ಬೆಂಗಳೂರಿನ ಈ ಮನೆಗೆ ವ್ಯಕ್ತಿಯೊಬ್ಬರು ತಿಂಗಳಿಗೆ ಬರೋಬ್ಬರಿ ₹4 ಲಕ್ಷ ಬಾಡಿಗೆ ಪಾವತಿಸುತ್ತಿದ್ದಾರೆ. ಐಷಾರಾಮಿ ಮನೆಯಲ್ಲಿ ವಾಸಿಸುತ್ತಿದ್ದಾರೆ. ಈ ಮನೆಯಲ್ಲಿ ಖಾಸಗಿ ಈಜುಕೊಳ, ಒಳಾಂಗಣ ತೋಟ, ಮತ್ತು ಆಮದು ಮಾಡಿಕೊಂಡ ಪೀಠೋಪಕರಣಗಳಂತಹ ಸೌಲಭ್ಯಗಳಿವೆ. ಈ ವಿಡಿಯೋ ವೈರಲ್ ಆಗಿದೆ.

ಬೆಂಗಳೂರು (ಜೂ. 20): ಜೀವನ ದಿನದಿಂದ ದಿನಕ್ಕೆ ದುಬಾರಿಯಾಗುತ್ತಿರುವ ಈ ಕಾಲಘಟ್ಟದಲ್ಲಿ ದೊಡ್ಡ ನಗರಗಳಲ್ಲಿ ನೆಲೆಸುವುದು ಎಲ್ಲರಿಗೂ ಕಷ್ಟ. ಬೆಂಗಳೂರು, ಮುಂಬೈ ಇಂತಹ ಮೆಟ್ರೋ ನಗರಗಳಲ್ಲಿ ತಿಂಗಳ ಸಂಪಾದನೆ ಮನೆಯ ಬಾಡಿಗೆ, ದಿನನಿತ್ಯದ ಖರ್ಚುಗಳಿಗೆ ಸಾಕಾಗದೇ ತೀವ್ರ ಕೆಲವೊಮ್ಮೆ ಭಾರೀ ಪರದಾಡಬೇಕಾದ ಪರಿಸ್ಥಿತಿ ಬಂದಿರುತ್ತದೆ. ಆದರೂ, ಕೆಲವರ ಜೀವನಶೈಲಿ ಮಾತ್ರ ಭಿನ್ನವಾಗಿದ್ದು, ಅವರ ಖರ್ಚುಗಳು ಕೇಳಿದರೆ ಯಾರಿಗಾದರೂ ಆಶ್ಚರ್ಯವಾಗಲಿದೆ. ಇಲ್ಲೊಬ್ಬ ವ್ಯಕ್ತಿ 4 ಲಕ್ಷ ರೂ. ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾನೆ. ಮನೆಯ ಸುತ್ತ ಒಂದು ಸುತ್ತು ಹಾಕಿಬರೋಣ ಬನ್ನಿ..

ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ವಿಡಿಯೋ, ಬಡವರ ನಿತ್ಯದ ಬಾಡಿಗೆ ಪೈಪೋಟಿಗೆ ಭಿನ್ನವಾಗಿ, ಒಂದು ವಿದೇಶಿಗನ ಐಷಾರಾಮಿ ಜೀವನವನ್ನು ಬೆಳಕಿಗೆ ತರುತ್ತದೆ. ಈತ ಮೆಕ್ಸಿಕನ್ ಮೂಲದವನಾಗಿದ್ದು, ಬೆಂಗಳೂರಿನ ಹೊರವಲಯದ ನಂದಿ ಹಿಲ್ಸ್ ರಸ್ತೆಯಲ್ಲಿ ಮಾಳಿಗೆಯ ಮನೆಗೆ ತಿಂಗಳಿಗೆ ₹4 ಲಕ್ಷ ಬಾಡಿಗೆ ಪಾವತಿಸುತ್ತಿದ್ದಾನೆ ಎಂಬ ಸಂಗತಿ ಬಹಿರಂಗವಾಗಿದೆ. @theshashankp ಎಂಬ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ, ವ್ಯಕ್ತಿಯೊಬ್ಬನು ತನ್ನ ಮನೆ ಮತ್ತು ಅದರ ಸೌಲಭ್ಯಗಳನ್ನು ತೋರಿಸುತ್ತಿದ್ದಾನೆ. ಇತ್ತೀಚೆಗೆ ಬೆಂಗಳೂರಿನಲ್ಲಿ ನೆಲೆಸಿರುವ ಯುವತಿಯೊಬ್ಬಳು ಈ ವ್ಯಕ್ತಿಯನ್ನು ಭೇಟಿಯಾಗಿ, ‘ನೀವು ತಿಂಗಳಿಗೆ ಎಷ್ಟು ಬಾಡಿಗೆ ಪಾವತಿಸುತ್ತೀರಿ?’ ಎಂದು ಕೇಳಿದಾಗ, ಅವನು ಸಮಾಧಾನದಿಂದ 4 ಲಕ್ಷ ರೂ.' ಎಂದು ಉತ್ತರಿಸುತ್ತಾನೆ. ಈ ಉತ್ತರ ಕೇಳಿ ಯುವತಿ ಶಾಕ್ ಆಗುತ್ತಾರೆ. ನಂತರ ಅವರ ಮನೆಯನ್ನು ಒಮ್ಮೆ ಭೇಟಿ ಮಾಡುವುದಾಗಿ 'ಹೋಮ್ ಟೂರ್' ಹೇಳಿ ಅವರೊಂದಿಗೆ ಹೋಗುತ್ತಾರೆ.

