ಭಾರತೀಯರ ಮದುವೆ ಎಂದರೆ ಅದ್ಧೂರಿತನಕ್ಕೆ ಹೆಸರುವಾಸಿ. ಅದರಲ್ಲೂ ಬಿಲಿಯನೇರ್ ಕುಟುಂಬಗಳ ಮದುವೆ ಅಂದರೆ ಕೇಳಬೇಕೇ? ಇದೀಗ ಭಾರತೀಯ ಬಿಲಿಯನೇರ್ ಕುಟುಂಬವೊಂದು ವಿಯೆಟ್ನಾಂನಲ್ಲಿ ಆಯೋಜಿಸಲು ಸಿದ್ಧವಾಗಿರುವ ಅದ್ಧೂರಿ ಮದುವೆ ಎಲ್ಲರ ಗಮನ ಸೆಳೆಯುತ್ತಿದೆ.
ಭಾರತೀಯರ ಮದುವೆ ಎಂದರೆ ಅದ್ಧೂರಿತನಕ್ಕೆ ಹೆಸರುವಾಸಿ. ಅದರಲ್ಲೂ ಬಿಲಿಯನೇರ್ ಕುಟುಂಬಗಳ ಮದುವೆ ಅಂದರೆ ಕೇಳಬೇಕೇ? ಇದೀಗ ಭಾರತೀಯ ಬಿಲಿಯನೇರ್ ಕುಟುಂಬವೊಂದು ವಿಯೆಟ್ನಾಂನಲ್ಲಿ ಆಯೋಜಿಸಲು ಸಿದ್ಧವಾಗಿರುವ ಅದ್ಧೂರಿ ಮದುವೆ ಎಲ್ಲರ ಗಮನ ಸೆಳೆಯುತ್ತಿದೆ. ಬರೋಬ್ಬರಿ ₹47 ಕೋಟಿ ವೆಚ್ಚ, 1,400 ಅತಿಥಿಗಳು, ಚಾರ್ಟರ್ ವಿಮಾನಗಳು ಹಾಗೂ ಐಷಾರಾಮಿ ರೆಸಾರ್ಟ್‌ಗಳ ನಡುವೆ ನಡೆಯಲಿರುವ ಈ ವಿವಾಹ ವಿಯೆಟ್ನಾಂನಲ್ಲಿ ಇದುವರೆಗೆ ನಡೆದ ಅತಿದೊಡ್ಡ ಭಾರತೀಯ ಮದುವೆಯಾಗುವ ಸಾಧ್ಯತೆ ಇದೆ.
₹47 ಕೋಟಿ ವೆಚ್ಚದ ಮದುವೆ
ವಿಯೆಟ್ನಾಂನ ಪ್ರಸಿದ್ಧ ಕರಾವಳಿ ನಗರ ನ್ಹಾ ಟ್ರಾಂಗ್‌ನಲ್ಲಿ ಡಿಸೆಂಬರ್ 2026ರಲ್ಲಿ ನಾಲ್ಕು ದಿನಗಳ ಕಾಲ ಈ ಅದ್ಧೂರಿ ವಿವಾಹ ಸಮಾರಂಭ ನಡೆಯಲಿದೆ. ಕಾರ್ಯಕ್ರಮಕ್ಕೆ 130 ಶತಕೋಟಿಗೂ ಹೆಚ್ಚು ವಿಯೆಟ್ನಾಮೀಸ್ ಡಾಂಗ್ (VND), ಅಂದರೆ ಸುಮಾರು ₹47 ಕೋಟಿ ವೆಚ್ಚವಾಗುವ ನಿರೀಕ್ಷೆಯಿದೆ. ಸಾಂಪ್ರದಾಯಿಕ ಭಾರತೀಯ ವಿವಾಹ ವಿಧಿವಿಧಾನಗಳ ಜೊತೆಗೆ ಆರತಕ್ಷತೆ, ಸಂಗೀತ ಹಾಗೂ ವಿವಿಧ ಮನರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಕಾರ್ಯಕ್ರಮವನ್ನು ಸುಗಮವಾಗಿ ನಡೆಸಲು 600ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡಲಿದ್ದಾರೆ.
