2020ರಲ್ಲಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಬಿಳಿ ಸೀರೆಯ ದೆವ್ವ ಕಾಣಿಸಿಕೊಂಡಿದೆ ಎಂಬ ಸುದ್ದಿ ಭಾರೀ ಸದ್ದು ಮಾಡಿತ್ತು. ಪೈಲಟ್ ಮತ್ತು ಸಿಬ್ಬಂದಿ ರನ್‌ವೇ ಹಾಗೂ ಕಾರ್ಗೋ ಬಳಿ ಈ ಆಕೃತಿಯನ್ನು ನೋಡಿ ಭಯಭೀತರಾಗಿದ್ದರು. ಇದೀಗ ಈ ಘಟನೆ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
2020ರ ಸಮಯದಲ್ಲಿ ನಡೆದ ಘಟನೆ ಇದು. ಆಗ ಈ ಸುದ್ದಿ ಮಾಧ್ಯಮಗಳಲ್ಲಿಯೂ ಭಾರಿ ಸದ್ದು ಮಾಡಿತ್ತು! ಅದೇನೆಂದರೆ, ಬೆಂಗಳೂರಿನ ದೇವನಹಳ್ಳಿಯಲ್ಲಿ ಇರುವ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ (ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ)ದಲ್ಲಿ ದೆವ್ವ ಇದೆ ಎನ್ನುವ ಸುದ್ದಿ. ವಿಮಾನ ನಿಲ್ದಾಣದ ಕೆಲವು ಸಿಬ್ಬಂದಿ ಈ ದೆವ್ವ ನೋಡಿರುವುದಾಗಿ ಹೇಳಿಕೊಂಡಿದ್ದಾರೆ ಎನ್ನಲಾಗಿತ್ತು. ಒಬ್ಬ ಪೈಲಟ್ ರನ್‌ವೇಯಲ್ಲಿ ಬಿಳಿ ಸೀರೆ ಧರಿಸಿದ ಮಹಿಳೆಯನ್ನು ನೋಡಿ ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಹಾಯ ಮಾಡಲು ಕೇಳಿದ್ದಾಗ ಇದು ಭಾರಿ ಚರ್ಚೆಗೆ ಗ್ರಾಸವಾಗಿತ್ತು. ರನ್ವೇನಲ್ಲಿ ಬಿಳಿ ಸೀರೆ ಧರಿಸಿದ ಮಹಿಳೆಯನ್ನು ನೋಡಿದೆ. ಹತ್ತಿರ ಹೋದಾಗ ಆಕೆ ಅಲ್ಲಿ ಇರಲಿಲ್ಲ, ಕಣ್ಮರೆಯಾದಳು ಎಂದಿದ್ದರು. ಇದನ್ನು ಕೆಲವರು ಭ್ರಮೆ ಎಂದರು, ಮತ್ತೆ ಕೆಲವರು ಯಾವುದೋ ಬೆಳಕು ನೋಡಿ ಹಾಗೆ ಅಂದುಕೊಂಡಿರಬೇಕು ಎಂದಿದ್ದರು.
ಸಿಬ್ಬಂದಿಯ ಬೆಚ್ಚಿಬೀಳುವ ಅನುಭವ!
ಆ ಬಳಿಕ ಇದೇ ದೃಶ್ಯವನ್ನು ತಾವೂ ನೋಡಿರುವುದಾಗಿ ಮತ್ತೆ ಕೆಲವು ಸಿಬ್ಬಂದಿ ಹೇಳುತ್ತಿದ್ದಂತೆಯೇ ಅಲ್ಲಿಯ ಸಿಬ್ಬಂದಿ ಬೆಚ್ಚಿಬಿದ್ದಿದ್ದರು. ಕಾರ್ಗೋ ಕಟ್ಟಡದಲ್ಲಿ ಈ ಆಕೃತಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದಾಗಿ ರಾತ್ರಿ ಶಿಫ್ಟ್ನಲ್ಲಿ ಇರುವ ಸಿಬ್ಬಂದಿ ಹೇಳುತ್ತಿದ್ದರು. ಎಸ್ಕಲೇಟರ್‌ಗಳಲ್ಲಿ ಒಂದರ ಬಳಿ ಮತ್ತು ಪಾರ್ಕಿಂಗ್ ಕೊಲ್ಲಿಯ ಬಳಿಯೂ ತಾವು ನೋಡಿರುವುದಾಗಿ ಸಿಬ್ಬಂದಿ ಹೇಳಿ, ಅನೇಕರು ತಮ್ಮ ಜೀವಕ್ಕೆ ಹೆದರಿ ರಾತ್ರಿ ಪಾಳಿಯಲ್ಲಿ ಕೆಲಸ ಮಾಡಲು ನಿರಾಕರಿಸಿದ್ದೂ ಇದೆ. ಈ ದೆವ್ವ ಯಾರಿಗೂ ತೊಂದರೆ ಮಾಡಿರಲಿಲ್ಲವಂತೆ. ಆದರೆ ತೊಂದರೆ ಮಾಡುವುದು ದೂರದ ಮಾತು, ಯಾವುದೋ ಆಕೃತಿ ನೋಡಿದರೆ ಆ ನೀರವ ರಾತ್ರಿಯಲ್ಲಿ ಏನಾಗಬಹುದು ಎಂದು ಊಹಿಸಿದರೇ ಬೆಚ್ಚಿಬೀಳುತ್ತೇವೆ ಅಲ್ಲವೆ, ಅದೇ ರೀತಿ ಸಿಬ್ಬಂದಿ ಕೂಡ ಭಯದಿಂದ ನಡುಗಿ ನೈಟ್ ಶಿಫ್ಟ್ ನಿರಾಕರಿಸುತ್ತಿದ್ದರು.
