ಅಸ್ಸಾಂನಲ್ಲಿ, ದಿನದ ಗಳಿಕೆ ಕಳೆದುಕೊಂಡು ಮಕ್ಕಳ ಊಟದ ಚಿಂತೆಯಲ್ಲಿ ಕಣ್ಣೀರಿಡುತ್ತಿದ್ದ ಐಸ್‌ಕ್ರೀಂ ವ್ಯಾಪಾರಿಗೆ ಅಪರಿಚಿತರೊಬ್ಬರು ಸಹಾಯ ಮಾಡಿದ್ದಾರೆ. ಆತನಿಗೆ ಊಟ ಕೊಡಿಸಿ, ಮನೆಗೆ ಬೇಕಾದ ದಿನಸಿ ವಸ್ತುಗಳನ್ನು ಖರೀದಿಸಿಕೊಡುವ ಮೂಲಕ ಮಾನವೀಯತೆ ಮೆರೆದಿದ್ದು, ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಅಸ್ಸಾಂನಲ್ಲಿ ನಡೆದ ಮಾನವೀಯತೆಯನ್ನು ಬಿಂಬಿಸುವ ಭಾವುಕ ಘಟನೆಯೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಗಮನ ಸೆಳೆಯುತ್ತಿದೆ. ಸುಡುಬಿಸಿಲಿನಲ್ಲಿ ತನ್ನ ಕುಟುಂಬದ ಹೊಟ್ಟೆ ತುಂಬಿಸಲು ರಸ್ತೆಯಿಡೀ ಅಲೆದಾಡಿ ದುಡಿಯುತ್ತಿದ್ದ ಬಡ ಐಸ್‌ಕ್ರೀಂ ಮಾರಾಟಗಾರನೊಬ್ಬ, ಕಷ್ಟಪಟ್ಟು ಸಂಪಾದಿಸಿದ ದಿನದ ಗಳಿಕೆಯನ್ನೆಲ್ಲಾ ಕಳೆದುಕೊಂಡು ಬೀದಿಯಲ್ಲಿ ಕಣ್ಣೀರಿಡುತ್ತಿದ್ದಾಗ, ಅಪರಿಚಿತ ವ್ಯಕ್ತಿಯೊಬ್ಬರು ದೇವದೂತನಂತೆ ಬಂದು ನೆರವಾದ ಅಪರೂಪದ ಘಟನೆ ಇದಾಗಿದೆ.
ವರದಿಗಳು ಹೇಳುವುದೇನು?
ವರದಿಗಳ ಪ್ರಕಾರ, ಆ ಐಸ್‌ಕ್ರೀಂ ವ್ಯಾಪಾರಿ ಎಂದಿನಂತೆ ತೀವ್ರವಾದ ಬೇಸಿಗೆಯ ಶಾಖದಲ್ಲೂ ದಿನವಿಡೀ ಕಷ್ಟಪಟ್ಟು ವ್ಯಾಪಾರ ಮಾಡುತ್ತಿದ್ದ. ಆದರೆ, ದಿಢೀರನೆ ಆತನಿಗೆ ತೀವ್ರವಾದ ಹೊಟ್ಟೆನೋವು ಕಾಣಿಸಿಕೊಂಡಿತು. ನೋವಿನ ತೀವ್ರತೆ ಎಷ್ಟಿತ್ತೆಂದರೆ, ಆತನಿಗೆ ತಡೆಯಲಾಗದೆ ತನ್ನ ಐಸ್‌ಕ್ರೀಂ ಬಂಡಿಯ ಪಕ್ಕದಲ್ಲೇ ನೆಲದ ಮೇಲೆ ಕುಸಿದುಬಿದ್ದು ಪ್ರಜ್ಞೆ ಕಳೆದುಕೊಂಡನು. ಆದರೆ, ಸ್ವಲ್ಪ ಸಮಯದ ನಂತರ ಆತನಿಗೆ ಪ್ರಜ್ಞೆ ಬಂದಾಗ ಆತನಿಗೆ ಕಾಯುತ್ತಿತ್ತು ಭಾರಿ ಶಾಕ್. ಅಲ್ಲಿ ಯಾರೋ ಅಪರಿಚಿತರು ಆತನ ಬಂಡಿಯಲ್ಲಿದ್ದ ಐಸ್‌ಕ್ರೀಂಗಳನ್ನು ಹಾಗೂ ಆತ ದಿನವಿಡೀ ಕಷ್ಟಪಟ್ಟು ಸಂಪಾದಿಸಿದ್ದ ಸುಮಾರು ₹500 ನಗದನ್ನು ಕದ್ದು ಪರಾರಿಯಾಗಿದ್ದರು.
ಮಕ್ಕಳಿಗೆ ಊಟಕ್ಕೆ ಏನು ಕೊಡಲಿ!