ಚಾರ್ಟರ್ ವಿಮಾನದಲ್ಲಿ 1,400 ಅತಿಥಿಗಳು
ಈ ಮದುವೆಯ ಪ್ರಮುಖ ಆಕರ್ಷಣೆಗಳಲ್ಲಿ ಅತಿಥಿಗಳ ಪ್ರಯಾಣವೂ ಒಂದು. ಭಾರತದಿಂದ ಬರಲಿರುವ ಸುಮಾರು 1,400 ಅತಿಥಿಗಳನ್ನು ಚಾರ್ಟರ್ ವಿಮಾನಗಳ ಮೂಲಕ ವಿಯೆಟ್ನಾಂನ ಖಾನ್ ಹೋವಾ ಪ್ರಾಂತ್ಯದಲ್ಲಿರುವ ಕ್ಯಾಮ್ ರಾನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರೆತರಲಾಗುತ್ತದೆ. ಅಲ್ಲಿಂದ ಅತಿಥಿಗಳನ್ನು ನ್ಹಾ ಟ್ರಾಂಗ್‌ನ ಐಷಾರಾಮಿ ರೆಸಾರ್ಟ್‌ಗೆ ಕರೆದೊಯ್ಯಲಾಗುತ್ತದೆ. ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅತಿಥಿಗಳು ನಾಲ್ಕು ರಾತ್ರಿಗಳ ಕಾಲ ನ್ಹಾ ಟ್ರಾಂಗ್‌ನಲ್ಲಿ ತಂಗಲಿದ್ದಾರೆ. ಬ್ಲೂ ಲೆಮನ್ ವಿಯೆಟ್ನಾಂ ಕಂಪನಿ ಲಿಮಿಟೆಡ್, ಅಂತಾರಾಷ್ಟ್ರೀಯ ಪಾಲುದಾರರ ಸಹಯೋಗದೊಂದಿಗೆ ಈ ಬೃಹತ್ ಕಾರ್ಯಕ್ರಮದ ವ್ಯವಸ್ಥೆಗಳನ್ನು ಸಂಯೋಜಿಸುತ್ತಿದೆ.
ವಿಯೆಟ್ನಾಂನಲ್ಲೇ ಅತಿ ದೊಡ್ಡ ಭಾರತೀಯ ಮದುವೆ?
ಆಯೋಜಕರ ಪ್ರಕಾರ, ಮುಂಬರುವ ಈ ಮದುವೆ ವಿಯೆಟ್ನಾಂನಲ್ಲಿ ನಡೆದ ಅತಿದೊಡ್ಡ ಭಾರತೀಯ ವಿವಾಹವಾಗುವ ನಿರೀಕ್ಷೆಯಿದೆ. ಈ ಹಿಂದೆ ವಿಯೆಟ್ನಾಂನ ಡಾ ನಾಂಗ್ ಸೇರಿದಂತೆ ವಿವಿಧ ನಗರಗಳಲ್ಲಿ ನಡೆದ ಭಾರತೀಯ ಡೆಸ್ಟಿನೇಶನ್ ವೆಡ್ಡಿಂಗ್‌ಗಳಲ್ಲಿ ಸಾಮಾನ್ಯವಾಗಿ 300ರಿಂದ 500 ಅತಿಥಿಗಳು ಭಾಗವಹಿಸುತ್ತಿದ್ದರು. ಆದರೆ ಈ ಬಾರಿ 1,400 ಮಂದಿ ಆಗಮಿಸುತ್ತಿರುವುದರಿಂದ ಹಿಂದಿನ ದಾಖಲೆಗಳನ್ನು ಮೀರಿಸುವ ಸಾಧ್ಯತೆಯಿದೆ.
ಭಾರತದಿಂದಲೇ ಬರಲಿದ್ದಾರೆ ಬಾಣಸಿಗರು
ವಿದೇಶದಲ್ಲಿ ಮದುವೆ ನಡೆಯುತ್ತಿದ್ದರೂ ಆಹಾರದ ವಿಚಾರದಲ್ಲಿ ಭಾರತೀಯ ಪರಂಪರೆಗೆ ಯಾವುದೇ ಕೊರತೆಯಾಗದಂತೆ ಕುಟುಂಬ ಸಿದ್ಧತೆ ಮಾಡಿಕೊಂಡಿದೆ. ಅತಿಥಿಗಳಿಗೆ ಊಟ ತಯಾರಿಸಲು ಭಾರತದಿಂದಲೇ ವಿಶೇಷ ಬಾಣಸಿಗರ ತಂಡವನ್ನು ವಿಯೆಟ್ನಾಂಗೆ ಕರೆತರಲಾಗುತ್ತದೆ. ಮದುವೆಯ ನಾಲ್ಕು ದಿನಗಳ ಅವಧಿಯಲ್ಲಿ ಅತಿಥಿಗಳಿಗೆ ಭಾರತೀಯ ಶೈಲಿಯ ವಿವಿಧ ಖಾದ್ಯಗಳನ್ನು ಈ ತಂಡ ಸಿದ್ಧಪಡಿಸಲಿದೆ.
