1969ರಲ್ಲಿ ಕೇವಲ 20 ರೂಪಾಯಿಗಳೊಂದಿಗೆ ಅಮೆರಿಕಕ್ಕೆ ತೆರಳಿದ ಭಾರತೀಯ ಮೂಲದ ರೋಮೇಶ್ ವಾಧ್ವಾನಿ, ದೈಹಿಕ ಸವಾಲು ಮತ್ತು ಉದ್ಯಮದ ಸೋಲುಗಳನ್ನು ಮೆಟ್ಟಿ ನಿಂತರು. ತಮ್ಮ 'ಆಸ್ಪೆಕ್ಟ್ ಡೆವಲಪ್‌ಮೆಂಟ್' ಕಂಪನಿಯನ್ನು 9.3 ಬಿಲಿಯನ್ ಡಾಲರ್‌ಗೆ ಮಾರಾಟ ಮಾಡಿ ಶತಕೋಟ್ಯಾಧಿಪತಿಯಾದ ಅವರು, ಇಂದು 'ವಾಧ್ವಾನಿ ಫೌಂಡೇಶನ್' ಮೂಲಕ ಭಾರತದ ಯುವಕರಿಗೆ ಪ್ರೇರಣೆಯಾಗಿದ್ದಾರೆ.
ವರ್ಷ 1969. ಭಾರತದ ಯುವಕನೊಬ್ಬ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕದ ವಿಮಾನ ಏರಿದಾಗ ಆತನ ಜೇಬಿನಲ್ಲಿದ್ದುದು ಕೇವಲ 2.50 ಡಾಲರ್, ಅಂದರೆ ಅಂದಿನ ಕಾಲದ ಲೆಕ್ಕಾಚಾರದಲ್ಲಿ ಕೇವಲ 20 ರೂಪಾಯಿ. ಕೈಯಲ್ಲಿ ಯಾವುದೇ ಕೋಟಿಗಳ ಆಸ್ತಿ ಇರಲಿಲ್ಲ, ಯಾವುದೇ ವ್ಯಾಪಾರಿ ಹಿನ್ನೆಲೆಯೂ ಇರಲಿಲ್ಲ. ಆದರೆ, ದಶಕಗಳ ನಂತರ ಅದೇ ಯುವಕ ಶತಕೋಟಿ ಡಾಲರ್ ಆಸ್ತಿಯನ್ನು ಹೊಂದುವ ಮೂಲಕ ಜಾಗತಿಕ ಉದ್ಯಮ ಜಗತ್ತಿನಲ್ಲಿ ಹೊಸ ಇತಿಹಾಸ ಬರೆದರು. ಅವರೇ ಭಾರತೀಯ ಮೂಲದ ಉದ್ಯಮಿ ರೋಮೇಶ್ ವಾಧ್ವಾನಿ.
ಬಾಲ್ಯದ ಸವಾಲು ಮತ್ತು ಶಿಕ್ಷಣ!
1947ರಲ್ಲಿ ಕರಾಚಿಯಲ್ಲಿ ಜನಿಸಿದ ರೋಮೇಶ್ ವಾಧ್ವಾನಿ ಅವರ ಕುಟುಂಬ, ದೇಶ ವಿಭಜನೆಯ ನಂತರ ಭಾರತಕ್ಕೆ ಸ್ಥಳಾಂತರಗೊಂಡಿತು. ಬಾಲ್ಯದಲ್ಲೇ ಪೋಲಿಯೊ ರೋಗಕ್ಕೆ ತುತ್ತಾದ ಅವರಿಗೆ ನಡೆಯಲು ತೊಂದರೆಯಿತ್ತು. ಆದರೆ, ಈ ದೈಹಿಕ ನ್ಯೂನತೆಯನ್ನು ಅವರು ಎಂದಿಗೂ ತಮ್ಮ ಗುರಿಗೆ ಅಡ್ಡಿಯಾಗಲು ಬಿಡಲಿಲ್ಲ. ಐಐಟಿ ಬಾಂಬೆಯಲ್ಲಿ ಪದವಿ ಮುಗಿಸಿದ ಅವರು, 1969ರಲ್ಲಿ ಅಮೆರಿಕಕ್ಕೆ ತೆರಳಿ ಕಾರ್ನೆಗೀ ಮೆಲನ್ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಪೂರ್ಣಗೊಳಿಸಿದರು.
