9 ವರ್ಷದ ಪರಿಧಿ ಮಂಗಳಂಪಳ್ಳಿ (paridhi mangalampalli), ತನ್ನ ಅಸಾಧಾರಣ ವಾಕ್ಚತುರತೆಯಿಂದ ಗಮನ ಸೆಳೆದಿರುವ ಬಾಲಪ್ರತಿಭೆ. ಭಾರತೀಯ ಪುರಾಣ, ಭಗವದ್ಗೀತೆಯ ಆಳವಾದ ಜ್ಞಾನ ಹೊಂದಿರುವ ಈಕೆ, ಆಧ್ಯಾತ್ಮಿಕ ವಾಗ್ಮಿಯಾಗಿ ಮತ್ತು ಭರತನಾಟ್ಯ ಕಲಾವಿದೆಯಾಗಿ ಪ್ರಸಿದ್ಧಿ ಪಡೆಯುತ್ತಿದ್ದಾಳೆ.
9 ವರ್ಷದ ಈ ಹುಡುಗಿ ಮಾತಾಡುವುದನ್ನು ಕೇಳಿದರೆ ನೀವು ನಿಬ್ಬೆರಗಿನಿಂದ ಕಣ್ಣು ಬಾಯಿ ಕಿವಿ ತೆರೆದು ನೋಡುತ್ತಾ ಆಲಿಸುತ್ತಾ ಕುಳಿತುಕೊಳ್ತೀರಿ ಖಂಡಿತ. ಭರತನಾಟ್ಯದಿಂದ ಹಿಡಿದು ಭಾರತೀಯ ಪುರಾಣ ಕಾವ್ಯಗಳ ವರೆಗೆ, ಶ್ರೀಕೃಷ್ಣನಿಂದ ಹಿಡಿದು ಮಹಾಶಿವನವರೆಗೆ- ಈಕೆ ಎಲ್ಲವನ್ನೂ ಮನೋಹರವಾಗಿ ಮಾತನಾಡಿ ನಿಮ್ಮ ಹೃದಯ ಗೆಲ್ಲಬಲ್ಲಳು. ಇವಳ ವಾಕ್ಚತುರತೆಗೆ ಮನಸೋತು ಈಗಾಗಲೇ ಬಹಳ ಕಡೆಯಲ್ಲಿ ಈಕೆಯನ್ನು ಸಾರ್ವಜನಿಕ ಉಪನ್ಯಾಸಗಳಿಗೆ ಕರೆಯುತ್ತಿದ್ದಾರೆ. ಇತ್ತೀಚೆಗೆ ಸೆಲೆಬ್ರಿಟಿ ಇನ್‌ಫ್ಲುಯೆನ್ಸರ್ ರಣವೀರ್ ಅಲಹಾಬಾದಿಯಾ ಕೂಡ ಈಕೆಯನ್ನು ತನ್ನ ಯುಟ್ಯೂಬ್ ಚಾನೆಲ್‌ಗೆ ಕರೆದು ಕೂರಿಸಿ ಮಾತನಾಡಿಸಿದ್ದಾನೆ. ಮಲಯಾಳಂ ಮೂಲದ ಈ ಹುಡುಗಿ ಈಗ ಭಾರತದಾದ್ಯಂತ ಪರಿಚಿತಳಾಗುವ ಸಮಯ ಬಂದಿದೆ. ಅಂದ ಹಾಗೆ ಇವಳ ಹೆಸರು ಪರಿಧಿ ಮಂಗಳಂಪಳ್ಳಿ.