600ಕ್ಕೂ ಹೆಚ್ಚು ಸಿಬ್ಬಂದಿ, ಸರ್ಕಾರಿ ಇಲಾಖೆಗಳ ಸಹಕಾರ
ಇಷ್ಟು ದೊಡ್ಡ ಮಟ್ಟದ ಕಾರ್ಯಕ್ರಮವನ್ನು ಯಾವುದೇ ಸಮಸ್ಯೆಯಿಲ್ಲದೆ ನಡೆಸಲು ವಿಯೆಟ್ನಾಂನ ವಿವಿಧ ಸರ್ಕಾರಿ ಇಲಾಖೆಗಳು ಸಹಕಾರ ನೀಡುತ್ತಿವೆ. ಖಾನ್ ಹೋವಾ ಪ್ರಾಂತ್ಯದ ಸಂಸ್ಕೃತಿ ಇಲಾಖೆ, ಪ್ರಾಂತೀಯ ಪೀಪಲ್ಸ್ ಕಮಿಟಿ, ಕ್ರೀಡೆ ಮತ್ತು ಪ್ರವಾಸೋದ್ಯಮ ಇಲಾಖೆ, ಕಸ್ಟಮ್ಸ್, ವಲಸೆ ಇಲಾಖೆ ಹಾಗೂ ಪೊಲೀಸರು ಕಾರ್ಯಕ್ರಮದ ಲಾಜಿಸ್ಟಿಕ್ಸ್ ಮತ್ತು ಭದ್ರತಾ ವ್ಯವಸ್ಥೆಗಳನ್ನು ಸಮನ್ವಯಗೊಳಿಸುತ್ತಿದ್ದಾರೆ.
ಭಾರತೀಯ ಶ್ರೀಮಂತರಿಗೆ ನ್ಹಾ ಟ್ರಾಂಗ್ ಯಾಕೆ ಇಷ್ಟ?
ಇತ್ತೀಚಿನ ವರ್ಷಗಳಲ್ಲಿ ವಿಯೆಟ್ನಾಂ ಭಾರತೀಯ ಪ್ರವಾಸಿಗರು ಮತ್ತು ವಿಶೇಷವಾಗಿ ಐಷಾರಾಮಿ ಡೆಸ್ಟಿನೇಶನ್ ವೆಡ್ಡಿಂಗ್‌ಗಳಿಗೆ ಪ್ರಮುಖ ತಾಣವಾಗಿ ಬೆಳೆಯುತ್ತಿದೆ. ಖಾನ್ ಹೋವಾ ಪ್ರಾಂತೀಯ ಹೂಡಿಕೆ, ವ್ಯಾಪಾರ ಮತ್ತು ಪ್ರವಾಸೋದ್ಯಮ ಪ್ರಚಾರ ಕೇಂದ್ರವು ಭಾರತವನ್ನು ಪ್ರಮುಖವಾಗಿ ಬೆಳೆಯುತ್ತಿರುವ ಪ್ರವಾಸೋದ್ಯಮ ಮಾರುಕಟ್ಟೆಯಾಗಿ ಪರಿಗಣಿಸಿದೆ. ಭಾರತೀಯ ಪ್ರವಾಸಿಗರಲ್ಲಿ ಬಜೆಟ್ ಪ್ರಯಾಣಿಕರಿಂದ ಹಿಡಿದು ಹೆಚ್ಚಿನ ಖರ್ಚು ಮಾಡುವ ಶ್ರೀಮಂತ ಪ್ರವಾಸಿಗರವರೆಗೂ ವಿವಿಧ ವರ್ಗಗಳಿದ್ದಾರೆ. ಅದರಲ್ಲೂ ವೆಡ್ಡಿಂಗ್ ಟೂರಿಸಂ ವಿಭಾಗ ವೇಗವಾಗಿ ಬೆಳೆಯುತ್ತಿದೆ.
