Karwa Chauth :ಕರವಾ ಚೌತ್ ದಿನ ತಂದೆ – ತಾಯಿ ಅನುಮಾನವನ್ನು ದೂರ ಮಾಡಲು ಯುವತಿಯೊಬ್ಬಳು 6 ಆಲೂ ಪರೋಟ ತಿಂದಿದ್ದಾಳೆ. ಇದು ಪಾಲಕರಿಗೆ ಖುಷಿ ನೀಡಿದ್ರೂ ಹೊಸ ಅನುಮಾನ ಹುಟ್ಟುಹಾಕಿದೆ.

ಪಾಲಕರ ವಿಶೇಷ ಗಮನ ಬೆಳೆಯುತ್ತಿರುವ ಮಕ್ಕಳ ಮೇಲಿರುತ್ತದೆ. ಮಕ್ಕಳು ಏನೂ ಮಾಡಿದ್ರೂ ಅವರನ್ನು ಅನುಮಾನದಿಂದ ನೋಡ್ತಾರೆ. ಪತಿ ಅಥವಾ ಜೀವನ ಸಂಗಾತಿ ಉತ್ತಮ ಆಯಸ್ಸು, ಆರೋಗ್ಯ ವೃದ್ಧಿಗೆ ಅಂತ ಕರವಾ ಚೌತ್‌ ವ್ರತ ಮಾಡ್ತಾರೆ. ಮದುವೆಯಾಗದ ಹುಡುಗಿ ಈ ವ್ರತ ಮಾಡಿದಾಗ ಅನುಮಾನ ಬರೋದು ಸಹಜ. ಆಕೆ ಯಾರಿಗಾಗಿ ವ್ರತ ಮಾಡ್ತಿದ್ದಾಳೆ? ಯಾರನ್ನಾದ್ರೂ ಪ್ರೀತಿ ಮಾಡ್ತಿದ್ದಾಳಾ ಎಂಬ ಪ್ರಶ್ನೆ ಪಾಲಕರನ್ನು ಸಹಜವಾಗಿ ಕಾಡುತ್ತದೆ. ಅದಕ್ಕೆ ಯುವತಿಯೊಬ್ಬಳು ತನ್ನದೇ ರೀತಿಯಲ್ಲಿ ಉತ್ತರ ನೀಡಿದ್ದಾರೆ.

ಆರು ಪರೋಟ ತಿಂದ ಯುವತಿ

ಕರವಾ ಚೌತ್‌ ದಿನ ಯುವತಿ ಆರು ಆಲೂ ಪರೋಟ ತಿನ್ನುವ ಮೂಲಕ ನನಗೆ ಯಾರೂ ಬಾಯ್ ಫ್ರೆಂಡ್‌ ಇಲ್ಲ ಎಂಬುದನ್ನು ಪಾಲಕರಿಗೆ ಪರೋಕ್ಷವಾಗಿ ಹೇಳಿದ್ದಾಳೆ. ಇದಕ್ಕೂ ಒಂದು ಕಾರಣವಿದೆ. ಮೂಲಗಳ ಪ್ರಕಾರ, ಕಳೆದ ಮೂರು ವರ್ಷಗಳಿಂದ ಕರವಾಚೌತ್ ದಿನ ಯುವತಿ ಹೊಟ್ಟೆ ನೋವು ಎನ್ನುತ್ತ ಊಟ ಮಾಡದೆ ಉಪವಾಸ ಇರ್ತಿದ್ಲು. ಇದನ್ನು ಪೋಷಕರು ಗಮನಿಸಿದ್ದರು. ಇದರಿಂದ ಮಗಳಿಗೆ ಯಾರೋ ಬಾಯ್ಫ್ರೆಂಡ್ ಇದ್ದಾನೆ, ಆತನಿಗಾಗಿ ಉಪವಾಸ ಮಾಡುತ್ತಿದ್ದಾಳೆ ಎಂಬ ಅನುಮಾನ ಪೋಷಕರಲ್ಲಿ ಮೂಡಿತ್ತು.

ಈ ಅನುಮಾನಕ್ಕೆ ಅಂತ್ಯ ಹಾಡಬೇಕು ಎಂದು ನಿರ್ಧರಿಸಿದ ಯುವತಿ, ಈ ಬಾರಿ ಕರವಾಚೌತ್ ದಿನ ಕುಟುಂಬದವರ ಎದುರೇ ಆರು ಆಲೂ ಪರೋಟ ಗಳನ್ನು ತಿಂದಿದ್ದಾಳೆ. ಯಾರಿಗೋಸ್ಕರವೂ ತಾನು ಉಪವಾಸ ಮಾಡುವ ಉದ್ದೇಶ ಹೊಂದಿಲ್ಲ ಎಂಬುದನ್ನು ಸಾಬೀತುಪಡಿಸುವ ಪ್ರಯತ್ನ ಮಾಡಿದ್ದಾಳೆ.

ಪರೋಟ ತಿಂದ್ಮೇಲೆ ಮತ್ತಷ್ಟು ಅನುಮಾನ

ಮಗಳು ಹೊಟ್ಟೆತುಂಬಾ ಊಟ ಮಾಡುತ್ತಿದ್ದನ್ನು ನೋಡಿ ತಾಯಿಗೆ ಸಮಾಧಾನವೇನೋ ಆಗಿದೆ. ಆದ್ರೆ ಯುವತಿ ಆರು ಪರೋಟ ತಿಂದ ನಂತ್ರ ಕುಟುಂಬದವರಿಗೆ ಮತ್ತಷ್ಟು ಅನುಮಾನ ಶುರುವಾಗಿದೆ. ಕರವಾಚೌತ್ ಉಪವಾಸ ಮುರಿಯುವ ಸಮಯದಲ್ಲೇ ಆಕೆ ಆರು ಪರೋಟಗಳನ್ನು ತಿಂದಿದ್ದಾಳೆ. ಇದು ಕೇವಲ ಕಾಕತಾಳೀಯವೇ ಅಥವಾ ಪೋಷಕರ ಅನುಮಾನದಲ್ಲಿ ಏನಾದರೂ ಸತ್ಯವಿದೆಯೇ ತಿಳಿದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇದಕ್ಕೆ ಸಾಕಷ್ಟು ಕಮೆಂಟ್ ಬಂದಿದೆ. ಹುಡುಗಿ ಪ್ರೀತಿಸುತ್ತಿರುವ ಹುಡುಗನ ಜಾತಿ, ಪ್ರದೇಶದ ಬಗ್ಗೆ ಬಳಕೆದಾರರು ಅನುಮಾನ ವ್ಯಕ್ತಪಡಿಸಿದ್ದಾರೆ.