ಟೆಕ್‌ ಮತ್ತು ಫಿನ್‌ಟೆಕ್‌ ಕ್ಷೇತ್ರದ ಉದ್ಯೋಗ ಕಡಿತದ ನಡುವೆ ಒಂದೇ ಕುಟುಂಬದ ಪೋಷಕರು ಸೇರಿ ನಾಲ್ವರು ಉದ್ಯೋಗ ಕಳೆದುಕೊಂಡಿದ್ದು, ಅವರ ನೋವಿನ ಕಥೆ ರೆಡ್ಡಿಟ್‌ನಲ್ಲಿ ವೈರಲ್ ಆಗಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ಜಾಗತಿಕ ಮಟ್ಟದಲ್ಲಿ ಟೆಕ್‌, ಫಿನ್‌ಟೆಕ್‌ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ನಡೆಯುತ್ತಿರುವ ಉದ್ಯೋಗ ಕಡಿತದ ಪರಿಣಾಮ ಕುಟುಂಬಗಳ ಮೇಲೂ ತೀವ್ರವಾಗಿ ಬೀಳುತ್ತಿದೆ. ಇಂತಹದ್ದೇ ಒಂದು ಘಟನೆ ರೆಡ್ಡಿಟ್‌ನಲ್ಲಿ ವೈರಲ್ ಆಗಿದ್ದು, ಒಂದೇ ಕುಟುಂಬದ ನಾಲ್ವರು ಬಹುತೇಕ ಒಂದೇ ಸಮಯದಲ್ಲಿ ಉದ್ಯೋಗ ಕಳೆದುಕೊಂಡಿರುವ ಘಟನೆ ನೆಟ್ಟಿಗರ ಗಮನ ಸೆಳೆದಿದೆ.

ರೆಡ್ಡಿಟ್‌ನಲ್ಲಿ ತಮ್ಮ ಪರಿಸ್ಥಿತಿಯನ್ನು ವಿವರಿಸಿರುವ ಬಳಕೆದಾರರು, "ನಮ್ಮ ಕುಟುಂಬದಲ್ಲಿ ಕೆಲಸ ಮಾಡುತ್ತಿದ್ದ ಎಲ್ಲರೂ ಉದ್ಯೋಗ ಕಳೆದುಕೊಂಡಿದ್ದಾರೆ. ಪೋಷಕರು ಮತ್ತು ನಾಲ್ವರು ಒಡಹುಟ್ಟಿದವರನ್ನು ಕೆಲಸದಿಂದ ತೆಗೆದುಹಾಕಲಾಗಿದೆ. ಈಗ ಯಾರೂ ಯಾರಿಗೂ ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗುತ್ತಿಲ್ಲ. ಎಲ್ಲರೂ ತೀವ್ರ ಚಿಂತೆಯಲ್ಲಿದ್ದೇವೆ" ಎಂದು ಬರೆದುಕೊಂಡಿದ್ದಾರೆ.

ಅವರ ಪ್ರಕಾರ, ತಾವು ಮತ್ತು ತಮ್ಮ ಸಹೋದರಿ ಇಬ್ಬರೂ ಪ್ರಮುಖ FAANG ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ಇಬ್ಬರೂ ಉದ್ಯೋಗ ಕಳೆದುಕೊಂಡಿದ್ದು, ಸಹೋದರಿ ಕಳೆದ ಒಂದು ವರ್ಷದಿಂದ ಹೊಸ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರೂ ಕೆಲಸ ಸಿಗುತ್ತಿಲ್ಲ. ತಾವೂ ಇತ್ತೀಚೆಗೆ ಯಾವುದೇ ಪರಿಹಾರ ಸಿಗದೆ ಕೆಲಸದಿಂದ ವಜಾಗೊಂಡಿರುವುದಾಗಿ ತಿಳಿಸಿದ್ದಾರೆ.

ಕುಟುಂಬದ ಮತ್ತೊಬ್ಬ ಸಹೋದರ ಫಿನ್‌ಟೆಕ್‌ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಆಗಸ್ಟ್‌ನಲ್ಲೇ ಉದ್ಯೋಗ ಕಳೆದುಕೊಂಡಿದ್ದಾನೆ. ಕಿರಿಯ ಸಹೋದರಿ ಕೆಲಸ ಮಾಡುತ್ತಿದ್ದ ವಿಮಾನಯಾನ ಸಂಸ್ಥೆಯೇ ಸ್ಥಗಿತಗೊಂಡಿರುವುದರಿಂದ ಆಕೆಯೂ ನಿರುದ್ಯೋಗಿಯಾಗಿದ್ದಾಳೆ.

ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸಿರುವುದು ಮನೆ ಸಾಲ. ಕುಟುಂಬದ ಇಬ್ಬರು ಸದಸ್ಯರು ತಮ್ಮದೇ ಮನೆಗಳನ್ನು ಹೊಂದಿದ್ದು, ಅಡಮಾನ (ಮಾರ್ಟ್‌ಗೇಜ್) ಪಾವತಿಸಬೇಕಾದ ಹೊಣೆಗಾರಿಕೆ ಇದೆ. ಆದರೆ ಫಾಸ್ಟ್‌ಫುಡ್‌, ಉಬರ್‌ ಅಥವಾ ಚಿಲ್ಲರೆ ವ್ಯಾಪಾರದ ತಾತ್ಕಾಲಿಕ ಉದ್ಯೋಗಗಳಿಂದ ಆ ಸಾಲಗಳನ್ನು ತೀರಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಹೇಳಿದ್ದಾರೆ.

ಇನ್ನಿಬ್ಬರು ಸಹೋದರ-ಸಹೋದರಿಯರು ಬಾಡಿಗೆ ಕಟ್ಟಲು ಸಾಧ್ಯವಾಗದೆ ಪೋಷಕರ ಮನೆಗೆ ಮರಳಿದ್ದಾರೆ. ಉದ್ಯೋಗಾವಕಾಶಗಳು ಕಡಿಮೆ ಇರುವುದರಿಂದ ಹೊಸ ಕೆಲಸ ಹುಡುಕುವುದೂ ಕಷ್ಟವಾಗಿದೆ ಎಂದು ಅವರು ತಿಳಿಸಿದ್ದಾರೆ.

"ಇಂತಹ ಪರಿಸ್ಥಿತಿ ನಮ್ಮ ಕುಟುಂಬಕ್ಕೆ ಎಂದಿಗೂ ಬರುತ್ತದೆ ಎಂದು ಊಹಿಸಿರಲಿಲ್ಲ. ಈಗ ನಮ್ಮ ಕುಟುಂಬದ ದೊಡ್ಡ ಚರ್ಚೆ ಯಾವ ಮನೆಯನ್ನು ಉಳಿಸಿಕೊಳ್ಳಬೇಕು ಎಂಬುದಾಗಿದೆ," ಎಂದು ಅವರು ಬರೆದಿದ್ದಾರೆ. ಪೋಷಕರು ಬಹುತೇಕ ತೀರಿಸಿರುವ ತಮ್ಮ ಮನೆಯನ್ನು ಉಳಿಸಿಕೊಳ್ಳಬೇಕು ಎಂದು ಬಯಸಿದರೂ, ಮೂರು ಮನೆ ಸಾಲಗಳ ಹೊರೆ ಕುಟುಂಬದ ಮೇಲೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

ನೆಟ್ಟಿಗರಿಂದ ಸಲಹೆಗಳ ಸುರಿಮಳೆ

ಈ ಪೋಸ್ಟ್ ವೈರಲ್ ಆದ ಬಳಿಕ ಸಾವಿರಾರು ಮಂದಿ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ.

ಒಬ್ಬರು, "2009ರ ಆರ್ಥಿಕ ಹಿಂಜರಿತದ ವೇಳೆ ನಮ್ಮ ಕುಟುಂಬವೂ ಇದೇ ಪರಿಸ್ಥಿತಿ ಎದುರಿಸಿತ್ತು. ಎಲ್ಲರೂ ಒಂದೇ ಮನೆಯಲ್ಲಿ ವಾಸಿಸಿ, ಹೆಚ್ಚು ಉದ್ಯೋಗಾವಕಾಶಗಳಿರುವ ಪ್ರದೇಶಕ್ಕೆ ಸ್ಥಳಾಂತರವಾಗಿದ್ದೆವು," ಎಂದು ಸಲಹೆ ನೀಡಿದ್ದಾರೆ.

