ಗುಜರಾತ್ ಹೈಕೋರ್ಟ್‌ನ ಆನ್‌ಲೈನ್ ವಿಚಾರಣೆಯಲ್ಲಿ ಹಿರಿಯ ವಕೀಲರೊಬ್ಬರು ಬಿಯರ್ ಕುಡಿಯುತ್ತಾ ಕಾಣಿಸಿಕೊಂಡಿದ್ದಾರೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನ್ಯಾಯಾಲಯವು ಸ್ವಯಂಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.

ಅಹ್ಮದಾಬಾದ್‌: ಹೈಕೋರ್ಟ್‌ನ ಆನ್‌ಲೈನ್‌ ವಿಚಾರಣೆಗೆ ಹೈಕೋರ್ಟ್‌ನ ಹಿರಿಯ ವಕೀಲರೊಬ್ಬರು ಬೀರ್ ಕುಡಿಯುತ್ತಾ ಹಾಜರಾಗಿದ್ದಾರೆ. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಗುಜರಾತ್‌ ಹೈಕೋರ್ಟ್‌ನ ವಿಚಾರಣೆಗೆ ವ್ಯಕ್ತಿಯೊಬ್ಬ ತನ್ನ ಶೌಚಾಲಯದಿಂದಲೇ ಹಾಜರಾದ ಪ್ರಕರಣ ಮಾಸುವ ಮೊದಲೇ ಇಂತಹದೊಂದು ಘಟನೆ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.

ವೈರಲ್ ಆದ ವೀಡಿಯೋದಲ್ಲಿ ಗುಜರಾತ್ ಹೈಕೋರ್ಟ್‌ನ ಹಿರಿಯ ವಕೀಲ ಭಾಸ್ಕರ್ ತನ್ನಾ ಎಂಬುವವರು ಗಾಜಿನ ಲೋಟವೊಂದರಲ್ಲಿ ಪೂರ್ತಿ ಬೀರು ತುಂಬಿಸಿಕೊಂಡಿದ್ದು, ಒಂದೊಂದೇ ಸಿಪ್ ಹೀರುತ್ತಾ ಅವರು ವಿಚಾರಣೆಯಲ್ಲಿ ಭಾಗಿಯಾಗಿರುವುದನ್ನು ಕಾಣಬಹುದು. ಈ ಘಟನೆಗೆ ಸಂಬಂಧಿಸಿದಂತೆ ಈಗ ಗುಜರಾತ್ ಹೈಕೋರ್ಟ್ ಈ ವಕೀಲರ ವಿರುದ್ಧ ಸ್ವಯಂ ಪ್ರೇರಿತ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿ ತನಿಖೆಗೆ ಮುಂದಾಗಿದೆ.

ಅಲ್ಲದೇ ಹೀಗೆ ಬೀರ್ ಕುಡಿಯುತ್ತಾ ವಿಚಾರಣೆಗೆ ಹಾಜರಾದ ಭಾಸ್ಕರ್ ತನ್ನಾ ಅವರಿಗಿರುವ 'ಹಿರಿಯ ವಕೀಲರು' ಎನ್ನುವ ಬಿರುದನ್ನು ಅವರ ಈ ಅಸಭ್ಯ ನಡವಳಿಕೆಯಿಂದಾಗಿ ಹಿಂಪಡೆಯಬೇಕು ಎಂದು ಹೈಕೋರ್ಟ್‌ನ ನ್ಯಾಯಮೂರ್ತಿ ಎ.ಎಸ್. ಸುಪೆಹಿಯಾ ಮತ್ತು ನ್ಯಾಯಮೂರ್ತಿ ಆರ್.ಟಿ. ವಚಾನಿ ಅವರ ವಿಭಾಗೀಯ ಪೀಠ ಹೇಳಿದೆ.

