ಭಾರತದ ಮುಖ್ಯ ನ್ಯಾಯಮೂರ್ತಿಗಳ ಹೇಳಿಕೆಗೆ ಪ್ರತಿಭಟನಾತ್ಮಕವಾಗಿ ಶುರುವಾದ ಕಾಕ್ರೋಚ್ ಜನತಾ ಪಾರ್ಟಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಜನಪ್ರಿಯತೆ ಪಡೆಯುತ್ತಿದೆ. ರಾಜಕೀಯ ಷಡ್ಯಂತ್ರಗಳ ಆರೋಪದ ಬೆನ್ನಲ್ಲೇ ಇದೀಗ ಕಾಕ್ರೋಚ್ ಪಾರ್ಟಿಯ ಎಕ್ಸ್ ಖಾತೆ ಬ್ಲಾಕ್ ಆಗಿದೆ.
ನವದೆಹಲಿ (ಮೇ.21) ಭಾರತದಲ್ಲಿ ಜೆನ್‌ಝಿ ಹೋರಾಟ ನಡೆಯಬೇಕು ಅನ್ನೋದು ಕಾಂಗ್ರೆಸ್, ಆಮ್ ಆದ್ಮಿ ಪಾರ್ಟಿ ಸೇರಿದಂತೆ ಹಲವು ವಿಪಕ್ಷಗಳ ಆಗ್ರಹವಾಗಿದೆ. ಇದಕ್ಕಾಗಿ ಹಲವು ಪ್ರಯತ್ನಗಳು ನಡೆದಿದೆ. ನೇಪಾಳ, ಬಾಂಗ್ಲಾದೇಶ, ಶ್ರೀಲಂಕಾ ರೀತಿ ಜೆನ್‌ಝಿ ಹೋರಾಟದಲ್ಲಿ ಕೇಂದ್ರ ಸರ್ಕಾರ ಉರುಳಿ ಬೀಳಬೇಕು ಅನ್ನೋ ಕನಸಿಟ್ಟುಕೊಂಡು ಹಲವು ಪ್ರಯತ್ನಗಳು ನಡೆದಿದೆ. ಸೋಶಿಯಲ್ ಮೀಡಿಯಾ ಮೂಲಕ ಹಲವು ರೀತಿಯಲ್ಲಿ ಹೋರಾಟ ನಡೆಯುತ್ತಿದೆ. ಇದರ ನಡುವೆ ಭಾರತದ ಮುಖ್ಯ ನ್ಯಾಯಮೂರ್ತಿಗಳ ನೀಡಿದ ಹೇಳಿಕೆಗೆ ಪ್ರತಿಭಟನಾ ರೂಪವಾಗಿ ಈ ಕಾಕ್ರೋಚ್ ಪಾರ್ಟಿ ಹುಟ್ಟಿಕೊಂಡಿದೆ. ಅಷ್ಟೇ ವೇಗದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ. ಇನ್‌ಸ್ಟಾಗ್ರಾಂ ಫಾಲೋವರ್ಸ್ ಸಂಖ್ಯೆಯಲ್ಲಿ ಕೆಲವೇ ದಿನದಲ್ಲಿ ಬಿಜೆಪಿ ಖಾತೆಯನ್ನೇ ಹಿಂದಿಕ್ಕಿದ ಈ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆ ಭಾರತದಲ್ಲಿ ಬ್ಲಾಕ್ ಆಗಿದೆ.

ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆ ಬ್ಲಾಕ್
ಭಾರಿ ಜನಪ್ರಿಯತೆ ಪಡೆಯುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಕೆಲವೇ ದಿನಗಳಲ್ಲಿ ಹಲವು ರಾಜಕೀಯ ಪಾರ್ಟಿಗಳ ಸೋಶಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆ ಹಿಂದಿಕ್ಕಿತ್ತು. ಎಕ್ಸ್ ತಾಣಧಲ್ಲಿ ಲಕ್ಷಕ್ಕೂ ಅಧಿಕ ಫಾಲೋವರ್ಸ್ ಮೂಲಕ ಸುಂಟರಗಾಳಿ ಎಬ್ಬಿಸಿದ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿದೆ.
ಬ್ಲಾಕ್ ಖಚಿತಪಡಿಸಿದ ಅಭಿಜಿತ್ ದೀಪ್ಕೆ
ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ಎಕ್ಸ್ ಖಾತೆ ಬ್ಲಾಕ್ ಆಗಿರುವುದನ್ನು ಖಚಿತಪಡಿಸಿದ್ದಾರೆ. ನಿರೀಕ್ಷೆಯಂತೆ ಕಾಕ್ರೋಚ್ ಜನತಾ ಪಾರ್ಟಿಯ ಎಕ್ಸ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಟ್ವೀಟ್ ಮಾಡಿದ್ದಾರೆ. ಕಾಕ್ರೋಚ್ ಜನತಾ ಪಾರ್ಟಿ ಎಕ್ಸ್ ಖಾತೆಯನ್ನು ಮೇ.16ರಂದು ಆರಂಭಿಸಲಾಗಿತ್ತು. ಮೇ.20ರ ವೇಳೆಗೆ ಅಂದರೆ ಕೇವಲ ನಾಲ್ಕೇ ದಿನದಲ್ಲಿ 200ಕೆ ಫಾಲೋವರ್ಸ್ ಹೊಂದಿತ್ತು. ಇದೇ ಕಾರಣಕ್ಕೆ ನಾಲ್ಕೇ ದಿನಕ್ಕೆ ಎಕ್ಸ್ ಖಾತೆ ನಿರ್ಬಂಧಿಸಲಾಗಿದೆ ಎಂದು ಅಭಿಜಿತ್ ದೀಪ್ಕೆ ಹೇಳಿದ್ದಾರೆ.

