ಆಂಧ್ರ ಪ್ರದೇಶದ ಕಾಕಿನಾಡದಲ್ಲಿ ನಾಪತ್ತೆಯಾದ ಎರಡು ವರ್ಷದ ಬಾಲಕಿ ಜ್ಞಾನೇಶ್ವರಿ ಪ್ರಕರಣ 70 ದಿನ ಕಳೆದರೂ ಬಗೆಹರಿದಿಲ್ಲ. ಮಗಳ ಪತ್ತೆಗಾಗಿ ತಂದೆ ಗಣೇಶ್ ಯೂಟ್ಯೂಬ್ ಚಾನೆಲ್ ಆರಂಭಿಸಿ ಸುಳಿವಿಗಾಗಿ ಹುಡುಕಾಟ ನಡೆಸುತ್ತಿದ್ದರೆ, ಪ್ರಕರಣ ಇದೀಗ ಹೈಕೋರ್ಟ್ ಮೆಟ್ಟಿಲೇರಿದೆ.
ಆಂಧ್ರ ಪ್ರದೇಶದ ಕಾಕಿನಾಡ ಜಿಲ್ಲೆಯ ತುನಿ ಮಂಡಲದ ಸಿಎಚ್ ಅಗ್ರಹಾರಕ್ಕೆ ಸೇರಿದ ಬಾಲಕಿ ಜ್ಞಾನೇಶ್ವರಿ ಮಿಸ್ ಕೇಸ್ ಮಿಸ್ಟರಿ ಇನ್ನು ಬಗೆಹರಿದಿಲ್ಲ. ಬಾಲಕಿಯ ಸುಳಿವು ಪತ್ತೆ ಮಾಡಲು ಪೊಲೀಸರ ಕಾರ್ಯಾಚರಣೆ ಮುಂದುವರೆದಿದೆ. ಆದರೆ ಜ್ಞಾನೇಶ್ವರಿ ಪತ್ತೆಗಾಗಿ ಆತನ ತಂದೆ ಗಣೇಶ್ ಒಂದು ಯೂಟ್ಯೂಬ್ ಚಾನೆಲ್ ಆರಂಭ ಮಾಡಿದ್ದಾರೆ. ತನ್ನ ಮಗಳ ನೆನಪಿನ ಫೋಟೋಗಳನ್ನು, ವಿಡಿಯೋಗಳನ್ನು ತಂದೆ ಯೂಟ್ಯೂಬ್‌ನಲ್ಲಿ ಶೇರ್ ಮಾಡುತ್ತಿದ್ದು, ತನ್ನ ಮಗಳು ನಾಪತ್ತೆಯಾಗಿರುವ ಬಗ್ಗೆ ಇತರೇ ರಾಜ್ಯಗಳಿಗೂ ಮಾಹಿತಿ ತಿಳಿಯಲಿ, ಆ ಮೂಲಕ ನನ್ನ ಮಗಳ ಬಗ್ಗೆ ಯಾವುದಾದರೂ ಸಣ್ಣ ಸುಳಿವು ಸಿಗುತ್ತಾ ಎಂದು ಹುಡುಕಾಟ ನಡೆಸಿದ್ದಾರೆ.
ನಾಪತ್ತೆಯಾದ ಮಗಳಿಗಾಗಿ ತಂದೆಯ ಯೂಟ್ಯೂಬ್ ಹೋರಾಟ!
ಮಗಳು ನಾಪತ್ತೆಯಾದ ದಿನದಿಂದಲೂ ಪೊಲೀಸರೊಂದಿಗೆ ತಂದೆ ಕೂಡ ಆಕೆಯ ಫೋಟೋ ಹಿಡಿದುಕೊಂಡು ಹುಡುಕಾಟ ನಡೆಸುತ್ತಿದ್ದಾರೆ. ಆದರೆ ಬಾಲಕಿಯ ಬಗ್ಗೆ ಇದುವರೆಗೂ ಸಣ್ಣ ಸುಳಿವು ಸಿಕ್ಕಿಲ್ಲ. ಇದರ ನಡುವೆ ಕಾಕಿನಾಡ ಜಿಲ್ಲಾ ತುನಿ ಗ್ರಾಮಾಂತರ ಸಿಐ ಪ್ರಮುಖ ಪ್ರಕಟಣೆ ಮಾಡಿದ್ದು, ಆಂಧ್ರ ಪ್ರದೇಶ ಹೈಕೋರ್ಟಿಗೆ ತಿಂಗಳಿಗೆ ಒಮ್ಮೆ ಪ್ರಕರಣ ತನಿಖೆ ಬಗ್ಗೆ ವರದಿ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಬಾಲಕಿ ನಾಪತ್ತೆಯಾಗಿ ಈಗಾಗಲೇ 70ಕ್ಕೂ ಹೆಚ್ಚು ದಿನಗಳಾಗಿದೆ. ಮೊದಲ ದಿನದಿಂದಲೂ ನಾವು ಹುಡುಕಾಟ ನಡೆಸುತ್ತಿದ್ದೇವೆ. ಈ ವಿವರಗಳನ್ನು ಕೋರ್ಟಿಗೆ ಸಲ್ಲಿಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಬಾಲಕಿ ಸುಳಿವು ಸಿಗದ ಹಿನ್ನೆಲೆಯಲ್ಲಿ ಶ್ರೀಕಾಂತ್ ಎಂಬ ಲಾಯರ್ ಹೈಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದು, ಪೊಲೀಸರು ಬಾಲಕಿಯನ್ನು ಪತ್ತೆ ಮಾಡುವುದರಲ್ಲಿ ವಿಫಲರಾಗಿದ್ದಾರೆ ಎಂದು ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಈ ಅರ್ಜಿಯನ್ನು ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿ ಲಿಸಾಗಿಲ್ ಮತ್ತು ಗುಣರಂಜನ್ ಅವರ ನ್ಯಾಯಪೀಠ ವಿಚಾರಣೆ ತೆಗೆದುಕೊಂಡಿದೆ.
