ಜಿ.ಡಿ. ಹೆಗಡೆ

ಕಾರವಾರ [ನ.12] :  ಹೊರ ರಾಜ್ಯಗಳ ಅಕ್ರಮ ಮೀನುಗಾರಿಕೆಗೆ ಕಡಲ ತೀರವೇ ಬಲಿಯಾಗುತ್ತಿದೆ. ಮೂಟೆ ಮೂಟೆ ಮರಳು ಹೊತ್ತೊಯ್ದು ಕಡಲಿನ ಆಳದಲ್ಲಿ ಕೃತಕ ದಿಬ್ಬ ನಿರ್ಮಿಸುವುದರಿಂದ ಇಲ್ಲಿನ ಬೈತಖೋಲ್‌ ಸಮೀಪದ ಲೇಡಿಸ್‌ ಬೀಚ್‌ ಕಣ್ಮರೆಯಾಗುತ್ತಿದೆ.

ಲೇಡಿಸ್‌ ಬೀಚ್‌ ಹಾಗೂ ಸಾಗರ ದರ್ಶನ ಸಭಾಂಗಣದ ಹಿಂಭಾಗದ ಮರಳನ್ನ್ನು ಹೊರ ರಾಜ್ಯದ ಮೀನುಗಾರರು ಕಪ್ಪೆ ಬಂಡಾಸ್‌ ಮೀನುಗಾರಿಕೆಗೆ ಅಕ್ರಮವಾಗಿ ಸಾಗಿಸುತ್ತಿದ್ದು, ಇದರಿಂದ ತೀರ ಕಳೆದುಕೊಳ್ಳುವ ಆತಂಕ ಎದುರಾಗಿದೆ. ಮೀನುಗಾರಿಕೆಯ ಮೇಲೂ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ.

ಕೃತಕ ದಿಬ್ಬ ನಿರ್ಮಾಣ:  ಇಲ್ಲಿನ ಮರಳು ತೆಗೆದು ಈಗ ಸಮುದ್ರ ನೀರು 8 ಮೀಟರ್‌ ಮುಂದೆ ಬಂದಿದೆ. 3 ಮೀಟರ್‌ ಎತ್ತರವಿದ್ದ ನೈಸರ್ಗಿಕ ಮರಳು ದಿಬ್ಬಗಳನ್ನು ಅಗೆದು ನೀರು ನುಗ್ಗುವಂತೆ ಮಾಡಲಾಗಿದೆ. ಕೇರಳ ಹಾಗೂ ತಮಿಳುನಾಡಿನ ಮೀನುಗಾರರು ಅಕ್ರಮವಾಗಿ ಮರಳು, ಮಣ್ಣು ಸಾಗಾಟ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಿಷೇಧ ಇರುವ ಕಪ್ಪೆಬಂಡಾಸ್‌ ಮೀನುಗಾರಿಕೆಯನ್ನು ಕಾನೂನುಬಾಹಿರವಾಗಿ ಕೂಡ ಮಾಡುತ್ತಿದ್ದಾರೆ. ವಾರಕ್ಕೆ 30ರಿಂದ 40 ಲೋಡ್‌ ಮರಳು ಸಾಗಿಸುತ್ತಾರೆ. ನಸುಕಿನ 3 ಗಂಟೆಗೆ ಬರುವ ಯಾಂತ್ರೀಕೃತ ಪಾತಿದೋಣಿಯಲ್ಲಿ ಹೊರ ರಾಜ್ಯದ ಮೀನುಗಾರರು ಮರಳು, ಮಣ್ಣು ತುಂಬಲು ಆರಂಭಿಸುತ್ತಾರೆ. 3 ಅಥವಾ 4 ದೋಣಿಗಳಲ್ಲಿ ಮರಳು, ಮಣ್ಣನ್ನು ತುಂಬಿ ಸಾಗಿಸುತ್ತಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಆಳ ಸಮುದ್ರಕ್ಕೆ ಹೋಗಿ ಈ ಮಣ್ಣು, ಮರಳು ತುಂಬಿದ ನೂರಾರು ಮೂಟೆ, ಎಲೆಗಳನ್ನು, ಪ್ಲಾಸ್ಟಿಕ್‌ ಬಾಟಲಿಗಳನ್ನು ಕಟ್ಟಿಅವುಗಳನ್ನು ನೀರಿನಲ್ಲಿ ಆಳಕ್ಕೆ ಬಿಡುತ್ತಾರೆ. ಇದರಿಂದ ಕೃತಕ ದಿಬ್ಬ ತಯಾರಾಗುತ್ತದೆ. ಎಲೆಗಳು ಕೊಳೆತು ಪಾಚಿ ಬೆಳೆದಾಗ ಅವುಗಳನ್ನು ತಿನ್ನಲು ಬರುವ ಮೀನುಗಳನ್ನು ಹಿಡಯುವುದಕ್ಕೆ ಕಪ್ಪೆ ಬಂಡಾಸ್‌ ಮೀನುಗಾರಿಕೆ ಎನ್ನುತ್ತಾರೆ. ದಿನಕ್ಕೆ 400ರಿಂದ 500 ಕೆಜಿವರೆಗೂ ಮೀನು ಬಲೆಗೆ ಬೀಳುತ್ತದೆ.

