ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯ ಜಂತರ್ ಮಂತರ್‌ನಲ್ಲಿ ನಡೆಸಿದ ಪ್ರತಭಟನೆ ಬಳಿಕ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿರುವ ಅಭಿಯಾನದ ಅಸಲಿಯತ್ತು ಬಯಲಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿ ಪುತ್ರಿ ಹಾಗೂ ಹಲವು ಪೊಲೀಸ್ ಕುಟುಂಬಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಸಜ್ಜಾಗಿದೆ.
ದೆಹಲಿ (ಜು.31) ನೀಟ್ ಪ್ರಶ್ನೆ ಪತ್ರಿಕೆ, ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ಹಲವು ಬೇಡಿಕೆ ಮುಂದಿಟ್ಟು ಕಾಕ್ರೋಚ್ ಜನತಾ ಪಾರ್ಟಿ ದೆಹಲಿಯಲ್ಲಿ ಪ್ರತಿಭಟನೆ ನಡೆಸಿತ್ತು. ಬೇಡಿಕೆಯನ್ನು ಈಡೇರಿಸುವ ಭರವಸೆ ನೀಡಿದ ಹಿನ್ನಲೆಯಲ್ಲಿ ಸಿಜೆಪಿ ಪ್ರತಿಭಟನೆ ಅಂತ್ಯಗೊಳಿಸಿದೆ. ಆದರೆ ಈ ಪ್ರತಿಭಟನೆ ಬಳಿಕ ಪ್ರತಿಭಟನೆಯಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರ ಕ್ರಮ ವಿರುದ್ದ ಭಾರಿ ಆಕ್ರೋಶ ಕೇಳಿಬಂದಿದೆ. ವಿಪಕ್ಷಗಳು ಸದನದಲ್ಲಿ ಕೋಲಾಹಲ ಸೃಷ್ಟಿಸಿದ್ದರೆ, ಇತ್ತ ಸಿಜಿಪಿ ಕಪಿಲ್ ಸಿಬಲ್ ಸೇರಿದಂತೆ ಹಲವರನ್ನು ಭೇಟಿಯಾಗಿ ಕಾನೂನು ಹೋರಾಟಕ್ಕೂ ಮುಂದಾಗಿದೆ. ಆದರೆ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಚಾರ್ಜ್ ಸೇರಿದಂತೆ ಕಠಿಣ ಕ್ರಮ ಕೈಗೊಂಡಿದ್ದಾರೆ ಅನ್ನೋ ಸೋಶಿಯಲ್ ಮೀಡಿಯಾ ಹಾಗೂ ಸಿಜೆಪಿ ಅಭಿಯಾನದ ವಿರುದ್ಧ ಪೊಲೀಸ್ ಕುಟುಂಬಗಳು ಕಾನೂನು ಹೋರಾಟಕ್ಕೆ ಮುಂದಾಗಿದೆ. ಕರ್ತವ್ಯ ನಿರತ ಪೊಲೀಸ್ ಅಧಿಕಾರಿಯ ಪುತ್ರಿ ಸಿಜೆಪಿ ಹೊರಾಟದ ಅಸಲಿ ಮುಖ ಬಹಿರಂಗಪಡಿಸಿದ್ದಾರೆ.
ನೌಕಾ ಪಡೆ ಮಾಜಿ ಕಮಾಂಡೋ ಮೇಲೆ ದಾಳಿ
ಸಿಜೆಪಿ ಪ್ರತಿಭಟನೆಯಲ್ಲಿ 100ಕ್ಕೂ ಹೆಚ್ಚು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಪೈಕಿ ಹಲವರಿಗೆ ಚಿಕಿತ್ಸೆ ಮುಂದುವರಿದಿದೆ. ದೆಹಲಿ ಪ್ರತಿಭಟನೆಯಲ್ಲಿ ಗಾಯಗೊಂಡ ಪೊಲೀಸ್ ಅಧಿಕಾರಿಗಳ ಕುಟುಂಬಸ್ಥರು ಮಾಧ್ಯಮಗಳ ಮುಂದೆ ಹೋರಾಟದ ಅಸಲಿಯತ್ತು ಹೇಳಿದ್ದಾರೆ. ಕರ್ತವ್ಯದಲ್ಲಿದ್ದ ಪೊಲೀಸರ ಮೇಲೆ ದಾಳಿ ಮಾಡಿ ಮಾಧ್ಯಮದ ಮುಂದೆ ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಅಭಿಯಾನ ನಡೆಸಲಾಗುತ್ತಿದೆ ಎಂದು ಅಳಲು ತೋಡಿಕೊಂಡಿದ್ದಾರೆ. ಪ್ರತಿಭಟನೆ ವೇಳೆ ಗಂಭೀರ ಗಾಯಗೊಂಡ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಪುತ್ರಿ ಘಟನೆ ಕುರಿತು ಮಾತನಾಡಿದ್ದಾರೆ. ನನ್ನ ತಂದೆ ನೌಕಾ ಪಡೆಯಲ್ಲಿ 15 ವರ್ಷ ಸೇವೆ ಸಲ್ಲಸಿ ನಿವೃತ್ತಿಯಾಗಿದ್ದಾರೆ. ನಿವೃತ್ತಿ ಬಳಿಕ ಪೊಲೀಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಜಂತರ್ ಮಂತರ್ ಪ್ರತಿಭಟನೆ ವೇಳೆ ಬ್ಯಾರಿಕೇಡ್ ಬಳಿ ಕರ್ತವ್ಯದಲ್ಲಿದ್ದರು. ಜುಲೈ 25 ರಂದು ಪ್ರತಿಭಟನೆ ಮುಗಿದ ಬಳಿಕ ಕರ್ತವ್ಯದಲ್ಲಿದ್ದ ನನ್ನ ತಂದೆಯನ್ನು ವೇದಿಕೆ ಬಳಿ ಎಳೆದು ತಂದು ಹಲ್ಲೆ ನಡೆಸಿದ್ದಾರೆ. ತಂದೆ ಪ್ರಜ್ಞೆ ತಪ್ಪುವವರೆಗೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಹೆಚ್ಚುವರಿ ಪೊಲೀಸರು ಆಗಮಿಸಿ ಪ್ರತಿಭಟನಕಾರರನ್ನು ಚದುರಿಸಿ ತಂದೆಯ ಪ್ರಾಣ ಉಳಿಸಿದ್ದಾರೆ ಎಂದು ಅಧಿಕಾರಿ ಪುತ್ರಿ ಕಣ್ಣೀರಿಟ್ಟಿದ್ದಾರೆ.
