Asianet Suvarna News Asianet Suvarna News

ಈ ಊರಿನಲ್ಲಿದೆ ಕಳ್ಳ ಗಣಪ ಆಚರಣೆ, ರಾತ್ರಿ ಇಡೀ ಕಣ್ಣಿಗೆ ಎಣ್ಣೆ ಬಿಟ್ಟು ಕಾದುಕುಳಿತಿರುತ್ತಾರೆ ಜನ!

ಆದಿಪೂಜಿತ ಶ್ರೀ ಗಣಪನಿಗೆ, ಲಂಬೋದರ, ವಿನಾಯಕ, ಏಕದಂತ, ಗಜಾನನ ಸೇರಿದಂತೆ ಸಹಸ್ರ ನಾಮಗಳಿವೆ. ಆದರೆ, ಈ ತಾಲೂಕಿನಲ್ಲಿ ಮಾತ್ರ ನಮ್ಮ ಡೊಳ್ಳು ಹೊಟ್ಟೆ ಗಣೇಶ ಕಳ್ಳ ಗಣಪ ಎಂಬ ಬಿರುದು ಪಡೆದುಕೊಂಡಿದ್ದಾನೆ. ಹಿಂದಿನಿಂದಲೂ ನಡೆದುಕೊಂಡು ಬಂದಿರುವ ಕಳ್ಳ ಗಣಪ ಆಚರಣೆ ರೋಚಕ ಕತೆ ಇಲ್ಲಿದೆ.
 

Thief Ganapa Special ganesh chaturthi celebration at Ankola karwar ckm
Author
First Published Aug 30, 2022, 7:46 PM IST

ಅಂಕೋಲ(ಆ.30) ಉತ್ತರಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಮುದ್ಧು ಗಣಪ ಕಳ್ಳ ಗಣಪ ಎಂದೇ ಕರೆಯಲ್ಪಡುತ್ತಾನೆ. ಇದಕ್ಕೆ ಕಾರಣ ಯುವಕರು ನಡೆಸೋ ತುಂಟಾಟ. ಗಣಪತಿಯ ಮೂರ್ತಿಯನ್ನು ಯಾರ ಮನೆಯಲ್ಲಿ ಪ್ರತಿಷ್ಠಾಪಿಸಿ ಹಬ್ಬವನ್ನು ಮಾಡುವುದಿಲ್ಲವೋ ಅಂತವರ ಮನೆಯನ್ನು ಊರಿನ ಯುವಕರು ಮೊದಲೇ ಗುರುತಿಸುತ್ತಾರೆ. ಚೌತಿ ಪಾಡ್ಯದ ಘಳಿಗೆ ಪ್ರಾರಂಭವಾಗುತ್ತಲೇ ಯುವಕರು ರಹಸ್ಯವಾಗಿ ರಾತ್ರಿ 12 ಗಂಟೆಯ ನಂತರ ತಾವು ಮೊದಲೇ ಗುರುತಿಸಿದ ಮನೆಯವರೆಲ್ಲರೂ ನಿದ್ದೆಗೆ ಜಾರಿದ ಬಳಿಕ ಅವರ ಮನೆಯ ಅಂಗಣವನ್ನು ಕಳ್ಳರಂತೆ ಪ್ರವೇಶಿಸುತ್ತಾರೆ. ಮನೆಯ ಎದುರಿನ ತುಳಸಿ ಕಟ್ಟೆಯ ಮುಂದೆ ಒಂದು ಪೂಜೆಯ ಸಾಮಾನಿನ ಜತೆ ಶ್ರೀ ಗಣಪನ ಮೂರ್ತಿಯನ್ನು ಇಟ್ಟು, ಜಾಗಟೆ ಹಾಗೂ ಪಟಾಕಿ ಹೊಡೆದು ಪರಾರಿಯಾಗ್ತಾರೆ. ಪಟಾಕಿ‌ ಹಾಗೂ ಜಾಗಟೆ ಶಬ್ದಕ್ಕೆ ಮನೆಯವರು ನಿದ್ರೆಯಿಂದ ಎದ್ದು ಹೊರ ಬಂದು ನೋಡಿದರೆ, ಮನೆಯ ಮುಂದಿನ ತುಳಸಿ ಕಟ್ಟೆಯ ಬಳಿ ಗಣೇಶ ಪ್ರತ್ಯಕ್ಷನಾಗಿರುತ್ತಾನೆ. ಹೀಗೆ ಪ್ರವೇಶ ಮಾಡೋ ಗಣಪನನ್ನು ಮನೆಯಲ್ಲಿ ಇಟ್ಟುಕೊಳ್ಳುವವರು ಮನೆಯನ್ನು ಶುದ್ಧೀಕರಿಸಿ ಪೂಜೆ ಮಾಡಿ ಗಣಪನನ್ನು ಸ್ವಾಗತಿಸಿಕೊಳ್ಳುತ್ತಾರೆ. ಒಂದು ವೇಳೆ ಮನೆಯೊಳಗೆ ಕರೆಯಿಸಿಕೊಳ್ಳಲು ಸಾಧ್ಯವಾಗದಿದ್ದಲ್ಲಿ ಮನೆಯ ಮುಂದಿನ ತುಳಸಿ ಕಟ್ಟೆಯಲ್ಲೇ ವಿಶೇಷ ಪೂಜೆ ಸಲ್ಲಿಸಿ ನೀರಿನಲ್ಲಿ ವಿಸರ್ಜನೆ ಮಾಡುತ್ತಾರೆ.

ಕಳ್ಳ ಗಣಪತಿಯನ್ನು ಇಡೋ ಯುವಕರು, ಮೂರ್ತಿ ಕಲಾವಿದರನ್ನು ಚೌತಿ ಹಬ್ಬದ ಒಂದು ತಿಂಗಳ ಮುಂದೆಯೇ ಭೇಟಿಯಾಗಿ ಕಳ್ಳ ಗಣಪತಿಯ ಮೂರ್ತಿಯನ್ನು ಸಿದ್ಧ ಪಡಿಸಲು ವೀಳ್ಯದೆಲೆ ನೀಡಿ ಬರುತ್ತಾರೆ. ಈ ಪ್ರಕ್ರಿಯೆ ಹಿರಿಯರಿಂದಲೂ ನಡೆದುಕೊಂಡು ಬರುತ್ತಿದ್ದು, ಪ್ರತಿ ವರ್ಷವು ತಾಲೂಕಿನಲ್ಲಿ ಕನಿಷ್ಠ 15-20 ಕಳ್ಳ ಗಣಪತಿಯ ಮೂರ್ತಿಗಳು ತಯಾರಾಗುತ್ತಿವೆ. ಯಾರ ಮನೆಗೆ ಇಡಲು ಮೂರ್ತಿ ತಯಾರಾಗುತ್ತವೆ ಅನ್ನೋ ಮಾಹಿತಿ ಯುವಕರು ಹಾಗೂ ಮೂರ್ತಿ ಕಲಾವಿದರ ನಡುವೆ ಗುಪ್ತವಾಗಿಯೇ ಇರುತ್ತದೆ.

ಗಣೇಶ ಚತುರ್ಥಿ 2022: ರಾಶಿ ಪ್ರಕಾರ, ಗಣಪತಿ ಬಪ್ಪನಿಗೆ ಈ ವಸ್ತುಗಳನ್ನು ಅರ್ಪಿಸಿ 

ಕಳ್ಳ ಗಣಪನನ್ನು(ganesh chaturthi) ಇರಿಸುವ ಹಿಂದೆ ಸ್ವಾತಂತ್ರ್ಯ ಪೂರ್ವದ ಕಥೆಯೂ ಇದೆ. ಅಂದು ಬಾಲಗಂಗಾಧರ್ ತಿಲಕ್ ಅವರು ಗಣೇಶನ ಹಬ್ಬದ ಮೂಲಕ ರಾಷ್ಟ್ರವನ್ನು ಒಗ್ಗೂಡಿಸಲು ಕರೆಕೊಟ್ಟಾಗ ಪ್ರತೀ ಮನೆಯಲ್ಲಿ ಗಣಪತಿಯ ಆರಾಧನೆಯಾಗಬೇಕು ಅನ್ನೋ ಉದ್ದೇಶದಿಂದ ಕಳ್ಳ ಗಣಪನನ್ನು ಇರಿಸಿ ಪೂಜಿಸಲಾಗುತ್ತಿತ್ತಂತೆ. ಇದರೊಂದಿಗೆ ಕೆಲವರು ಕಷ್ಟ ಪರಿಹಾರಕ್ಕಾಗಿ ಕಳ್ಳ ಗಣಪತಿ ಇರಿಸುತ್ತೇನೆಂದು ಹರಕೆ ಹೊತ್ತುಕೊಂಡರೆ, ಮತ್ತೆ ಕೆಲವು ಜಿಪುಣರನ್ನು ದೇವರ ಹೆಸರಿನಲ್ಲಿ ಖರ್ಚು ಮಾಡಿಸಲೇಬೇಕೆಂಬ ಉದ್ದೇಶದಿಂದ ಕಳ್ಳ ಗಣಪನನ್ನು ಇರಿಸಲಾಗುತ್ತದೆ ಅಂತಾರೆ ಹಿರಿಯರು. ಈ ಕಾರಣಗಳಿಂದ ಕಳ್ಳ ಗಣಪನನ್ನು ಮನೆಗಳಲ್ಲಿ ಇರಿಸೋ ಆಚರಣೆ ಮುಂದುವರಿದಿದೆ. ಇನ್ನು ಕಳ್ಳ ಗಣಪತಿಯನ್ನು ಇಟ್ಟುಕೊಂಡು ಪೂಜಿಸುವ ಕುಟುಂಬ, ರಾತ್ರಿ ಮೂರ್ತಿ ಇಟ್ಟು ಪರಾರಿಯಾದ ಯುವಕರ ತಂಡವನ್ನು ಪತ್ತೆ ಹಚ್ಚಬೇಕು. ಬಳಿಕ ಅವರಿಗೆ ಪ್ರಸಾದ ನೀಡುವ ಮೂಲಕ ಸಾಂಪ್ರದಾಯಿಕವಾಗಿ ಗೌರವಿಸುವ ಪ್ರತೀತಿ ಕೂಡಾ ಅನಾದಿಕಾಲದಿಂದ ನಡೆದುಕೊಂಡು ಬಂದಿದೆ. 