ನಕಾರಾತ್ಮಕ ಶಕ್ತಿ!
ಕೆಲವರು ತಾವು ರುಂಡ ಇಲ್ಲದ ಆಕೃತಿ ನೋಡಿರುವುದಾಗಿಯೂ ಹೇಳಿದ್ದರು. ಇದು ಭಾರಿ ಸುದ್ದಿಯಾಗುತ್ತಲೇ, ಈ ಪ್ರದೇಶಗಳಲ್ಲಿ ಏನಾದರೂ ಅಸಾಮಾನ್ಯವಾಗಿದೆಯೇ ಎಂದು ಪತ್ತೆಹಚ್ಚಲು ತಜ್ಞರು ಅತಿಗೆಂಪು ಕಿರಣಗಳನ್ನು ಬಳಸಿದ್ದರು. ಆ ಸಮಯದಲ್ಲಿ ಕೆಲವು ನಕಾರಾತ್ಮಕ ಶಕ್ತಿಯ ಉಪಸ್ಥಿತಿಯನ್ನು ಪತ್ತೆಹಚ್ಚಿದ್ದರು ಎಂದೂ ಹೇಳಲಾಗುತ್ತದೆ. ವಾಯು ಸಂಚಾರ ನಿಯಂತ್ರಣವು ಅಂತಹ ಯಾವುದೇ ಘಟನೆ ನಡೆಯುತ್ತಿಲ್ಲ ಎಂದು ಹೇಳಿತ್ತಾದರೂ, ಅದನ್ನು ನೋಡಿರುವುದಾಗಿ ಹೇಳಿದ ಪೈಲಟ್ ಮತ್ತು ಸಿಬ್ಬಂದಿ ಇಂದಿಗೂ ನಡುಗುತ್ತಿದ್ದಾರೆ.
ಮತ್ತೆ ಕಾಣಿಸ್ತಿದ್ಯಾ?
ಈ ಘಟನೆಯಾಗಿ ಐದು ವರ್ಷಗಳೇ ಕಳೆದಿವೆ. ಈಗ ಮತ್ತದೇ ಸುದ್ದಿ ಸದ್ದು ಮಾಡುತ್ತಿದೆ. ವಿಮಾನ ನಿಲ್ದಾಣದ ಕಾರ್ಗೋ ಪ್ರದೇಶದ ಬಳಿ ಬಿಳಿಯ ಆಕೃತಿಯನ್ನು ಸಿಬ್ಬಂದಿ ನೋಡಿರುವುದಾಗಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ಬಹುಶಃ ಇದು ಹಳೆಯ ಘಟನೆಯ ಆಧಾರದ ಮೇಲೆ ಮತ್ತೊಮ್ಮೆ ಅದನ್ನೇ ರೋಚಕವಾಗಿ ಹೇಳುತ್ತಿರಬಹುದಾದರೂ, ಇದು ಸಾಕಷ್ಟು ವೈರಲ್ ಆಗ್ತಿರೋ ಹಿನ್ನೆಲೆಯಲ್ಲಿ 2020ರ ಘಟನೆಯನ್ನು ಮತ್ತೊಮ್ಮೆ ಮೆಲುಕು ಹಾಕುವಂತಾಗಿದೆ!


