ಬೆಂಗಳೂರಿನಲ್ಲಿ ಮಗುವನ್ನು ಮಡಿಲಲ್ಲಿಟ್ಟುಕೊಂಡು ಆಟೋ ಚಲಾಯಿಸುತ್ತಿರುವ ಚಾಲಕನ ವಿಡಿಯೋ ವೈರಲ್ ಆಗಿದೆ. ಜೀವನೋಪಾಯಕ್ಕಾಗಿ ದುಡಿಯುವ ಚಾಲಕನ ಈ ಕೃತ್ಯವು ನೆಟ್ಟಿಗರ ಹೃದಯ ಗೆದ್ದಿದೆ. ಸುರಕ್ಷತೆಯ ಬಗ್ಗೆಯೂ ಕಾಳಜಿ ವ್ಯಕ್ತವಾಗಿದೆ.
ಬೆಂಗಳೂರು (ಸೆ.06): ಬೆಂಗಳೂರಿನಲ್ಲಿ ಮಧ್ಯಮ ಮತ್ತು ಬಡತನದಲ್ಲಿ ಜೀವನ ಮಾಡುವವರು ದುಡಿಮೆ ಬಿಟ್ಟರೆ ಉಪವಾಸವೇ ಇರಬೇಕಾಗುತ್ತದೆ. ಇಲ್ಲೊಬ್ಬ ಆಟೋ ಚಾಲಕ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದರೂ, ತನ್ನ ಮಗುವನ್ನು ಮಡಿಲಲ್ಲಿಟ್ಟುಕೊಂಡು ಜೀವನಕ್ಕಾಗಿ ನಗರದ ಅತಿಹೆಚ್ಚು ಟ್ರಾಫಿಕ್ ರಸ್ತೆಯಲ್ಲಿ ಆಟೋ ಚಲಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಆಟೋ ಚಾಲಕನ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.
ನಮ್ಮ ಹೃದಯವನ್ನು ಸ್ಪರ್ಶಿಸುವ ಹಲವಾರು ವಿಡಿಯೋಗಳು ಮತ್ತು ಚಿತ್ರಗಳು ಇಂದು ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ವೈರಲ್ ಆಗುತ್ತಿವೆ. ಕೆಲವೊಮ್ಮೆ ಅನಿರೀಕ್ಷಿತ ದೃಶ್ಯಗಳು ವಿಡಿಯೋದಲ್ಲಿ ಸೆರೆಯಾಗಿ ಹಲವರನ್ನು ಸ್ಪರ್ಶಿಸುತ್ತವೆ. ಅಂತಹದ್ದೇ ಒಂದು ವಿಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋವನ್ನು ಬೆಂಗಳೂರಿನಲ್ಲಿ ಚಿತ್ರೀಕರಿಸಲಾಗಿದೆ. ವಿಡಿಯೋದಲ್ಲಿ ಒಬ್ಬ ಆಟೋ ಚಾಲಕ ಇದ್ದಾನೆ. ಅವನ ಭುಜದ ಮೇಲೆ ಮಲಗಿರುವ ಒಂದು ಪುಟ್ಟ ಮಗುವನ್ನೂ ನೋಡಬಹುದು.
ವಿಡಿಯೋದಲ್ಲಿ ಏನಿದೆ?
