2026ರ ಆಗಸ್ಟ್‌ನಲ್ಲಿ ಭೂಮಿಯು ಗುರುತ್ವಾಕರ್ಷಣೆಯನ್ನು ಕಳೆದುಕೊಳ್ಳುತ್ತದೆ, ಅದರಿಂದ ಭಯಾನಕ ಪರಿಣಾಮಗಳಾಗುತ್ತವೆ ಎಂಬ ವೈರಲ್ ಸುದ್ದಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. 'ಪ್ರಾಜೆಕ್ಟ್ ಆಂಕರ್' ಎಂಬ ನಾಸಾದ ಯೋಜನೆಯೂ ಇದೆಯಂತೆ. ನಿಜವೇನು?
2026ರ ಆಗಸ್ಟ್‌ನಲ್ಲಿ ನಮ್ಮ ಭೂಮಿ ಕೆಲವು ಸೆಕೆಂಡುಗಳ ಕಾಲ ಗುರುತ್ವಾಕರ್ಷಣೆ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಎಂಬ ಒಂದು ವಿಚಿತ್ರ ಸಂಚು ಸಿದ್ಧಾಂತ (conspiracy theory) ಸಾಮಾಜಿಕ ಜಾಲತಾಣಗಳಲ್ಲಿ ಗಾಬರಿ ಸೃಷ್ಟಿಸಿದೆ. ಎಕ್ಸ್, ಟಿಕ್‌ಟಾಕ್, ಯೂಟ್ಯೂಬ್‌ಗಳಲ್ಲಿ ಹರಡುತ್ತಿರುವ ಈ ಪೋಸ್ಟ್‌ಗಳು, 2026ರ ಆಗಸ್ಟ್ 12ರಂದು, ಮಧ್ಯಾಹ್ನ 2:33ಕ್ಕೆ ಭೂಮಿಗೆ ಏಳು ಸೆಕೆಂಡುಗಳ ಕಾಲ ಗುರುತ್ವಾಕರ್ಷಣೆ ಇರುವುದಿಲ್ಲ ಎಂದು ಹೇಳುತ್ತಿವೆ.
ಕೆಲವು ಪೋಸ್ಟ್‌ಗಳು ಇದನ್ನು ಇನ್ನಷ್ಟು ಭಯಾನಕವಾಗಿ ಚಿತ್ರಿಸಿ, ಈ ವೇಳೆ ಸುಮಾರು 4 ಕೋಟಿ ಜನರು ಸಾಯಬಹುದು ಎಂದು ಎಚ್ಚರಿಕೆ ನೀಡಿವೆ. ಅಲ್ಲದೆ, ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ (NASA) ಈ ವಿಷಯವನ್ನು ಬಹುಕಾಲದಿಂದ ತಿಳಿದುಕೊಂಡಿದ್ದು, “ಪ್ರಾಜೆಕ್ಟ್ ಆಂಕರ್” ಎಂಬ ಗುಪ್ತ ಯೋಜನೆಯಡಿ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದು ಕೂಡ ಆರೋಪಿಸಿದೆ. ಈ ವದಂತಿಗಳಲ್ಲಿ ನಾಸಾ ಹೆಸರನ್ನು ಮತ್ತೆ ಮತ್ತೆ ಬಳಸಲಾಗುತ್ತಿದೆ.
ಯಾಕೆ ಗುರುತ್ವಾಕರ್ಷಣೆ ಇಲ್ಲದಾಗುತ್ತದೆ? ಇದಕ್ಕೆ ಸ್ಪಷ್ಟ ಕಾರಣವನ್ನು ಯಾರೂ ಹೇಳಿಲ್ಲ. ಆದರೆ ಭೂಮಿಯ ಸುತ್ತಮುತ್ತಲಿನ ಆಕಾಶಕಾಯಗಳಲ್ಲಿ ಆಗುವ ಭಾರಿ ಗುರುತ್ವಾಕರ್ಷಣೆಯ ಬದಲಾವಣೆಯೇ ಇದಕ್ಕೆ ಕಾರಣ. ಆಗ ಆಕಾಶಕಾಯಗಳೆಲ್ಲ ಯದ್ವಾತದ್ವಾ ವರ್ತಿಸಲು ಶುರು ಮಾಡುತ್ತವೆ. ಎಲ್ಲದರ ಗುರುತ್ವಶಕ್ತಿಯೂ ವ್ಯತ್ಯಾಸ ಆಗುತ್ತದೆ. ಭೂಮಿ ಕೂಡ ವಿಚಿತ್ರವಾಗಿ ವರ್ತಿಸಲಾರಂಭಿಸುತ್ತದೆ.