ಏನಿದು ಕಾಕ್ರೋಚ್ ಜನತಾ ಪಾರ್ಟಿ
ಭಾರತದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಪ್ರಕರಣ ಒಂದರ ವಿಚಾರಣೆ ವೇಳೆ ಕೆಲ ಅಂಶಗಳನ್ನು ಗಮನಕ್ಕೆ ತಂದಿದ್ದರು. ಹಿರಿಯ ವಕೀಲ ಸ್ಥಾನ ಪಡೆಯಲು ಸಲ್ಲಿಸಿದ ಅರ್ಜಿ ಕುರಿತು ವಿಚಾರಣೆಯಲ್ಲಿ ವಕೀಲಸರು ಅನುಸರಿಸಿದ ಮಾರ್ಗ, ನಡೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದ ಮುಖ್ಯ ನ್ಯಾಯಮೂರ್ತಿಗಳು, ಕೆಲ ಅಂಶಗಳ ಉಲ್ಲೇಖ ಮಾಡಿದ್ದರು. ಈ ವೇಳೆ ಕೆಲ ಯುವಕರಿದ್ದಾರೆ. ಅವರಿಗೆ ಉದ್ಯೋಗ ಸಿಗುವುದಿಲ್ಲ, ಸ್ಥಾನ ಸಿಗುವುದಿಲ್ಲ. ಈ ವೇಳೆ ಸೋಶಿಯಲ್ ಮೀಡಿಯಾ, ಸಾಮಾಜಿಕ ಕಾರ್ಯಕರ್ತ ಸೇರಿದಂತೆ ಹಲವು ಅವತಾರಗಳನ್ನು ಎತ್ತಿ ಎಲ್ಲರ ಮೇಲೆ ದಾಳಿ ಮಾಡಲು ಆರಂಭಿಸುತ್ತಾರೆ ಎಂದಿದ್ದರು. ಈ ಮಾತಿನ ಬೆನ್ನಲ್ಲೇ ಪ್ರತಿಭಟನಾ ರೂಪವಾಗಿ ಕಾಕ್ರೋಚ್ ಜನತಾ ಪಾರ್ಟಿ ಖಾತೆಯನ್ನು ಸೋಶಿಯಲ್ ಮೀಡಿಯಾದಲ್ಲಿ ಆರಂಭಿಸಲಾಗಿದೆ. ಅಭಿಜಿತ್ ದೀಪ್ಕೆ ಈ ಸೋಶಿಯಲ್ ಮೀಡಿಯಾ ಮೂಲಕ ಖಾತೆ ಆರಂಭಿಸಿ ಭಾರಿ ಸಂಚಲನ ಸೃಷ್ಟಿಸಿದ್ದರು.
ಇನ್‌ಸ್ಟಾದಲ್ಲಿ ಬಿಜಪಿ ಹಿಂದಿಕ್ಕಿದ ಕಾಕ್ರೋಚ್ ಜನತಾ ಪಾರ್ಟಿ
ನಾಲ್ಕೇ ದಿನದಲ್ಲಿ ಕಾಕ್ರೋಚ್ ಜನತಾ ಪಾರ್ಟಿ ಭಾರಿ ಕೋಲಾಹಲ ಸೃಷ್ಟಿಸಿದೆ. ಕಾಕ್ರೋಚ್ ಜನತಾ ಪಾರ್ಟಿ ಇನ್‌ಸ್ಟಾಗ್ರಾಂ ಖಾತೆ 13.2 ಮಿಲಿಯನ್ ಫಾಲೋವರ್ಸ್ ಪಡೆದಿದೆ. ಇತ್ತ ಬಿಜೆಪಿ 8.8 ಮಿಲಿಯನ್ ಫಾಲೋವರ್ಸ್ ಹೊಂದಿದೆ. ಬಿಜೆಪಿ ಖಾತೆಯನ್ನು ಹಿಂದಿಕ್ಕಿದ ಕಾಕ್ರೋಚ್ ಜನತಾ ಪಾರ್ಟಿಗೆ ಆಪ್ ನಾಯಕ ಮನೀಶ್ ಸಿಸೋಡಿಯಾ ಸೇರಿದಂತೆ ಹಲವು ನಾಯಕರು ಭಾರಿ ಬೆಂಬಲ ಸೂಚಿಸಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ಕಾಕ್ರೋಚ್ ಪಾರ್ಟಿ ಭಾರಿ ಕೋಲಾಹಲ ಸೃಷ್ಟಿಸಿದೆ.


