Blue Stone Farming: ರಾಜ್ಯದಲ್ಲೇ ಮೊದಲ ಸಮುದ್ರ ಪಾಚಿ, ನೀಲಿಕಲ್ಲು ಕೃಷಿಗೆ ಚಾಲನೆ
* ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಕಾರ್ಯಕ್ರಮ
* ಪರ್ಯಾಯ ಉದ್ಯೋಗ, ಹೆಚ್ಚು ಲಾಭ ಒದಗಿಸುವ ಯೋಜನೆ
* ನೀಲಿ ಕಲ್ಲುಗಳು ಬಹಳ ರುಚಿಕರವಾಗಿದ್ದು ಬಹುಬೇಡಿಕೆ ವಸ್ತು
ಕಾರವಾರ(ಡಿ.02): ಮೀನುಗಾರಿಕಾ ಕ್ಷೇತ್ರಕ್ಕೆ ಹೆಚ್ಚು ಪ್ರೋತ್ಸಾಹ ಒದಗಿಸುವ ಹಾಗೂ ಪರ್ಯಾಯ ಉದ್ಯೋಗ ಪೂರೈಸೋ ದೃಷ್ಠಿಯಿಂದ ಕೇಂದ್ರ ಸರ್ಕಾರ ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಉತ್ತರ ಕನ್ನಡ ಜಿಲ್ಲೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ಸಮುದ್ರ ಪಾಚಿ ಹಾಗೂ ನೀಲಿಕಲ್ಲು ಕೃಷಿಯನ್ನು ಪ್ರಾರಂಭಿಸಲಾಗಿದೆ.
ಪ್ರಥಮ ಬಾರಿಗೆ ಸಮುದ್ರ ಪಾಚಿ ಕೃಷಿಯನ್ನು ಕುಮಟಾ ತಾಲೂಕಿನ ಬೆಟ್ಕುಳಿ ಗ್ರಾಮದಲ್ಲಿ ಕೈಗೊಳ್ಳಲಾಗಿದ್ದು, ತಲಾ 50 ಕೆ.ಜಿ. ಸಾಮರ್ಥ್ಯದ 10 ರಾಫ್ಟ್ ಗಳನ್ನು ಹಾಕಲಾಗಿದೆ. ಇದರೊಂದಿಗೆ ಕಾರವಾರ ತಾಲೂಕಿನ ಕಾಳಿನದಿ ಅಳಿವೆಯಲ್ಲಿ ಪ್ರಥಮ ಬಾರಿಗೆ ನೀಲಿಕಲ್ಲು ಕೃಷಿ (Bivalve culture)ಯನ್ನು ರಾಫ್ಟ್ ವಿಧಾನದಲ್ಲಿ ಕೈಗೊಳ್ಳಲಾಗಿದೆ. ನಂದನಗದ್ದಾದ 10 ಮೀನುಗಾರ ಮಹಿಳೆಯರು ತಮ್ಮ ಸಂಗಡಿಗರ ಜತೆ ಸೇರಿ 10 ರಾಫ್ಟ್ ಗಳನ್ನು ಹಾಕಿದ್ದಾರೆ. ಇವೆರಡು ಕೂಡಾ ಮೀನುಗಾರರಿಗೆ, ಅದರಲ್ಲೂ ಮೀನುಗಾರ ಮಹಿಳೆಯರಿಗೆ ಉತ್ತಮ ಪರ್ಯಾಯ ಉದ್ಯೋಗವಾಗಿದ್ದು, ಹೆಚ್ಚು ಲಾಭ ಒದಗಿಸುವ ಯೋಜನೆಯಾಗಿದೆ. ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಫಲಾನುಭವಿಗಳನ್ನು ಮೀನುಗಾರಿಕೆ ಇಲಾಖೆ ಆಯ್ಕೆ ಮಾಡುತ್ತದೆ. ಶೇ.60ರಷ್ಟು ಸಬ್ಸಿಡಿ ಮಹಿಳೆಯರಿಗೆ ಹಾಗೂ ಶೇಕಡಾ 40ರಷ್ಟು ಸಬ್ಸಿಡಿ ಪುರುಷ ಫಲಾನುಭವಿಗಳಿಗೆ ನೀಡಲಾಗುತ್ತದೆ ಅಂತ ಸ್ಥಳೀಯರು ಮೀನುಗಾರರಾದ ವಿನಾಯಕ ಹರಿಕಾಂತ್, ದೇವರಾಜ್ ಅವರು ತಿಳಿಸಿದ್ದಾರೆ.
Murder Sketch: ಸೋಲಿನ ಹತಾಶೆಯೇ BJP MLA ಕೊಲೆ ಸ್ಕೆಚ್‌ಗೆ ಕಾರಣವಾಯ್ತಾ?