ಮತ್ತೊಬ್ಬರು, "ಶಾಶ್ವತ ಉದ್ಯೋಗ ಸಿಗುವವರೆಗೂ ತಾತ್ಕಾಲಿಕ ಕೆಲಸಗಳನ್ನು ಮಾಡಬೇಕು. ನಿರುದ್ಯೋಗ ಭತ್ಯೆ ಹಾಗೂ ಸರ್ಕಾರಿ ನೆರವಿಗೆ ಅರ್ಜಿ ಸಲ್ಲಿಸಿ," ಎಂದು ಸೂಚಿಸಿದ್ದಾರೆ.

ಇನ್ನೊಬ್ಬ ಬಳಕೆದಾರರು, "ನಮ್ಮ ಮನೆಯಲ್ಲೂ ಇದೇ ಪರಿಸ್ಥಿತಿ. ನನ್ನ ಸಹೋದರ ಮತ್ತು ಸಹೋದರಿಯನ್ನು ಐಟಿ ಕಂಪನಿಯಿಂದ ವಜಾಗೊಳಿಸಲಾಗಿದೆ. ನನಗೂ ವಿಮಾನಯಾನ ಕ್ಷೇತ್ರದಲ್ಲಿ ಕೆಲಸ ಕಳೆದುಹೋಗಿದೆ. ಈಗ ನಮ್ಮ ಅಕ್ಕ ಮಾತ್ರ ಕೆಲಸದಲ್ಲಿದ್ದಾರೆ, ಅದೂ ಅನಿಶ್ಚಿತವಾಗಿದೆ," ಎಂದು ಪ್ರತಿಕ್ರಿಯಿಸಿದ್ದಾರೆ.

2026ರಲ್ಲಿ ಲಕ್ಷಕ್ಕೂ ಅಧಿಕ ಉದ್ಯೋಗ ನಷ್ಟ

ಈ ಘಟನೆ ಜಾಗತಿಕ ಉದ್ಯೋಗ ಮಾರುಕಟ್ಟೆಯ ಸಂಕಷ್ಟವನ್ನೇ ಪ್ರತಿಬಿಂಬಿಸುತ್ತದೆ. ಉದ್ಯಮ ವರದಿಗಳ ಪ್ರಕಾರ, 2026ರ ಮೊದಲ ಐದು ತಿಂಗಳಲ್ಲೇ ವಿಶ್ವದಾದ್ಯಂತ ಟೆಕ್‌ ಕ್ಷೇತ್ರದಲ್ಲಿ 1,08,724ಕ್ಕೂ ಹೆಚ್ಚು ಉದ್ಯೋಗಗಳು ಕಡಿತಗೊಂಡಿವೆ. ಕೃತಕ ಬುದ್ಧಿಮತ್ತೆ (AI) ಆಧಾರಿತ ಪುನರ್‌ರಚನೆ, ಸ್ವಯಂಚಾಲಿತ ವ್ಯವಸ್ಥೆಗಳ ಅಳವಡಿಕೆ ಮತ್ತು ವೆಚ್ಚ ಕಡಿತ ಕ್ರಮಗಳಿಂದ ಅನೇಕ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿವೆ.

ಇತ್ತೀಚೆಗೆ ಸಿಸ್ಕೋ ಸುಮಾರು 4,000 ಉದ್ಯೋಗಿಗಳನ್ನು, ಪೇಪಾಲ್ ಹಾಗೂ ಕ್ಲೌಡ್‌ಫ್ಲೇರ್ ಕೂಡ ಗಣನೀಯ ಸಂಖ್ಯೆಯ ಸಿಬ್ಬಂದಿಯನ್ನು ವಜಾಗೊಳಿಸಿವೆ. ಉದ್ಯಮ ತಜ್ಞರ ಪ್ರಕಾರ, AI ತಂತ್ರಜ್ಞಾನದಲ್ಲಿ ಹೆಚ್ಚುತ್ತಿರುವ ಹೂಡಿಕೆ ಮತ್ತು ಕಂಪನಿಗಳ ಪುನರ್‌ರಚನೆ ಮುಂದಿನ ದಿನಗಳಲ್ಲೂ ಉದ್ಯೋಗ ಮಾರುಕಟ್ಟೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.