ಗಣೇಶ ಚತುರ್ಥಿ 2022: ಈ ದಿನ ಇಂಥ ತಪ್ಪೆಲ್ಲ ಮಾಡಿ ಗಣಪತಿಗೆ ಕೋಪ ತರಿಸ್ಬೇಡಿ!

ಕಳ್ಳ ಗಣಪತಿಯು ತಮ್ಮ ಮನೆ ಮುಂದೆ ಎಲ್ಲಿ ಪ್ರತಿಷ್ಠಾಪನೆಗೊಳ್ಳುತ್ತದೆಯೋ ಎಂಬ ಆತಂಕದಲ್ಲಿ ಅನೇಕರು ಜಾಗರಣೆ ಮಾಡುತ್ತಾರೆ. ಆದರೂ, ಮನೆಯವರ ಕಣ್ಣು ತಪ್ಪಿಸಿ ಯುವಕರ ತಂಡ ಕಳ್ಳ ದಾರಿಯಿಂದ ಗಣಪನನ್ನು ಇಟ್ಟು ಪರಾರಿಯಾಗುತ್ತದೆ. ನಿರೀಕ್ಷೆಯಿಲ್ಲದೇ ತಡರಾತ್ರಿ ಮನೆಯ ಎದುರು ಪ್ರತಿಷ್ಠಾನೆಗೊಳ್ಳುವ ಗಣಪನ ಪೂಜೆಗಾಗಿ ರಾತ್ರೋ ರಾತ್ರಿ ಸಂತಸದ ವಾತಾವರಣದೊಂದಿಗೆ ನೈವೇದ್ಯಗಳನ್ನೂ ಸಿದ್ಧಪಡಿಸಲಾಗುತ್ತದೆ. ಅಂಕೋಲಾ ತಾಲೂಕಿನ 64 ಸ್ಥಳಗಳಲ್ಲಿ ಸಾರ್ವಜನಿಕ ಉತ್ಸವ ಹಾಗೂ 4,200ಕ್ಕೂ ಹೆಚ್ಚಿನ ಮನೆಗಳಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗುತ್ತದೆ. ಇವುಗಳ ಪೈಕಿ 2,400ಕ್ಕೂ ಹೆಚ್ಚಿನ ಮನೆಗಳಲ್ಲಿ ಗಣೇಶನ ಆರಾಧನೆ ಕಳ್ಳ ಗಣಪನ ಆಚರಣೆಯ ಮೂಲಕವೇ ನಡೆದುಕೊಂಡು ಬರುತ್ತಿದೆ. 

ಕಳ್ಳ ಗಣಪನ ಮೂಲಕ ಉತ್ತರಕನ್ನಡ ಜಿಲ್ಲೆಯ ಅಂಕೋಲಾದ ಸಾವಿರಾರು ಮನೆಗಳಲ್ಲಿ ಗಣೇಶ ಪೂಜಿಸಲ್ಪಡುತ್ತಿದ್ದು, ಮನೆಯಲ್ಲಿ ಹಾಗೂ‌ ಊರಿನಲ್ಲಿ ಸಂಭ್ರಮದ ವಾತಾವರಣಕ್ಕೆ ಕಾರಣನಾಗಿದ್ದಾನೆ. ಆದರೆ, ಈವರೆಗೆ ಮನೆಗಳಲ್ಲಿ ಗಣೇಶನನ್ನು ಪೂಜಿಸದವರು ಹಬ್ಬದ ದಿನದ ಬೆಳಗ್ಗಿನವರೆಗೂ ಕಣ್ಣಿಗೆ ಎಣ್ಣೆ ಬಿಟ್ಟು ಕಾಯುತ್ತಾರೆ.

ಭರತ್‌ರಾಜ್ ಕಲ್ಲಡ್ಕ ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ
 

Follow Us:
Download App:
  • android
  • ios