ಸಾಮಾನ್ಯ ದಿನಗೂಲಿ ವ್ಯಾಪಾರಿಗೆ ₹500 ಎನ್ನುವುದು ಕೇವಲ ಹಣವಲ್ಲ, ಅದು ಆತನ ಕುಟುಂಬದ ಅಂದಿನ ಆಹಾರದ ಮೂಲವಾಗಿತ್ತು. ಆ ಹಣದಿಂದಲೇ ಆತ ಅಂದಿನ ದಿನಸಿ ಹಾಗೂ ಮನೆಗೆ ಬೇಕಾದ ಅಗತ್ಯ ವಸ್ತುಗಳನ್ನು ಖರೀದಿಸಬೇಕಿತ್ತು. ಕಷ್ಟಪಟ್ಟು ದುಡಿದ ಹಣ ಹಾಗೂ ಐಸ್‌ಕ್ರೀಂ ಕಳುವಾಗಿರುವುದನ್ನು ಕಂಡು ಆತ ತೀವ್ರ ಆಘಾತಕ್ಕೊಳಗಾದನು. ಈಗ ನನ್ನ ಮಕ್ಕಳಿಗೆ ಊಟಕ್ಕೆ ಏನು ಕೊಡಲಿ? ಎಂದು ಆಲೋಚಿಸುತ್ತಾ ತನ್ನ ಬಂಡಿಯ ಪಕ್ಕದಲ್ಲೇ ಕುಳಿತು ರಸ್ತೆಯಲ್ಲೇ ಬಿಕ್ಕಿ ಬಿಕ್ಕಿ ಅಳಲು ಪ್ರಾರಂಭಿಸಿದನು. ಈ ಭಾವುಕ ಸನ್ನಿವೇಶವನ್ನು ಆ ಹಾದಿಯಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಗಮನಿಸಿದರು. ತಕ್ಷಣವೇ ವ್ಯಾಪಾರಿಯ ಬಳಿಗೆ ಬಂದು ಆತನ ಸಂಕಟಕ್ಕೆ ಕಾರಣವೇನೆಂದು ವಿಚಾರಿಸಿದರು. ಕಣ್ಣೀರಿಡುತ್ತಲೇ ಆ ವ್ಯಾಪಾರಿ ತನಗೆ ನಡೆದ ಇಡೀ ದುರಂತವನ್ನು ವಿವರಿಸಿದನು. "ನನಗೆ ಐಸ್‌ಕ್ರೀಂ ಕಳುವಾಗಿದ್ದಕ್ಕಿಂತಲೂ, ಇಂದು ಮನೆಗೆ ಹೋದರೆ ನನ್ನ ಮಕ್ಕಳಿಗೆ ಊಟ ಹಾಕಲು ಹಣವಿಲ್ಲವಲ್ಲ ಎಂಬ ಚಿಂತೆ ಕಾಡುತ್ತಿದೆ" ಎಂದು ಆತ ಕಣ್ಣೀರು ಹಾಕಿದನು.
ಭಾವುಕರಾದ ದಾರಿಹೋಕ!
ವ್ಯಾಪಾರಿಯ ಮಾತುಗಳನ್ನು ಕೇಳಿ ಭಾವುಕರಾದ ಆ ದಾರಿಹೋಕ, ತಕ್ಷಣವೇ ಆತನಿಗೆ ಸಹಾಯ ಮಾಡಲು ನಿರ್ಧರಿಸಿದರು. ಮೊದಲು ಆ ಬಡ ವ್ಯಾಪಾರಿಗೆ ಹೊಟ್ಟೆತುಂಬ ಊಟ ಕೊಡಿಸಿದರು. ನಂತರ ಆತನನ್ನು ಹತ್ತಿರದ ದಿನಸಿ ಅಂಗಡಿಗೆ ಕರೆದೊಯ್ದು, ಆತನ ಕುಟುಂಬದ ನಿರ್ವಹಣೆಗೆ ಬೇಕಾದ ಅಕ್ಕಿ, ಹಾಲು, ಬಿಸ್ಕತ್ತುಗಳು ಹಾಗೂ ಅಗತ್ಯ ಗೃಹೋಪಯೋಗಿ ವಸ್ತುಗಳನ್ನು ಸ್ವಂತ ಹಣದಿಂದ ಖರೀದಿಸಿಕೊಟ್ಟರು. ಅಪರಿಚಿತ ವ್ಯಕ್ತಿಯ ಈ ಅನಿರೀಕ್ಷಿತ ಔದಾರ್ಯ ಮತ್ತು ಕಾಳಜಿಯನ್ನು ಕಂಡು ಐಸ್‌ಕ್ರೀಂ ವ್ಯಾಪಾರಿಯ ಕಣ್ಣಲ್ಲಿ ಕೃತಜ್ಞತೆಯ ಕಣ್ಣೀರು ಜಾರಿತು.
ಜಾಲತಾಣದಲ್ಲಿ ಫುಲ್ ವೈರಲ್!
ಈ ಸಂಪೂರ್ಣ ಮಾನವೀಯ ಘಟನೆಯ ವಿಡಿಯೋವನ್ನು ಆ ವ್ಯಕ್ತಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ಸಮಾಜದಲ್ಲಿ ಕಷ್ಟದಲ್ಲಿರುವವರ ಬಗ್ಗೆ ಪ್ರತಿಯೊಬ್ಬರೂ ಸಹಾನುಭೂತಿ ಹಾಗೂ ಮಾನವೀಯತೆಯಿಂದ ವರ್ತಿಸಬೇಕು ಎಂದು ಮನವಿ ಮಾಡಿದ್ದಾರೆ. ಪ್ರಸ್ತುತ ಈ ವಿಡಿಯೋ ವೈರಲ್ ಆಗಿದ್ದು, ಸೋಷಿಯಲ್ ಮೀಡಿಯಾ ಬಳಕೆದಾರರು ಆ ಅಪರಿಚಿತ ವ್ಯಕ್ತಿಯ ಔದಾರ್ಯವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ. ಕಷ್ಟಪಟ್ಟು ದುಡಿಯುವ ಬಡವರ ಸಣ್ಣ ಆದಾಯವೂ ಅವರ ಇಡೀ ಕುಟುಂಬಕ್ಕೆ ಎಷ್ಟು ಮುಖ್ಯ ಎಂಬುದನ್ನು ಈ ಘಟನೆ ಜಗತ್ತಿಗೆ ಮತ್ತೊಮ್ಮೆ ನೆನಪಿಸಿಕೊಟ್ಟಿದೆ.