ಬೆಂಗಳೂರಿನ ರಸ್ತೆಗಳಲ್ಲಿ ಆಟೋ ಚಾಲಕನೊಬ್ಬ ತನ್ನ ಮಗುವನ್ನು ಎದೆಗೆ ಅಪ್ಪಿಕೊಂಡು ಆಟೋ ಓಡಿಸುತ್ತಿರುವ ದೃಶ್ಯವನ್ನು ರಿತು ಎಂಬ ಮಹಿಳೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಆಟೋ ಚಾಲಕ ಜೀವನೋಪಾಯಕ್ಕಾಗಿ ಆಟೋ ಓಡಿಸುತ್ತಿದ್ದರೂ, ತನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವ ಮಗುವನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ' ಎಂದು ವಿಡಿಯೋ ಹಂಚಿಕೊಂಡ ಯುವತಿ ಬರೆದಿದ್ದಾರೆ. ಈ ವಿಡಿಯೋ ಕ್ಷಣಾರ್ಧದಲ್ಲಿ ವೈರಲ್ ಆಗಿದ್ದು, ಸಾವಿರಾರು ಜನರು ಇದನ್ನು ಹಂಚಿಕೊಂಡಿದ್ದಾರೆ. ಹಲವರು ವಿಡಿಯೋಗೆ ಕಾಮೆಂಟ್‌ಗಳನ್ನು ನೀಡಿದ್ದಾರೆ. 'ಕಣ್ಣು ತುಂಬಿ ಬರುತ್ತಿದೆ', 'ಇದೇ ನಿಜವಾದ ತಂದೆಯ ಪ್ರೀತಿ' ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ಮತ್ತೆ ಕೆಲವರು 'ಮಗುವಿನ ಸುರಕ್ಷತೆಯ ಬಗ್ಗೆಯೂ ಕಾಮೆಂಟ್‌ಗಳು ಬಂದಿವೆ. 'ಇದು ಒಂದು ದಿನದ ತುರ್ತು ಪರಿಸ್ಥಿತಿಯಿಂದಾಗಿ ಮಗುವನ್ನು ಕರೆತಂದಿರಬಹುದು, ಮತ್ತೆ ಹೀಗೆ ಮಾಡಬೇಡಿ' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮತ್ತೆ ಕೆಲವರು, ಒಬ್ಬ ತಂದೆ ತನ್ನ ಕುಟುಂಬಕ್ಕಾಗಿ ದುಡಿಯಲು ಹೊರಟಾಗಲೂ, ಕುಟುಂಬದಲ್ಲಿನ ಕೆಲವು ಸಮಸ್ಯೆಯಿಂದಾಗು ತನ್ನ ಮಗುವನ್ನು ತಾನೇ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇರುತ್ತದೆ. ಹೀಗಾಗಿ, ಅಪ್ಪ ಒಂದೇ ಒಂದು ಕ್ಷಣವೂ ಮಗುವನ್ನು ದೂರವಿಡಲು ಸಾಧ್ಯವಾಗದೇ ಮಗುವನ್ನು ಮಡಿಲಲ್ಲಿ ಇಟ್ಟುಕೊಂಡು ಆಟೋ ಓಡಿಸುತ್ತಿರುವ ದೃಶ್ಯವನ್ನು ಇದು ತೋರಿಸುತ್ತದೆ ಎಂದು ಕಾಮೆಂಟ್ ಮಾಡೊದ್ದಾನೆ. ಮತ್ತೊಬ್ಬರು 'ತಂದೆಯ ಪ್ರೀತಿ ಅನಂತ, ಆದರೆ ಸುರಕ್ಷತೆ ಯಾವಾಗಲೂ ಮೊದಲು' ಎಂಬಂತಹ ಕಾಮೆಂಟ್‌ಗಳು ಸಹ ವಿಡಿಯೋಗೆ ಬಂದಿವೆ.
ಈ ವಿಡಿಯೋ ಹಲವು ಭಾವನೆಗಳನ್ನು ಹುಟ್ಟುಹಾಕಿದೆ. ಇದು ಚಾಲಕನ ಪ್ರೀತಿಯನ್ನು ಶ್ಲಾಘಿಸುತ್ತಲೇ, ಸುರಕ್ಷತೆಯ ಮಹತ್ವವನ್ನು ಎತ್ತಿಹಿಡಿದಿವೆ. ಈ ವಿಡಿಯೋ ಜೀವನದಲ್ಲಿ ದುಡಿಮೆ ಮತ್ತು ಕುಟುಂಬದ ಮೌಲ್ಯಗಳ ನಡುವಿನ ಸೂಕ್ಷ್ಮ ಸಮತೋಲನದ ಬಗ್ಗೆ ಒಂದು ಹೃದಯಸ್ಪರ್ಶಿ ಸಂದೇಶ ನೀಡಿದೆ. ಇನ್ನು ಈ ವಿಡಿಯೋಗಿಂತಲೂ ಮೊದಲು ಬೆಂಗಳೂರಿನ ಆಟೋ ಚಾಲಕರ ಹಲವು ವಿಡಿಯೋಗಳು ವೈರಲ್ ಆಗಿದ್ದನು. ಕೆಲವು ದಿನಗಳ ಹಿಂದೆ, ತನ್ನ ನಾಯಿಯೊಂದಿಗೆ ಪ್ರವಾಸಕ್ಕೆ ಹೋಗುವ ಚಾಲಕನ ವಿಡಿಯೋ ವೈರಲ್ ಆಗಿತ್ತು. ನಗರದಲ್ಲಿ ಆಟೋ ಓಡಿಸುವಾಗಲೆಲ್ಲಾ ಚಾಲಕನ ನಾಯಿ ಜಾಕಿ ಅವನ ಜೊತೆಯಲ್ಲಿ ಇರುತ್ತಿತ್ತು. ಆ ವಿಡಿಯೋ ಕೂಡ ಜನರ ಮನ ಗೆದ್ದಿತ್ತು.
