ಬೆಂಗಳೂರಿನಲ್ಲಿ ವೈರಲ್ ಆಗಿರುವ ಫಲಕವೊಂದರಲ್ಲಿ, ಕನ್ನಡದಲ್ಲಿ ಉಗುಳಿದರೆ ₹500 ಮತ್ತು ಇಂಗ್ಲಿಷ್‌ನಲ್ಲಿ ಉಗುಳಿದರೆ ₹100 ದಂಡ ಎಂದು ಬರೆಯಲಾಗಿದೆ. ಈ ದ್ವಂದ್ವ ನೀತಿಯುಳ್ಳ ಬೋರ್ಡ್ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ..

ಕರ್ನಾಟಕದಲ್ಲಿ ಕನ್ನಡದ ಸ್ಥಿತಿ ಹೇಗಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಅದರಲ್ಲಿಯೂ ಬೆಂಗಳೂರಿನಂಥ ನಗರಗಳಲ್ಲಿ, ಕನ್ನಡದಲ್ಲಿ ಮಾತನಾಡಿದರೆ ಮುಖವೆಲ್ಲಾ ತಿರುಚಿ ನೋಡುವ ದೊಡ್ಡ ವರ್ಗವೇ ಇದೆ. ಇದೇ ಕಾರಣಕ್ಕೆ, ಕನ್ನಡದಲ್ಲಿಯೇ ಹುಟ್ಟಿ ಬೆಳೆದ ಅದೆಷ್ಟೋ ಅಪ್ಪ-ಅಮ್ಮ ತಮ್ಮ ಮಕ್ಕಳು ಇಂಗ್ಲಿಷ್​ನಲ್ಲಿ ಚೆನ್ನಾಗಿ ಮಾತನಾಡಬೇಕು ಎಂದು ಬಯಸುತ್ತಿದ್ದಾರೆ. ಮಕ್ಕಳಿಗೆ ಕನ್ನಡ ಬರುವುದಿಲ್ಲ ಎಂದು ಖುಷಿಯಿಂದ ಹೇಳಿಕೊಳ್ಳುವ ಪೋಷಕರೂ ಅದೆಷ್ಟೋ ಮಂದಿ ಇದ್ದಾರೆ, ಆದರೆ ಇಂಗ್ಲಿಷ್​ ಬರಲ್ಲ ಎಂದು ಹೇಳುವುದಕ್ಕೆ ಮಾತ್ರ ತಲೆತಗ್ಗಿಸಿ ನಿಲ್ಲುತ್ತಾರೆ. ಅದಕ್ಕೆ ತಕ್ಕಂತೆ ಕೆಲವು ಶಾಲೆಗಳಲ್ಲಿ ಕನ್ನಡದಲ್ಲಿ ಮಾತನಾಡಿದರೆ ದಂಡ ಎನ್ನುವ ನಿಯಮಗಳೂ ಇವೆ. ನವೆಂಬರ್​ ತಿಂಗಳು ಬಂತೆಂದರೆ ಸಾಕು ಕನ್ನಡ ಕನ್ನಡ ಎಂದು ಭಾಷಣ ಬಿಗಿಯುವ ಅದೆಷ್ಟೋ ದೊಡ್ಡ ದೊಡ್ಡ ಮಂದಿಗೆ, ಅವರ ಮಕ್ಕಳಿಗೆ ಸರಿಯಾಗಿ ಕನ್ನಡ ಮಾತನಾಡಲು ಬರುವುದಿಲ್ಲ ಎನ್ನುವುದೇ ವಿಚಿತ್ರ ಎನ್ನಿಸಿದರೂ ಸತ್ಯವೇ ಆಗಿದೆ.

