ಇಂಟರ್ನೆಟ್‌ನಲ್ಲಿ ವೈರಲ್ ಆದ ವಿಡಿಯೋವೊಂದರಲ್ಲಿ, ಡೆಲಿವರಿ ಬಾಯ್ ತನ್ನ ಬ್ಯಾಗ್‌ನಲ್ಲಿ ಆಹಾರದ ಬದಲು ಸರಸ್ವತಿ ದೇವಿಯ ವಿಗ್ರಹವನ್ನು ಸಾಗಿಸುತ್ತಿರುವುದು ಕಂಡುಬಂದಿದೆ. ಈ ವಿಚಿತ್ರ ಸಾರಿಗೆ ವ್ಯವಸ್ಥೆಯು 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದು, ನೆಟ್ಟಿಗರ ಚರ್ಚೆ ಜೋರಿದೆ!

ಸಾಮಾನ್ಯವಾಗಿ ಡೆಲಿವರಿ ಬಾಯ್ ಬೆನ್ನ ಮೇಲಿರುವ ಬ್ಯಾಗ್ ಕಂಡರೆ ನಮಗೆ ನೆನಪಾಗುವುದು ಬಿಸಿ ಬಿಸಿ ಪಿಜ್ಜಾ ಅಥವಾ ಬಿರಿಯಾನಿ. ಆದರೆ ಈ ವೈರಲ್ ವಿಡಿಯೋದಲ್ಲಿ ದೃಶ್ಯವೇ ಉಲ್ಟಾ ಆಗಿದೆ! ಡೆಲಿವರಿ ಬಾಯ್ ತನ್ನ ಬ್ಯಾಗ್‌ನಲ್ಲಿ ಪಾರ್ಸೆಲ್ ಬದಲಿಗೆ ಜ್ಞಾನದೇವತೆ ಸರಸ್ವತಿ ದೇವಿಯ ಪ್ರತಿಮೆಯನ್ನೇ ಹೊತ್ತು ಸಾಗುತ್ತಿರುವುದು ಇಂಟರ್ನೆಟ್‌ನಲ್ಲಿ ವೈರಲ್ ಆಗಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಎಲ್ಲವೂ ನಾರ್ಮಲ್ ಅಂದುಕೊಂಡರೆ ಅಲ್ಲಿತ್ತು ಅಚ್ಚರಿ!

ಇನ್‌ಸ್ಟಾಗ್ರಾಮ್‌ನಲ್ಲಿ ಹರಿದಾಡುತ್ತಿರುವ ಈ ವಿಡಿಯೋದಲ್ಲಿ ಡೆಲಿವರಿ ಬಾಯ್ ಸ್ಕೂಟರ್‌ನಲ್ಲಿ ಸಾಗುತ್ತಿರುವುದು ಕಾಣಿಸುತ್ತದೆ. ಆದರೆ ಹತ್ತಿರ ಹೋಗಿ ನೋಡಿದಾಗ ಆತನ ಬ್ಯಾಗ್‌ನಿಂದ ಸರಸ್ವತಿ ದೇವಿಯ ವಿಗ್ರಹ ಇಣುಕುತ್ತಿದೆ. ಬಹುಶಃ ಯಾವುದೋ ಪೂಜೆಗಾಗಿ ದೇವಿಯನ್ನು ಅತ್ಯಂತ ಎಚ್ಚರಿಕೆಯಿಂದ ಹೀಗೆ ಸಾಗಿಸಲಾಗುತ್ತಿತ್ತು. ಈ ವಿಚಿತ್ರ ಸಾರಿಗೆ ವ್ಯವಸ್ಥೆಯನ್ನು ಕಂಡು ನೆಟ್ಟಿಗರು ದಂಗಾಗಿದ್ದಾರೆ.