ಭೂಮಿಗೆ ಏನಾಗುತ್ತದೆ?
ಆಗ ಏನಾಗಬಹುದು? ಭೂಮಿಯ ಮೇಲಿರುವ ಎಲ್ಲ ವಸ್ತುಗಳೂ ಹಗುರವಾಗುತ್ತವೆ. ಕೆಲವು ಹತ್ತಿಯಂತೆ ಮೇಲೆ ತೇಲಬಹುದು. ಸಮುದ್ರದ ಅಲೆಗಳು ಉಕ್ಕಬಹುದು. ಗಾಳಿಯ ಅಲೆಗಳು ವ್ಯತ್ಯಾಸವಾಗುತ್ತವೆ. ರೈಲು ಹಳಿಗಳು ಕಿತ್ತು ಹೋಗಬಹುದು. ವಾಹನಗಳು ನಿರೀಕ್ಷಿಸಿದಂತೆ ಚಲಿಸುವುದಿಲ್ಲ. ತೈಲ ಬಾವಿಗಳಿಂದ ತೈಲ ಉಕ್ಕಿ ಹೊರಸೂಸಬಹುದು. ಏನೇನೋ ಆಗಬಹುದು. ಪ್ರಳಯದಂಥ ಪರಿಸ್ಥಿತಿ ಉಂಟಾಗಬಹುದು. ಇದೆಲ್ಲವೂ, ಗುರುತ್ವಾಕರ್ಷಣೆ ಕಳೆದುಹೋದರೇನು ಗತಿ ಎಂದು ತರ್ಕಿಸಿದವರ ಊಹೆಗಳು.
ಆದರೆ ನಾಸಾ ಸಂಸ್ಥೆ ಇದೆಲ್ಲವನ್ನೂ ತೀವ್ರವಾಗಿ ತಳ್ಳಿಹಾಕಿದೆ. “ಗುರುತ್ವಾಕರ್ಷಣೆ ಎಂಬುದು ಆನ್-ಆಫ್ ಆಗುವ ಸ್ವಿಚ್ ಅಲ್ಲ. ಭೂಮಿಯ ಗುರುತ್ವಾಕರ್ಷಣೆ ಅದರ ಒಟ್ಟು ಭಾರದ ಮೇಲೆ ಅವಲಂಬಿತವಾಗಿದೆ. ಭೂಮಿಯ ಕೇಂದ್ರ, ಭೂಪಟಲ, ಸಮುದ್ರಗಳು, ನೀರು, ವಾತಾವರಣ – ಇವೆಲ್ಲದರ ಒಟ್ಟು ಭಾರ ಇದ್ದಷ್ಟು ಕಾಲ ಗುರುತ್ವಾಕರ್ಷಣೆ ಕಳೆದುಹೋಗಲು ಸಾಧ್ಯವೇ ಇಲ್ಲ. ಆಕಾಶಕಾಯಗಳಲ್ಲಿ ಅಂಥದೇನಾದರೂ ವ್ಯತ್ಯಾಸ ಆಗುವುದಿದ್ದರೆ ದಶಕಗಳ ಮೊದಲೇ ಗೊತ್ತಾಗುತ್ತಿತ್ತು ಎಂದು ನಾಸಾ ಹೇಳಿದೆ.
ಇಂಟರ್‌ನೆಟ್‌ನಲ್ಲಿ ಹುಡುಕಿದರೆ “ಪ್ರಾಜೆಕ್ಟ್ ಆಂಕರ್” ಎಂಬ ನಾಸಾ ಯೋಜನೆಗೆ ಸಂಬಂಧಿಸಿದಂತೆ ಯಾವುದೇ ಅಧಿಕೃತ ದಾಖಲೆ, ಬಜೆಟ್ ಮಾಹಿತಿ ಅಥವಾ ಒಳಗಿನ ಮೆಮೊ ಸಿಕ್ಕಿಲ್ಲ. 2024ರ ನವೆಂಬರ್‌ನಲ್ಲಿ ಲೀಕ್ ಆಯಿತು ಎಂದು ಹೇಳಲಾಗುತ್ತಿರುವ ಡಾಕ್ಯುಮೆಂಟ್ ಪೂರ್ತಿ ಕಟ್ಟುಕಥೆ ಎಂದು ತಜ್ಞರು ಹೇಳಿದ್ದಾರೆ.
