ವೈರಲ್ ಆಗಿರುವ ವಿಡಿಯೋವೊಂದರಲ್ಲಿ, ನಾಯಿಯೊಂದು ತನ್ನಿಂದ ದೂರವಿರುವ ಸಂಗಾತಿಯೊಂದಿಗೆ ವಿಡಿಯೋ ಕಾಲ್‌ನಲ್ಲಿ ಸಂಭಾಷಣೆ ನಡೆಸಿದೆ. ಎರಡೂ ನಾಯಿಗಳು ಊಳಿಡುವ ಮೂಲಕ ತಮ್ಮ ಭಾವನೆಗಳನ್ನು ವ್ಯಕ್ತಪಡಿಸುತ್ತಿದ್ದು, ಅವು ಪರಸ್ಪರ ಮಿಸ್ ಮಾಡಿಕೊಳ್ಳುತ್ತಿರಬಹುದು ಎಂದು ನೆಟ್ಟಿಗರು ವ್ಯಾಖ್ಯಾನಿಸುತ್ತಿದ್ದಾರೆ.
ಮನುಷ್ಯ ಮತ್ತು ನಾಯಿಗಳ ಸಂಬಂಧ ಬಹಳ ಪುರಾತನ ಕಾಲದಿಂದಲೂ ಇದೆ. ಸಾಕು ನಾಯಿಗಳ ಮಾತನ್ನು ಮಾಲೀಕರು ಸುಲಭದಲ್ಲಿ ಅರ್ಥ ಮಾಡಿಕೊಳ್ಳಬಲ್ಲರು. ಅದೇ ರೀತಿ ಯಾವುದೇ ಸಾಕು ಪ್ರಾಣಿಯಾದರೂ ಅವುಗಳಿಗೆ ಏನು ಬೇಕು, ಏನು ಬೇಡ ಎನ್ನುವುದು ಅವುಗಳ ಒಡನಾಟದಲ್ಲಿ ಇರುವವರಿಗೆ ತಿಳಿದು ಬಿಡುತ್ತದೆ. ಆದರೆ ಪ್ರಾಣಿಗಳು ತಮ್ಮದೇ ಜಾತಿಯ ಪ್ರಾಣಿಗಳ ಜೊತೆ ನಡೆಸುವ ಸಂಭಾಷಣೆ ಮಾತ್ರ ಯಾರಿಂದಲೂ ತಿಳಿಯಲು ಸಾಧ್ಯವಿಲ್ಲ. ಅವುಗಳಿಗೆ ಅವುಗಳದ್ದೇ ಆದ ಕುತೂಹಲದ ಭಾಷೆಗಳು ಇರುತ್ತವೆ. ಪ್ರಾಣಿ-ಪಕ್ಷಿಗಳ ಮಾತುಗಳನ್ನು ತಂತ್ರಜ್ಞಾನದ ಸಹಾಯದಿಂದ ತಿಳಿಯುವಂಥ ಪ್ರಯತ್ನ ನಡೆಯುತ್ತಿದೆಯಾದರೂ ಅದೇನೂ ಸಂಪೂರ್ಣ ಯಶಸ್ಸನ್ನು ಕಂಡಿಲ್ಲ.