ಉದ್ಯಮಶೀಲತೆಯ ಕಠಿಣ ಹಾದಿ!
ಪಿಎಚ್‌ಡಿ ನಂತರ ಕೆಲಸದ ಆಫರ್‌ಗಳನ್ನು ತಿರಸ್ಕರಿಸಿ ಸ್ವಂತ ಕಂಪನಿ ಸ್ಥಾಪಿಸಲು ನಿರ್ಧರಿಸಿದರು. 'ಕಂಪ್ಯೂಗಾರ್ಡ್ ಕಾರ್ಪೊರೇಷನ್' ಆರಂಭಿಸಲು ಬೇಕಿದ್ದ $100,000 ಹಣಕ್ಕಾಗಿ ಅವರು ಒಂದಲ್ಲ, ಎರಡಲ್ಲ ಬರೋಬ್ಬರಿ 125 ವೆಂಚರ್ ಕ್ಯಾಪಿಟಲ್ ಸಂಸ್ಥೆಗಳನ್ನು ಸಂಪರ್ಕಿಸಿದರು. ಮೊದಲ 124 ಸಂಸ್ಥೆಗಳು ಮುಖ ಗಂಟಿಕ್ಕಿ ನಿರಾಕರಿಸಿದರೂ, 125ನೇ ಸಂಸ್ಥೆ ಹೂಡಿಕೆಗೆ ಒಪ್ಪಿಕೊಂಡಿತು. 10 ವರ್ಷಗಳ ಕಾಲ ಈ ಕಂಪನಿಯನ್ನು ಯಶಸ್ವಿಯಾಗಿ ನಡೆಸಿ, $10 ಮಿಲಿಯನ್‌ಗೆ ಮಾರಾಟ ಮಾಡಿ ತಮ್ಮ ಮೊದಲ ಅನುಭವ ಪಡೆದರು. ಬಳಿಕ 'ಅಮೇರಿಕನ್ ರೋಬೋಟ್' ಕಂಪನಿ ವಹಿಸಿಕೊಂಡಾಗ ಜಪಾನಿ ಕಂಪನಿಗಳ ತೀವ್ರ ಸ್ಪರ್ಧೆಯಿಂದಾಗಿ ಭಾರಿ ನಷ್ಟ ಎದುರಾಯಿತು. ಆದರೂ ಹೂಡಿಕೆಯನ್ನು ಅರ್ಧಕ್ಕೆ ತೊರೆಯದೆ, 10 ವರ್ಷ ಶ್ರಮಿಸಿ ಉದ್ಯಮದ ಮಾದರಿಯನ್ನು ಬದಲಾಯಿಸಿ ಹೂಡಿಕೆದಾರರ ಹಣವನ್ನು ಮರಳಿಸಿದರು.
9.3 ಬಿಲಿಯನ್ ಡಾಲರ್ ಒಪ್ಪಂದ ಹಾಗೂ ಬಿಲಿಯನೇರ್ ಪಟ್ಟ!