ಸೋಷಿಯಲ್​ ಮೀಡಿಯಾದಲ್ಲಿ ವೈರಲ್​

ಇಂತಿಪ್ಪ ಬೆಂಗಳೂರಿನಲ್ಲಿ ಈಗ ಒಂದು ಬೋರ್ಡ್​ ಸೋಷಿಯಲ್​​ ಮೀಡಿಯಾದಲ್ಲಿ ವೈರಲ್​ ಆಗುತ್ತಿದೆ. ಅಷ್ಟಕ್ಕೂ ಇಂಥ ಫಲಕಗಳು ಸೃಷ್ಟಿಸುವ ಅವಾಂತರಗಳು ಅಷ್ಟಿಷ್ಟಲ್ಲ ಎನ್ನಿ. ಸರ್ಕಾರದಿಂದಲೇ ಗುತ್ತಿಗೆಗೆ ಕೊಟ್ಟು ಬರೆಯುವ ಬೋರ್ಡ್​ಗಳಲ್ಲಿಯೂ ತಪ್ಪುಗಳು ಇದ್ದೇ ಇರುತ್ತವೆ. ಇಂಗ್ಲಿಷ್​ ಅನ್ನು ಗೂಗಲ್​ ಟ್ರಾನ್ಸ್​ಲೇಟ್​ ಮಾಡಿ ಕನ್ನಡದ ಬೋರ್ಡ್​ ಹಾಕುವವರು ಮಾಡುವ ಎಡವಟ್ಟುಗಳು ಅಷ್ಟಿಷ್ಟಲ್ಲ. ಇದನ್ನು ನೋಡಿದರೆ ಅಯ್ಯೋ ದೇವರೇ ಕನ್ನಡಕ್ಕೆ ಈ ಸ್ಥಿತಿ ಬಂತಾ ಎಂದು ಕೇಳಬೇಕಾಗುತ್ತದೆ. ಪತ್ರಿಕೆಗಳಲ್ಲಿ ಸರ್ಕಾರದಿಂದ ಬರುವ ಕನ್ನಡ ಜಾಹೀರಾತುಗಳನ್ನು ನೋಡಿದಾಗ ಮಾತ್ರ ನಿಜವಾದ ಕನ್ನಡಿಗರಿಗೆ ರೋಷ ಉಕ್ಕುವುದಂತೂ ದಿಟ.

ಕನ್ನಡದಲ್ಲಿ ಒಂದು, ಇಂಗ್ಲಿಷ್​ನಲ್ಲಿ ಇನ್ನೊಂದು

ಇವೆಲ್ಲವುಗಳ ನಡುವೆ ಈಗ ಒಂದು ವೈರಲ್​ ಆಗಿರೋ ಫಲಕದಲ್ಲಿ ಇಲ್ಲಿ ಉಗುಳಿದರೆ ದಂಡ ಎನ್ನುವ ಬೋರ್ಡ್​ ನೋಡಬಹುದು. ಇದು ಬನಶಂಕರಿಯಲ್ಲಿ ಇರುವ ಫಲಕ ಎಂದು ಹೇಳಲಾಗುತ್ತಿದೆಯಾದರೂ ಅದರ ಬಗ್ಗೆ ಸರಿಯಾದ ಉಲ್ಲೇಖವಿಲ್ಲ, ಆದರೆ ಈ ಬೋರ್ಡ್​ ನೋಡಿದರೆ ಮಾತ್ರ ಕನ್ನಡಿಗರು ಹೌಹಾರುವುದು ದಿಟ. ಏಕೆಂದರೆ ಇಲ್ಲಿ ಉಗುಳಿದರೆ 500 ರೂಪಾಯಿಗಳ ದಂಡ ಎಂದು ಕನ್ನಡದಲ್ಲಿ ಬರೆಯಲಾಗಿದ್ದರೆ, ಅದನ್ನೇ ಇಂಗ್ಲಿಷ್​ನಲ್ಲಿ ಬರೆದಾಗ 100 ರೂಪಾಯಿ ದಂಡ ಎಂದು ಮಾಡಲಾಗಿದೆ! ಇಷ್ಟುಚಿಕ್ಕ ಫಲಕ ಬರೆಯುವಾಗ ಅಷ್ಟೂ ಗೊತ್ತಾಗುವುದಿಲ್ಲವಾ ಎನ್ನುವುದು ಇದೀಗ ಭಾರಿ ಚರ್ಚೆಗೆ ಗ್ರಾಸವಾಗಿದೆ. ಇಂಗ್ಲಿಷ್​ನಲ್ಲಿ ಹೇಗೆ ಉಗುಳುವುದು ಎಂದು ಸೋಷಿಯಲ್​ ಮೀಡಿಯಾದಲ್ಲಿ ಜನರು ಕೇಳುತ್ತಿದ್ದಾರೆ! ಅಷ್ಟಕ್ಕೂ ಇದು ನಿಜವಾಗಿಯೂ ಹೀಗೆಯೇ ಇದೆಯೋ ಅಥ್ವಾ ಯಾರೋ ಉದ್ದೇಶಪೂರ್ವಕವಾಗಿ ತಿರುಚಿದ್ದಾರೋ ಎನ್ನುವುದು ಇನ್ನಷ್ಟೇ ತಿಳಿಯಬೇಕಿದೆ!