ಪರಿಧಿ ಆಧ್ಯಾತ್ಮಿಕ ವಾಗ್ಮಿ ಮತ್ತು ಕಥೆಗಾರ್ತಿ. ಅವಳು ಭಾರತೀಯ ಧರ್ಮಗ್ರಂಥ, ಪುರಾಣಗಳ ಕತೆಗಳನ್ನು ಸಲೀಸಾಗಿ ಹೇಳುತ್ತಾಳೆ. ಮಾತ್ರವಲ್ಲ ಅಲ್ಲಿರುವ ಸಂಕೀರ್ಣವಾದ ಪರಿಕಲ್ಪನೆಗಳನ್ನು ಕೂಡ ಆಧುನಿಕ ಪ್ರೇಕ್ಷಕರಿಗೆ ಆಕರ್ಷಕವಾಗಿ ನಿರೂಪಿಸುತ್ತಾಳೆ. ರಾಮಾಯಣ, ಮಹಾಭಾರತ, ಹರಿವಂಶ ಮೊದಲಾದ ಗ್ರಂಥಗಳನ್ನು ಅವಳು ಐದು ವರ್ಷದವಳಿದ್ದಾಗಲೇ ಓದಿಕೊಂಡಳು. ಅಲ್ಲಿಂದಾಚೆಗೆ ಶ್ರೀಕೃಷ್ಣ ಅವಳ ಫೇವರಿಟ್ ದೇವರಾದ. ಶ್ರೀಕೃಷ್ಣ ಅಂದರೆ ಆಕೆಗೆ ʼಗೋಪಿಕಾವಲ್ಲಭʼ ಅಂತೆ. ಹಾಗಂದರೇನು ಅಂತ ಕೂಡ ಆಕೆ ಸೊಗಸಾಗಿ ವಿವರಿಸುತ್ತಾಳೆ. ಭಗವದ್ಗೀತೆಯನ್ನೂ ಮನನ ಮಾಡಿದ್ದಾಳೆ. ಅದರ ಶ್ಲೋಕಗಳನ್ನೂ ಹೇಳಿ, ಅರ್ಥವನ್ನೂ ವಿವರಿಸುತ್ತಾಳೆ.
ಪುರಾಣಗಳ ಆಳವಾದ ತಿಳುವಳಿಕೆ ಈಕೆಗಿದೆ. ಜೊತೆಗೆ ಆ ಪಾಂಡಿತ್ಯವನ್ನು ಕಥೆ ಹೇಳುವಿಕೆಯೊಂದಿಗೆ ಸಂಯೋಜಿಸುತ್ತಾಳೆ. ಪುರಾಣದ ಸಾರವನ್ನು ಅದರ ಆಳ ಅಥವಾ ಸೂಕ್ಷ್ಮತೆ ಕಳೆದುಕೊಳ್ಳದಂತೆ ಹೇಳುತ್ತಾಳೆ. ಅವಳ ಭಾಷಣ, ಉಪನ್ಯಾಸಗಳು ಭಕ್ತಿ, ನಮ್ರತೆ, ಶರಣಾಗತಿ, ದೈನಂದಿನ ಜೀವನದಲ್ಲಿ ಆಧ್ಯಾತ್ಮಿಕತೆ ಇವೆಲ್ಲ ಯಾಕೆ ಬೇಕು ಎಂಬುದರ ಸುತ್ತ ಇರುತ್ತದೆ. ಚಿಕ್ಕ ವಯಸ್ಸಿನಿಂದಲೂ ಪರಿಧಿ ಅಸಾಧಾರಣ ವಾಕ್ ಚತುರತೆ, ಸ್ಪಷ್ಟತೆ ಮತ್ತು ಒಳನೋಟವನ್ನು ತೋರಿದ್ದಾಳೆ. ಆಧ್ಯಾತ್ಮಿಕ ಪ್ರವಚನ ಕ್ಷೇತ್ರದಲ್ಲಿ ಅದ್ಭುತ ಬಾಲಪ್ರತಿಭೆಯಾಗಿ ಮನ್ನಣೆಯನ್ನು ಗಳಿಸಿದ್ದಾಳೆ.