ನಾಯಿಗಳ ವಿಡಿಯೋ ಕಾಲ್
ಇದೀಗ ವೈರಲ್ ಆಗಿರೋ ವಿಡಿಯೋದಲ್ಲಿ, ನಾಯಿಯೊಂದು ತನ್ನಿಂದ ದೂರವಾಗಿರುವ ಸಂಗಾತಿಯ ಜೊತೆ ವಿಡಿಯೋ ಕಾಲ್‌ನಲ್ಲಿ ಸಂಭಾಷಣೆ ಮಾಡುವುದನ್ನು ನೋಡಬಹುದಾಗಿದೆ. weirdlyhistory ಎನ್ನುವ ಇನ್ಸ್ಟಾಗ್ರಾಮ್ನಲ್ಲಿ ಇದನ್ನು ಶೇರ್ ಮಾಡಲಾಗಿದೆ. ಇದರಲ್ಲಿ ವಿಡಿಯೋದಲ್ಲಿ ಇನ್ನೊಂದು ಕಡೆ ಇರುವ ನಾಯಿಯನ್ನು ನೋಡಿ ಏನೋ ಹೇಳಿದೆ. ಆ ಬಳಿಕ ಅಲ್ಲಿದ್ದ ನಾಯಿ ಇನ್ನೇನೋ ಸಂದೇಶ ಕೊಟ್ಟಿದೆ. ಜನರಿಗೆ ಅದು ಅರ್ಥ ಆಗದೇ ಇದ್ದರೂ ನಾಯಿಗಳಿಗೆ ಮಾತ್ರ ಅದು ಅರ್ಥ ಆಗಿದೆ ಎಂದು ಈ ವಿಡಿಯೋ ನೋಡಿದರೆ ತಿಳಿಯುತ್ತದೆ.
ಐ ಮಿಸ್ ಯೂ
ಸಾಮಾನ್ಯವಾಗಿ ನಾಯಿಗಳು ಊಳಿಡುತ್ತವೆ. ಅದನ್ನು ಕೆಟ್ಟದ್ದು ಎಂದೇ ಹೇಳುತ್ತಾರೆ. ಆದರೆ ಈ ವಿಡಿಯೋದಲ್ಲಿ ಇನ್ನೊಂದು ಕಡೆ ಇರುವ ನಾಯಿ ಅದೇ ರೀತಿ ಊಳಿಟ್ಟಿದೆ. ಬಹುಶಃ ನಿನ್ನನ್ನು ಬಿಟ್ಟು ನಾನು ಇಲ್ಲಿ ಇರುವುದು ಕಷ್ಟವಾಗುತ್ತಿದೆ ಎಂದು ಅದು ಕಣ್ಣೀರು ಹಾಕುತ್ತಿರಬಹುದು ಎಂದು ಹಲವರು ಕಮೆಂಟ್ನಲ್ಲಿ ಹೇಳುತ್ತಿದ್ದಾರೆ. ಐ ಮಿಸ್ ಯೂ ಎಂದು ಇಬ್ಬರೂ ಹೇಳಿಕೊಳ್ಳುವಂತೆ ಕಾಣಿಸುತ್ತಿದೆ ಎಂದು ಒಬ್ಬೊಬ್ಬರು ಒಂದೊಂದು ರೀತಿಯ ವ್ಯಾಖ್ಯಾನ ಮಾಡುತ್ತಿದ್ದಾರೆ.
ಎಲ್ಲರ ಮನಸ್ಸು ಗೆದ್ದ ವಿಡಿಯೋ
ಅದೇನೇ ಇದ್ದರೂ ಈ ವಿಡಿಯೋಗೆ ನಾಯಿ ಪ್ರೇಮಿಗಳು ಮಾತ್ರವಲ್ಲದೇ ಎಲ್ಲರೂ ಫಿದಾ ಆಗಿದ್ದಾರೆ. ವಿಡಿಯೋ ಕಾಲ್ ಮೂಲಕವೂ ಇಂಥದ್ದೊಂದು ಸಂವಹನ ನಡೆಸಲು ಸಾಧ್ಯ ಎಂದು ತೋರಿಸಿಕೊಟ್ಟಿದ್ದಕ್ಕೆ ಹಲವರು ಧನ್ಯವಾದ ಕೂಡ ಸಲ್ಲಿಸುತ್ತಿದ್ದಾರೆ. ಒಟ್ಟಿನಲ್ಲಿ ಈ ಕ್ಯೂಟ್ ವಿಡಿಯೋ ಎಲ್ಲರ ಮನಸ್ಸನ್ನೂ ಗೆದ್ದಿದೆ.