ಈ ವೈರಲ್ ವಿಡಿಯೋದಲ್ಲಿ ಕಾಣುವಂತೆ ಜೂಮ್ ಕಾಲ್ ಮೂಲಕ ಆನ್‌ಲೈನ್ ವಿಚಾರಣೆ ಆರಂಭವಾಗಿದ್ದು, ಮೂರು ವಿಂಡೋಗಳ ಮೂಲಕ ನ್ಯಾಯಾಲಯದ ನೇರ ವಿಚಾರಣೆಯನ್ನು ತೋರಿಸಲಾಗಿದೆ. ಒಂದು ವಿಂಡೋದಲ್ಲಿ ಹೈಕೋರ್ಟ್ ನ್ಯಾಯಮೂರ್ತಿ ಭಟ್ ಕಾಣಿಸಿಕೊಂಡರೆ, ಇನ್ನೆರಡು ವಿಂಡೋಗಳಳ್ಲಿ ಪ್ರಕರಣದ ವಕೀಲರು ಕಾಣಿಸಿಕೊಂಡಿದ್ದಾರೆ. ಹಾಗೆಯೇ ಈ ನ್ಯಾಯಾಲಯದ ವಿಚಾರಣೆಗೆ ವರ್ಚುವಲ್ ಆಗಿ ಹಾಜರಾಗಿದ್ದ ತನ್ನಾ, ಹಿನ್ನೆಲೆಯಲ್ಲಿ ನಿಂತಿರುವುದನ್ನು ವೀಡಿಯೋದಲ್ಲಿ ಕಾಣಬಹುದು. ವಿಚಾರಣೆಯ ಮಧ್ಯದಲ್ಲಿ, ನ್ಯಾ ಭಾಸ್ಕರ್ ತನ್ನಾ ಬಿಯರ್ ಮಗ್ ಹಿಡಿದು ಕ್ಯಾಮೆರಾ ಮುಂದೆ ಆಕಸ್ಮಿಕವಾಗಿ ಒಂದು ಸಿಪ್ ಬೀರ್ ಕುಡಿದಿರುವುದನ್ನು ಕಾಣಬಹುದು.

ಹೀಗಾಗಿ ವಕೀಲರಿಗೆ ನೋಟಿಸ್ ಜಾರಿ ಮಾಡುವಂತೆ ರಿಜಿಸ್ಟ್ರಿಗೆ ಹೈಕೋರ್ಟ್ ನಿರ್ದೇಶನ ನೀಡಿದೆ ಜೊತೆಗೆ ಅವರು ನ್ಯಾಯಾಲಯದ ಮುಂದೆ ಆನ್‌ಲೈನ್ ಮೂಲಕ ಹಾಜರಾಗುವುದಕ್ಕೂ ನ್ಯಾಯಾಲಯ ನಿಷೇಧ ಹೇರಿದೆ. ತನ್ನಾ ಅವರ ಈ ಅಸಭ್ಯ ವರ್ತನೆ ನ್ಯಾಯಾಲಯವು ಅವರಿಗೆ ನೀಡಿದ ಹಿರಿಯ ವಕೀಲರ ಬಿರುದಿಗೆ ತದ್ವಿರುದ್ಧವಾಗಿದೆ. ನಮ್ಮ ಅಭಿಪ್ರಾಯದ ಪ್ರಕಾರ ಅವರ ಪದವಿಯನ್ನು ಹಿಂಪಡೆಯಬೇಕು. ಹಾಗೂ ಈ ಬಗ್ಗೆ ನಂತರದ ಹಂತದಲ್ಲಿ ನಿರ್ಧರಿಸಲಾಗುವುದು ಎಂದು ಹೈಕೋರ್ಟ್ ಪೀಠ ಹೇಳಿದೆ.

ಕೆಲವು ದಿನಗಳ ಹಿಂದಷ್ಟೇ ಇದೇ ಗುಜರಾತ್ ಹೈಕೋರ್ಟ್‌ನ ವಿಚಾರಣೆಗೆ ವ್ಯಕ್ತಿಯೊಬ್ಬ ತನ್ನ ಶೌಚಾಲಯದಿಂದಲೇ ಹಾಜರಾಗಿರುವುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.

ಜೂನ್ 20ರಂದು ನ್ಯಾಯಮೂರ್ತಿ ನಿರ್ಜರ್ ಎಸ್. ದೇಸಾಯಿ ಅವರ ಪೀಠದ ಮುಂದೆ ನಡೆದ ವಿಚಾರಣೆ ವೇಳೆ ಈ ಘಟನೆ ನಡೆದಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಈಗ ಭಾರಿ ವೈರಲ್ ಆಗಿತ್ತು. ಈ ಘಟನೆ ಮಾಸುವ ಮೊದಲೇ ಈಗ ಗೌರವಾನ್ವಿತ ಹುದ್ದೆಯಲ್ಲಿದ್ದ ಹೈಕೋರ್ಟ್ ವಕೀಲರೇ ಈ ರೀತಿ ಎಡವಟ್ಟು ಮಾಡಿದ್ದು, ವಕೀಲರು ತಲೆತಗ್ಗಿಸುವಂತೆ ಮಾಡಿದೆ.

Scroll to load tweet…