ರೋಮೇಶ್ ಅವರ ನಿಜವಾದ ಯಶಸ್ಸು ಸಿಕ್ಕಿದ್ದು 1990ರ ದಶಕದಲ್ಲಿ. ಸಿಲಿಕಾನ್ ವ್ಯಾಲಿಗೆ ಸ್ಥಳಾಂತರಗೊಂಡು ಅವರು ಆರಂಭಿಸಿದ 'ಆಸ್ಪೆಕ್ಟ್ ಡೆವಲಪ್‌ಮೆಂಟ್' ಕಂಪನಿಯು ಪೂರೈಕೆ ಸರಪಳಿ (Supply Chain) ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಸೃಷ್ಟಿಸಿತು. 2000ರಲ್ಲಿ 'i2 ಟೆಕ್ನಾಲಜೀಸ್' ಕಂಪನಿಯು ಆಸ್ಪೆಕ್ಟ್ ಕಂಪನಿಯನ್ನು 9.3 ಬಿಲಿಯನ್ ಡಾಲರ್‌ಗೆ (ಸ್ಟಾಕ್ ಒಪ್ಪಂದ) ಸ್ವಾಧೀನಪಡಿಸಿಕೊಂಡಿತು. ಇದರೊಂದಿಗೆ ರೋಮೇಶ್ ವಾಧ್ವಾನಿ ಮೊದಲ ಬಾರಿಗೆ ಅಧಿಕೃತ ಬಿಲಿಯನೇರ್ ಆದರು. ನಂತರ 'ಸಿಂಫನಿ ಟೆಕ್ನಾಲಜಿ ಗ್ರೂಪ್' ಮೂಲಕ 40ಕ್ಕೂ ಹೆಚ್ಚು ಸಾಫ್ಟ್‌ವೇರ್ ಕಂಪನಿಗಳನ್ನು ಬೆಳೆಸಿದ ಅವರು, ಕಷ್ಟದಲ್ಲಿದ್ದ ಕಂಪನಿಗಳನ್ನು ಯಶಸ್ವಿ ಸಂಸ್ಥೆಗಳಾಗಿ ಪರಿವರ್ತಿಸಿದರು.
78ರ ವಯಸ್ಸಿನಲ್ಲೂ AI ಕ್ರಾಂತಿ ಮತ್ತು 'ವಾಧ್ವಾನಿ ಫೌಂಡೇಶನ್'!
ಇಂದು ಸುಮಾರು 5.5 ಬಿಲಿಯನ್ ಡಾಲರ್ (ಅಂದಾಜು ₹46,000 ಕೋಟಿ) ಸಂಪತ್ತು ಹೊಂದಿರುವ 78 ವರ್ಷದ ರೋಮೇಶ್ ವಾಧ್ವಾನಿ, ನಿವೃತ್ತರಾಗದೆ ಕೃತಕ ಬುದ್ಧಿಮತ್ತೆ (AI) ಕ್ಷೇತ್ರದಲ್ಲಿ ಸಕ್ರಿಯರಾಗಿದ್ದಾರೆ. 2017ರಲ್ಲಿ ಅವರು ಸ್ಥಾಪಿಸಿದ 'SymphonyAI' ಕಂಪನಿಗೆ ತಮ್ಮ ಸ್ವಂತ ಆಸ್ತಿಯಿಂದ 1 ಬಿಲಿಯನ್ ಡಾಲರ್ ಹೂಡಿಕೆ ಮಾಡಿದ್ದಾರೆ. ಇಷ್ಟೇ ಅಲ್ಲದೆ, ತಮ್ಮ ಯಶಸ್ಸಿನ ಫಲವನ್ನು ಭಾರತದ ಯುವಜನತೆಗೆ ನೀಡಲು 'ವಾಧ್ವಾನಿ ಫೌಂಡೇಶನ್' ಸ್ಥಾಪಿಸಿದ್ದಾರೆ. ಈ ಸಂಸ್ಥೆಯ ಮೂಲಕ ಭಾರತೀಯ ಕಾಲೇಜುಗಳಲ್ಲಿ ಉದ್ಯಮಶೀಲತೆ (Entrepreneurship) ಮತ್ತು ಉದ್ಯೋಗ ಆಧಾರಿತ ಕೌಶಲ್ಯ ತರಬೇತಿಯನ್ನು ನೀಡಲಾಗುತ್ತಿದ್ದು, ಲಕ್ಷಾಂತರ ಯುವಕರಿಗೆ ಆಸರೆಯಾಗಿದೆ. 20 ರೂಪಾಯಿಯೊಂದಿಗೆ ಆರಂಭವಾದ ಅವರ ಪ್ರಯಾಣ, ಇಂದು ಕೋಟ್ಯಂತರ ಯುವಜನರಿಗೆ ಪ್ರೇರಣೆಯಾಗಿದೆ.

