ಮುಂಬೈನಲ್ಲಿ ಆಟೋ ಚಾರ್ಜ್ ಕೊಡದ ಬಾಲಕನಿಗೆ ಆಟೋ ಚಾಲಕನೊಬ್ಬ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಮುಂಬೈ: ಆಟೋದಲ್ಲಿ ಬಂದು ಹಣ ನೀಡದ ಬಾಲಕನಿಗೆ ಆಟೋ ಚಾಲಕ ಆತನ ಶರ್ಟ್ ಕಾಲರ್ ಹಿಡಿದು ಕೆನ್ನೆಗೆ ಬಾರಿಸಿ ಹಿಗ್ಗಾಮುಗ್ಗಾ ಥಳಿಸಿದ ಅಮಾನವೀಯ ಘಟನೆ ಮುಂಬೈನಲ್ಲಿ ನಡೆದಿದೆ. ಮಹಾರಾಷ್ಟ್ರದ ಕಲ್ಯಾಣ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು ವೀಡಿಯೋ ವೈರಲ್ ಆಗ್ತಿದ್ದಂತೆ ವ್ಯಾಪಕ ಆಕ್ರೋಶ ಕೇಳಿ ಬಂದಿದೆ.

ವರದಿಗಳ ಪ್ರಕಾರ ವಿದ್ಯಾರ್ಥಿಯೊಬ್ಬ ಆಟೋ ಹತ್ತುವುದಕ್ಕೂ ಮೊದಲು ಆಟೋ ಚಾಲಕನ ಬಳಿ ಪ್ರಯಾಣ ದರ ಎಷ್ಟು ಎಂದು ಕೇಳಿಯೇ ಆಟೋ ಏರಿದ್ದಾನೆ. ಆಟೋ ಚಾಲಕ ಬಾಲಕನ ಆಟೋ ಚಾರ್ಜ್‌ 30 ರೂಪಾಯಿ ಎಂದು ಹೇಳಿದ್ದಾನೆ. ಆದರೆ ಕಲ್ಯಾಣ ಸ್ಟೇಷನ್ ಬಳಿ ಆಟೋದಿಂದ ಇಳಿದ ಬಾಲಕ ತನ್ನ ಜೇಬು ನೋಡಿದಾಗ ಜೇಬಿನಲ್ಲಿ ಹಣವಿರಲಿಲ್ಲ. ಆತ ಆಟೋಗೆ ಕೊಡಬೇಕಾದ ಹಣ ಕಾಣಿಸುತ್ತಿಲ್ಲ ಎಂದು ಹೇಳಿದ್ದಾನೆ. ಬಾಲಕನ ಮಾತು ಕೇಳಿ ಸಿಟ್ಟಿಗೆದ್ದ ಆಟೋ ಚಾಲಕ ತನ್ನ ತಾಳ್ಮೆ ಕಳೆದುಕೊಂಡಿದ್ದು ಬಾಲಕನ ಕೆನ್ನೆಗೆ ಬಾರಿಸಿದ್ದಾನೆ.

ಕ್ಷಮೆ ಕೇಳಿದ್ರು ಥಳಿಸಿದ ಆಟೋ ಚಾಲಕ:

ಘಟನೆಯನ್ನು ಕೆಲವರು ರೆಕಾರ್ಡ್‌ ಮಾಡಿಕೊಂಡಿದ್ದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋ ನೋಡಿದ ಅನೇಕರು ಬಾಲಕನ ಥಳಿಸಿದ ಆಟೋ ಚಾಲಕನ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಬಾಲಕ ಕ್ಷಮೆ ಕೇಳಿ ಆಟೋ ಚಾಲಕನ ಕಾಲಿಗೆ ಬೀಳುವುದನ್ನು ವೀಡಿಯೋದಲ್ಲಿ ಕಾಣಬಹುದು. ಆದರೂ ಆಟೋ ಚಾಲಕನ ಕೋಪ ತಣ್ಣಗಾಗಿಲ್ಲ. ಆತ ಬಾಲಕನ ಕೆನ್ನೆಗೆ ಬಾರಿಸಿ ಬಳಿಕ ಆತನನ್ನು ಹೋಗಲು ಬಿಟ್ಟಿದ್ದಾನೆ. ಆದರೆ ಬಾಲಕನಿಗೆ ಆಟೋ ಚಾಲಕ ಥಳಿಸುತ್ತಿದ್ದಾಗ ಆತನನ್ನು ರಕ್ಷಿಸುವುದಕ್ಕೆ ಹೋಗದೇ ಆ ದೃಶ್ಯವನ್ನು ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿದ ವ್ಯಕ್ತಿಗಳ ವಿರುದ್ಧ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.

ನೆಟ್ಟಿಗರಿಂದ ಮಿಶ್ರ ಪ್ರತಿಕ್ರಿಯೆ:

