ್ಮ ಆದಾಯದ ಮೇಲೂ ಪ್ರತಿಕೂಲ ಪರಿಣಾಮ ಬೀರಿದೆ. ಆದರೆ ಪ್ರಯಾಣೇತರ ಆದಾಯ ಹೆಚ್ಚಿರುವುದು ಖುಷಿ ತಂದಿದೆ. ನಾವು ಪ್ರಯಾಣೇತರ ಆದಾಯ ಹೆಚ್ಚಿಸಲು ಅನೇಕ ಕ್ರಮ ಕೈಗೊಂಡಿದ್ದೇವೆ. ಪಾರ್ಕಿಂಗ್‌ನಿಂದ ಹೆಚ್ಚಿನ ಹಣ ಸಂಗ್ರಹವಾಗಿದೆ.
-ಯಶವಂತ ಚೌವಾಣ್, ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ, ಬಿಎಂಆರ್‌ಸಿಎಲ್.
ವಿಭಾಗ - 2020 ಜನವರಿ - 2022 ಜೂನ್
ಪ್ರಯಾಣಿಕರಿಂದ -35.22 ಕೋಟಿ -33.22 ಕೋಟಿ
ಪ್ರಯಾಣಿಕೇತರ - .3.13 ಕೋಟಿ - 3.15 ಕೋಟಿ
ಪ್ರಯಾಣಿಕರ ಸಂಖ್ಯೆ - 1.61 ಕೋಟಿ - 1.38 ಕೋಟಿ
ಸರಾಸರಿ ದೈನಂದಿನ ಪ್ರಯಾಣಿಕರು - 5.19 ಲಕ್ಷ - 4.60 ಲಕ್ಷ
ವರದಿ: ರಾಕೇಶ್ ಎನ್.ಎಸ್.