ಪೊಲೀಸರ ವಿರುದ್ಧ ಹೈಕೋರ್ಟ್ ಗರಂ!
ಬಾಲಕಿ ಪತ್ತೆಗಾಗಿ ಕಾರ್ಯಾಚರಣೆ ಮುಂದುವರೆದಿದೆ. ಐದು ಟೀಂಗಳು ಪ್ರಕರಣದಲ್ಲಿ ಕೆಲಸ ಮಾಡುತ್ತಿದೆ ಎಂದು ಪೊಲೀಸರ ಪರ ವಕೀಲ್ ಕೋರ್ಟ್‌ಗೆ ಮಾಹಿತಿ ನೀಡಿದರು. ಆದರೆ ಕೋರ್ಟ್, ಬಾಲಕಿ ನಾಪತ್ತೆ ಬಗ್ಗೆ ಸಂಪೂರ್ಣ ವರದಿ ನೀಡುವಂತೆ ಸರ್ಕಾರಕ್ಕೆ ಆದೇಶ ನೀಡಿದೆ. ಅಷ್ಟ ಅಲ್ಲದೇ, ವರ್ಷದಲ್ಲಿ ರಾಜ್ಯದಲ್ಲಿ ನಾಪತ್ತೆಯಾದ ಮಕ್ಕಳಿಗೆ ಸಂಬಂಧಿಸಿದ ವಿವರಗಳನ್ನು ನೀಡಲು ಸೂಚನೆ ನೀಡಿದೆ.
ಕಾನಿನಾಡ ಜಿಲ್ಲೆಯ ಸಿಎಚ್ ಅಗ್ರಹಾರಕ್ಕೆ ಸೇರಿದ ಗಣೇಶ್, ಭವಾನಿ ದಂಪತಿಯ ಎರಡು ವರ್ಷದ ಮಗಳಾದ ಜ್ಞಾನೇಶ್ವರಿ 2026 ಜೂನ್ 06ರದು ನಾಪತ್ತೆಯಾಗಿದ್ದಳು. ಮಗಳು ನಾಪತ್ತೆಯಾಗಿ ತಿಂಗಳುಗಳು ಕಳೆದರೂ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಇನ್ನು ಬಾಲಕಿ ಜೊತೆಗಿದ್ದ ನಾಯಿ ಕೂಡ ಕೆಲವೇ ದಿನಗಳಲ್ಲಿ ಸಾವನ್ನಪ್ಪಿತ್ತು. ಬಾಲಕಿಯ ಪತ್ತೆಗಾಗಿ ಪೊಲೀಸರು, ಎನ್‌ಡಿಆರ್‌ಎಫ್, ಅರಣ್ಯ ಇಲಾಖೆ ಸಿಬ್ಬಂದಿ, ಹನುಮಾನ್ ಬೃಂದಗಳು ಸುತ್ತಮುತ್ತಲಿನ ಬಾವಿ, ನೀರಿನ ಮೂಲಗಳು, ಅರಣ್ಯ ಪ್ರದೇಶ, ಬೆಟ್ಟಗಳಲ್ಲಿ ಹುಡುಕಾಟ ನಡೆಸಿದ್ದವು. ಅಧುನಿಕ ತಂತ್ರಜ್ಞಾನ ಹೊಂದಿರುವ ಡ್ರೋನ್‌ಗಳು, ಸಿಸಿಟಿವಿ ವಿಡಿಯೋ, ಸಾವಿರಾರು ಫೋನ್ ಕಾಲ್ಸ್ ಗಳನ್ನು ಪೊಲೀಸರು ಪರಿಶೀಲನೆ ನಡೆಸಿದ್ದರು. ಜೊತೆ ಪ್ರಕರಣದಲ್ಲಿ ಅನುಮಾನವಾಗಿ ಕಂಡ ಮಂದಿಯನ್ನು ವಿಚಾರಣೆ ನಡೆಸಿದ್ದರು. ಬಾಲಕಿ ಪೋಸ್ಟರ್‌ಗಳನ್ನು ಹಂಚಿಕೆ ಮಾಡಿ, ಬೇರೆ ಬೇರೆ ಪ್ರದೇಶಗಳಲ್ಲಿಯೂ ಹುಡುಕಾಟ ನಡೆಸಿದ್ದರು. ಆದರೂ ಇದುವರೆಗೂ ಯಾವುದೇ ಸಣ್ಣ ಸುಳಿವು ಬಾಲಕಿ ಬಗ್ಗೆ ಸಿಕ್ಕಿಲ್ಲ. ಈಗ ತಂದೆ ತಮ್ಮದೇ ಯೂಟ್ಯೂಬ್ ಚಾನೆಲ್ ಆರಂಭ ಮಾಡಿ ಹೊಸ ಪ್ರಯತ್ನ ಶುರು ಮಾಡಿದ್ದಾರೆ.