2 ಮಿಲಿಯನ್ ವೀಕ್ಷಣೆ: ಇಂಟರ್ನೆಟ್‌ನಲ್ಲಿ ಲೈಕ್ಸ್ ಸುರಿಮಳೆ:

ಈ ವಿಡಿಯೋ ಈಗಾಗಲೇ 20 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹವಾ ಎಬ್ಬಿಸಿದೆ. ವಿಗ್ರಹದ ರಕ್ಷಣೆಗಾಗಿ ಮತ್ತು ಸುಲಭವಾಗಿ ಸಾಗಿಸಲು ಡೆಲಿವರಿ ಬ್ಯಾಗ್ ಬಳಸಿದ ಆತನ ಐಡಿಯಾಕ್ಕೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಇನ್ನು ಕೆಲವರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದೇವಿಯ ಹಿಂದೆ ಮತ್ತೊಬ್ಬ ಬೈಕರ್ ಕೂಡ ರಕ್ಷಣೆ ನೀಡುತ್ತಾ ಸಾಗುತ್ತಿರುವುದು ಈ ಸನ್ನಿವೇಶದ ವಿಶೇಷತೆಯಾಗಿತ್ತು.

View post on Instagram

'ದೇವಿಯೇ ಆನ್‌ಲೈನ್‌ಗೆ ಬಂದಳೇ?': ನೆಟ್ಟಿಗರ ಫನ್ನಿ ಕಾಮೆಂಟ್‌ಗಳು

ಈ ವಿಡಿಯೋ ನೋಡಿ ಸುಮ್ಮನಿರದ ಕಾಮೆಂಟ್ ಬಾಕ್ಸ್ ಶೂರರು ಭರ್ಜರಿ ಕಾಮೆಂಟ್ ಮಾಡಿದ್ದಾರೆ. 'ಇದು ಕಲಿಯುಗ ಸಹೋದರ, ಈಗ ದೇವತೆಗಳೂ ಆನ್‌ಲೈನ್‌ನಲ್ಲಿ ಬರ್ತಿದ್ದಾರೆ' ಎಂದು ಒಬ್ಬರು ಕಿಚಾಯಿಸಿದರೆ, 'ನಾನು ತಂಪಾದ ಗಾಳಿಯಲ್ಲಿ ಹಾರುತ್ತಾ ಮನೆಗೆ ಹೋಗುತ್ತಿದ್ದೇನೆ ಎಂದು ಸರಸ್ವತಿ ಮಾ ಹೇಳುತ್ತಿರಬಹುದು' ಎಂದು ಇನ್ನೊಬ್ಬರು ತಮಾಷೆ ಮಾಡಿದ್ದಾರೆ. 'ನಮ್ಮ ಕಡೆ ಬ್ಯಾಂಡ್ ಬಾಜಾ ಸಮೇತ ದೇವಿಯನ್ನು ತರುತ್ತಾರೆ, ಆದರೆ ಇಲ್ಲಿ ಡೆಲಿವರಿ ಬ್ಯಾಗ್‌ನಲ್ಲಿ ಬರ್ತಿದ್ದಾರೆ!' ಎನ್ನುವ ಕಾಮೆಂಟ್‌ಗಳು ನಗು ತರಿಸುತ್ತಿವೆ.

ಕೆಲವರು ಇದನ್ನು ತಮಾಷೆ ಎಂದು ಪರಿಗಣಿಸಿದರೆ, ಇನ್ನು ಕೆಲವರು ಇದನ್ನು ಸಮರ್ಥಿಸಿಕೊಂಡಿದ್ದಾರೆ. ‘ಡೆಲಿವರಿ ಏಜೆಂಟ್ ತನ್ನ ಮನೆಗೆ ಅಥವಾ ಪೂಜಾ ಸ್ಥಳಕ್ಕೆ ಸುರಕ್ಷಿತವಾಗಿ ವಿಗ್ರಹ ಒಯ್ಯಲು ಈ ಮಾರ್ಗ ಅನುಸರಿಸಿರಬಹುದು, ಇದರಲ್ಲಿ ತಪ್ಪೇನಿದೆ?’ಎಂದು ಗಂಭೀರವಾದ ಪ್ರಶ್ನೆಯನ್ನೂ ಎತ್ತಿದ್ದಾರೆ. ಏನೇ ಇರಲಿ, ಈ ವಿಡಿಯೋ ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡುತ್ತಿದೆ.