ಸೋಶಿಯಲ್ ಮೀಡಿಯಾದಲ್ಲಿ ಚಿಂಪಾಂಜಿ ವಿಡಿಯೋ ಒಂದು ವೈರಲ್ ಆಗಿದೆ. ಮನುಷ್ಯನಿಗಿಂತ ಹೆಚ್ಚು ಬುದ್ಧಿವಂತೆಯಾಗಿರುವ ಈ ಚಿಂಪಾಂಜಿ ಕೆಲ್ಸ ಎಲ್ಲರ ಗಮನ ಸೆಳೆದಿದೆ.
ಝೂ (Zoo)ನಲ್ಲಿ ಚಿಂಪಾಂಜಿ ನೋಡಿ, ದೂರದಿಂದ್ಲೇ ಅದಕ್ಕೊಂದಿಷ್ಟು ಕಾಟಕೊಟ್ಟು, ಅದನ್ನು ಸತಾಯಿಸಿ ಮಜ ತೆಗೆದುಕೊಳ್ಳುವವರೇ ಹೆಚ್ಚು. ಕಾಡಿಗೆ ಹೋಗಿ ಚಿಂಪಾಂಜಿ (chimpanzee) ಹುಡುಕಿ, ಅದ್ರ ಸ್ನೇಹ ಬೆಳೆಸಿ, ಅದ್ರ ಸ್ವಭಾವ ತಿಳಿದುಕೊಳ್ಳುವವರು ಬೆರಳೆಣಿಕೆಯಲ್ಲಿದ್ದಾರೆ. ಫೋಟೋಗ್ರಾಫರ್ಸ್, ಕಾಡು ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಇರುವ ಜನರು ಮಾತ್ರ ಚಿಂಪಾಂಜಿ ಸೇರಿದಂತೆ ಇತರ ಪ್ರಾಣಿಗಳ ಸ್ವಭಾವ, ಅವರ ದಿನಚರಿ ತಿಳಿದುಕೊಳ್ಳುವ ಪ್ರಯತ್ನ ನಡೆಸ್ತಾರೆ. ಚಿಂಪಾಂಜಿ ಅಂದ ತಕ್ಷಣ, ಡಾ. ಬ್ರೋ (Dr. Bro) ಬ್ಯಾಂಕಾಂಕ್ಗೆ ಹೋಗಿ ಚಿಂಪಾಂಜಿಯಿಂದ ಮುತ್ತು ಪಡೆದಿದ್ದು ನೆನಪಿಗೆ ಬರುತ್ತೆ. ಚಿಂಪಾಂಜಿಗಳು ಮನುಷ್ಯನನ್ನು ಹೋಲುವ ಸ್ವಭಾವ ಹೊಂದಿರುತ್ವೆ. ಚಿಂಪಾಂಜಿಗಳು ಅಸಾಧಾರಣ ಬುದ್ಧಿವಂತರು.
ಮಂಗನಿಂದ ಮಾನವ ಎನ್ನಲಾಗುತ್ತದೆ. ಚಿಂಪಾಂಜಿ ಕೂಡ ನಮ್ಮ ಹತ್ತಿರದ ಸಂಬಂಧಿಗಳೇ ಆಗಿವೆ. ಅವು ತಮ್ಮ ಜೀನ್ಗಳಲ್ಲಿ ಸುಮಾರು ಶೇಕಡಾ 98 ರಷ್ಟನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತವೆ. ಮಾನವ ಮತ್ತು ಚಿಂಪಾಂಜಿಗಳು 4 ರಿಂದ 8 ಮಿಲಿಯನ್ ವರ್ಷಗಳ ಹಿಂದೆ ವಾಸಿಸುತ್ತಿದ್ದ ಸಾಮಾನ್ಯ ಪೂರ್ವಜರಿಂದ ವಿಕಸನಗೊಂಡಿವೆ ಎಂಬ ನಂಬಿಕೆ ಕೂಡ ಇದೆ. ಚಿಂಪಾಂಜಿಗಳು ಮಾನವನಂತೆ ವರ್ತಿಸೋದು ಸುಳ್ಳಲ್ಲ. ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಚಿಂಪಾಂಜಿಯ ಅನೇಕ ವಿಡಿಯೋಗಳು ವೈರಲ್ ಆಗ್ತಾನೆ ಇರುತ್ವೆ. ಈಗ ಮತ್ತೊಂದು ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಅದ್ರಲ್ಲಿ ಚಿಂಪಾಂಜಿ ತನ್ನ ಫೋಟೋವನ್ನು ಚೆಕ್ ಮಾಡ್ತಿದೆ.