ಅಂದಹಾಗೆ, ಸಮುದ್ರ ಪಾಚಿಯನ್ನು ಒಂದು ಕಂಬಕ್ಕೆ ಕಟ್ಟಿ ಸಮುದ್ರದ ನೀರಿನಲ್ಲಿ ಇಳಿಬಿಡಲಾಗುತ್ತದೆ. ಸುಮಾರು ನಾಲ್ಕು ತಿಂಗಳ ಬಳಿಕ ಈ ಪಾಚಿ ದ್ವಿಗುಣಗೊಳ್ಳಲಿದೆ. ಈ ಬೆಳೆಯನ್ನು ಕಟಾವು ಮಾಡಿ ಔಷಧಿ, ಸೌಂದರ್ಯವರ್ಧಕಗಳಲ್ಲಿ ಬಳಸಲಾಗುತ್ತದೆ. ಇದೇ ಕಾರಣದಿಂದ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಕೂಡ ಈ ಪಾಚಿಗೆ ಇದೆ. ಇನ್ನು ನೀಲಿ ಕಲ್ಲುಗಳನ್ನು ರೋಪ್ ನಂತೆ ಕಟ್ಟಿ ನೀರಿನಲ್ಲಿ ಇಳಿಬಿಡಲಾಗುತ್ತದೆ. ಇದು ಬೆಳೆದು ದೊಡ್ಡ ಗಾತ್ರ ಹೊಂದಿದ ಬಳಿಕ ಮಾರುಕಟ್ಟೆಗೆ ನೀಡಲಾಗುತ್ತದೆ. ನೀಲಿ ಕಲ್ಲುಗಳು ಬಹಳ ರುಚಿಕರವಾಗಿದ್ದು, ಸುಕ್ಕಾ, ಚಿಲ್ಲಿಯಂಥ ಖಾದ್ಯಗಳಿಗೆ ಹೆಚ್ಚಾಗಿ ಬಳಸಲಾಗುತ್ತದೆ. ವಿಶೇಷವಾಗಿ ಕರ್ನಾಟಕ ಹಾಗೂ ಗೋವಾದ ಕರಾವಳಿಯ ಭಾಗದಲ್ಲಿ, ಹೋಟೆಲ್ ಗಳಲ್ಲಿ ಇದಕ್ಕೆ ಭಾರೀ ಬೇಡಿಕೆಯಿದೆ. ಅಧಿಕಾರಿಗಳು ಹೇಳುವಂತೆ, ರಾಜ್ಯದಲ್ಲೇ ಮೊದಲ ಪ್ರಯತ್ನವಾಗಿ ಸಮುದ್ರ ಪಾಚಿ ಹಾಗೂ ನೀಲಿಕಲ್ಲುಗಳ ಕೃಷಿಯನ್ನು ಕುಮಟಾ ಹಾಗೂ ಕಾರವಾರದಲ್ಲಿ ಕೈಗೊಳ್ಳಲಾಗಿದೆ. ಫಲಿತಾಂಶಕ್ಕಾಗಿ ನಾವು ಕಾಯುತ್ತಿದ್ದೇವೆ. ಇವುಗಳಿಗೆ ಹೆಚ್ಚು ಉಪ್ಪಿನಂಶ ಇರುವ ನೀರು ಬೇಕಾಗುತ್ತದೆ. ಉಪ್ಪಿನಂಶ ಕಡಿಮೆಯಾದರೂ ಕೂಡ ಇವುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀಳುವುದರಿಂದ, ಉಪ್ಪಿನಂಶ ಸಮಪ್ರಮಾಣದಲ್ಲಿ ನೋಡಿಕೊಳ್ಳಲು ಹೆಚ್ಚಿನ ಗಮನ ವಹಿಸಲಾಗುತ್ತಿದೆ ಎಂದು ಹೇಳುತ್ತಾರೆ ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಪಿ.ನಾಗರಾಜು.
ಒಟ್ಟಿನಲ್ಲಿ ಪ್ರಧಾನ ಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಮೀನುಗಾರರಿಗೆ ಪರ್ಯಾಯ ಉದ್ಯೋಗವಾಗಿ ಸಮುದ್ರ ಪಾಚಿ ಹಾಗೂ ನೀಲಿ ಕಲ್ಲುಗಳ ಕೃಷಿಯನ್ನು ಪ್ರಾರಂಭಿಸಲಾಗಿದ್ದು, ಮತ್ಸ್ಯ ಕ್ಷಾಮ ಹಾಗೂ ಮೀನುಗಾರಿಕೆ ನಿಷೇಧವಿರುವ ಸಮಯದಲ್ಲಿ ಈ ಉದ್ಯೋಗ ಮೀನುಗಾರರಿಗೆ ಬಹಳಷ್ಟು ಉಪಕಾರಿಯಾಗಲಿದೆ.