ನನ್ನ ತಂದೆಯನ್ನು ಕೊಲೆ ಮಾಡಲು ಯತ್ನ
ತಂದೆಯನ್ನು ಪ್ರತಿಭಟನಾ ನಿರತವರು ನಿರಂತವಾಗಿ ಥಳಿಸಿದ್ದಾರೆ. ಕಾಲಿನಿಂದ ಒದ್ದು, ಸಿಕ್ಕ ಸಿಕ್ಕ ವಸ್ತುಗಳಿಂದ ಹಲ್ಲೆ ನಡೆಸಿದ್ದಾರೆ. ಇದು ವ್ಯವಸ್ಥಿತ ಕೊಲೆ ಪ್ರಯತ್ನವಾಗಿತ್ತು. ತಂದೆಯನ್ನು ಇತರ ಪೊಲೀಸ್ ಸಹೋದ್ಯೋಗಿಗಳು ತುರ್ತು ಚಿಕಿತ್ಸೆ ಕೊಡಿಸಿ ಮನಗೆ ಕರೆತಂದಾಗ ಅವರ ಸ್ಥಿತಿ ಗಂಭೀರವಾಗಿತ್ತು. ನನ್ನ ತಂದೆಯನ್ನು ಆ ಸ್ಥಿತಿಯಲ್ಲಿ ನೋಡುವಾಗ ನೋವು ತಡೆಯಲು ಸಾಧ್ಯವಾಗಲಿಲ್ಲ ಎಂದು ಪುತ್ರಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ಪ್ರತಿಭಟನಕಾರರ ಭಿನ್ನ ರಾಗ
ನನ್ನ ತಂದೆ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಪ್ರತಿಭಟನಾಕರರು ಸೋಶಿಯಲ್ ಮೀಡಿಯಾದಲ್ಲಿ ಬೇರೆ ಕತೆ ಹೇಳುತ್ತಿದ್ದಾರೆ. ನನ್ನ ತಂದೆಯನ್ನು ವಿಲನ್ ರೀತಿ ಚಿತ್ರೀಕರಿಸಲಾಗುತ್ತಿದೆ. ಪ್ರತಿಭಟನಾ ನಿರತವರ ಮೇಲೆ ತಂದೆ ದಾಳಿ ಮಾಡಿದ್ದಾರೆ, ಪೊಲೀಸರು ಕಠಿಣ ಕ್ರಮ ಕೈಗೊಂಡಿದ್ದಾರೆ ಎಂದು ಹಬ್ಬಿಸಲಾಗುತ್ತಿದೆ. ಪ್ರತಿಭಟನಾ ನಿರತವರ ದಾಳಿಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ ಹೊರತು ಪೊಲೀಸರೇ ದಾಳಿ ಮಾಡಿದ್ದಲ್ಲ. ನನ್ನ ತಂದೆ ಮೇಲೆ ಹಲ್ಲೆ ನಡೆಸಿದವರೇ ಇದೀಗ ಕೋರ್ಟ್‌ನಲ್ಲಿ ದೂರು ನೀಡಿದ್ದಾರೆ. ಹೀಗಾಗಿ ನಮಗೆ ನ್ಯಾಯ ಬೇಕಿದೆ. ನಾವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದೇವೆ ಎಂದು ಅಧಿಕಾರಿ ಪುತ್ರಿ ಹೇಳಿದ್ದಾರೆ.
ದೆಹಲಿ ಪೊಲೀಸ್ ಎಸಿಪಿ ಪತ್ನಿ ಹೇಳಿದ್ದೇನು?
ದೆಹಲಿ ಜಂತರ್ ಮಂಚರ್ ಪ್ರತಿಭಟನೆಯಲ್ಲಿ ಕರ್ತವ್ಯದಲ್ಲಿದ್ದ ನನ್ನ ಪತಿ ದೆಹಲಿ ಪೊಲೀಸ್ ಎಸಿಪಿ ತೀವ್ರವಾಗಿ ಗಾಯಗೊಂಡಿದ್ದಾರೆ. ಪತಿಯನ್ನು ಮನೆಗೆ ಕರೆ ತಂದಾಗ ಅವರ ಗಾಯ, ಪರಿಸ್ಥಿತಿ ನೋಡಿ ನಾನು ಹಾಗೂ ನಮ್ಮ ಎರಡೂವರೆ ವರ್ಷದ ಮಗು ಆಘಾತಗೊಂಡಿತ್ತು. ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸರ ಮೇಲೆ ಈ ರೀತಿ ದಾಳಿಯಾಗಿದೆ. ಇದನ್ನು ಮರೆ ಮಾಚಿ ಬೇರೆ ರೀತಿ ಬಿಂಬಿಸಲಾಗುತ್ತಿದೆ ಎಂದು ಎಸಿಪಿ ಪತ್ನಿ ಕಣ್ಣೀರಿಟ್ಟಿದ್ದಾರೆ.