ರಿಯಾಯಿತಿ ಕೊಡಿ ಪ್ಲೀಸ್​

ದೂರುಗಳಿಗೆ ಸಂಪರ್ಕಿಸಿ ಸಹಾಯಕ ಸಂಚಾರ ವ್ಯವಸ್ಥಾಪಕರು ಎಂದು ಬರೆಯಲಾಗಿದೆ. ಇದರ ಅರ್ಥ ಇದು ಕೂಡ ಸರ್ಕಾರದ ವತಿಯಿಂದಲೇ ತಯಾರು ಮಾಡಲಾಗಿರುವ ಫಲಕ ಎಂದಾಯ್ತು. ಇದರ ಫೋಟೋ ವೈರಲ್​ ಆಗುತ್ತಲೇ ದಯವಿಟ್ಟು ಕನ್ನಡಿಗರಿಗೂ ರಿಯಾಯಿತಿ ಕೊಡಿ ಎಂದು ನೆಟ್ಟಿಗರು ಕಾಲೆಳೆಯುತ್ತಿದ್ದಾರೆ. ರಸ್ತೆಯ ಮೇಲೆ ಉಗುಳುವುದು ಬಿಡಿ, ಆಹಾರದ ಮೇಲೆ ಉಗುಳುವವರಿಗೆ ಎಷ್ಟು ದಂಡ ಹಾಕ್ತೀರಿ ಎಂದು ಮತ್ತೆ ಕೆಲವರು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ. ಜೈಲಿನಲ್ಲಿ ಕೊಡುವಂತೆ ರಾಜಾತಿಥ್ಯವೇನಾದರೂ ಸಿಗಲಿದ್ಯಾ ಎಂದು ಇನ್ನೂ ಕೆಲವರು ಯಾವುದ್ಯಾವುದೋ ವಿಷಯಕ್ಕೆ ಈ ಬೋರ್ಡ್​ ಅನ್ನು ಲಿಂಕ್​ ಮಾಡುತ್ತಿದ್ದಾರೆ. ಕನ್ನಡ, ಇಂಗ್ಲಿಷ್​ ಬಿಟ್ಟು ಬೇರೆ ಭಾಷೆಯಲ್ಲಿ ಉಗುಳಿದ್ರೆ ದಂಡ ಇಲ್ವಾ ಎಂದು ಮತ್ತೆ ಕೆಲವರು ಕೇಳ್ತಿದ್ದಾರೆ. ಒಟ್ಟಿನಲ್ಲಿ ಈ ಬೋರ್ಡ್​ ಈಗ ಸೋಷಿಯಲ್​ ಮೀಡಿಯಾದಲ್ಲಿ ಹಲ್​ಚಲ್​ ಸೃಷ್ಟಿಸುತ್ತಿದೆ.

Threadನಲ್ಲಿ ವೈರಲ್​ ಆಗಿರೋ ಬೋರ್ಡ್​ ನೋಡಿ