ವಿಜಯಪುರ[ನ. 26]  ಜಿಲ್ಲೆಯಲ್ಲಿ ಮಂಗಳವಾರ ರಾತ್ರಿ ಸಂಭವಿಸಿದ ಪ್ರತ್ಯೇಕ ರಸ್ತೆ ಅಪಘಾತಗಳಲ್ಲಿ ನಾಲ್ವರು ಬೈಕ್ ಸವಾರರು ಮೃತಪಟ್ಟಿದ್ದಾರೆ. ಬೈಕ್‌ಗೆ ಬುಲೆರೋ ಡಿಕ್ಕಿ ಹೊಡೆದಿದ್ದರಿಂದಾಗಿ ಸವಾರರಿಬ್ಬರೂ ಸ್ಥಳದಲ್ಲೇ ಮೃತಪಟ್ಟ ಘಟನೆ ಯಕ್ಕುಂಡಿ-ಅರ್ಜುಣಗಿ ಮಧ್ಯೆ ಸಂಜೆ ಸಂಭವಿಸಿದೆ. 

ಬಬಲೇಶ್ವರ ತಾಲೂಕಿನ ಯಕ್ಕುಂಡಿ ಗ್ರಾಮದ ಹಣಮಂತ ಮೂಡಲಗಿ (48)ಹಾಗೂ ತಿಗಣಿಬಿದರಿ ಗ್ರಾಮದ ತುಕಾರಾಂ ಸಿಂಧೆ (50) ಸ್ಥಳದಲ್ಲೇ ಮೃತಪಟ್ಟ ದುರ್ದೈವಿಗಳು.  ಬೈಕ್‌ಗೆ ಡಿಕ್ಕಿ ಹೊಡೆದ ಆರೋಪಿ ಬುಲೇರೋ ಚಾಲಕ ಪರಾರಿಯಾಗಿದ್ದಾನೆ. 

ಆರೋಪಿ ಬುಲೇರೋ ಚಾಲಕ ಬಬಲೇಶ್ವರದಿಂದ ಜಮಖಂಡಿಗೆ ಕಡೆಗೆ ಹೊರಟಿದ್ದ.  ವಾಹನದ ಮೇಲೆ ನಿಯಂತ್ರಣ ಕಳೆದುಕೊಂಡು ಬೈಕ್‌ಗೆ ಬಲವಾಗಿ ಡಿಕ್ಕಿ ಹೊಡೆದಿದ್ದರಿಂದಾಗಿ ಸವಾರರಿಬ್ಬರೂ ಸ್ಥಳದಲ್ಲೇ ಅಸುನೀಗಿದ್ದಾರೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಬಬಲೇಶ್ವರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಅರಕೇರಿ ಬಳಿ ಎರಡು ಸಾವು : ವಿಜಯಪುರ ತಾಲೂಕಿನ ಅರಕೇರಿ ಗ್ರಾಮದ ಅಮೋಘಸಿದ್ದ ದೇವರ ಜಾತ್ರೆಯಿಂದ ಮರಳುತ್ತಿದ್ದ ಬೈಕ್‌ಗೆ ಇನ್ನೊಂದು ಬೈಕ್ ಡಿಕ್ಕಿ ಹೊಡೆದಿದ್ದರಿಂದ ಸವಾರಿಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇನ್ನೊಂದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಭೂತನಾಳ ಕೆರೆ ಬಳಿ ರಾತ್ರಿ 8 ಗಂಟೆಗೆ ಸಂಭವಿಸಿದೆ. 

ಬರಟಗಿ ತಾಂಡೆ 3 ರ ನಿವಾಸಿಗಳಾದ ಸಂದೀಪ ಮಾನಸಿಂಗ್  ರಜಪೂತ (19) ಹಾಗೂ ರೋಶನ್ ಚಂದ್ರಶೇಖರ ರಾಠೋಡ (19) ಮೃತಪಟ್ಟ ಸವಾರರು.

ಗಾಯಗೊಂಡ ಇನ್ನೊಂದು ಬೈಕ್ ಸವಾರ ನಿಂಗಪ್ಪ‌ ಮೋರೆ ಎಂಬಾತನನ್ನು ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ವಿಜಯಪುರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದ್ದಾರೆ.