ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ ಮತ್ತು ಜಾರ್ಜಿನಾ ರೊಡ್ರಿಗಸ್ ತಮ್ಮ ಐದು ಮಕ್ಕಳ ಸಮ್ಮುಖದಲ್ಲಿ ಅತ್ಯಂತ ಖಾಸಗಿಯಾಗಿ ವಿವಾಹವಾಗಿದ್ದಾರೆ. ಆದರೆ, ಈ ಸರಳ ಸಮಾರಂಭದಲ್ಲಿ ಜಾರ್ಜಿನಾ ಧರಿಸಿದ್ದ ₹95.6 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಎಲ್ಲರ ಗಮನ ಸೆಳೆದಿದ್ದು, ಅವರ ಸರಳತೆಯ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ವಿಶ್ವದ ಅತ್ಯಂತ ದುಬಾರಿ ಹಾಗೂ ಯಶಸ್ವಿ ಫುಟ್‌ಬಾಲ್ ತಾರೆ ಕ್ರಿಸ್ಟಿಯಾನೋ ರೊನಾಲ್ಡೋ (Cristiano Ronaldo) ಮತ್ತು ಅವರ ಸುದೀರ್ಘ ಅವಧಿಯ ಬಾಳ ಸಂಗಾತಿ ಜಾರ್ಜಿನಾ ರೊಡ್ರಿಗಸ್ (Georgina Rodriguez) ಜಂಟಿಯಾಗಿ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಜಗತ್ತಿನಾದ್ಯಂತ ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ಈ ರಾಯಲ್ ಜೋಡಿ, ತಮ್ಮ ಮದುವೆಯನ್ನು ಯಾವುದೇ ಅಬ್ಬರವಿಲ್ಲದೆ, ಅತ್ಯಂತ ಸರಳವಾಗಿ ಹಾಗೂ ಖಾಸಗಿಯಾಗಿ ನೆರವೇರಿಸಿಕೊಂಡಿದೆ. ದೊಡ್ಡ ದೊಡ್ಡ ಸ್ಟಾರ್‌ಗಳು, ಗಣ್ಯಾತಿಗಣ್ಯರು ಅಥವಾ ವಿವಿಐಪಿಗಳಿಗೆ ಆಹ್ವಾನ ನೀಡುವ ಬದಲು, ಕೇವಲ ತಮ್ಮ ೫ ಮಕ್ಕಳ ಸಮ್ಮುಖದಲ್ಲಿ ಈ ಜೋಡಿ ವಿವಾಹ ಬಂಧನಕ್ಕೆ ಒಳಗಾಗಿದೆ. ಆದರೆ, ಈ ಸರಳ ಹಾಗೂ ಸೈಲೆಂಟ್ ಮದುವೆಯ ಮಧ್ಯೆಯೂ ಇಡೀ ಜಗತ್ತು ತಿರುಗಿ ನೋಡುವಂತೆ ಮಾಡಿದ್ದು ಜಾರ್ಜಿನಾ ಅವರ ರಾಯಲ್ ಲುಕ್! ಅಬ್ಬರವಿಲ್ಲದ ಆಚರಣೆಯ ನಡುವೆಯೂ ಜಾರ್ಜಿನಾ ಕೊರಳಲ್ಲಿದ್ದ 'ಆ' ಒಂದು ರಾಯಲ್ ಆಭರಣ ಈಗ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ.

೫೦ ಕ್ಯಾರೆಟ್ ವಜ್ರದ ಕೌತುಕ!

ಮದುವೆಯ ಆಚರಣೆ ಎಷ್ಟು ಸರಳವಾಗಿತ್ತೋ, ಜಾರ್ಜಿನಾ ಧರಿಸಿದ್ದ ಆಭರಣ ಅಷ್ಟೇ ಪ್ರಳಯಾಂತಕವಾಗಿತ್ತು! ಬಿಳಿ ಬಣ್ಣದ ಅತ್ಯಾಕರ್ಷಕ ಡ್ರೆಸ್‌ನಲ್ಲಿ ಕಂಗೊಳಿಸುತ್ತಿದ್ದ ಜಾರ್ಜಿನಾ ಅವರ ಕೊರಳಲ್ಲಿ ೫೦ ಕ್ಯಾರೆಟ್‌ನ ರೌಂಡ್ ಕಟ್ ಡೈಮಂಡ್ (Round Diamond) ಹೊಂದಿದ್ದ ಬೃಹತ್ ನೆಕ್ಲೇಸ್ ಮಿಂಚುತ್ತಿತ್ತು. ಅತ್ಯಂತ ವಿರಳ ಹಾಗೂ ಶ್ರೇಷ್ಠ ಮಟ್ಟದ ವಜ್ರಗಳಿಂದ ಕಲ್ಪಿತವಾಗಿದ್ದ ಈ ನೆಕ್ಲೇಸ್ ಕಂಡ ತಕ್ಷಣವೇ ಜಗತ್ತಿನ ಫ್ಯಾಷನ್ ಪ್ರಿಯರು ಬೆರಗಾಗಿದ್ದಾರೆ.

ನೆಕ್ಲೇಸ್ ಬೆಲೆ ಕೇಳಿ ಶೇಕ್ ಆದ ಫ್ಯಾನ್ಸ್!