ಹಚ್ಚಹಸಿರು ವಾತಾವರಣದಲ್ಲಿ ಐಷಾರಾಮಿ ವಾಸ:

ಈ ಮೆಕ್ಸಿಕನ್ ಪ್ರಜೆ ಮಾಸಿಕ 4 ಲಕ್ಷ ರೂ. ಬಾಡಿಗೆ ಕಟ್ಟುತ್ತಿರುವ ಮನೆ ಹೇಗಿದೆ ಎಂದು ನೋಡಲು ಹೋದರೆ 'ಮನೆಯಲ್ಲಿ ಸುಂದರ ಒಳಾಂಗಣ ತೋಟ, ಖಾಸಗಿ ಈಜುಕೊಳ, ವಿಶಾಲ ಲಿವಿಂಗ್ ರೂಮ್, ಸುಸಜ್ಜಿತ ಸ್ನಾನಕೋಣೆ ಮತ್ತು ಮೆಕ್ಸಿಕೋದಿಂದ ಇಂಪೋರ್ಟ್ ಮಾಡಿಕೊಳ್ಳಲಾದ ಪೀಠೋಪಕರಣಗಳಿವೆ. ಮನೆ ತುಂಬಾ ಹಸಿರು ಪರಿಸರವೇ ತುಂಬಿಕೊಂಡಿದೆ. ಇದರ ಜೊತೆಗೆ, ಈತನು ವಾಸವಾಗಿರುವ ಮನೆ ನೋಡುವವರಲ್ಲಿ ಭಾರೀ ಖಷಿಯಿಂದ ಕುಣಿದು ಕುಪ್ಪಳಿಸುವಂತಹ ಮನೋಭಾವನೆ ಮೂಡಿಸುತ್ತದೆ.

Scroll to load tweet…


ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ:

ಇನ್ನು ಶಶಾಂಕ್ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ಈ ವಿಡಿಯೋ ಈಗಾಗಲೇ 1.4 ಮಿಲಿಯನ್‌ಕ್ಕೂ ಹೆಚ್ಚು ವೀಕ್ಷಣೆ ಪಡೆದುಕೊಂಡಿದೆ. 16 ಸಾವಿರಕ್ಕೂ ಅಧಿಕ ಲೈಕ್ಸ್ ಹಾಗೂ 1.4 ಸಾವಿರ ರಿಟ್ವೀಟ್ ಮತ್ತು 250ಕ್ಕೂ ಅಧಿಕ ಕಾಮೆಂಟ್‌ಗಳು ಹರಿದುಬಂದಿವೆ. ಇದರಲ್ಲಿ ಹಲವರು ‘ಅಷ್ಟೊಂದು ಹಣ ಬಾಡಿಗೆಗೆ ಕೊಡುವುದಾದರೆ ನಾವು ವರ್ಷಪೂರ್ತಿ ದುಡಿದರೂ ಸಾಕಾಗುವುದಿಲ್ಲ’ ಎಂದು ಪ್ರತಿಕ್ರಿಯಿಸುತ್ತಿದ್ದಾರೆ. ಇನ್ನೊಬ್ಬರು, 'ನಮ್ಮ ಕನಸುಗಳಲ್ಲಿ ಮಾತ್ರ ಇಂತಹ ಮನೆಗಳು ಇರಬಹುದು' ಎಂದು ದುಃಖ ವ್ಯಕ್ತಪಡಿಸಿದ್ದಾರೆ. 'ನಾನು ಬ್ಯಾಂಕ್‌ನಲ್ಲಿ ಇದೇ ₹4 ಲಕ್ಷ ಹಣವನ್ನು ಫಿಕ್ಸೆಡ್ ಡೆಪಾಸಿಟ್ ಇಟ್ಟರೂ ಬಡ್ಡಿಯಿಂದ ಜೀವನ ಸಾಗಿಸಬಹುದು ಎನ್ನಿಸುತ್ತದೆ' ಎಂದು ಕಾಮೆಂಟ್ ಮಾಡಿದ್ದಾರೆ.

ನಿಜವಾದ ಐಷಾರಾಮಿ ನೋಡಿ ಮೆಚ್ಚುಗೆ:

ಈ ಮೆಕ್ಸಿಕನ್ ವ್ಯಕ್ತಿಯ ಜೀವನಶೈಲಿ ಮತ್ತು ಖರ್ಚುಗಳು ಬೆಂಗಳೂರಿನ ಬಹುತೇಕ ಜನಸಾಮಾನ್ಯರ ಜೀವನ ಶೈಲಿಗೆ ನಿಷ್ಠುರವಾಗಿವೆ. ಆದರೆ ಈ ವಿಡಿಯೋ ಜನರಿಗೆ ಕನಸು ಕಾಣಲು ಕಾರಣವಾಗಿದ್ದು, ಈತನ ಐಷಾರಾಮಿ ಜೀವನ ಕುರಿತು ಜನರ ಮೆಚ್ಚುಗೆಗೂ ಕಾರಣವಾಗಿದೆ.