ಪ್ರಭಾತ್ ಕುಮಾರ್ ತಮ್ಮ instaphotographerhub ಹೆಸರಿನ ಇನ್ಸ್ಟಾ ಖಾತೆಯಲ್ಲಿ ಚಿಂಪಾಂಜಿಯೊಂದರ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋದಲ್ಲಿರುವ ಚಿಂಪಾಂಜಿ ಹೆಸರು ಚೋಸಾ (Tchossa). ವಯಸ್ಸು ಮೂರು ವರ್ಷ. ಆದ್ರೆ ಅವಳ ಬುದ್ಧಿ ಶಕ್ತಿ ಅಸಾಧಾರಣವಾಗಿದೆ. ಮನುಷ್ಯ ಮಾಡುವ ಕೆಲಸವನ್ನು ಗಮನಿಸುವ ಚೋಸಾ, ನಂತ್ರ ಅದನ್ನು ಅನುಸರಿಸುತ್ತದೆ. ಪೋಸ್ಟ್ ಮಾಡಿದ ವಿಡಿಯೋದಲ್ಲಿ ಚೋಸಾ ಬುದ್ಧಿವಂತಿಕೆಯನ್ನು ನೀವು ಕಾಣ್ಬಹುದು. ಮೊದಲು ಫೋಟೋಗ್ರಾಫರ್ ಕ್ಯಾಮರಾ ನೋಡ್ತಿರುವ ಚೋಸಾ, ತನ್ನ ಫೋಟೋಗಳನ್ನು ಚೆಕ್ ಮಾಡ್ತಿದ್ದಾಳೆ. ನಂತ್ರ ಫೋಟೋಗ್ರಾಫರ್ ಕೈನಲ್ಲಿ ನೀರು ಕುಡಿಯುವ ಚೋಸಾ, ನೀರು ಕುಡಿಸಿದ ಕೈಗಳನ್ನು ಕ್ಲೀನ್ ಮಾಡ್ತಾಳೆ. ಅಷ್ಟೇ ಅಲ್ಲ ಶೂಗೆ ಲೇಸ್ ಹಾಕೋದು ಹೇಗೆ ಎಂಬುದನ್ನು ತಿಳಿದುಕೊಳ್ಳುವ ಅದು ನಂತ್ರ ತಾನೂ ಲೇಸ್ ಹಾಕಲು ಮುಂದಾಗ್ತಾಳೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. 2 ಲಕ್ಷಕ್ಕೂ ಹೆಚ್ಚು ಲೈಕ್ಸ್ ಬಂದಿದೆ. ಕೆಲ ಬಳಕೆದಾರರು ವಿಡಿಯೋ ನೋಡಿ ಭಾವುಕರಾಗಿದ್ದಾರೆ. ಅವರ ಮುಂದೆ ನಾನು ತುಂಬಾ ಸಣ್ಣವರು. ಅವರು ಅದ್ಭುತ ಜೀವಿಗಳು. ಅವರನ್ನು ಚಿಕ್ಕಂದಿನಿಂದಲೇ ಮನುಷ್ಯರಂತೆ ನಡೆಸಿಕೊಂಡಿದ್ದರೆ, ನಾವು ಅವರಿಂದ ತುಂಬಾ ಕಲಿಯುತ್ತಿದ್ದೆವು, ಮನುಷ್ಯ ಯಾವಾಗಲೂ ಒಳ್ಳೆಯದನ್ನು ತ್ಯಜಿಸುತ್ತಾನೆ, ಕೆಟ್ಟದ್ದನ್ನು ಬೇಗನೆ ಕಲಿಯುತ್ತಾನೆ ಎಂದು ಒಬ್ಬರು ಕಮೆಂಟ್ ಹಾಕಿದ್ದಾರೆ. ಚಿಂಪಾಂಜಿಯನ್ನು ಅರ್ಥಮಾಡಿಕೊಳ್ಳಲು ತಾಳ್ಮೆ ಅಗತ್ಯ. ತಾಳ್ಮೆಯಿಂದ ಅವರ ಜೊತೆಗಿದ್ದರೆ ಅವರು ತಮ್ಮ ಎಲ್ಲಾ ಬುದ್ಧಿವಂತಿಕೆಯನ್ನು ತೋರಿಸುತ್ತಾರೆ ಎಂದು ಇನ್ನೊಬ್ಬರು ಕಮೆಂಟ್ ಮಾಡಿದ್ದಾರೆ.
ಕೆಲ ತಿಂಗಳ ಹಿಂದೆ ನೀರಿನಲ್ಲಿ ಸ್ನಾನ ಮಾಡ್ತಿದ್ದ ಜೋಡಿ ಚಿಂಪಾಂಜಿ ವಿಡಿಯೋ ವೈರಲ್ ಆಗಿತ್ತು. ಮಳೆ ಬರ್ತಿದ್ದಂತೆ ಖುಷಿಯಾಗಿದ್ದ ಚಿಂಪಾಂಜಿಗಳು, ಮೈ ಉಜ್ಜಿಕೊಂಡು ಸ್ನಾನ ಮಾಡಿದ್ದವು. ಎರಡು ವರ್ಷದ ಹಿಂದೆ ಸಿಗರೇಟ್ ಸೇದುತ್ತಿದ್ದ ಚಿಂಪಾಂಜಿ ಎಲ್ಲರ ಗಮನ ಸೆಳೆದಿತ್ತು. ಚಿಂಪಾಂಜಿಗಳು ಕಾಡಿನಲ್ಲಿ ಸುಮಾರು 40 ರಿಂದ 50 ವರ್ಷ ಬದುಕುತ್ತವೆ. ಝೂಗಳಲ್ಲಿ ಉತ್ತಮ ವ್ಯವಸ್ಥೆ ಇದ್ರೆ ಅವರ ಜೀವಿತಾವದಿ 60 ವರ್ಷಗಳಾಗಿವೆ.