'ಜಸ್ಟ್ ಕಿಡ್ಡಿಂಗ್ ವಿತ್ ಸಿದ್'ನಂತಹ ವೇದಿಕೆಗಳಲ್ಲಿ ಈಕೆ ರಾಧೆ, ಕೃಷ್ಣ ಮತ್ತು ರುಕ್ಮಿಣಿಯ ಕಥೆಗಳನ್ನು ಹೇಳಿದಳು; ಚರ್ಚೆ ಮಾಡಿದಳು. ಅದರ ವೀಡಿಯೊಗಳು ವೈರಲ್ ಆದವು. ಇದು ಮುಂದೆ ಅವಳನ್ನು ಆಧ್ಯಾತ್ಮಿಕ ಸಮುದಾಯದಲ್ಲಿ ವಿಶ್ವಾಸಾರ್ಹ ಧ್ವನಿಯಾಗಿ ಸ್ಥಾಪಿಸಲು ಸಹಾಯ ಮಾಡಿತು. ನಂತರದ ವರ್ಷಗಳಲ್ಲಿ ಪರಿಧಿ PIET ನಲ್ಲಿ ವಿದ್ಯಾರ್ಥಿ ಇಂಡಕ್ಷನ್ ಪ್ರೋಗ್ರಾಂ (SIP-2025) ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲಿ ಮಾತನಾಡಿದ್ದಾಳೆ. ಅಲ್ಲಿ ಅವಳನ್ನು ʼಯುವ ಬದಲಾವಣೆಕಾರ್ತಿʼ ಮತ್ತು ʼಸಾಂಸ್ಕೃತಿಕ ಕಥೆ ಹೇಳುವ ಪರಿಣತೆʼ ಎಂದೆಲ್ಲ ಗುರುತಿಸಲಾಗಿದೆ. ಅವಳನ್ನು ಸಾಮಾನ್ಯವಾಗಿ "ಭಾರತೀಯ ಸಂಸ್ಕೃತಿಯ ಧ್ವನಿ" ಎಂದೂ ಬಣ್ಣಿಸಲಾಗುತ್ತದೆ. ಅವಳ ಮಾತನಾಡುವ ಶೈಲಿ ಸ್ಪಷ್ಟವಾಗಿರುತ್ತದೆ. ಜ್ಞಾನವನ್ನು ಹೊರಸೂಸುತ್ತದೆ.
ಇನ್‌ಸ್ಟಾಗ್ರಾಂನಲ್ಲಿ ಲಕ್ಷಾಂತರ ಫಾಲೋವರ್ಸ್
ಪರಿಧಿ ಒಳ್ಳೆಯ ಭರತನಾಟ್ಯ ಡ್ಯಾನ್ಸರ್ ಕೂಡ ಹೌದು. ಇವಳ ತಾಯಿ ಕೂಡ ಉತ್ತಮ ಡ್ಯಾನ್ಸರ್. ತಾಯಿಯೇ ಇವಳ ಮೊದಲ ಗುರು. ಇವಳ ನಾಟ್ಯಕ್ಕೂ ಜನ ಫಿದಾ ಆಗಿದ್ದಾರೆ. ಸ್ಟೇಜ್ ಶೋಗಳನ್ನು ನೀಡುತ್ತಾಳೆ. ಇವಳ ಇನ್‌ಸ್ಟಾಗ್ರಾಂ ಅಕೌಂಟ್ ಕೂಡ ಇದೆ. ಅದಕ್ಕೆ 4.13 ಲಕ್ಷ ಫಾಲೋವರ್ಸ್ ಈಗಲೇ ಇದ್ದಾರೆ. ಭಾರತದಲ್ಲಿ ಮೊದಲು ದೀಪಾವಳಿಯಲ್ಲಿ ಪಟಾಕಿ ಸಿಡಿಸುತ್ತಿರಲಿಲ್ಲ, ನಳಂದಾ ವಿಶ್ವವಿದ್ಯಾಲಯವನ್ನು ಬೆಂಕಿ ಕೊಟ್ಟು ನಾಶ ಮಾಡಿದವರು ಯಾರು- ಇಂಥ ಕುತೂಹಲದ ಸಂಗತಿಗಳನ್ನೆಲ್ಲಾ ಈಕೆ ಮಾತಾಡುತ್ತಾಳೆ. ಇತ್ತೀಚೆಗೆ ಕಾಂತಾರ ಸೀರೀಸ್ ಶುರುಮಾಡಿದ್ದಾಳೆ. ಅದರಲ್ಲಿ ಗುಳಿಗ ದೈವದ ಕಥೆ, ಪಂಜುರ್ಲಿ ದೈವದ ಕಥೆಗಳನ್ನು ಹೇಳಿದ್ದು, ಅವುಗಳನ್ನು ಪ್ರೆಸೆಂಟ್ ಮಾಡಿದ ರೀತಿ ಕುತೂಹಲಕರವಾಗಿದೆ. ಈಕೆ ಮುಂದೇನು ಆಗುತ್ತಾಳೋ ಗೊತ್ತಿಲ್ಲ. ಆದರೆ ಇಡೀ ದೇಶದ ಗಮನ ತನ್ನ ಕಡೆಗೆ ಸೆಳೆಯುವ ಇನ್‌ಫ್ಲುಯೆನ್ಸರ್ ಆಗುವುದಂತೂ ಖಚಿತ.