ಅನೇಕರು ಆಟೋ ಚಾಲಕನ ಬಗ್ಗೆಯೇ ಸಹಾನುಭೂತಿ ವ್ಯಕ್ತಪಡಿಸಿದ್ದಾರೆ. ಬಹುತೇಕ ರಿಕ್ಷಾ ಚಾಲಕರು ಕಷ್ಟದಲ್ಲಿರುತ್ತಾರೆ. ದೈನಂದಿನ ಜೀವನ ಸಾಗಿಸುವುದಕ್ಕೆ ಆಟೋ ಚಲಾಯಿಸುತ್ತಾರೆ. ಆದರೆ ಈ ತರುಣರು ಆಟೋದಲ್ಲಿ ಪ್ರಯಾಣಿಸಿ ಹಣ ಕೊಡದೇ ಹೋಗಿ ಆಟೋ ಚಾಲಕರನ್ನು ಶೋಷಣೆ ಮಾಡುತ್ತಾರೆ. ನಂತರ ನಾವು ಉಚಿತವಾಗಿ ಪ್ರಯಾಣಿಸಿದೆವು ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆಟೋ ಚಾಲಕ ನೀರಿನಿಂದ ಆಟೋ ಚಾಲಾಯಿಸುವುದಲ್ಲ, ಆತ ಆಟೋ ಓಡಿಸಬೇಕಾದರೆ ಹಣ ಕೊಟ್ಟು ಸಿಎನ್‌ಜಿ ಗ್ಯಾಸ್ ಅಥವಾ ಪೆಟ್ರೋಲ್ ಹಾಕಿಕೊಳ್ಳಬೇಕಾಗುತ್ತದೆ ಅವರಿಗೂ ಹಣ ಸುಮ್ಮನೆ ಬರುವುದಿಲ್ಲ ಎಂದು ಒಬ್ಬರು ಪ್ರತಿಕ್ರಿಯಿಸಿದ್ದಾರೆ.

ಈ ಹುಡುಗರು ಪ್ರತಿಬಾರಿಯೂ ಹೀಗೆ ಮಾಡುತ್ತಾರೆ. ನಂತರ ನಾವು ಉಚಿತವಾಗಿ ಪ್ರಯಾಣಿಸಿದೆವು ಎಂದು ತಮ್ಮ ಸಹಪಾಠಿಗಳ ಜೊತೆ ಹೈಪ್ ತಗೋತಾರೆ. ಇದೇ ಕಾರಣಕ್ಕೆ ಈ ಆಟೋ ಚಾಲಕ ತರುಣನ ಕೆನ್ನೆಗೆ ಬಾರಿಸಿರಬೇಕು ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ.

ಬಾಲಕನ ರಕ್ಷಣೆ ಮಾಡುವುದನ್ನು ಬಿಟ್ಟು ವೀಡಿಯೋ ರೆಕಾರ್ಡ್ ಮಾಡಿಕೊಂಡಿದ್ದಾರೆ. ನಮ್ಮ ಜನರಿಗೆ ಏನಾಗಿದೆ ನಮ್ಮ ಸೂಕ್ಷ್ಮತೆ ಎಲ್ಲಿ ಹೋಗಿದೆ. ಈ ಘಟನೆ ನನ್ನ ಬೆನ್ನುಹುರಿಯನ್ನು ನಡುಗಿಸುತ್ತಿದೆ. ಆ ಬಾಲಕನ ಮುಗ್ಧತೆ ಸ್ಪಷ್ಟವಾಗಿ ಕಾಣಿಸುತ್ತಿದೆ. ರಿಕ್ಷಾ ಚಾಲಕ ಅಸಮಾಧಾನಗೊಂಡಿರಬಹುದು. ಆದರೆ ಆತ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ತುಂಬಾ ತಪ್ಪು, ನಾವೆಲ್ಲರೂ ಕನಿಷ್ಠ ಸ್ವಲ್ಪವಾದರು ಮಾನವೀಯತೆಯನ್ನು ತೊರಬೇಕು ಎಂದು ಒಬ್ಬರು ಈ ವೀಡಿಯೋ ನೋಡಿ ಪ್ರತಿಕ್ರಿಯಿಸಿದ್ದು, ಬಾಲಕನ ಮೇಲೆ ಹಲ್ಲೆ ಮಾಡಿರುವುದನ್ನು ಖಂಡಿಸಿದ್ದಾರೆ. ಅಲ್ಲಿ ಇದ್ದವರು ವೀಡಿಯೋ ಮಾಡುವ ಬದಲು 30 ರೂಪಾಯಿ ಕೊಟ್ಟು ಆ ಮಗುವನ್ನು ಹೋಗಲು ಬಿಡಬೇಕಿತ್ತು ನಮಲ್ಲಿ ಮಾನವೀಯತೆಯೇ ಇಲ್ಲ, ಕೆಲ ರೂಪಾಯಿ ಪಾವತಿಸುವುದರಿಂದ ನಾವು ಬಡವರಾಗುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಆದರೆ ಘಟನೆಯ ಬಳಿಕ ಆಟೋವನ್ನು ಸಾರಿಗೆ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಎಂದು ವರದಿಯಾಗಿದೆ. ನಡುರಸ್ತೆಯಲ್ಲಿ ಬಾಲಕನಿಗೆ ಆಟೋ ಚಾಲಕ ಕೆನ್ನೆಗೆ ಬಾರಿಸಿದ ನಂತರ ಅಂಧೇರಿ ಪ್ರಾದೇಶಿಕ ಸಾರಿಗೆ ಕಚೇರಿ ಅಧಿಕಾರಿಗಳು ಆಟೋವನ್ನು ಸೀಜ್ ಮಾಡಿ ಪರವಾನಗಿ ರದ್ದು ಮಾಡಲು ಮುಂದಾಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಬೀಯಾಸ್ ನದಿಯ ಪ್ರವಾಹಕ್ಕೆ ಅಂಜದೇ ಅಳುಕದೇ ನಿಂತ ಹನುಮಾನ್ ದೇಗುಲದ ಅರ್ಚಕ ವಿಡಿಯೋ

ಇದನ್ನೂ ಓದಿ: ಬೆಂಗಳೂರಿನಲ್ಲಿ ಕೂಲಿ ಕೆಲಸ ಮಾಡ್ತಾ ನೀಟ್ ಪರೀಕ್ಷೆ ಪಾಸ್ ಮಾಡಿದ ಒಡಿಶಾದ ಶುಭಂ

View post on Instagram