ವಿಜಯಪುರದಲ್ಲಿ ನಡೆದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆಯಲ್ಲಿ ಪ್ರಶ್ನೆ ಪತ್ರಿಕೆ ವಿಳಂಬವಾದ ಕಾರಣ ಗೊಂದಲ ಸೃಷ್ಟಿಯಾಗಿದೆ. ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಕಾಲೇಜಿನ ಗೇಟ್ ಮುರಿದು ಪ್ರತಿಭಟನೆ ನಡೆಸಿದ್ದು, ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ.

ವಿಜಯಪುರ: ಇಂದು ನಡೆಯುತ್ತಿದ್ದ ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪ್ರವೇಶ ಪರೀಕ್ಷೆಯಲ್ಲಿ ಭಾರೀ ಗೊಂದಲ ಹಾಗೂ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ವಿತರಿಸಲು ವಿಳಂಬ ಮಾಡಿದ್ದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಭಾರಿ ಪ್ರತಿಭಟನೆ ನಡೆಸಿದ್ದು, ಕಾಲೇಜಿನ ಗೇಟ್ ಮುರಿದು ಆಕ್ರೋಶ ಹೊರಹಾಕಿದ್ದಾರೆ.

ನಡೆದಿದ್ದೇನು?

ವಿಜಯಪುರ ಜಿಲ್ಲೆಯ ತಿಕೋಟಾದ ಕೋಟ್ಯಾಳ್ ರಸ್ತೆಯಲ್ಲಿರುವ ಶಾರದಾಂಬಾ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ನಿಯಮದ ಪ್ರಕಾರ ಬೆಳಗ್ಗೆ 10:30ಕ್ಕೆ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆ ನೀಡಬೇಕಾಗಿತ್ತು. ಸುಮಾರು ಅರ್ಧ ಗಂಟೆ ತಡವಾಗಿ ಅಂದರೆ 11 ಗಂಟೆಗೆ ಪ್ರಶ್ನೆ ಪತ್ರಿಕೆ ನೀಡಲಾಗಿದೆ ಎಂದು ಪರೀಕ್ಷಾರ್ಥಿಗಳು ಗಂಭೀರವಾಗಿ ಆರೋಪಿಸಿದ್ದಾರೆ.

ಗೇಟ್ ಮುರಿದು ಪರೀಕ್ಷಾರ್ಥಿಗಳ ಆಕ್ರೋಶ

ಪ್ರಶ್ನೆ ಪತ್ರಿಕೆ ನೀಡಲು ವಿಳಂಬವಾಗುತ್ತಿದ್ದಂತೆ ಆತಂಕಕ್ಕೊಳಗಾದ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಒಳಗೆ ಮತ್ತು ಹೊರಗೆ ಗದ್ದಲ ಆರಂಭಿಸಿದರು. ಸಮಯದ ಅಭಾವವಾಗುತ್ತದೆ ಮತ್ತು ಪರೀಕ್ಷಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಇಲ್ಲ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಆಕ್ರೋಶ ಎಷ್ಟಿತ್ತೆಂದರೆ, ಪರೀಕ್ಷಾರ್ಥಿಗಳು ಕಾಲೇಜಿನ ಮುಖ್ಯ ಗೇಟ್ ಅನ್ನು ಮುರಿದು ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿ

ಪರೀಕ್ಷಾ ಕೇಂದ್ರದಲ್ಲಿ ಗಲಾಟೆ ನಡೆಯುತ್ತಿರುವ ಮಾಹಿತಿ ತಿಳಿಯುತ್ತಿದ್ದಂತೆಯೇ ವಿಜಯಪುರ ಜಿಲ್ಲಾಧಿಕಾರಿ ಆನಂದ ಕೆ. ಅವರು ಸ್ಥಳಕ್ಕೆ ಧಾವಿಸಿದರು. ಪರೀಕ್ಷಾರ್ಥಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಪರೀಕ್ಷಾ ಕೇಂದ್ರದ ಅಧಿಕಾರಿಗಳಿಂದ ವಿಳಂಬಕ್ಕೆ ಕಾರಣವೇನು ಎಂಬ ಬಗ್ಗೆ ವಿವರಣೆ ಕೇಳಿದರು. ಘಟನೆಯ ಕುರಿತು ಸಂಪೂರ್ಣ ಮಾಹಿತಿ ಪಡೆದ ಡಿಸಿ ಅವರು, ಅಭ್ಯರ್ಥಿಗಳನ್ನು ಸಮಾಧಾನಪಡಿಸುವ ಪ್ರಯತ್ನ ಮಾಡಿದರು.

ಅಭ್ಯರ್ಥಿಗಳ ಆತಂಕ

ನಾವು ತಿಂಗಳುಗಟ್ಟಲೆ ಕಷ್ಟಪಟ್ಟು ಪರೀಕ್ಷೆಗೆ ತಯಾರಿ ನಡೆಸಿದ್ದೇವೆ. ಅರ್ಧ ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ನೀಡಿದರೆ ನಮಗೆ ಉತ್ತರಿಸಲು ಸಮಯ ಸಾಕಾಗುವುದಿಲ್ಲ. ಇಂತಹ ಬೇಜವಾಬ್ದಾರಿತನದಿಂದ ಅಭ್ಯರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತದೆ ಎಂದು ಪರೀಕ್ಷಾರ್ಥಿಗಳು ಕಿಡಿಕಾರಿದ್ದಾರೆ. ಸದ್ಯ ಪರೀಕ್ಷಾ ಕೇಂದ್ರದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಅಧಿಕಾರಿಗಳು ಪರಿಸ್ಥಿತಿಯನ್ನು ತಿಳಿಗೊಳಿಸಲು ಮುಂದಾಗಿದ್ದಾರೆ.