ಈ ಅಪರೂಪದ ನೆಕ್ಲೇಸ್‌ನ ಮೌಲ್ಯ ಕೇಳಿದರೆ ಯಾರಾದರೂ ಒಂದು ಕ್ಷಣ ಕಣ್ಣುಜ್ಜಿಕೊಳ್ಳಬೇಕು! ಅಂತಾರಾಷ್ಟ್ರೀಯ ಆಭರಣ ತಜ್ಞರ ಅಂದಾಜಿನ ಪ್ರಕಾರ, ಜಾರ್ಜಿನಾ ಧರಿಸಿದ್ದ ಈ ನೆಕ್ಲೇಸ್‌ನ ಬೆಲೆ ಬರೋಬ್ಬರಿ $10 ಮಿಲಿಯನ್ ಡಾಲರ್. ಭಾರತೀಯ ರೂಪಾಯಿ ಲೆಕ್ಕದಲ್ಲಿ ಹೇಳಬೇಕೆಂದರೆ, ಇದರ ಬೆಲೆ ಅಂದಾಜು ₹95.6 ಕೋಟಿ ರೂಪಾಯಿಗಳು! ಹೌದು... ಇಡೀ ಮದುವೆಯ ಕಾರ್ಯಕ್ರಮಕ್ಕೆ ತಗಲಿದ ವೆಚ್ಚಕ್ಕಿಂತಲೂ, ಜಾರ್ಜಿನಾ ಕೊರಳಲ್ಲಿದ್ದ ಒಂದೇ ಒಂದು ಹಾರದ ಬೆಲೆಯೇ ನೂರು ಪಟ್ಟು ಹೆಚ್ಚಾಗಿತ್ತು! ಸರಳವಾಗಿ ಮದುವೆಯಾಗುತ್ತಿದ್ದೇವೆ ಎಂದು ಜಗತ್ತಿಗೆ ತೋರಿಸಿದ ಈ ಜೋಡಿ, ಒಂದೇ ಒಂದು ಆಭರಣದ ಮೂಲಕ ತಮ್ಮ ಶ್ರೀಮಂತಿಕೆ ಮತ್ತು ರಾಯಲ್ ಅಭಿರುಚಿಯನ್ನು ಜಗಜ್ಜಾಹೀರು ಮಾಡಿದೆ.

ಮಕ್ಕಳ ಸಮ್ಮುಖದಲ್ಲಿ ಭಾವನಾತ್ಮಕ ಕ್ಷಣ!

ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಫೋಟೋಗಳಲ್ಲಿ, ರೊನಾಲ್ಡೋ ಮತ್ತು ಜಾರ್ಜಿನಾ ತಮ್ಮ ಐದೂ ಮಕ್ಕಳಾದ ಕ್ರಿಸ್ಟಿಯಾನೋ ಜೂನಿಯರ್, ಇವಾ, ಮೇಟಿಯೋ, ಅಲಾನಾ ಮಾರ್ಟಿನಾ ಮತ್ತು ಬೆಲ್ಲಾ ಎಸ್‌ಮೆರಾಲ್ಡಾ ಅವರೊಂದಿಗೆ ಸಂಭ್ರಮಿಸುತ್ತಿರುವುದನ್ನು ಕಾಣಬಹುದು. ಕೋಟಿ ಕೋಟಿ ಅಭಿಮಾನಿಗಳು ಮತ್ತು ಸೆಲೆಬ್ರಿಟಿಗಳ ನಡುವೆ ಅದ್ಧೂರಿಯಾಗಿ ಮದುವೆಯಾಗುವ ಎಲ್ಲಾ ಸಾಮರ್ಥ್ಯವಿದ್ದರೂ, ರೊನಾಲ್ಡೋ-ಜಾರ್ಜಿನಾ ಜೋಡಿ ತಮ್ಮ ಕುಟುಂಬಕ್ಕೆ ಮಾತ್ರ ಈ ಕ್ಷಣವನ್ನು ಸೀಮಿತಗೊಳಿಸಿದ್ದು ಅಭಿಮಾನಿಗಳ ಮನ ಗೆದ್ದಿದೆ. 'ಸರಳ ವಿವಾಹ' ಎಂಬ ಟ್ಯಾಗ್‌ನೊಂದಿಗೆ ನಡೆದ ಈ ಗ್ರ್ಯಾಂಡ್ ಇವೆಂಟ್‌ನಲ್ಲಿ, ಜಾರ್ಜಿನಾ ಅವರ ₹95.6 ಕೋಟಿ ಮೌಲ್ಯದ ವಜ್ರದ ನೆಕ್ಲೇಸ್ ಪ್ರಮುಖ ಆಕರ್ಷಣೆಯಾಗಿ ಹೊರಹೊಮ್ಮಿದೆ. "ಆಚರಣೆ ಸೈಲೆಂಟ್ ಆಗಿದ್ದರೂ, ಜಾರ್ಜಿನಾ ಕೊರಳಿನ ಡೈಮಂಡ್ ಮಾತ್ರ ವೈಲೆಂಟ್ ಆಗಿ ಸೌಂಡ್ ಮಾಡಿದೆ" ಎಂದು ಫುಟ್‌ಬಾಲ್ ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ!