Asianet Suvarna News Asianet Suvarna News

ಭಾವನಾತ್ಮಕ ವಿಚಾರಗಳಷ್ಟೇ ಚುನಾವಣೆ ಗೆಲ್ಲಿಸಲ್ಲ: ಜೆಪಿ ನಡ್ಡಾ

  • ಅಭಿವೃದ್ಧಿ ಪ್ರಸ್ತಾಪಿಸಿ 150 ಗುರಿ ತಲುಪಿ
  • ಭಾವನಾತ್ಮಕ ವಿಚಾರಗಳಷ್ಟೇ ಚುನಾವಣೆ ಗೆಲ್ಲಿಸಲ್ಲ
  • ಬಿಜೆಪಿ ಕಾರ್ಯಕಾರಿಣಿಯಲ್ಲಿ ನಡ್ಡಾ ಹೇಳಿಕೆ
Emotional issues are not winning elections: Nada
Author
Bangalore, First Published Apr 18, 2022, 4:45 AM IST

ಹೊಸಪೇಟೆ: ಭಾವನಾತ್ಮಕ ವಿಚಾರಗಳಿಂದ ಮಾತ್ರವೇ ಚುನಾವಣೆ ಗೆಲ್ಲುವುದು ಅಸಾಧ್ಯ. ಅಭಿವೃದ್ಧಿಯೊಂದನ್ನೇ ಬೆನ್ನೆಲುಬಾಗಿಸಿಕೊಂಡು ಮುಂಬರುವ ಚುನಾವಣೆಗೆ ಹೋಗಬೇಕು. 150 ಸ್ಥಾನಗಳ ಗುರಿ ತಲುಪಬೇಕು. ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮತ್ತು ಜನತೆಯ ವಿಶ್ವಾಸವೇ ಮತಬೇಟೆಗೆ ನಮಗಿರುವ ಆತ್ಮವಿಶ್ವಾಸ. ಕರ್ನಾಟಕದಲ್ಲಿ ಪುನಃ ಕಮಲ ಅರಳಿಸಲು ಇದೇ ದೊಡ್ಡ ಅಸ್ತ್ರ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ (JP Nadda) ಹೇಳಿದ್ದಾರೆ.

ಹೊಸಪೇಟೆಯ ಭಟ್ರಹಳ್ಳಿ ಆಂಜನೇಯ ದೇವಸ್ಥಾನದ (Anjaneya Temple) ಬಯಲು ಪ್ರದೇಶದಲ್ಲಿ ನಡೆದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಸಮಾರೋಪ ಸಮಾರಂಭದಲ್ಲಿ ಭಾನುವಾರ ಮಾತನಾಡಿದ ಅವರು, ಬಿಜೆಪಿ ಭಾವನಾತ್ಮಕ ವಿಷಯಗಳನ್ನೇ ಚುನಾವಣೆ ಅಸ್ತ್ರಗಳನ್ನಾಗಿ ಬಳಸುತ್ತದೆ ಎಂಬ ವಿರೋಧ ಪಕ್ಷಗಳ ಟೀಕೆಗಳಿಗೆ ತಿರುಗೇಟು ನೀಡಿದರು.

ಮಿಷನ್‌ 150 ಗುರಿ ಇಟ್ಟುಕೊಂಡು ಮತ್ತೆ ರಾಜ್ಯದಲ್ಲಿ ಕಮಲ ಅರಳಿಸುವ ಸಂಕಲ್ಪದೊಂದಿಗೆ ಎರಡು ದಿನಗಳ ಬಿಜೆಪಿ ಕಾರ್ಯಕಾರಿಣಿ ಭಾನುವಾರ ಮುಕ್ತಾಯವಾಯಿತು. ವಿಜಯನಗರ ಉತ್ಸವದಂತೆ ನಡೆದ ಕಾರ್ಯಕಾರಿಣಿಯಲ್ಲಿ ಮುಂದಿನ ವಿಧಾನಸಭೆಗೆ ವಿಜಯನಗರದಿಂದಲೇ ವಿಜಯಯಾತ್ರೆ ಎಂದು ಘೋಷಿಸಲಾಯಿತು. ಎಲ್ಲೂ ಭಿನ್ನಾಭಿಪ್ರಾಯಕ್ಕೆ ಅವಕಾಶ ಕೊಡದೇ ಒಗ್ಗಟ್ಟಿನ ಮಂತ್ರ ಜಪಿಸಿದ್ದು ವಿಶೇಷವಾಗಿತ್ತು.

ಕಾರ್ಯಕಾರಣಿ ಸಭೆಯಲ್ಲಿ ಸಿಟಿ ರವಿ, ಪ್ರಲ್ಹಾದ್ ಜೋಶಿ ಕೆಲಸ ಶ್ಲಾಘಿಸಿದ ಜೆಪಿ ನಡ್ಡಾ..!

ಅಭಿವೃದ್ಧಿ ಮೇಲೆ ವಿಶ್ವಾಸ:

ಚುನಾವಣೆಯನ್ನು ಭಾವನಾತ್ಮಕವಾದ ಸಂಗತಿಗಳಿಂದ ಮಾತ್ರ ಎದುರಿಸಬಹುದು ಎನ್ನುವ ಕಲ್ಪನೆ ಇದ್ದರೆ ಅದು ತಪ್ಪು. ಈಗ ಜನತೆಗೆ ಪಕ್ಷ ಅಥವಾ ಭಾವನಾತ್ಮಕ ಸಂಗತಿಗಳಿಗಿಂತ ಹೆಚ್ಚಾಗಿ ವಿಶ್ವಾಸ ಇರುವುದು ಅಭಿವೃದ್ಧಿ ಮಾಡುವವರ ಮೇಲೆ. ಉತ್ತರ ಪ್ರದೇಶ, ಉತ್ತರಾಖಂಡ, ಗೋವಾ ಫಲಿತಾಂಶವೇ ಇದಕ್ಕೆ ಸಾಕ್ಷಿಯಾಗಿದೆ ಎಂಬರ್ಥ ಬರುವಂತೆ ಜೆ.ಪಿ. ನಡ್ಡಾ ಹೇಳಿದರು. ಜತೆಗೆ ನಾಲ್ಕು ರಾಜ್ಯಗಳಲ್ಲಿ ಗೆಲುವು ಕಂಡ ಬಗೆಯ ಬಗ್ಗೆ ವಿವರವಾಗಿ ವಿವರಿಸಿದರು.

ಭಾವನಾತ್ಮಕ, ಕೋಮು ಸ್ವರೂಪದ ವಿಷಯ ಹಾಗೂ ಜಾತಿಯಂತಹ ವಿಷಯಗಳು ಶಾಶ್ವತವಲ್ಲ. ನಿರಂತರವಾಗಿ ಜನರ ಮನಸಿನಲ್ಲಿ ಉಳಿಯುವುದು ಅಭಿವೃದ್ಧಿಯೊಂದೇ. ಹಾಗೆಯೇ ಮುಂಬರುವ ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿ ಭಾವನಾತ್ಮಕ ವಿಷಯಗಳಿಗೆ ಮಹತ್ವ ನೀಡುವುದಿಲ್ಲ ಎಂದರು.

ಕಾಂಗ್ರೆಸ್‌ ಮುಕ್ತ ರಾಜ್ಯಕ್ಕೆ ಪಣತೊಡಿ:

ಅತ್ಯಂತ ಯಶಸ್ವಿ ಹಾಗೂ ಮಹತ್ವ ಪಡೆದ ಕಾರ್ಯಕಾರಿಣಿ ಇದಾಗಿದೆ. ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತಗೊಳಿಸಲು ಪಣ ತೊಡಿ. ಮುಂದಿನ ಚುನಾವಣೆಯಲ್ಲಿ ದೃಷ್ಟಿಹಾಗೂ 150 ಪ್ಲಸ್‌ ಸಂಕಲ್ಪ (ವಿಜನ್‌ ಮತ್ತು ಮಿಷನ್‌) ಎರಡೂ ಸ್ಪಷ್ಟವಾಗಿರಬೇಕು. ಅದನ್ನು ಬೆನ್ನತ್ತಿ ಗುರಿಯನ್ನು ಅತ್ಯಂತ ಯಶಸ್ವಿಯಾಗಿ ಮುಟ್ಟಬೇಕು. ಯಶಸ್ವಿ ಮುಖ್ಯಮಂತ್ರಿ ಬೊಮ್ಮಾಯಿ, ಪ್ರಧಾನಿ ಮೋದಿ ಹಾಗೂ ಪಕ್ಷದ ಹಿರಿಯರಾದ ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಮತ್ತೆ ನಾವು ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ನಡ್ಡಾ ವಿಶ್ವಾಸ ವ್ಯಕ್ತಪಡಿಸಿದರು.

ಸಾಧನೆ ತಿಳಿಸುವ ಉಪಕರಣಗಳಾಗಿ:

ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಸಾಧನೆ ಅತ್ಯಾದ್ಭುತ. ನಮ್ಮ ಸಾಧನೆಗಳನ್ನು ಜನರಿಗೆ ಮುಟ್ಟಿಸುವ ಉಪಕರಣಗಳಾಗಿ ಕೆಲಸ ಮಾಡಿ. ‘ಏ ಕಾಂಗ್ರೆಸ್‌ವಾಲೋ..’ ಎಂದು ಹೇಳಿ ಡಬಲ್‌ ಎಂಜಿನ್‌ ಸರ್ಕಾರದ ಸಾಧನೆಗಳನ್ನು ತಿಳಿಸಿ. ಕರ್ನಾಟಕವನ್ನು ಕಾಂಗ್ರೆಸ್‌ ಮುಕ್ತ ಮಾಡಿ. ಜನಪರ ಆಡಳಿತ ನೀಡಿದರೆ ಜನಾದೇಶ ಖಂಡಿತ ಸಿಗುತ್ತದೆ ಎಂಬುದಕ್ಕೆ ಇತ್ತೀಚಿಗೆ ನಡೆದ ಪಂಚರಾಜ್ಯ ಚುನಾವಣೆ ಪೈಕಿ ನಾಲ್ಕರಲ್ಲಿ ಬಿಜೆಪಿ ಗೆದ್ದಿರುವುದೇ ಸಾಕ್ಷಿ. ಅದಕ್ಕೆ ಅಕ್ಷರಶಃ ನಾವು ಸಾಧನೆ ತಿಳಿಸುವ ಉಪಕರಣಗಳಾಗಬೇಕು ಎಂದು ನಡ್ಡಾ ತಿಳಿಸಿದರು.

BJP Meeting ಮುಂದಿನ ಚುನಾವಣೆಯಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಖಚಿತ, ಜೆಪಿ ನಡ್ಡಾ ವಿಶ್ವಾಸ!
 

ಇದಕ್ಕೂ ಮುನ್ನ ರಾಜ್ಯಾಧ್ಯಕ್ಷ ನಳಿನಕುಮಾರ್‌ ಕಟೀಲ್‌ ಮಾತನಾಡಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai), ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ(BS Yadiyurappa) , ಕೇಂದ್ರ ಸಚಿವ ಪ್ರಹ್ಲಾದ ಜೋಶಿ (Prahlad Joshi) ಸೇರಿದಂತೆ ಹಲವರು ಇದ್ದರು.
 

Follow Us:
Download App:
  • android
  • ios