ಕಪ್ಪೆ ಬಂಡಾಸ್‌ಗೆ ಆಕ್ಷೇಪ:  ಲೇಡಿಸ್‌ ಬೀಚ್‌ನಿಂದ ಅಕ್ರಮವಾಗಿ ಮರಳು ತೆಗೆಯುತ್ತಿರುವುದರಿಂದ ಇಲ್ಲಿನ ಸೌಂದರ್ಯ ಹಾಳಾಗುತ್ತಿದೆ. ನೈಸರ್ಗಿಕವಾಗಿ ಇರುವ ಕಡಲ ತೀರ ಇದಾಗಿದ್ದು, ಪ್ರವಾಸೋದ್ಯಮಕ್ಕೆ ಹೇಳಿ ಮಾಡಿಸಿದ ಸ್ಥಳವಾಗಿದೆ. ಬೈತಖೋಲ್‌ನಿಂದ ಬೋಟ್‌ ಅಥವಾ ದೋಣಿಯ ಮೂಲಕ ಈ ತೀರಕ್ಕೆ ಸಾಗಬಹುದು. ಆದರೆ ಪ್ರವಾಸೋದ್ಯಮ ಹಾಗೂ ಮೀನುಗಾರಿಕಾ ಇಲಾಖೆ ಈ ಕಡಲನ್ನು ನಿರ್ಲಕ್ಷ್ಯ ಮಾಡಿರುವುದರಿಂದ ಅಕ್ರಮ ಮರಳು ಸಾಗಾಣಿಕಾ ತಾಣವಾಗಿದೆ.

ಹೊರ ರಾಜ್ಯದ ಮೀನುಗಾರರಿಂದ ಅಕ್ರಮವಾಗಿ ಈ ರೀತಿಯ ಮೀನುಗಾರಿಕೆ ನಡೆಯುತ್ತಿದ್ದರೂ ಸಂಬಂಧಿಸಿದ ಇಲಾಖೆ ಕಣ್ಮುಚ್ಚಿ ಕುಳಿತಿರುವುದಕ್ಕೆ ಸ್ಥಳೀಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮೋಹನದಾಜಿ ಅವರ್ಸೇಕರ್‌, ಆನಂದ ಖಾರ್ವಿ, ಸುಧಾಕರ ಹರಿಕಂತ್ರ, ಶ್ರೀಧರ ಹರಿಕಂತ್ರ ನಮ್ಮ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆಯುತ್ತಿದ್ದ ಬುಲ್‌ಟ್ರಾಲ್‌ ಹಾಗೂ ಲೈಟ್‌ ಫಿಶಿಂಗ್‌ ಮೀನುಗಾರಿಕೆ ನಿಯಂತ್ರಿಸಿದಂತೆ ಕಪ್ಪೆ ಬಂಡಾಸ್‌ ಮೀನುಗಾರಿಕೆಯನ್ನೂ ಸಂಪೂರ್ಣವಾಗಿ ನಿಯಂತ್ರಿಸಬೇಕು. ಮರಳು ತೆಗೆಯುವ ದೋಣಿ ಜಪ್ತು ಮಾಡುವುದು, ಭಾರಿ ದಂಡ ವಿಧಿಸುವುದು ಒಳಗೊಂಡು ಕಠಿಣ ಕ್ರಮ ವಹಿಸಿದರೆ ಮುಂದೆ ಯಾರೂ ಈ ರೀತಿ ಮಾಡುವುದಿಲ್ಲ ಎಂದು ಅಭಿಪ್ರಾಯಿಸುತ್ತಾರೆ.