ವಿಜ್ಞಾನಿಗಳ ಪ್ರಕಾರ, ಈ ಸಿದ್ಧಾಂತವು ಗುರುತ್ವಾಕರ್ಷಣೆಯ ಮೂಲಭೂತ ಅರ್ಥವನ್ನೇ ತಪ್ಪಾಗಿ ಅರ್ಥಮಾಡಿಕೊಂಡಿರುವುದನ್ನು ತೋರಿಸುತ್ತದೆ. ಗುರುತ್ವಾಕರ್ಷಣೆ ಎಂದರೆ ಯಾವದೋ ಯಂತ್ರದಂತೆ ನಿಲ್ಲಿಸಿ ಮತ್ತೆ ಶುರು ಮಾಡುವ ವ್ಯವಸ್ಥೆ ಅಲ್ಲ. ಅದು ಭೂಮಿಯ ಭಾರದಿಂದಲೇ ಉಂಟಾಗುವ ಶಕ್ತಿ.
ಸೂರ್ಯಗ್ರಹಣದ ಜೊತೆಗೆ ಕನೆಕ್ಷನ್?
ಕೆಲವರು ಈ ವದಂತಿಯನ್ನು ಬರಲಿರುವ ಸೂರ್ಯಗ್ರಹಣದ ಜೊತೆ ಕನೆಕ್ಟ್ ಮಾಡಿದ್ದಾರೆ. ಆದರೆ ನಾಸಾ ತಜ್ಞರು ಇದನ್ನೂ ತಳ್ಳಿಹಾಕಿದ್ದಾರೆ. ಸೂರ್ಯ ಮತ್ತು ಚಂದ್ರನಿಂದ ಸಮುದ್ರದ ಅಲೆಗಳಲ್ಲಿ ಸ್ವಲ್ಪ ಪರಿಣಾಮ ಇರಬಹುದು. ಆದರೆ ಭೂಮಿಯ ಗುರುತ್ವಾಕರ್ಷಣೆಗೆ ಯಾವುದೇ ಅಪಾಯ ಇಲ್ಲ. ಇಂತಹ ಪರಿಣಾಮಗಳು ದಶಕಗಳ ಹಿಂದೆಯೇ ಲೆಕ್ಕ ಹಾಕಬಹುದಾದವು.
ಈ ಐಡಿಯಾ ಬಂದಿದ್ದು ಎಲ್ಲಿಂದ?
ಬಹುತೇಕ ವೈರಲ್ ಪೋಸ್ಟ್‌ಗಳು 2020ರಲ್ಲಿ ಯೂಟ್ಯೂಬ್‌ನ “What If” ಎಂಬ ಸೈನ್ಸ್ ಚಾನೆಲ್ ಮಾಡಿದ್ದ ಒಂದು ವಿಡಿಯೋವನ್ನು ಉಲ್ಲೇಖಿಸುತ್ತವೆ. ಆ ವಿಡಿಯೋ ಕೇವಲ “ಏನಾದರೂ ಹೀಗಾದರೆ?” ಎಂಬ ಕಲ್ಪಿತ ಮನರಂಜನೆಗಾಗಿ ಮಾಡಿದ್ದು, ಭವಿಷ್ಯವಾಣಿ ಅಲ್ಲ.
ಇಲ್ಲಿ ನಾಸಾದ ಸಂದೇಶ ಸ್ಪಷ್ಟ. ಗುರುತ್ವಾಕರ್ಷಣೆ ಮಿಂಚಿನಂತೆ ಬಂದು ಹೋಗುವುದಿಲ್ಲ. 2026ರಲ್ಲಿ ಭೂಮಿಗೆ ಏನೂ ಆಗುವುದಿಲ್ಲ. “ಪ್ರಾಜೆಕ್ಟ್ ಆಂಕರ್” ಎಂಬುದು ಇಂಟರ್‌ನೆಟ್‌ನಲ್ಲಿರುವ ಕಟ್ಟುಕಥೆ ಮಾತ್ರ. ಹೀಗಾಗಿ, ವಾಟ್ಸಪ್ ಫಾರ್ವರ್ಡ್‌ಗಳಾದ ಇಂತಹ ಸುದ್ದಿಗಳಿಗೆ ಭಯಪಡದೇ, ವಿಜ್ಞಾನ ಮತ್ತು ನಂಬಿಗಸ್ಥ ಮಾಹಿತಿಗೆ ಕಿವಿಗೊಡಿ.