ಸಾಂಪ್ರದಾಯಿಕ ಹಾಗೂ ಪರ್ಸೈನ್‌ ಮೀನುಗಾರಿಕೆ ಮೇಲೆ ಕಪ್ಪೆ ಬಂಡಾಸ್‌ ಮೀನುಗಾರಿಕೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಚೀಲಕ್ಕೆ, ಬಾಟಲಿಗೆ ಕಟ್ಟಲಾದ ದಾರ, ಬಾಟಲಿ ಬೋಟ್‌ ಹಾಗೂ ದೋಣಿ ಹಾಳಾಗುವಂತೆ ಮಾಡುತ್ತದೆ. ಅಕ್ರಮ ಮರಳುಗಾರಿಕೆಯಿಂದ ಕಡಲು ಕೂಡಾ ಅಸ್ತಿತ್ವ ಕಳೆದುಕೊಳ್ಳುತ್ತದೆ. ಹೀಗಾಗಿ ಈ ಮೀನುಗಾರಿಕೆಯನ್ನು ಸಂಪೂರ್ಣವಾಗಿ ಬಂದ್‌ ಆಗುವಂತೆ ಮಾಡಲು ಕ್ರಮವಹಿಸಬೇಕು ಎನ್ನುವುದು ಮೀನುಗಾರರ ಒತ್ತಾಯವಾಗಿದೆ.

ನೈಸರ್ಗಿಕವಾಗಿ ಇದ್ದ ಕಡಲ ತೀರವನ್ನು ಕಳೆದುಕೊಳ್ಳುತ್ತಿದ್ದೇವೆ. ಇದರ ಜತೆಗೆ ಸಾಂಪ್ರದಾಯಿಕ ಮೀನುಗಾರರಿಗೆ ಈ ಸ್ಥಳದಲ್ಲಿ ಮೀನುಗಾರಿಕೆ ಮಾಡಲು ಸಾಧ್ಯವಾಗುತ್ತಿಲ್ಲ. ಚಿಕ್ಕ ದೋಣಿಗಳಿಗೆ ಎಂಜಿನ್‌ ಅಳವಡಿಸಿಕೊಂಡು ಬಂದು ಮೀನು ಹಿಡಿಯಲು ಬಲೆ ಹಾಕಿದರೆ ಯಂತ್ರಕ್ಕೆ ಕಪ್ಪೆ ಬಂಡಾಸ್‌ ಮೀನು ಹಿಡಿಯಲು ಹಾಕಿದ್ದ ಪ್ಲಾಸ್ಟಿಕ್‌ ಚೀಲ, ಬಾಟಲಿ, ಅದಕ್ಕೆ ಕಟ್ಟಿದ ದಾರ ಸಿಲುಕುತ್ತದೆ. ಇದರಿಂದ ಎಂಜಿನ್‌ ಹಾಳಾಗಿ ತೊಂದರೆ ಅನುಭವಿಸಬೇಕಾಗುತ್ತದೆ.

ವಿನಾಯಕ ಹರಿಕಂತ್ರ, ಮೀನುಗಾರರ ಮುಖಂಡ

ಕೃತಕ ದಿಬ್ಬ ಸೃಷ್ಟಿಸಿ ಕಪ್ಪೆ ಬಂಡಾಸ್‌ ಮೀನುಗಾರಿಕೆ ಮಾಡುತ್ತಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿಂದೆ ದಂಡ ವಿಧಿಸಲಾಗಿತ್ತು. ಈ ಕೂಡಲೇ ಕರಾವಳಿ ಕಾವಲು ಪಡೆ ಹಾಗೂ ಮೀನುಗಾರ ಮುಖಂಡ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ.

ಪಿ. ನಾಗರಾಜ ಮೀನುಗಾರಿಕಾ ಇಲಾಖೆ ಉಪ ನಿರ್ದೇಶಕ